ಧ್ಯೇಯೋದ್ದೇಶ


ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ “ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ”ವನ್ನು ಸ್ಥಾಪಿಸಿದೆ.
 
೧. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಕನ್ನಡ ಭಾಷೆಯ ಸಂಶೋಧನೆ, ದಾಖಲೀಕರಣ, ಪ್ರಚಾರ ಮತ್ತು ಬೋಧನೆಗಳಿಗೆ ಸಂಬಂಧಪಟ್ಟಂತೆ ಯೋಜನೆಗಳನ್ನು ಮತ್ತು ಚಟುವಟಿಕೆಗಳನ್ನು ಕಾರ್ಯಗತಗೊಳಿಸುತ್ತದೆ. ಜೊತೆಗೆ ಈ ಕೇಂದ್ರವು ಇತರ ವ್ಯಕ್ತಿಗಳು, ಸಂಸ್ಥೆಗಳು, ಭಾರತದ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿದೇಶಗಳಲ್ಲಿ ನಡೆಯುವ ಅನ್ಯ ಶಾಸ್ತ್ರೀಯ ಭಾಷೆಗಳ ಅಧ್ಯಯನಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಸಂಶೋಧನಾ ಕೇಂದ್ರದ ಕಾರ್ಯಚಟುವಟಿಕೆಗಳು ಹೀಗಿವೆ:
- ಶಾಸ್ತ್ರೀಯ ಭಾಷೆಯ ಆಕರಗಳನ್ನು ಗುರುತಿಸುವುದು.
- ಶಾಸ್ತ್ರೀಯ ಭಾಷೆ ಮತ್ತು ಅದನ್ನು ಮಾತನಾಡುವ ಭೂವ್ಯಾಪ್ತಿಯ ಒಳಗೆ ಮತ್ತು ಹೊರಗೆ ಉತ್ತೇಜಿಸುವುದು, ಪ್ರಚಾರ ಮಾಡುವುದು ಮತ್ತು ಸಂರಕ್ಷಿಸುವುದು.
- ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಂಶೋಧನೆ ಮತ್ತು ದಾಖಲೀಕರಣವನ್ನು ಕೈಗೊಳ್ಳುವುದು ಮತ್ತು ಪ್ರೋತ್ಸಾಹಿಸುವುದು.
- ಹಸ್ತಪ್ರತಿಗಳನ್ನು ಸಂಗ್ರಹಿಸುವುದು ಮತ್ತು ಗಣಕೀಕರಿಸುವುದು.
- ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸುವುದು.
- ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬರೆಹ ಸಂಪತ್ತಿನಿಂದ ಗಣ್ಯಸ್ಥಾನವನ್ನು ಪಡೆದ ವಿದ್ವಾಂಸರಿಗೆ ಗೌರವ ಪ್ರಶಸ್ತಿ ಪ್ರಮಾಣಪತ್ರ, ನಗದು ಪ್ರಶಸ್ತಿಗಳನ್ನು ಕೊಡುವುದರ ಮೂಲಕ ಸನ್ಮಾನಿಸುವುದು.
- ಶಾಸ್ತ್ರೀಯ ಪಠ್ಯಗಳ ಬಗ್ಗೆ ಅರಿವನ್ನು ಪಡೆದಿರುವ ವಿದ್ವಾಂಸರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸುವುದು.
- ನಾಣ್ಯಶಾಸ್ತ್ರ, ಶಾಸನಶಾಸ್ತ್ರ, ಪುರಾತತ್ವಶಾಸ್ತ್ರ ಮತ್ತು ಪ್ರಾಚೀನ ಇತಿಹಾಸ ಮುಂತಾದವುಗಳ ಅಂತರ ಶಿಸ್ತೀಯ ಸಂಶೋಧನೆಗೆ ಮಾರ್ಗಗಳನ್ನು ರೂಪಿಸುವುದು.
- ಶಾಸ್ತ್ರೀಯ ಭಾಷೆ, ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ನಡುವಣ ಸಂಪರ್ಕಗಳನ್ನು ಪರಿಶೋಧಿಸುವುದು.
- ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವುದು.
- ಶಾಸ್ತ್ರೀಯ ಪಠ್ಯಗಳನ್ನು ಇತರ ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲೀಷ್ ಹಾಗೂ ಆಯ್ದ ಯುರೋಪಿಯನ್ ಭಾಷೆಗಳಿಗೆ ಭಾಷಾಂತರಿಸುವುದು.
- ಜಗತ್ತಿನ ಪುರಾತನ ನಾಗರಿಕತೆಗಳನ್ನು ಶಾಸ್ತ್ರೀಯ ಭಾಷೆಯ ಸಾಂಸ್ಕೃತಿಕ ಕಣಜದ ವ್ಯಾಪ್ತಿಗೆ ತರುವ ನಿಟ್ಟಿನ ಅಧ್ಯಯನಗಳಿಗೆ ಉತ್ತೇಜಿಸುವುದು.
- ಪುರಾತನ ದ್ರಾವಿಡ ಕಾಲದ ಭಾರತದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡಲು ಬೇಕಾಗುವ ಜ್ಞಾನಭಂಡಾರವನ್ನು ಸ್ಥಾಪಿಸುವುದು.
- ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಶಾಸ್ತ್ರೀಯ ಭಾಷೆಯ ಅಧ್ಯಯನ ಪೀಠಗಳನ್ನು ಪ್ರತಿಷ್ಠಾಪಿಸುವುದು.
- ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ನೆರವು ನೀಡುವ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
- ಮಾಹಿತಿ ಪ್ರಸಾರ ಮತ್ತು ಸಂಪರ್ಕದ ಮೂಲಕ ಭಾರತದ ಶಾಸ್ತ್ರೀಯ ಭಾಷೆಗಳ ಬಗೆಗಿನ ಕಾರ್ಯವನ್ನು ಸಂಯೋಜಿಸುವುದು.
 
೨. ಈ ಕೇಂದ್ರವು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಕೆಳಕಂಡ ಪ್ರಶಸ್ತಿಗಳನ್ನು ನೀಡುತ್ತದೆ.
 
- ಒಬ್ಬ ಭಾರತೀಯ ವಿದ್ವಾಂಸರಿಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿ, ಗೌರವ ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ಐದು ಲಕ್ಷ ರೂಪಾಯಿ ನಗದು ಬಹುಮಾನ.
- ಇಬ್ಬರು ವಿದ್ವಾಂಸರಿಗೆ ಜೀವಮಾನದ ಸಾಧನೆಗಾಗಿ ಅಂತರ ರಾಷ್ಟ್ರೀಯ ಪ್ರಶಸ್ತಿಗಳು (ಒಬ್ಬರು ಭಾರತ ಸಂಜಾತರು, ಇನ್ನೊಬ್ಬರು ಭಾರತ ಸಂಜಾತರಲ್ಲದವರು) ಗೌರವ ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ಐದು ಲಕ್ಷ ರೂಪಾಯಿ ನಗದು ಬಹುಮಾನ.
- ಐದು ಜನ ಯುವ ವಿದ್ವಾಂಸರಿಗೆ (೩೦ ರಿಂದ ೪೦ ವಯೋಮಿತಿಯಲ್ಲಿ ಇರುವವರು) ಗೌರವ ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಲಕ್ಷ ರೂಪಾಯಿ ನಗದು ಬಹುಮಾನ.
 
೩. ಯೋಜನಾ ನಿರ್ದೇಶಕರು ಈ ಕೇಂದ್ರದ ಮುಖ್ಯಸ್ಥರು, ಇವರೊಂದಿಗೆ 6 ಜನ ಸಹಾಯಕ ಸಿಬ್ಬಂದಿ, 15 ಜನ ಸಂಶೋಧಕ ಸಿಬ್ಬಂದಿ ಹಾಗೂ 5 ಜನ ಫೋಸ್ಟ್ ಡಾಕ್ಟರಲ್ ಫೆಲೋ ಹಾಗೂ 10 ಜನ ಪಿ.ಹೆಚ್.ಡಿ. ಸಂಶೋಧಕರು ಕಾರ್ಯನಿರ್ವಹಿಸುತ್ತಾರೆ. ಈ ಯೋಜನಾ ನಿರ್ದೇಶಕರು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿರ್ದೇಶಕರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಸಲಹೆ ಮತ್ತು ಸಮನ್ವಯದೊಂದಿಗೆ ಶಾಸ್ತ್ರೀಯ ಕನ್ನಡದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿರ್ದೇಶಕರು, ಐದು ಜನ ಹಿರಿಯ ವಿದ್ವಾಂಸರು ಇರುವ ಯೋಜನಾ ಮೇಲ್ವಿಚಾರಣಾ ಮಂಡಲಿಯನ್ನು ರಚಿಸುತ್ತಾರೆ. ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶಕರು(ಹಣಕಾಸು), ನಿರ್ದೇಶಕರು (ಭಾಷೆಗಳು), ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳು ಈ ಮಂಡಲಿಯ ಪದನಿಮಿತ್ತ ಸದಸ್ಯರಾಗಿದ್ದು, ಯೋಜನಾ ನಿರ್ದೇಶಕರು ಸದಸ್ಯ ಸಂಚಾಲಕರಾಗಿರುತ್ತಾರೆ.