ಸಾಹಿತ್ಯ
ಲಕ್ಷ್ಮೀಶ
  1. ಲೇಖಕನ ಹೆಸರು: ಲಕ್ಷ್ಮೀಶ
  2. ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
  3. ಸ್ಥಳ: ಚಿಕ್ಕಮಗಳೂರು ಜಿಲ್ಲೆಯ ದೇವನೂರು (ಗುಲ್ಬರ್ಗ ಜಿಲ್ಲೆಯ ಸುರಪುರ??)
  4. ಮತ-ಧರ್ಮ: ಬ್ರಾಹ್ಮಣ (ಶ್ರೀ ವೈಷ್ಣವ?)
  5. ರಾಜಾಶ್ರಯ: ಯಾವ ರಾಜನೂ ಇಲ್ಲ.
  6. ಬಿರುದುಗಳು: ಕರ್ನಾಟ ಕವಿಚೂತವನಚೈತ್ರ, ಉಪಮಾಲೋಲ
  7. ಕಿರು ಪರಿಚಯ:

ವಸಾಹತುಪೂರ್ವ ಕಾಲದಲ್ಲಿ, ಲಕ್ಷ್ಮೀಶ ಮತ್ತು ಅವನ ಕಾವ್ಯಗಳಿಗೆ ಬಹಳ ವಿಶಿಷ್ಟವಾದ ಸ್ಥಾನವು ಮೀಸಲಾಗಿತ್ತು. ಆಗ, ಸಾಹಿತ್ಯದ ಸಂವಹನಕ್ಕೆ ಬರವಣಿಗೆ ಮತ್ತು ಶಾಲಾಶಿಕ್ಷಣಗಳಲ್ಲದೆ, ಇತರ ಅನೇಕ ದಾರಿಗಳು ತೆರೆದಿದ್ದವು. ಮೌಖಿಕ ಸಂವಹನ ಮತ್ತು ಗಮಕ ಪರಂಪರೆಗಳ ಫಲವಾಗಿ, ಅನೇಕ ಮಧ್ಯಕಾಲೀನ ಮಹಾಕಾವ್ಯಗಳು, ಅನಕ್ಷರಸ್ಥರ ನಡುವೆಯೂ ಬಹಳ ಜನಪ್ರಿಯವಾಗಿದ್ದವು. ಕರ್ನಾಟಕದ ವಿಭಿನ್ನ ಪ್ರದೇಶಗಳಲ್ಲಿ ಆಯಾ ಸಮುದಾಯಗಳ ಧಾರ್ಮಿಕನಿಷ್ಠೆಗಳ ಪರಿಣಾಮವಾಗಿ, ವಿಭಿನ್ನ ಕಾವ್ಯಗಳು ಹೆಚ್ಚು ಪ್ರಚುರವಾಗಿದ್ದವೆಂಬ ಮಾತು ನಿಜ. ಆದರೂ ಸಮಾಜದ ಉನ್ನತ ವರ್ಗಗಳವರು ನೀಡುತ್ತಿದ್ದ ಮೌಲ್ಯವ್ಯವಸ್ಥೆಗಳಿಗೆ ಬಹಿರಂಗದ ಪ್ರತಿರೋಧವೇನೂ ಇರಲಿಲ್ಲ. ಆದ್ದರಿಂದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮತ್ತು ಪ್ರಭುಲಿಂಗಲೀಲೆಗಳಂತಹ ಕೃತಿಗಳು ಸಾಕಷ್ಟು ಜನಪ್ರಿಯವಾಗಿದ್ದವು. ಜೈಮಿನಿ ಭಾರತವು ಬಹು ಮಟ್ಟಿಗೆ ಬಿಡಿ ಬಿಡಿಯಾದ ಕಥೆಗಳ ಗೊಂಚಲೇ ಆಗಿದ್ದರಿಂದ, ಅಲ್ಲಿರುವ ಸನ್ನಿವೇಶಗಳನ್ನು ಪ್ರತ್ಯೇಕವಾಗಿ ಪ್ರವಚನ ಮಾಡುವುದು ಸುಲಭವಾಗಿತ್ತು. ಚಂದ್ರಹಾಸನ ಕಥೆ, ಚಂಡಿ-ಉದ್ಧಾಲಕರ ಕಥೆ, ಸೀತಾವನವಾಸ ಪ್ರಸಂಗ, ಸುಧನ್ವನ ಕಾಳಗ ಮುಂತಾದವನ್ನು ಸ್ವತಂತ್ರ ಕೃತಿಗಳೆಂದೇ ಪರಿಗಣಿಸಬಹುದು. ಇಡೀ ದೇಶದಲ್ಲಿ ಭಕ್ತಿಚಳುವಳಿಯು ವ್ಯಾಪಿಸಿದ್ದ ಕಾಲದಲ್ಲಿ ಜೀವಿಸಿದ್ದ ಲಕ್ಷ್ಮೀಶನಿಗೆ ಎರಡು ಅನುಕೂಲಗಳಿದ್ದವು. ಮೊದಲನೆಯದಾಗಿ, ಅವನು ಸಾಹಸ ಪರಾಕ್ರಮಗಳನ್ನು ವೈಭವೀಕರಿಸುತ್ತಲೇ ಅಂತಿಮವಾಗಿ ಅವೆಲ್ಲವೂ ಭಕ್ತಿಯಲ್ಲಿ ಸಾರ್ಥಕವಾಗುವಂತೆ ತೋರಿಸಬಹುದಾಗಿತ್ತು. ಈ ಕವಿಗೆ ಕೃಷ್ಣಭಕ್ತಿ ಮತ್ತು ಸಂಪೂರ್ಣ ಶರಣಾಗತಿಗಳು ಬಹಳ ದೊಡ್ಡ ಮೌಲ್ಯಗಳಾಗಿದ್ದವು. ವಾಸ್ತವವಾಗಿ ಇದು ಶ್ರೀ ವೈಷ್ಣವರ ಪ್ರಪತ್ತಿ ಎಂಬ ಪರಿಕಲ್ಪನೆಗೆ ಬಹಳ ಹತ್ತಿರವಾಗಿದೆ. ಲಕ್ಷ್ಮೀಶನು ಚಿತ್ರಿಸುವ ಹಂಸಧ್ವಜ, ಸುಧನ್ವ, ಯೌವನಾಶ್ವ ಮೊದಲಾದ ವೀರರು ಅರ್ಜುನನಿಗಿಂತ ಬಲಶಾಲಿಗಳು. ಆದರೆ, ಅವರು ಕೃಷ್ಣನ ಅನುಗ್ರಹವನ್ನು ಪಡೆಯಲೋಸ್ಕರ ತಮ್ಮ ರಾಜ್ಯದ ಮಾತಿರಲಿ, ಪ್ರಾಣವನ್ನೇ ತ್ಯಾಗಮಾಡಲು ತಯಾರಾಗಿದ್ದರು.

ತನ್ನ ಕೇಳುಗ/ಓದುಗರ ಅಭಿರುಚಿಗಳನ್ನು ತಣಿಸಲೆಂದು ಶೃಂಗಾರ ಮತ್ತು ಹಾಸ್ಯಗಳನ್ನು ಬಳಸಿಕೊಳ್ಳಲು, ಈ ಕವಿಗೆ ಸಾಧ್ಯವಾಯಿತು. ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು. ಸಹಜವಾಗಿಯೇ ಅವನನ್ನು ಪಂಪ, ಕುಮಾರವ್ಯಾಸರಿಗೆ ಹೋಲಿಸುವ ಸಾಧ್ಯತೆಗಳು ಕಡಿಮೆಯಾದವು. ಏನೇ ಆದರೂ ಜೀವನದರ್ಶನ ಮತ್ತು ಕಾವ್ಯಸಂವಿಧಾನಗಳ ನೆಲೆಯಲ್ಲಿ, ಲಕ್ಷ್ಮೀಶನನ್ನು ಪಂಪ, ಕುಮಾರವ್ಯಾಸರಿಗೆ ಹೋಲಿಸುವುದು ಕಷ್ಟ. ಆದರೆ, ಲಕ್ಷ್ಮೀಶನಿಗೆ ಪ್ರಕೃತಿವರ್ಣನೆಯಲ್ಲಿ ಆಸಕ್ತಿ ಮತ್ತು ಪ್ರತಿಭೆಗಳಿವೆ. ಅಷ್ಟೇ ಅಲ್ಲ, ಅವನು ಪ್ರಕೃತಿ ಮತ್ತು ಮನುಷ್ಯಭಾವನೆಗಳ ನಡುವೆ ಒಂದು ಬಗೆಯ ಸಾತತ್ಯವನ್ನು ತರುತ್ತಾನೆ. ಉದಾಹರಣೆಗೆ, ಚಂದ್ರಹಾಸನ ದುಃಖವನ್ನು ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳು ಕೂಡ ಹಂಚಿಕೊಳ್ಳುತ್ತವೆ. ಮನುಷ್ಯರು ಮತ್ತು ಪ್ರಾಣಿಗಳನ್ನು ಸಮಾನ ನೆಲೆಯಲ್ಲಿ ಕಾಣುವ ಈ ದೃಷ್ಟಿಕೋನವು ಗಮನೀಯವಾಗಿದೆ.

ಲಕ್ಷ್ಮೀಶನ ಶೈಲೀಯ ಆಯ್ಕೆಗಳು, ಅರ್ಥಕ್ಕಿಂತ ಹೆಚ್ಚಾಗಿ ಮಾಧುರ್ಯದ ಕಡೆಗೆ ಒಲಿಯುತ್ತವೆ. ತನ್ನ ಬರವಣಿಗೆಗೆ ಸಂಗೀತದ ಪರಿವೇಷವನ್ನು ಕೊಡಬಲ್ಲ ಅವನ ಸಾಮರ್ಥ್ಯವು ಆ ದಿನಗಳಲ್ಲಿ ಅನನ್ಯವಾಗಿತ್ತು. ಈ ಕೆಲಸವನ್ನು ಸಂಸ್ಕೃತ ಮತ್ತು ಕನ್ನಡಗಳ ಹಿತಕರವಾದ ಸಂಯೋಜನೆಯಿಂದ ಸಾಧಿಸಲು ಸಾಧ್ಯವಾಗಿದ್ದು ಲಕ್ಷ್ಮೀಶನ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ. ಹೀಗೆ ಈ ಕವಿಗೆ ಕನ್ನಡ ಕವಿಗಳ ಲೋಕದಲ್ಲಿ ಮಹತ್ವದ ಸ್ಥಾನವಿದೆ.

 

  1. ಕೃತಿಗಳು: ಜೈಮಿನಿ ಭಾರತ
  2. ಮುಂದಿನ ಓದು ಮತ್ತು ಲಿಂಕುಗಳು:

ಅ. ಕವಿ ಲಕ್ಷ್ಮೀಶ, 1933, ಕನ್ನಡ ಸಂಘ, ಚಿಕ್ಕಮಗಳೂರು.

ಆ. ಲಕ್ಷ್ಮೀಶ, 1955,(ಎರಡನೆಯ ಮುದ್ರಣ) ಎನ್. ಅನಂತರಂಗಾಚಾರ್, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಇ. ಕವಿ ಲಕ್ಷ್ಮೀಶನ ಕಾವ್ಯಾಲಂಕಾರ ವೈಭವ, ರಾ.ನ. ಮಳಗಿ, 1960.

ಈ. ಕಾವ್ಯವಿಹಾರ, ಕುವೆಂಪು, 1946.

ಉ. ಸಾಹಿತ್ಯದ ವಿರಾಟ್ ಸ್ವರೂಪ, ದ.ರಾ. ಬೇಂದ್ರೆ, 1974, ಸಮಾಜ ಪುಸ್ತಕಾಲಯ, ಧಾರವಾಡ.

ಊ. ಕವಿ ಲಕ್ಷ್ಮೀಶನ ಜೈಮಿನಿ ಭಾರತಕ್ಕೆ ಮುನ್ನುಡಿ, ದ.ರಾ. ಬೇಂದ್ರೆ, 1954.

ಋ. ಲಕ್ಷ್ಮೀಶನ ಜೈಮಿನಿ ಭಾರತ-ಒಂದು ಅಧ್ಯಯನ, ವಾಮನ ಡಿ. ಬೇಂದ್ರೆ, 1979, ಗೀತಾ ಬುಕ್ ಹೌಸ್, ಮೈಸೂರು.

ಎ. ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಸಂ. ವಿ. ಸೀತಾರಾಮಯ್ಯ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

  1. ಅನುವಾದಗಳು:

ಮುಖಪುಟ / ಸಾಹಿತ್ಯ