ಭಾರತದೇಶದ ಹಲವು ಭಾಗಗಳಲ್ಲಿ ಕಾಣಿಸಿಕೊಂಡು, ಧಾರ್ಮಿಕ-ಸಾಮಾಜಿಕ ಬದಲಾವಣೆಗಳಿಗೆ ಕಾರಣವಾದ ಭಕ್ತಿಚಳುವಳಿಗೆ ಅದರದೇ ಆದ ಕಲಾತ್ಮಕ ಆಯಾಮಗಳೂ ಇದ್ದವು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ವಚನಗಳು, ಕೀರ್ತನೆಗಳು ಮತ್ತು ತತ್ವದಪದಗಳು ಈ ಗುಂಪಿಗೆ ಸೇರುತ್ತವೆ. ಇವು ದೇವರಿಗೆ ಮರುಳಾದ ಕವಿಮನಸ್ಸುಗಳು, ತಮ್ಮ ಭಾವನೆಗಳನ್ನು ಗೇಯವಾದ ಕವಿತೆಗಳಲ್ಲಿ ತೋಡಿಕೊಳ್ಳುವ ಪ್ರಯತ್ನಗಳು. ಕೀರ್ತನೆ ಎಂಬ ಪದದ ವಾಚ್ಯಾರ್ಥವು ಹೊಗಳುವುದು ಎಂದೇ ಇದೆ. ಹರಿದಾಸಸಾಹಿತ್ಯವು ಹನ್ನೆರಡನೆಯ ಶತಮಾನದಲ್ಲಿ ತೀವ್ರವಾಗಿ ಬೆಳಗಿದ ಶಿವಶರಣರ ಚಳುವಳಿ ಮತ್ತು ವಚನಗಳ ನಂತರ, ಕನ್ನಡಕ್ಕೆ ಬಂತು. (ಹಾಗೆ ನೋಡಿದರೆ, ಶಿವಶರಣರು ಕೂಡ ಗೇಯವಾದ ರಚನೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಗೀತೆಗಳು, ಹಾಡುಗಳು ಮುಂತಾದ ಹೆಸರುಗಳಿಂದ ಕರೆಯಲಾಗಿದೆ.
ಜೈನಧರ್ಮ ಮತ್ತು ವೀರಶೈವ ಧರ್ಮಗಳು ಒಡ್ಡಿದ ಸವಾಲುಗಳ ಪರಿಣಾಮವಾಗಿ, ವೈದಿಕ ಧರ್ಮವು ಸಮುದಾಯಗಳ ಮೇಲಿನ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿತ್ತು. ಆದ್ದರಿಂದ ಜನರನ್ನು ತಲುಪುವ ಮತ್ತು ಒಲಿಸುವ ಹೊಸ ಬಗೆಗಳನ್ನು ಕಂಡುಕೊಳ್ಳುವುದರ ಮೂಲಕ ತನ್ನ ಅಡಿಪಾಯವನ್ನು ವಿಸ್ತರಿಸುವ ಅಗತ್ಯ ಇತ್ತು. ಇಂತಹ ಸನ್ನಿವೇಶದಲ್ಲಿ ಸಂಸ್ಕೃತದ ಬಗೆಗಿನ ಎರಡರಿಯದ ನಿಷ್ಠೆಯಿಂದ ಹೆಚ್ಚಿನ ಉಪಯೋಗವಿರಲಿಲ್ಲ. ಆದ್ದರಿಂದಲೇ ದಾಸಚಳುವಳಿ ಮತ್ತು ದಾಸಸಾಹಿತ್ಯಗಳು ಕಾಣಿಸಿಕೊಂಡವು. ದೇವರ ಮಹಿಮೆಯನ್ನು ಹಾಡಿಹೊಗಳುವ ಅಂತೆಯೇ ಹಿಂದೂಧರ್ಮದ ತಾತ್ವಿಕ/ನೈತಿಕ ಪರಿಕಲ್ಪನೆಗಳನ್ನು ಜನರಿಗೆ ಬಿತ್ತರಿಸುವ ಅನೇಕ ಹಾಡುಗಳು ರಚಿತವಾದವು. ಇವುಗಳನ್ನು ಕೀರ್ತನೆಗಳು, ದಾಸರಪದಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಇಂತಹ ಚಳುವಳಿಗಳಲ್ಲಿ ಸ್ವಲ್ಪ ಮಟ್ಟಿನ ಉದಾರತೆ ಮತ್ತು ಮುಕ್ತ ಮನೋಧರ್ಮಗಳು ಇದ್ದೇ ಇರುತ್ತವೆ. ಹರಿದಾಸಸಾಹಿತ್ಯವೂ ಇದಕ್ಕೆ ಅಪವಾದವಲ್ಲ. ಆದರೆ, ಇದು ಬಹಳ ಕಠಿಣವಾಗಿದ್ದ ಧರ್ಮದ/ಜಾತಿಪದ್ಧತಿಯ ಚೌಕಟ್ಟಿನಲ್ಲಿ ಸುಧಾರಣೆಗಳನ್ನು ತರುವ ಪ್ರಯತ್ನವೇ ಹೊರತು, ಸಂಪೂರ್ಣವಾದ ಪರಿವರ್ತನೆಯನ್ನು ಬಯಸುವ ದಂಗೆಯಲ್ಲ. ಈ ಚಳುವಳಿಯ ನಾಯಕರಾದ ಪುರಂದರದಾಸರು ಮತ್ತು ಕನಕದಾಸರು ತಮ್ಮ ಧರ್ಮದ ಚೌಕಟ್ಟಿನಲ್ಲಿಯೇ ತೀವ್ರವಾದ ಪ್ರತಿರೋಧವನ್ನು ಎದುರಿಸಬೇಕಾಯಿತು. ಕನಕದಾಸರು ಜಾತಿಪದ್ಧತಿಯ ಕೆಳನೆಲೆಗಳಿಗೆ ಸೇರಿದ್ದರೆನ್ನುವುದು ಬಿಕ್ಕಟ್ಟನ್ನು ತೀವ್ರವಾಗಿಸಿತು.
ಈ ಚಳುವಳಿಯ ನಾಂದಿಯು ಅಚಲಾನಂದ ತೀರ್ಥ, ನರಹರಿತೀರ್ಥ, ಶ್ರೀಪಾದರಾಜ ಮುಂತಾದ ಹಿರಿಯರಿಂದಲೇ ಆಯಿತು. ಆದರೆ, ಪುರಂದರ ಮತ್ತು ಕನಕರ ಆಗಮನದೊಂದಿಗೆ ಅದರ ಹರಹು ಮತ್ತು ತೀವ್ರತೆಗಳು ಹೆಚ್ಚಿದವು. ಈ ಪರಂಪರೆಯು ಸುಮಾರು ಆರು ಶತಮಾನಗಳ ಕಾಲ ಪ್ರಬಲವಾಗಿಯೋ ಕ್ಷೀಣವಾಗಿಯೋ ಬೆಳೆದುಕೊಂಡು ಬಂದಿದೆ. ಹರಿದಾಸರೆಲ್ಲರೂ ದ್ವೈತಸಿದ್ಧಾಂತದ ನಿಷ್ಠಾವಂತ ಬೆಂಬಲಿಗರಾಗಿದ್ದರಿಂದ ಅವರ ತಾತ್ವಿಕವಾದ ಕೊಡುಗೆಯಲ್ಲಿ ಹೊಸದೇನೂ ಇಲ್ಲ. ಆದರೆ, ಹರಿದಾಸರು ಭಕ್ತಿಯ ಭಾವನಾತ್ಮಕ ಹಾಗೂ ನೈತಿಕ ಆಯಾಮಗಳಿಗೆ ಒತ್ತುನೀಡಿದರು. ಜಾತಿಪದ್ಧತಿಯ ಚೌಕಟ್ಟಿನಲ್ಲಿ ಹೇರಲ್ಪಟ್ಟಿದ್ದ ಆಚರಣೆಗಳನ್ನು ಮತ್ತು ಕಟ್ಟುಪಾಡುಗಳನ್ನು ಅವರು ನಿರಾಕರಿಸಿದರು.
ಕನಕ-ಪುರಂದರರ ಮತ್ತು ಅವರ ನಂತರ ಬಂದ ಕೆಲವು ಹರಿದಾಸರ ಕೀರ್ತನೆಗಳು ಬಹಳ ಸರಳವಾದ ಕನ್ನಡದಲ್ಲಿ ರಚಿತವಾಗಿದ್ದು ಅನೇಕ ಸಾಹಿತ್ಯಗುಣಗಳನ್ನು ಹೊಂದಿವೆ. ಸಾಮಾನ್ಯವಾಗಿ ಎಲ್ಲ ಕೀರ್ತನೆಗಳೂ ಪಲ್ಲವಿಯಿಂದ ಪ್ರಾರಂಭವಾಗುತ್ತವೆ. ಪಲ್ಲವಿ ಎಂದರೆ, ಪ್ರತಿಯೊಂದು ನುಡಿಯ(ಸ್ಟಾಂಜಾ) ಕೊನೆಯಲ್ಲಿ ಪುನರಾವರ್ತನೆಯಾಗುವ ಸಾಲು. ಇವಲ್ಲದೆ, ಅಲ್ಲಲ್ಲಿ ಅನುಪಲ್ಲವಿಗಳೂ ಇರುತ್ತವೆ. ವಚನಗಳಂತೆ, ಇಲ್ಲಿಯೂ ಕಥೆಯೆನ್ನುವುದು ಗೈರುಹಾಜರಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಅವುಗಳನ್ನು ಭಾವಗೀತೆಗಳೆಂದು ಕರೆದರೂ ತಪ್ಪಿಲ್ಲ. ಅವು ಸಾಹಿತ್ಯದ ಉಪಕರಣಗಳಾದ ಉಪಮೆ, ರೂಪಕ, ಪ್ರತಿಮೆ ಮುಂತಾದವನ್ನು ವಿಪುಲವಾಗಿ ಬಳಸಿಕೊಳ್ಳುತ್ತವೆ. ಈ ಅಲಂಕಾರಗಳನ್ನು ಕವಿಸಮಯಗಳ ಬದಲಾಗಿ, ನಿತ್ಯಜೀವನದಿಂದ ಆರಿಸಿಕೊಳ್ಳುತ್ತಿದ್ದರು. ಅದಕ್ಕಿಂತ ಮುಖ್ಯವಾಗಿ, ಗೇಯತೆಯನ್ನು ಅಳವಡಿಸಿಕೊಂಡಿದ್ದ ಕೀರ್ತನೆಗಳು ಬಹಳ ಸುಲಭವಾಗಿ ಕನ್ನಡದ ಮೌಖಿಕ ಪರಂಪರೆಯೊಳಗೆ ಸೇರಿಹೋದವು. ಆ ಮೂಲಕ ಜನಸಾಮಾನ್ಯರನ್ನು ಗೃಹಿಣಿಯರನ್ನು ತಲುಪಿದವು. ದಾಸರ ಪದಗಳು ಶಾಸ್ತ್ರೀಯ ಸಂಗೀತದ ಸೂಕ್ಷ್ಮಗಳಿಗೆ ಅಳವಡುವಂತೆಯೇ ಹಾದಿಬದಿಯ ದಾಸಯ್ಯನ ಸೀಮಿತ ಪ್ರತಿಭೆಗೂ ಒಗ್ಗಿಕೊಳ್ಳುತ್ತವೆ. ಪುರಂದರದಾಸರನ್ನು ಕರ್ನಾಟಕಸಂಗೀತದ ಪಿತಾಮಹರೆಂದು ಕರೆಯುವುದು ನಿಜವಾದರೂ ಈ ಪದಗಳನ್ನು ಸಂಗೀತಕ್ಕೆ ಅಳವಡಿಸಿ ಕಚೇರಿಗಳಲ್ಲಿ ಹಾಡತೊಡಗಿದ್ದು ಇತ್ತೀಚೆಗ.
ಕೀರ್ತನೆ ಎನ್ನುವ ಪದವು ಸಾಮಾನ್ಯವಾಗಿ ಹರಿದಾಸರ ಹಾಡುಗಳಿಗೆ ಅನ್ವಯವಾಗುತ್ತವೆ. ಸುಳಾದಿ, ಉಗಾಭೋಗ, ಮುಂಡಿಗೆ ಮುಂತಾದವನ್ನೂ ಹಾಡಬಹುದಾದರೂ ಅವುಗಳಿಗೆ ಪ್ರತ್ಯೇಕ ಲಕ್ಷಣಗಳಿವೆ. ಕೀರ್ತನೆಗಳು ವೈದಿಕ ಪುರಾಣಗಳು ಮತ್ತು ಮಹಾಕಾವ್ಯಗಳನ್ನು ತಮ್ಮ ಆಕರವಾಗಿ ಬಳಸಿಕೊಳ್ಳುತ್ತವೆ; ಮನುಷ್ಯರ ಭಾವನೆಗಳ ಲೋಕದ ಹಲವು ನೆಲೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ ಮತ್ತು ಕನ್ನಡ ಭಾಷೆಯ ಅಂತರಂಗವನ್ನೇ ಗ್ರಹಿಸಿರುವ ಭಾಷೆಯನ್ನು ಬಳಸುತ್ತವೆ. ಅವು ಆಡುಮಾತು ಮತ್ತು ಪ್ರಮಾಣಿತ ಭಾಷೆಗಳನ್ನು ಬಹಳ ಚೆನ್ನಾಗಿ ಸಂಯೋಜಿಸುತ್ತವೆ. ಕೃಷ್ಣನ ಬಾಲ್ಯವನ್ನು ಕೇಂದ್ರವಾಗಿಟ್ಟುಕೊಂಡು ರಚಿತವಾಗಿರುವ ಪುರಂದರದಾಸರ ಹಲವು ಕೀರ್ತನೆಗಳು ತಮ್ಮದೇ ಆದ ಹೊಸ ಲೋಕವನ್ನು ಸೃಷ್ಟಿಸಿವೆ. ಅಲ್ಲಿ ಕೆಲವು ಕಡೆ ಬಳಸಿರುವ ಬಾಲಭಾಷೆಯು ಕನ್ನಡದಲ್ಲಿಯೇ ಅನನ್ಯವಾದುದು. ಅನೇಕ ಕೀರ್ತನೆಗಳು, ಜಾತಿ-ಮತಗಳ ಸಂಕುಚಿತ ಚೌಕಟ್ಟನ್ನು ಮೀರಿ ಮನುಷ್ಯಾನುಭವಗಳು ಮತ್ತು ಭಾವನೆಗಳನ್ನು ನಿರೂಪಿಸುವುದರಿಂದ ನಮ್ಮ ಕಾಲದಲ್ಲಿಯೂ ಸಲ್ಲುತ್ತವೆ.
ಪುರಂದರದಾಸ ಮತ್ತು ಕನಕದಾಸರ ನಂತರವೂ ದಾಸಸಾಹಿತ್ಯದ ಪರಂಪರೆಯು ಮುಂದುವರಿಯಿತು. ವಿಜಯದಾಸ, ಜಗನ್ನಾಥದಾಸ ಮತ್ತು ಮಹಿಪತಿದಾಸರು ಅವರಲ್ಲಿ ಪ್ರಮುಖರು. ಅವರ ಕೀರ್ತನೆಗಳು ಕೂಡ ಅಲ್ಲಿಲ್ಲಿ ಸಾಹಿತ್ಯಕ ಗುಣಗಳಿವೆ. ಆದರೆ, ಹಿಂದಿನ ಹಂತದಲ್ಲಿದ್ದ ಪ್ರತಿಭಟನೆಯ ನೆಲೆಗಳು ಇಲ್ಲಿ ಕಾಣಸಿಗುವುದಿಲ್ಲ. ಆದರೆ ಮುಖ್ಯವಾದ ಕೀರ್ತನೆಗಳು ಆಧುನಿಕವಾದ ಮನಸ್ಸುಗಳಿಗೂ ಇಷ್ಟವಾಗುವ ಗುಣವನ್ನು ಪಡೆದಿದ್ದು, ಕನ್ನಡ ಸಾಹಿತ್ಯ ಪರಂಪರೆಯ ಅವಿಭಾಜ್ಯ ಭಾಗವಾಗಿವೆ.
ಮುಂದಿನ ಓದು:
ಅ. ‘The Pathway to God in Indian literature’, R.D. Ranade
ಆ. ‘Hymns for the Drowning’, A.K. Ramanujan
ಇ. ‘History of the Dvaita school of Vedanta and its Literature’, B.N.K. Sharma, 1981, Motilal Banarasidas: Bombay
ಈ. ‘ಪ್ರಸಾದಯೋಗ’, ವಿ.ಎ. ದಿವಾಣಜಿ
ಉ. ‘ತಂಬೂರಿ ಮೀಟಿದವ’, ಎಚ್.ಎನ್. ಮುರಳೀಧರ, ಅಂಕಿತ ಪ್ರಕಾಶನ, ಬೆಂಗಳೂರು
|