ಸಾಹಿತ್ಯ
ಜನ್ನ
    1. ಲೇಖಕನ ಹೆಸರು: ಜನ್ನ
    2. ಕಾಲ: ಹನ್ನೆರಡನೆಯ ಶತಮಾನದ ಉತ್ತರಾರ್ಧ ಮತ್ತು ಹದಿಮೂರನೆಯ ಶತಮಾನದ ಉತ್ತರಾರ್ಧ
    3. ಸ್ಥಳ: ಹಾಸನ ಜಿಲ್ಲೆಯ ಹಳೇಬೀಡು. ಎರಡನೆಯ ನಾಗವರ್ಮನ ಶಿಷ್ಯ ಮತ್ತು ಕೇಶಿರಾಜನ ಸೋದರಮಾವ.
    4. ಮತ-ಧರ್ಮ: ಜೈನ. ಅವನ ಗುರು ರಾಮಚಂದ್ರದೇವ ಮುನಿ. ಅವನು ಪನ್ನಲದುರ್ಗದ ಅನಂತನಾಥ ಬಸದಿಯೂ ಸೇರಿದಂತೆ ಅನೇಕ ಜೈನ ದೇವಾಲಯಗಳನ್ನು ಕಟ್ಟಿಸಿದ್ದಾನೆ. ದೋರಸಮುದ್ರದ ವಿಜಯ ಪಾರ್ಶ್ವನಾಥ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿದ್ದಾನೆ.
    5. ರಾಜಾಶ್ರಯ: ಹೊಯ್ಸಳ ಬಲ್ಲಾಳ (ಕ್ರಿ.ಶ. 1173-1220) ಅವನು ನರಸಿಂಹ ಬಲ್ಲಾಳನ ಮಂತ್ರಿಯೂ ಆಗಿದ್ದನು.
    6. ಬಿರುದುಗಳು: ಕವಿಚಕ್ರವರ್ತಿ
    7. ಕಿರು ಪರಿಚಯ:
    8. ಕನ್ನಡ ವಾಚಕ ಸಮುದಾಯದ ಆಧುನಿಕ ಕವಿಗಳಿಗೆ ಬಹಳ ಇಷ್ಟವಾಗಿರುವ ಕೆಲವು ಪ್ರಾಚೀನ ಕವಿಗಳಲ್ಲಿ ಜನ್ನನೂ ಒಬ್ಬ. ಅವನ ಕೃತಿಗಳನ್ನು ಕುರಿತ ಗಂಭೀರ ವಿಮರ್ಶೆಯು ನಿರಂತರವಾಗಿ ಬರುತ್ತಲೇ ಇದೆ. ಅವನ ಎರಡೂ ಕೃತಿಗಳು ಸಂಸ್ಕೃತ ಮೂಲಗಳನ್ನು ಆಧರಿಸಿರುವುದು ನಿಜವಾದರೂ ಆಶಯ ಮತ್ತು ಆಕೃತಿಗಳಿಗೆ ಸಂಬಂಧಿಸಿದ ಹೊಸ ನೆಲೆಗಳನ್ನು ಸೇರಿಸುವುದರಲ್ಲಿ ಜನ್ನನು ಯಶಸ್ವಿಯಾಗಿದ್ದಾನೆ. ಈ ಮಾತು ಅವನ ಮೇರುಕೃತಿಯೂ ಕನ್ನಡದ ಸರ್ವಶ್ರೇಷ್ಠ ಕೃತಿಗಳ ಸಾಲಿಗೆ ಸೇರುವಂತಹುದೂ ಆದ ಯಶೋಧರಚರಿತೆಗೆ ಖಂಡಿತವಾಗಿಯೂ ಅನ್ವಯಿಸುತ್ತದೆ. ಕನ್ನಡದ ಹಿರಿಯ ಕವಿಗಳಾದ ಪಂಪ, ಚಾವುಂಡರಾಯ ಮತ್ತು ಬಸವಣ್ಣನವರ ಹಾಗೆ, ಜನ್ನ ಕೂಡ ಆಡಳಿತಗಾರ ಮತ್ತು ಕವಿ ಎಂಬ ಜೋಡಿ ಹೊಣೆಗಳನ್ನು ನಿರ್ವಹಿಸಿದವನು. ಪ್ರಾಯಶಃ ಇದರ ಪರಿಣಾಮವಾಗಿಯೇ ಅವನಿಗೆ ಮನುಷ್ಯಾನುಭವಗಳ ವಿಶಾಲ ವರ್ಣಪಟಲದ ನಿಕಟ ಪರಿಚಯವಿದೆ. ಹಾಗೆಯೇ ಅವನು ಮಾನವನ ಅಂತರಂಗದ ಆಳಗಳಿಗೆ ಇಳಿದು ಸತ್ಯಶೋಧನೆ ಮಾಡಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ. ಜನ್ನನು ಆದಿಕವಿಯಾದ ಪಂಪನು ಹಾಕಿಕೊಟ್ಟ ಪರಂಪರೆಯನ್ನು ನಿಕರವಾಗಿ ಅನುಸರಿಸಲಿಲ್ಲ. ಏಕೆಂದರೆ, ಅವನ ಎರಡೂ ಕೃತಿಗಳು ಜೈನಧರ್ಮಕ್ಕೆ ಸಂಬಂಧಿಸಿವೆ. ಮೊದಲನೆಯದು ಅನಂತನಾಥತೀರ್ಥಂಕರನ ಜೀವನವನ್ನು ನಿರೂಪಿಸುವ ಅನಂತನಾಥ ಪುರಾಣ ಮತ್ತು ಎರಡನೆಯದು ನೋಂಪಿಯ ಕಥೆಗಳು ಎಂಬ ಪ್ರಕಾರಕ್ಕೆ ಸೇರುವ ಕಾವ್ಯ. ಆದರೆ, ಎರಡರಲ್ಲಿಯೂ ಧರ್ಮದ ಎಲ್ಲೆಗಳನ್ನು ಮೀರಿ, ಮನುಷ್ಯನ ತೀವ್ರಭಾವಗಳ ಕಥನ ಮತ್ತು ಅವನು ಅನುಭವಿಸುವ ಶಿಕ್ಷೆಯ ದಾರುಣತೆಗಳನ್ನು ಕಟ್ಟಿಕೊಡುವುದರಲ್ಲಿ ಜನನ್ನು ಯಶಸ್ವಿಯಾಗಿದ್ದಾನೆ.

      ಜನ್ನನು ಬರೆದಿರುವ ಎರಡೂ ಕಾವ್ಯಗಳು ಸರ್ವಸಮ್ಮತವಾಗಿದ್ದ ಸಾಂಪ್ರದಾಯಿಕ ಚೌಕಟ್ಟಿಗೆ ಹೊಸ ಆಯಾಮಗಳನ್ನು ಸೇರಿಸುತ್ತವೆ. ಯಶೋಧರಚರಿತೆಯಲ್ಲಿ ಬರುವ ಅಮೃತಮತಿಯ ಪಾತ್ರಚಿತ್ರಣವು ಬಹುಮುಖಿಯಾದ ಪ್ರತಿಸ್ಪಂದನಗಳನ್ನು ಪಡೆದಿದೆ. ಕೇವಲ ಸ್ತ್ರೀವಾದೀ ಚಿಂತಕಿಯರು ಮಾತ್ರವಲ್ಲ, ಕನ್ನಡ ವಿಮರ್ಶೆಯ ಎಲ್ಲ ಪ್ರಸ್ಥಾನಗಳೂ ಈ ಕೃತಿಯನ್ನು ಪರಿಶೀಲಿಸಿದೆ. ಅದೇ ರೀತಿಯಲ್ಲಿ, ಅನಂತನಾಥಪುರಾಣದಲ್ಲಿ ಬರುವ, ‘ಚಂಡಶಾಸನನ ಕಥೆಯ ಪ್ರಸಂಗವು, ದುರಂತಪ್ರಣಯದ ವಸ್ತುವಿನಿಂದ, ಆಧುನಿಕ ಮನಸ್ಸನ್ನು ಆಕರ್ಷಿಸಿದೆ. ಅಲ್ಲಿ ಬರುವ ಚಂಡಶಾಸನ, ಸುನಂದಾ ಮತ್ತು ವಸುಷೇಣರು ತಮ್ಮ ವೈಯಕ್ತಿಕ ಭಾವತೀವ್ರತೆಗಳಿಂದ ನಮ್ಮ ಮನ ಸೆಳೆಯುತ್ತಾರೆ.

      ಜನ್ನನು ಆರಿಸಿಕೊಳ್ಳುವ ಕಾವ್ಯವಸ್ತುಗಳು ಚಾರಿತ್ರಿಕವೂ ಅಲ್ಲ, ಸಮಕಾಲೀನವೂ ಅಲ್ಲ. ಆದರೆ, ಅವನು ಜೈನಧರ್ಮದ ಬೆಳವಣಿಗೆಯ ಐತಿಹಾಸಿಕ ಹರಹಿನಲ್ಲಿ, ತನ್ನ ಕಾವ್ಯಕ್ಕೆ ಅವೆರಡೂ ಆಯಾಮಗಳನ್ನು ಕೊಡುತ್ತಾನೆ. ಅದು ಏಕ ಕಾಲದಲ್ಲಿ ಪ್ರಾಚೀನ ಉತ್ತರ ಭಾರತದ ಕಥೆಯೂ ಹೌದು, ಮಧ್ಯಕಾಲೀನ ಕರ್ನಾಟಕದ ಕಥೆಯೂ ಹೌದು. ಅಷ್ಟೇ ಅಲ್ಲ ನಮ್ಮ ಕಾಲದ ಭಾವನಾತ್ಮಕ ತಲ್ಲಣಗಳ ಕಥೆಯೂ ಹೌದು. ಆದ್ದರಿಂದಲೇ ಜನ್ನನು ಕನ್ನಡದ ಪ್ರಮುಖ ಕವಿಗಳ ಸಾಲಿಗೆ ಸೇರುತ್ತಾನೆ.

    9. ಕೃತಿಗಳು:
    10. ಅ. ಅನಂತನಾಥಪುರಾಣ (ಚಂಪೂ ಕಾವ್ಯ)
      ಆ. ಯಶೋಧರಚರಿತೆ (ಕಂದ ಪದ್ಯಗಳು)
      ಇ. ಅನುಭವಮುಕುರ (ಕಾಮಶಾಸ್ತ್ರ)
      ಈ. ಅನೇಕ ಶಾಸನಗಳು

    11. ಮುಂದಿನ ಓದು ಮತ್ತು ಲಿಂಕುಗಳು:

      ಅ. ಜನ್ನ, ಸಿ.ಪಿ. ಕೃಷ್ಣಕುಮಾರ್, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
      ಆ. ಜನ್ನ- ಕವಿ ಕಾವ್ಯ ಪರಂಪರೆ, ಸಂ. ವಿ.ಸೀತಾರಾಮಯ್ಯ, 1975, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.
      ಇ. ಜನ್ನ - ಒಂದು ಅಧ್ಯಯನ, ಕೆ.ವೈ. ಶಿವಕುಮಾರ್, 1999, ಚೇತನಾ ಬುಕ್ ಹೌಸ್, ಮೈಸೂರು.
      ಈ. ಯಶೋಧರಚರಿತೆಯ ಕಾವ್ಯತಂತ್ರ, ಕೀರ್ತಿನಾಥ ಕುರ್ತಕೋಟಿ, 1982, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
      ಉ. ಜನ್ನ - ಒಂದು ಮರುಚಿಂತನೆ, ಸಂ. ಗಿರಡ್ಡಿ ಗೋವಿಂದರಾಜ, 2008, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
      ಊ. ‘Yashastilaka and Indian Culture’, K.K. Handiqui, 1949, Jain Samskriti Samrakshak Sangha, Sholapur.
      ಋ. ದಯವಿಟ್ಟು, ಯಶೋಧರಚರಿತೆ ಎಂಬ ನಮೂದಿಗೆ ಕೊಟ್ಟಿರುವ ಗ್ರಂಥ-ಲೇಖನಸೂಚಿಯನ್ನೂ ನೋಡಿ.

    12. ಅನುವಾದಗಳು:

ಮುಖಪುಟ / ಸಾಹಿತ್ಯ