| ಮುಂಡಿಗೆ ಎನ್ನುವುದು ಒಂದು ಪಾರಿಭಾಷಿಕ ಪದ. ಹದಿನಾರನೆಯ ಶತಮಾನದ
                                    ಸಂತ ಕವಿಯಾದ ಕನಕದಾಸರು ರಚಿಸಿರುವ, ವಿಸ್ತೃತವಾದ ಒಗಟಿನ ರೂಪದಲ್ಲಿರುವ ಕವಿತೆಗಳನ್ನು ಮುಂಡಿಗೆಗಳೆಂದು
                                    ಕರೆಯುತ್ತಾರೆ. ಕನಕದಾಸರು ಅನೇಕ ಕೀರ್ತನೆಗಳನ್ನೂ ಕಾವ್ಯಗಳನ್ನೂ ಬರೆದಿದ್ದಾರೆ. ಹನ್ನೆರಡನೆಯ ಶತಮಾನದ.ಅನುಭಾವಿ
                                    ಕವಿಯಾದ ಅಲ್ಲಮಪ್ರಭು ರಚಿಸಿರುವ ಬೆಡಗಿನ ವಚನಗಳಿಗೂ ಈ ಮುಂಡಿಗೆಗಳಿಗೂ ಸಾಮ್ಯಗಳಿವೆ. ಮುಂಡಿಗೆಗಳನ್ನು
                                    ಹಾಡಲು ಸಾಧ್ಯ. ಬಹಳ ಸರಳವೂ ಪಾರದರ್ಶಕವೂ ಆಗಿರುವ ಕನಕದಾಸರ ಇತರ ಕೃತಿಗಳಿಗಿಂತ ಮುಂಡಿಗೆಗಳು ಭಿನ್ನವಾಗಿವೆ.
                                    ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಸಾಕಷ್ಟು ಮುಂದೆಹೋಗಿರುವ ಶಿಷ್ಯರಿಗಾಗಿ ಇವುಗಳನ್ನು ರಚಿಸಿರಬಹುದು.
                                    ಕೆಲವು ಬಾರಿ ಯೋಗಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು,
                                        ಅರೆ ಬರೆ ತಿಳಿವಳಿಕೆಯೊಂದಿಗೆ ಪ್ರಯೋಗಿಸಲು ಹೋದರೆ,
                                            ಅದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ಒಂದು ಬಗೆಯ ನಿಗೂಢತೆಯು ಅನಿವಾರ್ಯವಾಗಿರಬಹುದು.
                                            ಇನ್ನೊಂದು ನೆಲೆಯಿಂದ ನೋಡಿದಾಗ, ಸಮಾಜದ ಹಿಂದುಳಿದ ವರ್ಗಗಳಿಂದ ಬಂದು, ಪ್ರತಿಷ್ಠಿತವಾಗಿದ್ದ ಬ್ರಾಹ್ಮಣವರ್ಗದಿಂದ
                                            ಸಾಕಷ್ಟು ಪ್ರತಿರೋಧವನ್ನು ಎದುರಿಸಿದ ಕನಕದಾಸರು ತಮ್ಮ ಬೋಧನೆಯ ಒಂದು ಭಾಗದ ಬಗ್ಗೆ ರಹಸ್ಯಮಯತೆಯನ್ನು
                                            ಉಳಿಸಿಕೊಂಡಿರಬಹುದು. ಈ ಹಾಡುಗಳನ್ನು ಅರ್ಥ ಮಾಡಿಕೊಳ್ಳಲು ಆಧ್ಯಾತ್ಮಿಕ ಪರಂಪರೆಯಲ್ಲಿ ಬಳಸಲಾಗುವ
                                            ಸಂಕೇತವ್ಯವಸ್ಥೆಯ ನಿಕಟ ಪರಿಚಯವು ಅತ್ಯಗತ್ಯ. ಅವುಗಳಲ್ಲಿ ಕೆಲವು ಪುರಾಣಗಳ ಆಳವಾದ ಜ್ಞಾನವನ್ನು ಅಪೇಕ್ಷಿಸುತ್ತವೆ.
                                            ಇವುಗಳನ್ನು ಅರ್ಥೈಸಲು ಹರಿದಾಸ ಸಾಹಿತ್ಯದಲ್ಲಿ ತಜ್ಞರಾದವರಿಗೂ ಕಷ್ಟವಾಗುತ್ತದೆ. 
                                    ಇಲ್ಲಿ ನಿದರ್ಶನಕ್ಕೆಂದು ಒಂದು ಮುಂಡಿಗೆಯನ್ನು ಯಾವುದೇ ವಿವರಣೆಯಿಲ್ಲದೆ
                                        ಕೊಡಲಾಗಿದೆ: 
                                    ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೋ
                                 
                                    ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತು
                                 
                                    ಲಂಘಿಸುವ ಹುಲಿಯ ಕಂಡು ನರಿ ನುಂಗಿತು
                                 
                                    ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತು
                                 
                                    ಉತ್ತರದಿಶೆಯೊಳು ಬೆಳುದಿಂಗಳಾಯಿತಮ್ಮಾ
                                 
                                    ಯೋಗಮಾರ್ಗಿ ಕಾಗಿನೆಲೆಯಾದಿಕೇಶವರಾಯ
                                 
                                    ಭಾಗವತರ ಬೆಡಗಿದು ಬೆಳುದಿಂಗಳಾಯಿತಮ್ಮಾ || 
                                      |