ಸಾಹಿತ್ಯ
ಚಂಪೂ

ಚಂಪೂ ಎನ್ನುವುದು, ಕನ್ನಡಕ್ಕೆ ವಿಶಿಷ್ಟವಾದ ಸಾಹಿತ್ಯಪ್ರಕಾರ. ಸಂಸ್ಕೃತ ಕೂಡ, ಈ ರೂಪವನ್ನು ಕನ್ನಡದಿಂದ ಎರವಲು ತೆಗೆದುಕೊಂಡಿತೆಂದು ವಿದ್ವಾಂಸರ ಅಭಿಪ್ರಾಯ. ಚಂಪೂ ಎಂದರೆ ಪದ್ಯ ಮತ್ತು ಗದ್ಯಗಳ ಸಂಯೋಜನೆ. ಇಲ್ಲಿ ಕಾವ್ಯ ಎನ್ನುವುದಕ್ಕಿಂತ ಪದ್ಯ ಎನ್ನುವ ಪದದ ಬಳಕೆಯೇ ಸೂಕ್ತ. ಏಕೆಂದರೆ ಕಾವ್ಯವು ಹೆಚ್ಚು ವಿಶಾಲವಾದ ಅರ್ಥವಲಯಗಳನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಕನ್ನಡ ಕವಿಗಳು ಈ ರೂಪವನ್ನು ಇಷ್ಟಪಟ್ಟಿದ್ದಾರೆ, ಬಳಸಿದ್ದಾರೆ. ಏಕೆಂದರೆ, ಇದು ವೈವಿಧ್ಯ ಮತ್ತು ಪ್ರಯೋಗಶೀಲತೆಗಳಿಗೆ ಹೆಚ್ಚಿನ ಆಸ್ಪದ ಕೊಡುತ್ತದೆ. ಪದ್ಯ ಮತ್ತು ಗದ್ಯಗಳೆರಡನ್ನೂ ಬಳಸುವುದರಿಂದ ಅನೇಕ ಲಾಭಗಳಿವೆ. ಚಂಪೂ ಕಾವ್ಯದಲ್ಲಿ, ಒಂದಕ್ಕಿಂತ ಹೆಚ್ಚು ಛಂದೋರೂಪಗಳನ್ನು ಬಳಸಲು ಸಾಧ್ಯ. ಕಾವ್ಯದ ಅಗತ್ಯಕ್ಕೆ ತಕ್ಕ ಹಾಗೆ, ವರ್ಣನೆ, ಚಿಂತನೆ ಮತ್ತು ಭಾವನೆಗಳನ್ನು ಕಟ್ಟಿಕೊಡಲು, ಗದ್ಯವನ್ನೋ ಪದ್ಯವನ್ನೋ ಬಳಸುವ ಸ್ವಾತಂತ್ರ್ಯವು ಕವಿಗೆ ಇರುತ್ತದೆ. ಪ್ರಾಯಶಃ, ಕನ್ನಡದ ಆದಿಕವಿಯಾದ ಪಂಪನಿಗಿಂತ ಮುಂಚಿತವಾಗಿಯೇ ಪ್ರಾರಂಭವಾದ ಚಂಪೂ ಪರಂಪರೆಯು, ಸುಮಾರು ಒಂದು ಸಾವಿರ ವರ್ಷಗಳವರೆಗೂ ನಿರಂತರವಾಗಿ ಮುಂದುವರಿಯಿತು. ಈ ಅವಧಿಯಲ್ಲಿ ಅದು ಇತರ ದೇಸೀ ಸಾಹಿತ್ಯಪ್ರಕಾರಗಳ ಸವಾಲನ್ನು ಎದುರಿಸಬೇಕಾಯಿತು. ಆದರೆ, ಅದು ಸಂಪೂರ್ಣವಾಗಿ ನಿರ್ಗಮಿಸಲಿಲ್ಲ. ಚಂಪೂ ಪ್ರಕಾರದ ಸ್ವರ್ಣಯುಗವು, ಹಳಗನ್ನಡದ ಉನ್ನತಿಯ ಕಾಲದೊಂದಿಗೆ ಹೊಂದಿಕೆಯಾಗುತ್ತದೆ. ನಡುಗನ್ನಡದ ಭಾಷೆಯು ಬಳಕೆಗೆ ಬಂದ ನಂತರ, ಚಂಪೂ ಪ್ರಕಾರವು ಹಿನ್ನೆಲೆಗೆ ಸರಿದು, ಕೇವಲ ಪಂಡಿತಮಾನ್ಯವಾಯಿತು. ನೇಮಿಚಂದ್ರ, ರುದ್ರಭಟ್ಟ, ಷಡಕ್ಷರದೇವ ಮುಂತಾದ ಕವಿಗಳು ಚಂಪೂ ರೂಪವನ್ನು ಆರಿಸಿಕೊಂಡಿದ್ದು ನಿಜವಾದರೂ ಅವರ ಕೃತಿಗಳು ಜನಸಾಮಾನ್ಯರ ಮನ್ನಣೆಯನ್ನು ಪಡೆಯಲಿಲ್ಲ.

ಚಂಪೂ ರೂಪವನ್ನು ಬಳಸಿದ ಪ್ರಮುಖ ಕವಿಗಳೆಂದರೆ, ಪಂಪ, ಪೊನ್ನ, ರನ್ನ, ನಾಗವರ್ಮ, ನಾಗಚಂದ್ರ, ದುರ್ಗಸಿಂಹ, ನಯಸೇನ, ಹರಿಹರ, ನೇಮಿಚಂದ್ರ, ರುದ್ರಭಟ್ಟ ಮತ್ತು ಷಡಕ್ಷರಿ. ಆದಿಪುರಾಣ’, ‘ವಿಕ್ರಮಾರ್ಜುನ ವಿಜಯ’, ‘ಸಾಹಸಭೀಮವಿಜಯ’, ‘ಕರ್ನಾಟಕ ಕಾದಂಬರೀ’, ‘ಅಜಿತ ಪುರಾಣ’, ‘ರಾಮಚಂದ್ರಚರಿತಪುರಾಣ’, ‘ಗಿರಿಜಾ ಕಲ್ಯಾಣ ಮಹಾಪ್ರಬಂಧ’, ‘ಜಗನ್ನಾಥವಿಜಯ’, ‘ಲೀಲಾವತೀ’, ‘ರಾಜಶೇಖರವಿಳಾಸಗಳು ಈ ರೂಪದಲ್ಲಿ ರಚಿತವಾಗಿರುವ ಕೆಲವು ಮುಖ್ಯ ಕೃತಿಗಳು. ಇವರಲ್ಲಿ ಬಹುಸಂಖ್ಯಾತರು ಜೈನಧರ್ಮಕ್ಕೆ ಸೇರಿದವರು. ಅವರ ಮನಸ್ಸುಗಳು ಮಹಾಕಾವ್ಯದ ರಚನೆಗೆ ಒಲಿದವು. ಅವರು ಸಂಸ್ಕೃತ ಭಾಷೆಯನ್ನು ಪದಕೋಶ ಮತ್ತು ವಾಕ್ಯರಚನೆಗಳೆರಡರ ನೆಲೆಯಲ್ಲಿಯೂ ವ್ಯಾಪಕವಾಗಿ ಬಳಸಿದ್ದಾರೆ. ಈ ಕಾವ್ಯಗಳು ಓದಲು ಹಾಗೂ ವಾಚನ ಮಾಡಲು ಸೂಕ್ತವಾದವು. ಮೌಖಿಕ ಪರಂಪರೆಗೂ ಚಂಪೂ ಕಾವ್ಯಕ್ಕೂ ನಿಕಟವಾದ ಸಂಬಂಧವಿಲ್ಲ. ಚಂಪೂಕವಿಗಳು, ಸಂಸ್ಕೃತದಿಂದ ತೆಗೆದುಕೊಂಡ ವೃತ್ತಗಳು ಮತ್ತು ಕಂದಪದ್ಯಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅಕ್ಷರಗಣ ಮತ್ತು ಮಾತ್ರಾಗಣಗಳನ್ನು ಅವಲಂಬಿಸಿರುವ ಈ ರೂಪಗಳು ದ್ರಾವಿಡ ಪರಂಪರೆಯಿಂದ ಮೂಡಿಬಂದವಲ್ಲ. ಮಾತ್ರಾಗಣ ಛಂದಸ್ಸು ಕೂಡ, ಕ್ರಮೇಣ ಅಂಶಗಣಘಟಿತವಾದ ದ್ರಾವಿಡಮೂಲದ ಛಂದೋಬಂಧಗಳನ್ನು, ನಿಧಾನವಾಗಿ ಬದಿಗೆ ಸರಿಸುತ್ತಿತ್ತು. ಈ ರೀತಿಯ ಪರಿವರ್ತನೆಯ ಘಟ್ಟದಲ್ಲಿಯೂ ಪಂಪನಂತಹ ಮಹಾಕವಿಗಳು ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರು ದ್ರಾವಿಡ ಮತ್ತು ಸಂಸ್ಕೃತಗಳೆರಡರಿಂದಲೂ ತಮ್ಮ ಕಾವ್ಯಕ್ಕೆ ಹೊಳಪು ತರಲು ಪ್ರಯತ್ನಿಸಿದರು. ಅವರು ತಮ್ಮ ಅಗತ್ಯಗಳಿಗೆ ತಕ್ಕ ಹಾಗೆ, ಚಂಪೂ ರೂಪವನ್ನು ಮಣಿಸಿದರು. ಪಂಪನು ಚಂಪಕಮಾಲೆ, ಉತ್ಪಲಮಾಲೆ ಮುಂತಾದ ಸಂಸ್ಕೃತ ವೃತ್ತಗಳನ್ನು ಬಳಸುವಷ್ಟೇ ಲೀಲಾಜಾಲವಾಗಿ ಪಿರಿಯಕ್ಕರ, ಮದನವತಿ, ರಗಳೆ ಮುಂತಾದ ದ್ರಾವಿಡಮೂಲದ ಛಂದೋಬಂಧಗಳನ್ನೂ ಬಳಸುತ್ತಾನೆ. ಅವನು ಸಂಸ್ಕೃತಭೂಯಿಷ್ಟವಾದ ವಾಕ್ಯಗಳನ್ನು ಕಟ್ಟಿಕೊಡುವಷ್ಟೇ ಸುಲಭವಾಗಿ, ಅಚ್ಚ ಕನ್ನಡ ವಾಕ್ಯರಚನೆಯಲ್ಲಿಯೂ ತೊಡಗಬಲ್ಲ. ಅವನಿಗೆ ಕಾವ್ಯಸಂದರ್ಭದ ಅಗತ್ಯ ಯಾವುದು ಎನ್ನುವುದಷ್ಟೇ ಮುಖ್ಯ. ಗದ್ಯ-ಪದ್ಯಗಳ ಸಂಯೋಜನೆಯ ಸಾಧ್ಯತೆಗಳನ್ನೂ ಅವರು ಸೃಜನಶೀಲವಾಗಿ ಬಳಸಿಕೊಂಡಿದ್ದಾರೆ.

ಚಂಪೂ ಪರಂಪರೆಯ ಮೊದಲ ಹಂತಗಳಲ್ಲಿ, ಗದ್ಯದ ಬಳಕೆಯು ದೀರ್ಘವೂ ನೀರಸವೂ ಆದ ವರ್ಣನೆಗಳಿಗೆ ಮೀಸಲಾಗಿತ್ತು. ಭಾವನಾತ್ಮಕವಾದ, ನಾಟಕೀಯವಾದ ಹಾಗೂ ಭಾವಗೀತಾತ್ಮಕವಾದ ಸನ್ನಿವೇಶಗಳಲ್ಲಿ ಪದ್ಯಗಳ ಬಳಕೆ ಆಗುತ್ತಿತ್ತು. ಅನೇಕ ಸಲ, ಗದ್ಯವು ಅಂತಹ ಭಾಗಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿತ್ತು. ಕಾಲಕ್ರಮೇಣ ಗದ್ಯವು ಹೊಸ ಆಯಾಮಗಳನ್ನು ಪಡೆದುಕೊಂಡಿತು. ಉದಾಹರಣೆಗೆ, ನಯಸೇನನ ಧರ್ಮಾಮೃತದಲ್ಲಿ, ಗದ್ಯಕ್ಕೆ ವಿಶೇಷವಾದ ನಿಯೋಗಗಳಿವೆ. ಅಂತೆಯೇ, ವಿಭಿನ್ನ ಅಧ್ಯಾಯಗಳಲ್ಲಿ, ಗದ್ಯ ಮತ್ತು ಪದ್ಯಗಳನ್ನು ಪರ್ಯಾಯವಾಗಿ ಬಳಸುವ, ಹರಿಹರನ ನಂಬಿಯಣ್ಣನ ರಗಳೆ ಮತ್ತು ಬಸವರಾಜದೇವರ ರಗಳೆಗಳು ಬೇರೆ ಬಗೆಯದೇ ಪ್ರಯೋಗಗಳು.

ಆದರೆ, ಚಂಪೂ ರೂಪವು, ಕನ್ನಡ ಭಾಷೆಯಲ್ಲಿ ಆಗುತ್ತಿದ್ದ ಬದಲಾವಣೆಗಳು ಮತ್ತು ಬದಲಾಗುತ್ತಿದ್ದ ಓದುಗರ ಅಭಿರುಚಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಓದುಗರ ಮತ್ತು ಕೇಳುಗರ ಸ್ವರೂಪವು ಬದಲಾಗುತ್ತಿತ್ತು. ರಗಳೆ, ಷಟ್ಪದಿ, ಸಾಂಗತ್ಯ ಮುಂತಾದ ಪ್ರಕಾರಗಳು ತಮ್ಮದೇ ಆದ ಸಂವಹನದ ಬಗೆಗಳನ್ನು ರೂಪಿಸಿಕೊಂಡಿದ್ದವು. ಗಮಕದಂತಹ ಪ್ರಕಾರವು, ಓದುಗಬ್ಬವನ್ನು ಮೌಖಿಕವಾಗಿ ತಲುಪಿಸುವ ಕೆಲಸವನ್ನು ಮಾಡುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಚಂಪೂ ಅಪ್ರಸ್ತುತವಾಯಿತು. ಮೊದಲಿನಿಂದಲೂ ರಾಜಾಶ್ರಯ ಮತ್ತು ಪಂಡಿತವರ್ಗದ ನೆರಳಿನಲ್ಲಿ ಬೆಳೆದ ಚಂಪೂ ಪರಂಪರೆಯು, ತನ್ನ ಹೊಳಪನ್ನು ಕಳೆದುಕೊಂಡಿತು.. ಆದರೆ, ಚಂಪೂ ರೂಪದ ಏರುವೆಯ ದಿನಗಳಲ್ಲಿ ಬರೆದ ಕೆಲವು ಕವಿಗಳ ಪ್ರತಿಭೆ ಹಾಗೂ ಸಾಧನೆಗಳು ನಿರ್ವಿವಾದವಾದವು. ಪಂಪ, ರನ್ನ, ನಾಗಚಂದ್ರ, ನಯಸೇನ, ನಾಗವರ್ಮ ಮುಂತಾದವರು ಕನ್ನಡ ಭಾಷೆಯ ಅತ್ಯುತ್ತಮ ಕವಿಗಳ ಸಾಲಿಗೆ ಸೇರುತ್ತಾರೆ.

ಮುಖಪುಟ / ಸಾಹಿತ್ಯ