ಚಾಮರಸನು ನಡುಗನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬ. ಅವನು ಹನ್ನೆರಡನೆಯ
ಶತಮಾನದ ಸಂತ-ಅನುಭಾವಿ-ಕವಿಯಾದ ಅಲ್ಲಮಪ್ರಭುವಿನ ಜೀವನ ಮತ್ತು ಸಾಧನೆಗಳನ್ನು ಕೇಂದ್ರವಾಗಿಟ್ಟುಕೊಂಡು,
‘ಪ್ರಭುಲಿಂಗಲೀಲೆ’ಯೆಂಬ ಕಾವ್ಯವನ್ನು
ರಚಿಸಿದ್ದಾನೆ. ಚಾಮರಸನು, ಸರಿಸುಮಾರು ಅದೇ ಪ್ರದೇಶದಲ್ಲಿ ಕಾವ್ಯರಚನೆ ಮಾಡಿದ ಇನ್ನೊಬ್ಬ ಪ್ರಮುಖ
ಕವಿ ಕುಮಾರವ್ಯಾಸನ ಸಮಕಾಲೀನನಾಗಿದ್ದನು. ಚಾಮರಸನಿಗೆ ತಾನು, ರಕ್ತರಂಜಿತವಾದ ಯುದ್ಧಗಳ ಬಗ್ಗೆ ಹಾಗೂ
ದುರಾಸೆಯಿಂದ ಕೊರಗುತ್ತಾ ಜನನಮರಣಗಳ ಚಕ್ರದಲ್ಲಿ ಸಿಕ್ಕಿಕೊಂಡ ಸಾಮಾನ್ಯ ಮನುಷ್ಯರ ಬಗ್ಗೆ ಬರೆಯುತ್ತಿಲ್ಲವೆನ್ನುವುದು
ಹೆಮ್ಮೆಯ ಸಂಗತಿ. ಬದಲಾಗಿ, ಅವನು ಕನ್ನಡ ಭಾಷೆಯನ್ನು ಇನ್ನಿಲ್ಲದ ಎತ್ತರಗಳಿಗೆ ಸೇರಿಸಿದ ಮಹಾಪುರುಷನೊಬ್ಬನ
ಬಗ್ಗೆ ಬರೆದನು. ಚಾಮರಸನು, ಮಧ್ಯಕಾಲೀನ ಕರ್ನಾಟಕವನ್ನು ಅದರ ಬಹುಮುಖಿಯಾದ ಅಸ್ತಿತ್ವದಲ್ಲಿ ಕಟ್ಟಿಕೊಡುವ
ಕೆಲಸದಲ್ಲಿ ಯಶಸ್ವಿಯಾಗಿದ್ದಾನೆ. ಗೋರಕ್ಷ, ಸಿದ್ದರಾಮ, ಅಕ್ಕಮಹಾದೇವಿ ಮುಂತಾದ ಶರಣರು ಹಾಗೂ ಮಾಯಾದೇವಿಯಂತಹ
ರಾಜಕುಮಾರಿಯ ಚಿತ್ರಣಗಳು ಬಹಳ ಆಕರ್ಷಕವಾಗಿವೆ.ಮಾಯಾದೇವಿಯ ಅರಮನೆಯ ಪರಿಸರದ ವರ್ಣನೆಯೂ ಸಹಜವಾಗಿ ಮೂಡಿಬಂದಿದೆ.
ಪ್ರಭುಲಿಂಗಲೀಲೆಯು, ಧಾರ್ಮಿಕ ನಾಯಕನೊಬ್ಬನನ್ನು ಪುರಾಣಗಳ ಬಗೆಯಲ್ಲಿ
ಕಟ್ಟಿಕೊಡುವ ಮತ್ತು ದೈವತ್ವಕ್ಕೇರಿಸುವ ಸಾರ್ಥಕವಾದ ಪ್ರಯತ್ನ. ಈ ಕಾವ್ಯದಲ್ಲಿ ಹದಿನೈದು ಅಧ್ಯಾಯಗಳೂ
ಸುಮಾರು ಆರು ನೂರು ಪದ್ಯಗಳೂ ಇವೆ. ಕಾವ್ಯವು ನಡುಗನ್ನಡ ಭಾಷೆಯಲ್ಲಿ, ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದೆ.
ಕಾವ್ಯಶೈಲಿಯು ಸರಳವೂ ಪ್ರಭಾವಶಾಲಿಯೂ ಆಗಿದೆ. ಕಾವ್ಯಭಾಷೆಯಲ್ಲಿ ಪಾಂಡಿತ್ಯದ ಭಾರವಿಲ್ಲ. ಮಾಯಾದೇವಿಯ
ಬಾಲ್ಯದ ವರ್ಣನೆ, ಅಲ್ಲಮ ಹಾಗೂ ಇತರ ಸಾಧಕರ ಮುಖಾಮುಖಿ ಮುಂತಾದ ಭಾಗಗಳು ಆಕರ್ಷಕವಾಗಿವೆ; ಅವುಗಳಲ್ಲಿ ಪರಿಣಾಮಕಾರಿಯಾದ
ನಾಟಕದ ಗುಣಗಳಿವೆ. ತಮಿಳು, ತೆಲುಗು, ಮರಾಠಿ ಮತ್ತು
ಸಂಸ್ಕೃತ ಭಾಷೆಗಳಿಗೆ ಅನುವಾದವಾಗಿರುವ ಕೆಲವೇ ಕೆಲವು ಕನ್ನಡ ಕಾವ್ಯಗಳಲ್ಲಿ ಪ್ರಭುಲಿಂಗಲೀಲೆಯೂ ಒಂದು.
ವೀರಶೈವ ತಾತ್ವಿಕತೆ ಮತ್ತು ಧರ್ಮಗಳನ್ನು ಕಟ್ಟುವ ಕೆಲಸದಲ್ಲಿ ಪ್ರಭುಲಿಂಗಲೀಲೆ ಮತ್ತು ಅಂತಹುದೇ ಅನೇಕ
ಕೃತಿಗಳು ಮುಖ್ಯವಾದ ಪಾತ್ರವನ್ನು ವಹಿಸಿವೆ. ಅದಕ್ಕೆ ಸಾಹಿತ್ಯಕೃತಿಯಾಗಿಯೂ ಎತ್ತರದ ಸ್ಥಾನವು ಮೀಸಲಾಗಿದೆ.
ಇತಿಹಾಸ ಮತ್ತು ಸಾಹಿತ್ಯಗಳ ನಡುವೆ ಅರ್ಥಪೂರ್ಣವಾದ ಸಂಬಂಧಗಳನ್ನು
ಕಟ್ಟಿಕೊಡಲು ಹವಣಿಸಿರುವ ಕೆಲವೇ ಕೆಲವು ಕನ್ನಡ ಕವಿಗಳಲ್ಲಿ ಚಾಮರಸನಿಗೆ ವಿಶಿಷ್ಟವಾದ ಸ್ಥಾನವು ಮೀಸಲಾಗಿದೆ.