ಸಾಹಿತ್ಯ
ಭವಾವಳಿ

ಭವಾವಳಿಯು ಜೈನ ತತ್ವಶಾಸ್ತ್ರದ ಮುಖ್ಯವಾದ ಪರಿಕಲ್ಪನೆಗಳಲ್ಲಿ ಒಂದು. ಕನ್ನಡದಲ್ಲಿ ಕಾವ್ಯರಚನೆ ಮಾಡಿರುವ ಜೈನಕವಿಗಳು, ಈ ಪರಿಕಲ್ಪನೆಯನ್ನು ಬೇರೆ ಬೇರೆ ಸೃಜನಶೀಲ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ. ಜೈನ ತೀರ್ಥಂಕರರ, ಪೂರ್ವಜನ್ಮಗಳ ಅನುಕ್ರಮವಾದ ನಿರೂಪಣೆಯನ್ನು ಭವಾವಳಿ ಎಂದು ಕರೆಯುತ್ತಾರೆ. ಜೈನರ ಪ್ರಕಾರ, ಜೀವಾತ್ಮನು ಜ್ಞಾನಸಾಧನೆಯ ಹಾದಿಯಲ್ಲಿ, ಕೆಳಗಿನ ಹಂತದ ಜನ್ಮಗಳಿಂದ ಮೇಲಿನ ಹಂತಗಳ ಕಡೆಗೆ ಚಲಿಸುತ್ತಾ ಅಂತಿಮವಾಗಿ ಸಿದ್ಧಿಯನ್ನು ಪಡೆಯುತ್ತಾನೆ. ಈ ಸಿದ್ಧಿಯು, ತೀರ್ಥಂಕರನ ಉದಯಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ವೈದಿಕ ಮಹಾಪುರಾಣಗಳ ಮೊದಲ ಭಾಗದಲ್ಲಿ ಸರ್ಗ(ವಿಶ್ವದ ಸೃಷ್ಟಿ) ಮತ್ತು ಪ್ರತಿಸರ್ಗ(ವಿಶ್ವದ ನಾಶ ಮತ್ತು ಮರುಸೃಷ್ಟಿ) ಎಂಬ ಭಾಗಗಳು ಬರುತ್ತವೆ. ಇವುಗಳಿಗೆ ಪ್ರತಿಯಾಗಿ, ಜೈನಪುರಾಣಗಳ ಮೊದಲ ಭಾಗದಲ್ಲಿ, ಭವಾವಳಿಗಳ ನಿರೂಪಣೆ ಇರುತ್ತದೆ. ಆದ್ದರಿಂದ ಭವಾವಳಿಯನ್ನು ತೀರ್ಥಂಕರನ ಜೀವನದ ನಿರೂಪಣೆಗೆ ಹಿನ್ನಲೆಯಾದ ಪೂರ್ವಪೀಠಿಕೆಯೆಂದು ಕರೆಯಬಹುದು. ಸಂಸ್ಕೃತದಲ್ಲಿ ಭವಎಂದರೆ ಹುಟ್ಟು ಮತ್ತು ಆವಳಿ ಎಂದರೆ ಗುಂಪು. ಆದ್ದರಿಂದ ಭವಾವಳಿಯು ಅಂತಿಮವಾಗಿ ಮೋಕ್ಷವನ್ನು ಪಡೆಯುವ ತೀರ್ಥಂಕರನು ಎತ್ತಬೇಕಾಗುವ ಹಲವು ಜನ್ಮಗಳ ಸರಣಿ. ಇದು ನಿರ್ದಿಷ್ಟವಾದ ಒಂದು ಆತ್ಮವು ಬಿಡುಗಡೆಯನ್ನು ಪಡೆಯಲು ಅನುಭವಿಸುವ ಅನೇಕ ಕಷ್ಟ-ಸುಖಗಳ ನಿರೂಪಣೆ. ದೂರ ಭವ್ಯಮತ್ತು ಆಸನ್ನ ಭವ್ಯಎಂಬ ಪದಗಳು, ಅನುಕ್ರಮವಾಗಿ, ಬಿಡುಗಡೆಗೆ ಬಹಳ ದೂರದಲ್ಲಿರುವ ಮತ್ತು ತುಂಬ ಸನಿಹದಲ್ಲಿರುವ ಜೀವಗಳನ್ನು ಗುರುತಿಸುತ್ತವೆ. ಜೈನಧರ್ಮದ ಪಾರಂಪರಿಕ ಕೃತಿಗಳಾದ ಮಹಾಪುರಾಣ ಮತ್ತು ಪೂರ್ವಪುರಾಣಗಳು ಎಲ್ಲ ತೀರ್ಥಂಕರರ ಭವಾವಳಿಗಳನ್ನು ಬಹಳ ವಿವರವಾಗಿ ನಿರೂಪಿಸುತ್ತವೆ. ಇದು, ಪಾಪಲೇಪಗಳನ್ನು ಕಳೆದುಕೊಳ್ಳುವ, ಪಶ್ಚಾತ್ತಾಪದ ಫಲವಾಗಿ ಶುದ್ಧೀಕರಣಗೊಳ್ಳುತ್ತಾ, ಮುಂದೆ ಸಾಗುವ ಕ್ರಿಯೆ. ಈ ವಿವರಗಳು ಕೂಡ ಪೂರ್ವನಿಶ್ಚಿತವಾಗಿದ್ದು, ಗೊತ್ತಾದ ಹಾದಿಯಲ್ಲಿಯೇ ಚಲಿಸುತ್ತವೆ.

ಕನ್ನಡದ ಆದಿಕವಿಯಾದ ಪಂಪನು, ಮೊದಲನೆಯ ತೀರ್ಥಂಕರನಾದ ವೃಷಭನಾಥನ ಜೀವನವನ್ನು ನಿರೂಪಿಸುವ ಆದಿಪುರಾಣವನ್ನು ರಚಿಸಿದನು. ಈ ಪರಂಪರೆಯನ್ನು, ಅವನ ನಂತರ ಬಂದ ಪ್ರಮುಖ ಜೈನ ಕವಿಗಳಾದ ಪೊನ್ನ, ರನ್ನ, ನಾಗಚಂದ್ರ, ಜನ್ನ, ನೇಮಿಚಂದ್ರ ಮುಂತಾದವರು ಮುಂದುವರಿಸಿದರು. ಪಂಪನು, ತನ್ನ ಕಾವ್ಯಪ್ರತಿಭೆಯನ್ನು ಬಳಸಿಕೊಂಡು ಆದಿನಾಥನ ಪ್ರತಿಯೊಂದು ಜನ್ಮವನ್ನೂ, ಸಂಕ್ಷಿಪ್ತವಾದರೂ ಪರಿಣಾಮಕಾರಿಯಾದ, ಭಾವಗೀತೆಯಂತಹ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾನೆ. ಆದಿಪುರಾಣದಲ್ಲಿ ಲಲಿತಾಂಗ-ಸ್ವಯಂಪ್ರಭ ಮತ್ತು ಶ್ರೀಮತಿ-ವಜ್ರಜಂಘರ ಜೀವನಕಥೆಗಳನ್ನು ಪ್ರಿಯಕರ-ಪ್ರೇಯಸಿಯರ ತೀವ್ರವಾದ ಪ್ರೀತಿ ಮತ್ತು ಕ್ಷಣಿಕವಾದ ಸುಖಗಳ ಬಗ್ಗೆ ಮನುಷ್ಯರಿಗೆ ಇರುವ ಹಂಬಲಗಳನ್ನು ಚಿತ್ರಿಸಲು ಬಳಸಿಕೊಳ್ಳಲಾಗಿದೆ. ಪೊನ್ನನ ಶಾಂತಿಪುರಾಣ, ರನ್ನನ ಅಜಿತನಾಥ ಪುರಾಣತಿಲಕ, ನಾಗಚಂದ್ರನ ಮಲ್ಲಿನಾಥಪುರಾಣ, ಜನ್ನನ ಅನಂತನಾಥ ಪುರಾಣಮುಂತಾದ ಕೃತಿಗಳು, ತಮಗೆ ಪ್ರಸ್ತುತವಾದ ತೀರ್ಥಂಕರನ ಭವಾವಳಿಗಳನ್ನು ಕೆಲವೊಮ್ಮೆ ನೀರಸವಾಗಿ, ಕೆಲವೊಮ್ಮೆ ಕಾವ್ಯಮಯವಾಗಿ ನಿರೂಪಿಸುತ್ತವೆ. ಪೊನ್ನನ ಕೃತಿಯಲ್ಲಿ ಅದು ಅತಿಯೆನ್ನಿಸುವಷ್ಟು ದೀರ್ಘವಾಗಿದೆ. ಜನ್ನನು ತನ್ನ ಯಶೋಧರಚರಿತೆಯಲ್ಲಿ ಇದೇ ಬಗೆಯ ಪರಿಕಲ್ಪನೆಯನ್ನು ಭಿನ್ನ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾನೆ. ವಾಸ್ತವವಾಗಿ ಯಶೋಧರ ಮತ್ತು ಅವನ ತಾಯಿ ಚಂದ್ರಮತಿಯರು ಎತ್ತಿದ ಜನ್ಮಗಳ ಸರಣಿಯನ್ನು ಭವಾವಳಿಯೆಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ, ಯಶೋಧರನು ತೀರ್ಥಂಕರನಾಗುವುದಿಲ್ಲ. ಆದರೆ, ಅವರಿಬ್ಬರು ಸಂಕಲ್ಪಹಿಂಸೆಗೆ ಪ್ರಾಯಶ್ಚಿತ್ತವಾಗಿ ಎತ್ತಬೇಕಾಗುವ ಹಲವು ಪ್ರಾಣಿಜನ್ಮಗಳಿಗೆ ಬೇರೆ ಆಯಾಮಗಳಿವೆ. ಈ ತಾಯಿ ಮತ್ತು ಮಗ ಯಾವ ಜನ್ಮವನ್ನು ಎತ್ತಿದರೂ, ತಮ್ಮ ಮೊದಲ ಜನ್ಮದಲ್ಲಿದ್ದ ಪ್ರಜ್ಞೆಯನ್ನು ಅಚ್ಚಳಿಯದೆ ಉಳಿಸಿಕೊಂಡಿರುತ್ತಾರೆ. ಅದ್ದರಿಂದಲೇ ಅವರ ನೋವು ಹೆಚ್ಚು ದಾರುಣವಾಗಿದೆ. ಹಿಂದೂ ಧರ್ಮವು ಪ್ರತಿಪಾದಿಸುವ ಕರ್ಮಸಿದ್ಧಾಂತದಲ್ಲಿಯೂ ಭವಾವಳಿಯನ್ನು ಹೋಲುವ ನೆಲೆಗಳನ್ನು ಗುರುತಿಸಬಹುದು. ಹರಿಹರ, ಚಾಮರಸ ಮುಂತಾದ ವೀರಶೈವ ಕವಿಗಳು ಕೂಡ, ತಮ್ಮ ಕಥಾನಾಯಕರ ದೈವಿಕತೆಯನ್ನು ಕಟ್ಟಿಕೊಡುವಾಗ ಅವರ ಪೂರ್ವಜನ್ಮಗಳ ಪ್ರಸ್ತಾಪ ಮಾಡುತ್ತಾರೆ. ಏಕೆಂದರೆ, ಅವರ ನಾಯಕರಲ್ಲಿ ಅನೇಕರು ಕೈಲಾಸದಿಂದಲೇ ಭೂಮಿಗೆ ಅವತರಿಸಿದವರು.

ಇನ್ನೊಂದು ನೆಲೆಯಿಂದ ನೋಡಿದಾಗ, ಭವಾವಳಿಗೆ ಸಾಂಕೇತಿಕವಾದ ನೆಲೆಗಳೂ ಇರಬಹುದು. ಪ್ರತಿಯೊಬ್ಬ ಮನುಷ್ಯನೂ ಒಂದೇ ಜನ್ಮದಲ್ಲಿ ತೀವ್ರವಾದ ಅನುಭವಗಳ ಸರಣಿಯನ್ನು ಪಡೆಯುತ್ತಾನೆ ಮತ್ತು ಅವುಗಳಿಂದ ಬದಲಾಗುತ್ತಾನೆ. ಅದು ನಿಜವಾದರೂ, ಭವಾವಳಿ ಎನ್ನುವ ಪದಕ್ಕೆ ಕರ್ನಾಟಕದ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಖಚಿತವಾದ ಜೈನ ಸಹಯೋಗಗಳಿವೆ. ಆ ಪರಿಕಲ್ಪನೆಯು, ಪ್ರಾಚೀನ ಕನ್ನಡ ಸಾಹಿತ್ಯದ ಕೆಲವು ಬಹಳ ಚೆಲುವಾದ ಭಾಗಗಳಿಗೆ ಜನ್ಮಕೊಟ್ಟಿದೆ.

ಮುಖಪುಟ / ಸಾಹಿತ್ಯ