ಸಾಹಿತ್ಯ
ಭರತೇಶವೈಭವ
  1. ಭರತೇಶವೈಭವ
  2. ದೊರೆ ಭರತೇಶನ ವೈಭವಮಯವಾದ ಜೀವನ
  3. ಕವಿ: ರತ್ನಾಕರವರ್ಣಿ
  4. ಕಾಲ: 16 ನೆಯ ಶತಮಾನ
  5. ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ, ಕರಾವಳಿ ಕರ್ನಾಟಕ
  6. ಧರ್ಮ: ಜೈನಧರ್ಮ, (ವೀರಶೈವ ಧರ್ಮಕ್ಕೆ ಮತಾಂತರವಾಗಿ ಮತ್ತೆ ಮೂಲಧರ್ಮಕ್ಕೆ ಹಿಂದಿರುಗಿದ.)
  7. ರಾಜಾಶ್ರಯ: ಇಮ್ಮಡಿ ಭೈರರಸ ಒಡೆಯ
  8. ಬಿರುದುಗಳು: ರತ್ನಾಕರ ಸಿದ್ಧ
  9. ಸಾಹಿತ್ಯಪ್ರಕಾರ: ಕಾವ್ಯ
  10. ಛಂದೋರೂಪ: ಸಾಂಗತ್ಯ, ಅಂಶಗಣ ಛಂದಸ್ಸು, ಗೇಯತೆ ಇದೆ
  11. ಹಸ್ತಪ್ರತಿಗಳು: ಓಲೆಗರಿ ಪ್ರತಿಗಳು
  12. ಮೊದಲ ಪ್ರಕಟಣೆ: 1922 ( ಭರತೇಶ ವೈಭವದ ಆಯ್ದ ಭಾಗಗಳನ್ನು ಪದ್ಮರಾಜಪಂಡಿತ, ಬಿ. ಗುಂಜೆಟ್ಟಿ, ಉಗ್ರಾಣ ಮಂಗೇಶರಾಯ ಮುಂತಾದವರು ಪ್ರಕಟಿಸಿದ್ದಾರೆ)
  13. ಸಂಪಾದಕರು: ಉಗ್ರಾಣ ಮಂಗೇಶರಾವ್
  14. ಪ್ರಕಾಶಕರು: ಜೈನ ಯುವಕಸಂಘ, ಪುತ್ತೂರು
  15. ನಂತರದ ಆವೃತ್ತಿಗಳು:

ಅ.ಭರತೇಶವೈಭವ, ಸಂ. ಬ್ರಹ್ಮಪ್ಪ ಜಿ., ಕಮಲಮ್ಮ ಸಿ.ಆರ್. ಮತ್ತು ಹಂಪನಾ, 1967, ಅತ್ತಿಮಬ್ಬೆ ಪ್ರಕಾಶನ, ಬೆಂಗಳೂರು.

ಆ.ಭರತೇಶವೈಭವ ಸಂಗ್ರಹ,(ಸಂಗ್ರಹ ಆವೃತ್ತಿ) ತ.ಸು. ಶಾಮರಾಯ, 1955, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಇ.ರತ್ನಾಕರವರ್ಣಿ ಸಂಪುಟ, ಸಂ. ಎಂ.ಜಿ.ಬಿರಾದಾರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ.

 

  1. ಸಂಕ್ಷಿಪ್ತ ಪರಿಚಯ: ‘ಭರತೇಶ ವೈಭವವು ಮಧ್ಯಕಾಲೀನ ಕನ್ನಡ ಸಾಹಿತ್ಯದ ಅತ್ಯುತ್ತಮ ಕೃತಿಗಳಲ್ಲಿ ಒಂದು. ಈ ಕೃತಿಗೆ ಸೂಕ್ತವಾದ ವಿಮರ್ಶಾತ್ಮಕ ಮನ್ನಣೆಯು ಸಿಕ್ಕಿಲ್ಲವೆಂದೇ ಹೇಳಬೇಕು. ಇದು ಜೈನಧರ್ಮದ ಮೊದಲ ತೀರ್ಥಂಕರನಾದ ವೃಷಭನಾಥ ಹಾಗೂ ಅವನ ಮಕ್ಕಳಾದ ಭರತ-ಬಾಹುಬಲಿಯರ ಕಥೆಯು ಕನ್ನಡದಲ್ಲಿ ಬೆಳೆದು ಬಂದ ರೀತಿಯಲ್ಲಿ ಮುಖ್ಯವಾದ ಹಂತ. ರತ್ನಾಕರವರ್ಣಿಯು, ಕಥೆಗಾಗಿ ಸಂಸ್ಕೃತದ ಪೂರ್ವಪುರಾಣ ಮತ್ತು ಮಹಾಪುರಾಣಗಳಿಗೆ ಋಣಿಯಾಗಿದ್ದಾನೆ. ಆದರೆ, ಅವನು ಕಥೆ ಮತ್ತು ಕಥನಕ್ರಮಗಳೆಂಬ ಎರಡು ನೆಲೆಗಳಲ್ಲಿಯೂ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಈ ಕಾವ್ಯದ ಕೇಂದ್ರ ಪಾತ್ರವು ಭರತ ಚಕ್ರವರ್ತಿಯೇ ವಿನಾ ಆದಿನಾಥನಲ್ಲ. ಹಾಗೆ ನೋಡಿದರೆ, ಆದಿ ತೀರ್ಥಂಕರನ ಕಥೆಯು ಭರತೇಶನ ಲೌಕಿಕ ಹಾಗೂ ಆಧ್ಯಾತ್ಮಿಕ ಸಾಧನೆ, ಸಿದ್ಧಿಗಳಿಗೆ ಹಿನ್ನೆಲೆಯನ್ನು ಒದಗಿಸಿದೆ. ಭರತನ ಜೀವನವನ್ನು ಭೋಗವಿಜಯ ಮತ್ತು ಯೋಗವಿಜಯಗಳೆಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಭರತನು ಬಾಹುಬಲಿಗೆ ಮುಖಾಮುಖಿಯಾಗಿ ಸೋಲುವ ಪ್ರಸಂಗವನ್ನು ಇಲ್ಲಿ ಬಿಟ್ಟುಬಿಡಲಾಗಿದೆ. ಆ ಪ್ರಸಂಗವೂ ಭರತನ ದೊಡ್ಡಸ್ಥಿಕೆಗೆ ಸಾಕ್ಷಿಯೆನ್ನುವಂತೆ ನಿರೂಪಿತವಾಗಿದೆ. ಬಾಹುಬಲಿಯು ವಿನಯಶೀಲನಲ್ಲದ ಒರಟು ಯುವಕನಂತೆ ಚಿತ್ರಿತನಾಗಿದ್ದಾನೆ. ಭರತನ ಉತ್ತಮ ಗುಣಗಳನ್ನು ತೋರಿಸುವ ಅನೇಕ ಘಟನೆಗಳನ್ನು ಹೊಸದಾಗಿ ಸೇರಿಸಲಾಗಿದೆ ಅಥವಾ ವಿಸ್ತರಿಸಲಾಗಿದೆ. ಭರತೇಶ ಮತ್ತು ಕೃಷ್ಣರ ನಡುವೆ ಹೋಲಿಕೆ ಮಾಡುವ ಮತ್ತು ಭರತನನ್ನು ವೈಭವೀಕರಿಸುವ ಪ್ರಯತ್ನವೂ ನಡೆದಂತೆ ತೋರುತ್ತದೆ. ಈ ಕಾವ್ಯವು ನಿತ್ಯಜೀವನದ ದೈನಿಕ ವಿವರಗಳಿಗೆ ಕೊಟ್ಟಿರುವ ಮಹತ್ವವು ವಿಶಿಷ್ಟವಾದುದು. ಭರತನಿಗೆ ಸಂಬಂಧಿಸಿದ ಅಂತಹ ವಿವರಗಳನ್ನು ಕವಿಯು ಬಹಳ ಪ್ರೀತಿಯಿಂದ, ವಿವರವಾಗಿ ಬಣ್ಣಿಸುತ್ತಾನೆ. ಆ ಮೂಲಕವೇ ಭರತನು ಓದುಗರಿಗೆ ತಮ್ಮ ಹಾಗೆಯೇ ಮನುಷ್ಯನಾದ ಆತ್ಮೀಯನಾಗಿ ಗೋಚರಿಸುತ್ತಾನೆ. ಪ್ರಕೃತಿ ಮತ್ತು ಮನುಷ್ಯಸಂಬಂಧಗಳನ್ನು ಕುರಿತ ವಿವರಗಳನ್ನು ನೀಡುವುದರಲ್ಲಿ ಕವಿಯ ಜೀವನಾನುಭವವು ವೇದ್ಯವಾಗುತ್ತದೆ. ಜೀವನದ ಶೃಂಗಾರಪ್ರಧಾನವಾದ ನೆಲೆಗಳಿಗೆ ಅಂತೆಯೇ ಸಂಗೀತ, ನೃತ್ಯ ಮುಂತಾದ ಕಲೆಗಳಿಗೆ ಕವಿಯು ತುಂಬ ಮಹತ್ವ ನೀಡಿದ್ದಾನೆ.

ಭರತೇಶವೈಭವವು ಎಂಬತ್ತು ಸಂಧಿಗಳನ್ನು ಹೊಂದಿರುವ, ಸುಮಾರು 10000 ಪದ್ಯಗಳನ್ನು ಒಳಗೊಂಡಿರುವ ದೊಡ್ಡ ಕಾವ್ಯ. ಅಲ್ಲಿ ಬಳಸಿರುವ ಕನ್ನಡವು ಹೊಸಗನ್ನಡಕ್ಕೆ ಹತ್ತಿರವಾಗಿದ್ದು ಹಳಗನ್ನಡದ ಪ್ರಭಾವದಿಂದ ಬಿಡುಗಡೆ ಪಡೆದಿದೆ. ರತ್ನಕರವರ್ಣಿಯು ನಿರ್ವಿವಾದವಾಗಿ ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯ. ಸಾಂಗತ್ಯವು ದ್ರಾವಿಡ ಮೂಲಗಳಿಂದ ಬಂದಿರುವ ಛಂದೋರೂಪ. ಅದು ಗೇಯವಾದ ನಿರೂಪಣೆಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕವಿಯು ಛಂದಸ್ಸಿನ ಏಕತಾನತೆಯನ್ನು ವಸ್ತುವೈವಿಧ್ಯದಿಂದ ಮತ್ತು ವಿವರಗಳ ಅಧಿಕೃತವಾದ ಮಂಡನೆಯಿಂದ ಮೀರುತ್ತಾನೆ. ಈ ಕಾವ್ಯವು ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದವಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. (ದಯವಿಟ್ಟು ರತ್ನಾಕರವರ್ಣಿಯನ್ನು ಕುರಿತ ನಮೂದನ್ನೂ ಓದಿ.)

 

  1. ಮುಂದಿನ ಓದು:

ಅ. ರತ್ನಾಕರವರ್ಣಿ, ಸಂ. ವಿ.ಸೀತಾರಾಮಯ್ಯ, ಕನ್ನಡ ಕವಿ-ಕಾವ್ಯ ಪರಂಪರೆ, 1984, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

ಆ. ರತ್ನಾಕರ ಮಹಾಕವಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಇ. ವಿಶ್ವಕವಿ ರತ್ನಾಕರನ ಕವಿಕಾವ್ಯವಿಮರ್ಶೆ, ಜಿ. ಬ್ರಹ್ಮಪ್ಪ, ಸಿ.ಆರ್. ಕಮಲಮ್ಮ ಮತ್ತು ಹಂಪನಾ

ಮುಖಪುಟ / ಸಾಹಿತ್ಯ