1.'ಅನಂತನಾಥಪುರಾಣಂ'
                                    
                                        2. ಅನಂತನಾಥ ತೀರ್ಥಂಕರನ ಜೀವನವನ್ನು ಕುರಿತ ಪುರಾಣಕಾವ್ಯ
                                        
                                    
                                    
                                        3. ಜನ್ನ
                                    
                                        4. ಕ್ರಿ.ಶ. 1230
                                    
                                    
                                        5. ಹಾಸನ ಜಿಲ್ಲೆಯ ಹಳೇಬೀಡು
                                    
                                        6. ಜೈನ
                                    
                                        7. ಹೊಯ್ಸಳ ಬಲ್ಲಾಳ ಮತ್ತು ನರಸಿಂಹ ಬಲ್ಲಾಳರ ಆಶ್ರಯ
                                    
                                        8. 'ಕವಿಚಕ್ರವರ್ತಿ' 
                                            ಬಿರುದು
                                    
                                        9. ಚಂಪೂ ಕಾವ್ಯ,
                                    
                                    
                                        10. ಕಂದಪದ್ಯಗಳು, 
                                            ವೃತ್ತಗಳು ಮತ್ತು ಗದ್ಯ
                                    
                                        11. ಓಲೆ ಗರಿ ಮತ್ತು ಕಾಗದ
                                    
                                         
                                    
                                        
                                            1930 (ಮೊದಲ ಪ್ರಕಟಣೆ). 
                                                ಡಿ. ಶ್ರೀನಿವಾಸಾಚಾರ್ ಮತ್ತು ಎಚ್.ಆರ್. ರಂಗಸ್ವಾಮಿ ಅಯ್ಯಂಗಾರ್, 
                                                    ಗೌರ್ನಮೆಂಟ್ ಓರಿಯೆಂಟಲ್ ಲೈಬ್ರರಿ, ಮೈಸೂರು
                                            
                                        
                                        
                                            1972, ಎಚ್. ದೇವೀರಪ್ಪ, 
                                                ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ,
                                            ಮೈಸೂರು 
                                        
                                        
                                            1975, ಬಿ.ಬಿ. ಮಹಿಷವಾಡಿ, 
                                                ಕರ್ನಾಟಕ ವಿಶ್ವವಿದ್ಯಾಲಯ 
                                        
                                        
                                            1974, ಅನಂತನಾಥಪುರಾಣ ಸಂಗ್ರಹ, 
                                                ಎಸ್. ವಿದ್ಯಾಶಂಕರ 
                                        
                                        
                                            1994, ಅನಂತನಾಥಪುರಾಣಸಂಗ್ರಹ, 
                                                ಪ. ನಾಗರಾಜಯ್ಯ 
                                        
                                        
                                            ಜನ್ನ ಸಂಪುಟ, 
                                                ಸಿ.ಪಿ. ಕೃಷ್ಣಕುಮಾರ್, ಕನ್ನಡ ವಿಶ್ವವಿದ್ಯಾಲಯ ಹಂಪಿ.
                                                
                                        
                                    
                                    
                                        12. ಕೃತಿ ಪರಿಚಯ: ಜನ್ನನ 'ಯಶೋಧರಚರಿತೆ'ಗೆ ದೊರೆತ ಜನಪ್ರಿಯತೆ ಮತ್ತು ವಿಮರ್ಶಕರ ಮನ್ನಣೆಗಳು 
                                        'ಅನಂತನಾಥಪುರಾಣ'ವನ್ನು
                                            ಬಹುಮಟ್ಟಿಗೆ ಬದಿಗೆ ತಳ್ಳಿವೆ. ಚಂಪೂ ಶೈಲಿಯಲ್ಲಿ ರಚಿತವಾಗಿರುವ ಈ ಕಾವ್ಯವು ಹದಿನಾಲ್ಕನೆಯ ತೀರ್ಥಂಕರನಾದ
                                            ಅನಂತನಾಥ ಅಥವಾ ಅನಂತ ಜಿನನ ಜೀವನವನ್ನು ತನ್ನ ಕೇಂದ್ರವಸ್ತುವಾಗಿ ಹೊಂದಿದೆ. ಇದರಲ್ಲಿ ಹದಿನಾಲ್ಕು
                                            ಅಧ್ಯಾಯಗಳಿದ್ದು ಅವು ಸುಮಾರು 1400 ಪದ್ಯಗಳನ್ನು ಒಳಗೊಂಡಿವೆ.
                                                ಈ ಕಾವ್ಯವು, ಗುಣಭದ್ರಾಚಾರ್ಯರ ಸಂಸ್ಕೃತಕೃತಿಯಾದ 'ಉತ್ತರಪುರಾಣ'ದಲ್ಲಿರುವ ಸುಮಾರು ತೊಂಬತ್ತು ಪದ್ಯಗಳ ವಿಸ್ತರಣ. ಈ ಕಾವ್ಯದಲ್ಲಿ
                                                    ಕೇವಲ ಎರಡು ಭವಾವಳಿಗಳ ಪ್ರಸ್ತಾಪವಿದೆ. ತೀರ್ಥಂಕರರ ಜೀವನವನ್ನು ಆಧರಿಸಿದ ಇತರ ಕನ್ನಡ ಕಾವ್ಯಗಳಿಗೆ
                                                    ಹೋಲಿಸಿದರೆ, ಇದು ಕಡಿಮೆ. ಈ ನಿರೂಪಣೆಯಲ್ಲಿ ಸುಪ್ರಭ,
                                        ಪುರುಷೋತ್ತಮ, 
                                            ಮಧುಕೈಟಭ ಮತ್ತು ಪದ್ಮರಥರು ಆ ಭವಾವಳಿಗಳಲ್ಲಿ ಬರುವ ಕೆಲವು ಪಾತ್ರಗಳು. 
                                    
                                    
                                        'ಅನಂತನಾಥಪುರಾಣ'ವು
                                            ಮಹಾಕಾವ್ಯವೆಂಬ ಸಾಹಿತ್ಯಪ್ರಕಾರದ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಅಷ್ಟಾದಶವರ್ಣನೆಗಳು ಚಚು ತಪ್ಪದೆ
                                            ಕಾಣಿಸಿಕೊಂಡಿವೆ. ಅಂತೆಯೇ ಜೈನಪುರಾಣಗಳಲ್ಲಿ ಬರಬೇಕಾದ, 
                                                ತೀರ್ಥಂಕರನ ಗರ್ಭಧಾರಣೆ, ಹುಟ್ಟು,
                                        ವೈರಾಗ್ಯ ಮುಂತಾದ ಪಂಚಕಲ್ಯಾಣಗಳನ್ನು ವಿವರವಾಗಿ ಕೊಡಲಾಗಿದೆ.
                                            ಆದರೆ ಅವೆಲ್ಲವೂ ಬಹಳ ಯಾಂತ್ರಿಕವಾಗಿದ್ದು, ಧರ್ಮದ ನಿಯಂತ್ರಣಗಳಿಗೆ ಒಳಪಟ್ಟಿವೆ. ನಿಸರ್ಗವರ್ಣನೆ
                                            ಕೂಡ ಹಳೆಯ ಜಾಡನ್ನೇ ಹಿಡಿದಿದೆ. 
                                    
                                    
                                        ಆದರೆ, 'ಅನಂತನಾಥಪುರಾಣ'ವು ಒಂದು ಕಾವ್ಯಾತ್ಮಕವಾದ 'ಓಯಸಿಸ್'
                                        ಅನ್ನು ಹೊಂದಿದೆ. ಅದು ಚಂಡಶಾಸನನ ಕಥೆಯ ಭಾಗ. ಅದು ರಾಜ ವಸುಷೇಣ,
                                        ಅವನ ಪತ್ನಿ ಸುನಂದಾ ಮತ್ತು ಅವಳನ್ನು ಪ್ರೀತಿಸುವ ಇನ್ನೊಬ್ಬ
                                            ರಾಜ ಚಂಡಶಾಸನರ ದುರಂತ ಕಥೆ. ಈ ಸಂಬಂಧಕ್ಕೆ ಇರುವ ಅನೈತಿಕ ಆಯಾಮದಿಂದಲೇ ಅದು ದುರಂರದಲ್ಲಿ ಮುಕ್ತಾಯವಾಗುವುದು
                                            ಖಚಿತವಾಗಿದೆ. ಆದರೆ, ಚಂಡಶಾಸನನ ಪ್ರಾಮಾಣಿಕವಾದ ತೀವ್ರ
                                                ಒಲವು, ಆಧುನಿಕ ಓದುಗರಿಗೆ ಆಕರ್ಷಕವಾಗಿ ಕಂಡಿದೆ. ಈ ಕಥನದ ಯಾವುದೇ ಪಾತ್ರವನ್ನೂ ಅದರ ಆಲೋಚನೆ ಹಾಗೂ
                                                ಕ್ರಿಯೆಗಳಿಗಾಗಿ ಆಕ್ಷೇಪಿಸುವುದು ಕೊಂಚ ಕಷ್ಟ. ಸುನಂದಾ ಮತ್ತು ಚಂಡಶಾಸನರ ಸಾವು ನಮ್ಮನ್ನು ವಿಷಾದದಲ್ಲಿ
                                                ಮುಳುಗಿಸುತ್ತದೆ. ಅದಕ್ಕೆ ಹೋಲಿಸಿದರೆ, ಸನ್ಯಾಸವನ್ನು
                                                    ತೆಗದುಕೊಳ್ಳಬೇಕೆನ್ನುವ ವಸುಷೇಣನ ತೀರ್ಮಾನವು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಒಟ್ಟು ಕಾವ್ಯದ ಚೌಕಟ್ಟಿನಲ್ಲಿ
                                                    ಈ ಕಥೆಯು ಹೊಂದಾಣಿಕೆಯಾಗದಿದ್ದರೂ, ಇದು ಸಾಕಷ್ಟು ತೀವ್ರತೆ ಮತ್ತು ಕಾವ್ಯಗುಣದಿಂದ ಕೂಡಿರುವ ಭಾಗ.
                                                    ಇದೇ ಬಗೆಯ ಸಮಸ್ಯೆಗಳ ಇನ್ನೊಂದು ಆಯಾಮವನ್ನು ಜನ್ನನು ತನ್ನ 'ಯಶೋಧರಚರಿತೆ'ಯಲ್ಲಿ ಅನಾವರಣ ಮಾಡಿರುವನೆಂಬುದನ್ನು ನೆನಪು ಮಾಡಿಕೊಂಡರೆ,
                                        ಅವನ ಮುಖ್ಯ ಕಾಳಜಿಗಳು ಸ್ಪಷ್ಟವಾಗುತ್ತವೆ. 
                                    
                                    
                                        ಈ ಕಾವ್ಯವು, ಸಂಸ್ಕೃತದ ಪದಗಳು ಮತ್ತು ಸಮಾಸಪದಗಳಿಂದ ತುಂಬಿಹೋಗಿದೆ.
                                            ಆದ್ದರಿಂದ ಈ ಕಾವ್ಯದ ಓದು ಸ್ವಲ್ಪ ಕಷ್ಟ ಮತ್ತು ಆಯಾಸಕರವೆನ್ನಿಸುತ್ತದೆ. ವಾಸ್ತವವಾಗಿ ಚಂಡಶಾಸನನ
                                            ಕಥೆಯನ್ನು ಬಿಟ್ಟರೆ, ಈ ಕಾವ್ಯಕ್ಕೆ ಹೆಚ್ಚಿನ ಮಹತ್ವವಿಲ್ಲ.
                                            
                                    
                                    
                                        13. ಮುಂದಿನ ಓದು: 
                                    
                                    
                                        1. 'ಕಾವ್ಯಸಮೀಕ್ಷೆ', 
                                            ತೀ.ನಂ. ಶ್ರೀಕಂಠಯ್ಯ, 1947, ಕಾವ್ಯಾಲಯ,
                                        ಮೈಸೂರು 
                                    
                                    
                                        2. 'ಜನ್ನ', 
                                            ಸಿ.ಪಿ. ಕೃಷ್ಣಕುಮಾರ್, 1965, ಪ್ರಸಾರಾಂಗ,
                                        ಮೈಸೂರು ವಿಶ್ವವಿದ್ಯಾಲಯ, 
                                            ಮೈಸೂರು 
                                    
                                    
                                        3. 'ಜನ್ನ' 
                                            ಮತ್ತು 'ಯಶೋಧರ ಚರಿತೆ' 
                                                ಎಂಬ ನಮೂದುಗಳಿಗೆ ಕೊಡಲಾಗಿರುವ ಗ್ರಂಥಸೂಚಿಯನ್ನು ಗಮನಿಸಿ.