ವಿಜ್ಞಾನೇಶ್ವರನು ಬಹಳ ದೊಡ್ಡ ವಿದ್ವಾಂಸ. ಇವನು ಕಲ್ಯಣಿ ಚಾಳುಕ್ಯರ
                                            ವಂಶಕ್ಕೆ ಸೇರಿದ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದನು. ಇವನ ಜೀವನಕಾಲವು ಹನ್ನೊಂದನೆಯ
                                            ಶತಮಾನದ ಕೊನೆಯ ಭಾಗ ಮತ್ತು ಹನ್ನೆರಡನೆಯ ಶತಮಾನದ ಮೊದಲ ಭಾಗ. ವಿಜ್ಞಾನೇಶ್ವರನು ಗುಲ್ಬರ್ಗ ಜಿಲ್ಲೆಯಲ್ಲಿರುವ
                                            ಮರ್ತೂರು ಎಂಬ ಹಳ್ಳಿಯಲ್ಲಿ ಹುಟ್ಟಿದನು. ಅವನು ಪೂರ್ವಮೀಮಾಂಸೆಯ ಗಂಭೀರ ವಿದ್ಯಾರ್ಥಿಯಾಗಿದ್ದನು.
                                        ‘ಯಾಜ್ಞವಲ್ಕ್ಯ
                                            ಸ್ಮೃತಿಗೆ ಬರೆದಿರುವ ವ್ಯಾಖ್ಯಾನವೆಂದು ಹೇಳಲಾಗಿರುವ 
                                                ‘ಮಿತಾಕ್ಷರಾ’
                                                ಅವನ ಪ್ರಸಿದ್ಧವಾದ ಕೃತಿ. ಆದರೆ ಅದು ಕೇವಲ ವ್ಯಾಖ್ಯಾನವಾಗಿ
                                                    ಉಳಿಯದೆ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಅದು ನೂರಾರು ವರ್ಷಗಳಿಂದ ಕೂಡಿಕೊಂಡಿದ್ದ ತಿಳಿವಳಿಕೆಯನ್ನು
                                                    ಬಹಳ ವ್ಯವಸ್ಥಿತವಾಗಿ ಒಂದು ಕಡೆ ಅಳವಡಿಸಿಕೊಟ್ಟ ಬೃಹತ್ ಕೃತಿ. ಅದರಲ್ಲಿ ಬಹಳ ಒತ್ತಾಗಿ ಮುದ್ರಿತವಾಗಿರುವ
                                                    ಸುಮಾರು 500 ಪುಟಗಳಿವೆ. ಅವನು ತನ್ನ ಬರವಣಿಗೆಯನ್ನು ಕೇವಲ 
                                                        ‘ಯಾಜ್ಞವಲ್ಕ್ಯ ಸ್ಮೃತಿಗೆ’ ಸೀಮಿತಗೊಳಿಸಿ ಕೊಳ್ಳುವುದಿಲ್ಲ. ಸ್ಮೃತಿಗಳಿಗೆ ಅದಕ್ಕಿಂತ ಹಿಂದೆ
                                                            ಬಂದಿರುವ ವ್ಯಾಖ್ಯಾನಗಳನ್ನೂ ಅರ್ಥೈಸುವ ಹಾಗೂ ವಿಮರ್ಶಿಸುವ ಕೆಲಸದಲ್ಲಿ ಅವನು ತೊಡಗಿಕೊಳ್ಳುತ್ತಾನೆ.
                                                            ಇತರ ಸ್ಮೃತಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪುಸ್ತಕಗಳು ಅವನ ಪರಿಶೀಲನೆಗೆ ಒಳಪಡುತ್ತವೆ. ಇಂದಿಗೂ
                                                            ಕೂಡ ‘ಮಿತಾಕ್ಷರಾ’ ಕೃತಿಯು ಹಿಂದೂ
                                                                    ಕಾನೂನುಗಳ ಎಲ್ಲ ಆಯಾಮಗಳ ಬಗೆಗ ಮಾಹಿತಿ ನೀಡುವ ಹಾಗೂ ವ್ಯಾಖ್ಯಾನಿಸುವ ಪುಸ್ತಕವೆಂದು ಅದನ್ನು ಬಳಸುತ್ತಾರೆ.
                                                                    ಆಸ್ತಿಯ ಹಕ್ಕುಗಳು, ದತ್ತಕ ಪದ್ಧತಿ, ಸ್ಥಿರ ಆಸ್ತಿಗಳ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ
                                                                    ಹಿಂದೂ ನ್ಯಾಯಶಾಸ್ತ್ರದ ನಿಲುವುಗಳನ್ನು ತಜ್ಞರು ಈ ಪುಸ್ತಕಕ್ಕೆ ಮೊರೆಹೋಗುತ್ತಾರೆ.
                                        ‘ಮಿತಾಕ್ಷರಾ’ದ ವಿಶೇಷ ಲಕ್ಷಣವೆಂದರೆ,
                                            ‘ಹಿಂದೂ
                                                ಆವಿಭಕ್ತ ಕುಟುಂಬಗಳ’
                                                    ಒಡೆತನದಲ್ಲಿರುವ ಆಸ್ತಪಾಸ್ತಿಗಳ ಹಂಚಿಕೆಯ ಸಂದರ್ಭದಲ್ಲಿ ಅದು ಬಳಸುವ ತಾತ್ವಿಕತೆ. ಈ ಪದ್ಧತಿಯ ಪ್ರಕಾರ
                                                    ತಂದೆಯು ಜೀವಂತವಾಗಿ ಇರುವಾಗಲೂ ಅವಿಭಕ್ತ ಕುಟುಂಬಕ್ಕೆ ಸೇರಿದ ಭೂಮಿಕಾಣಿಗಳನ್ನು ಮಕ್ಕಳ ನಡುವೆ ಹಂಚಬಹುದು.
                                                    ಆದರೆ, ‘ದಾಯಭಾಗ’ ಕಾನೂನು ವ್ಯವಸ್ಥೆಯು
                                                            ಇಂತಹ ಹಂಚಿಕೆಯನ್ನು ಒಪ್ಪುವುದಿಲ್ಲ. 
                                        
                                    
                                    
                                        ಹೆನ್ರಿ ಥಾಮಸ್ ಕೋಲ್ ಬ್ರೂಕ್ ಅವರು ಈ ಪುಸ್ತಕವನ್ನು ಕ್ರಿ.ಶ.
                                            1810 ರಷ್ಟು ಹಿಂದೆಯೇ ಇಂಗ್ಲಿಷಿಗೆ ಅನುವಾದ ಮಾಡಿದರು. ಏಕೆಂದರೆ, ಬ್ರಟಿಷ್ ಆಡಳಿತವ್ಯವಸ್ಥೆಗೆ ಇಡೀ
                                            ಭಾರತಕ್ಕೆ ಅನ್ವಯಿಸಬಹುದಾದ, ಎಲ್ಲರಿಗೂ ಸಮ್ಮತವಾಗುವ ಒಂದು ಕಾನೂನುಸಂಹಿತೆಯ ಅಗತ್ಯವಿತ್ತು. ಬಂಗಾಳ
                                            ಮತ್ತು ಅಸ್ಸಾಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ 
                                                ‘ಮಿತಾಕ್ಷರಾ’ದ ಅಧಿಕೃತತೆಯನ್ನು ಒಪ್ಪಿಕೊಂಡವು. ಆ ಎರಡು ರಾಜ್ಯಗಳು ಮಾತ್ರ ಜೀಮೂತವಾಹನನ
                                                ‘ದಾಯಭಾಗ’ ವ್ಯವಸ್ಥೆಯ ಪರವಾದ
                                                        ನಿಲುವನ್ನು ತಳೆದವು. 
                                    
                                    
                                        ಒಟ್ಟಿನಲ್ಲಿ ವಿಜ್ಞಾನೇಶ್ವರ ಮತ್ತು ಅವನ ಕೃತಿಯು ಸಮಗ್ರ ಭಾರತದ
                                            ನ್ಯಾಯಶಾಸ್ತ್ರಕ್ಕೆ ಕರ್ನಾಟಕವು ನೀಡಿರುವ ಅನನ್ಯ ಕೊಡುಗೆಗಳು.
                                            
                                    
                                    
                                         
                                    
                                        ಮುಂದಿನ ಓದು ಮತ್ತು ಲಿಂಕುಗಳು:
                                    
                                        
                                            - The Importance of
                                                Mitakshara in the 21st century by Justice Markandey Katju 
- ‘A spot light on 
                                                Mitakshara 
                                                    School’ By R.K. Mishra, 2002, Law House.
                                                
- ‘VIJNANESHVARA AND CONTEMPORARY SOCIETY’ by DRS
                                                Gururajachar, 1983, the Chālukyas of Kalyāṇa: Seminar Papers, 1983 - Mythic Society, 
                                                Bangalore