ಸಂಶೋಧಕರು
ಕೃಷ್ಣಮೂರ್ತಿ, ಕೇರಳಾಪುರ, 1923-1997

          ಕೆ.ಕೃಷ್ಣಮೂರ್ತಿ ಎಂದು ಪ್ರಸಿದ್ಧರಾಗಿದ್ದ, ಕೇರಳಾಪುರ ಕೃಷ್ಣಮೂರ್ತಿಯವರು, ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಕಾವ್ಯಮೀಮಾಂಸೆಗಳ ಕ್ಷೇತ್ರದಲ್ಲಿ ದೊಡ್ಡ ವಿದ್ವಾಂಸರಾಗಿದ್ದರು. ಅವರು, ಕನ್ನಡ ಓದುಗರ ಮನಸ್ಸಿನಲ್ಲಿ ನೆಲೆ ನಿಂತಿರುವುದು, ಸಂಸ್ಕೃತದಿಂದ ಕನ್ನಡಕ್ಕೆ ಮಾಡಿದ ಅನುವಾದಗಳಿಗಾಗಿ. ಈ ಕೆಲಸವು ಅಲಂಕಾರಶಾಸ್ತ್ರದ ಮುಖ್ಯ ಗ್ರಂಥಗಳು ಮತ್ತು ಸೃಜನಶೀಲ ಕೃತಿಗಳೆರಡನ್ನೂ ಒಳಗೊಂಡಿತ್ತು. ಅಷ್ಟೇ ಅಲ್ಲದೆ, ಅವರು ಈ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದಿದ್ದಾರೆ.

          ಕೃಷ್ಣಮೂರ್ತಿಯವರು ಹಾಸನ ಜಿಲ್ಲೆಯ ಸಣ್ಣ ಹಳ್ಳಿಯಾದ ಕೇರಳಾಪುರದಲ್ಲಿ ಹುಟ್ಟಿದರು. 1943 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ.ಎ. ಪದವಿಯನ್ನು ಪಡೆದುಕೊಂಡರು. ಮುಂಬಯಿ ವಿಶ್ವವಿದ್ಯಾಲಯವು 1947 ರಲ್ಲಿ ಅವರಿಗೆ ಪಿಎಚ್. ಡಿ. ಪದವಿಯನ್ನು ನೀಡಿತು. ಮೈಸೂರು, ಕುಮಟಾ, ಬಾಗಲಕೋಟೆ ಮುಂತಾದ ಕಡೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ ನಂತರ ಕೃಷ್ಣಮೂರ್ತಿಯವರು, ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಸೇರಿಕೊಂಡರು. 1983 ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು.

          ಕೃಷ್ಣಮೂರ್ತಿಯವರು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಂಸ್ಕೃತ ನಾಟಕ, ಸಂಸ್ಕೃತ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ಸಿದ್ಧಾಂತಗಳು ಅವರ ಆಸಕ್ತಿಯ ವಲಯಗಳಾಗಿದ್ದವು. ಸಂಸ್ಕೃತದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರಬೇಕೆನ್ನುವ ಅವರ ಅಪೇಕ್ಷೆಯು, ಅನೇಕ ವ್ಯಾಖ್ಯಾನಸಹಿತವಾದ ಭಾಷಾಂತರಗಳ ಹುಟ್ಟಿಗೆ ಕಾರಣವಾಯಿತು. ಅವರು ತಮ್ಮ ತಿಳಿವಳಿಕೆಯನ್ನು ಕನ್ನಡ ಸಾಹಿತ್ಯ ಪರಂಪರೆಯ ಪರಿಶೀಲನೆಗಾಗಿ ಬಳಸುವ ಆಸಕ್ತಿಯನ್ನು ಅಷ್ಟಾಗಿ ತೋರಿಸಲಿಲ್ಲ. ಅವರ ಸೈದ್ಧಾಂತಿಕ ಪುಸ್ತಕಗಳಲ್ಲಿಯೂ ಈ ಲಕ್ಷಣವು ಕಾಣಿಸಿಕೊಳ್ಳುತ್ತದೆ. ಅವರ ಒಲವು ವಿಮರ್ಶೆಗಿಂತ ಹೆಚ್ಚಾಗಿ ವಿಶ್ಲೇಷಣೆಯ ಕಡೆಗೆ ಇರುತ್ತದೆ. ಅಲಂಕಾರಶಾಸ್ತ್ರವನ್ನು ಕುರಿತ ಅಖಿಲ ಭಾರತೀಯ ವ್ಯಾಪ್ತಿಯ ವಿದ್ವಾಂಸರ ಸಾಲಿನಲ್ಲಿ ಅವರು ಸಲ್ಲುತ್ತಾರೆ. ಕಾವ್ಯಮೀಮಾಂಸೆಯ ಮೂಲಕೃತಿಗಳನ್ನು ಇಂಗ್ಲಿಷಿನಲ್ಲಿ ಪಡೆಯುವುದು ಪಾಶ್ಚಾತ್ಯ ವಿದ್ವಾಂಸರಿಗೂ ಅಗತ್ಯವಾಗಿತ್ತು. ಕೃಷ್ಣಮೂರ್ತಿಯವರ ಎಂಬತ್ತಕ್ಕೂ ಹೆಚ್ಚು ಪುಸ್ತಕಗಳಲ್ಲಿ ಮುಖ್ಯವಾದವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಅ. ಸಂಪಾದಿತ ಕೃತಿಗಳು:

 1. ‘Dhvnyaloka’ by Anandavardhana
 2. ‘Vakroktijeevita’ by Kuntaka
 3. ‘Natyashastra of Bharatamuni with commentaries by Abinavaguptacharya’ 1992, University of Baroda’   
 4. Yashodharacharite’ by Vadiraja, 1963, University of Baroda
 5. ‘Subhashitasudhanidhi’ by Sayana, 1968, Karnatak University
 6. ಶ್ರೀ ವಿಜಯನ ಕವಿರಾಜಮಾರ್ಗಂ

 

ಆ. ಸಂಸ್ಕೃತ ಸೃಜನಶೀಲ ಕೃತಿಗಳ ಅನುವಾದಗಳು:

 1. ಕನ್ನಡ ಉತ್ತರರಾಮಚರಿತ
 2. ಕನ್ನಡ ಕಿರಾತಾರ್ಜುನೀಯ
 3. ಕನ್ನಡ ಮೃಚ್ಛಕಟಿಕ
 4. ಕನ್ನಡ ಯಜ್ಞಫಲ
 5. ಭಾಸನ ಆರು ನಾಟಕಗಳು

 

ಇ. ಸಂಸ್ಕೃತ ಅಲಂಕಾರಶಾಸ್ತ್ರದ ಕೃತಿಗಳ ಭಾಷಾಂತರಗಳು:

 1. ಕನ್ನಡ ಕಾವ್ಯಪ್ರಕಾಶ, ಮಮ್ಮಟ
 2. ಕನ್ನಡ ಕಾವ್ಯಾಲಂಕಾರ, ಭಾಮಹ
 3. ಕಾವ್ಯಾಲಂಕಾರ ಸೂತ್ರವೃತ್ತಿ, ವಾಮನ
 4. ಧ್ವನ್ಯಾಲೋಕಲೋಚನ ಮತ್ತು ಲೋಚನಸಾರ, ಅಭಿನವಗುಪ್ತ
 5. ಕಾವ್ಯಮೀಮಾಂಸೆ, ರಾಜಶೇಖರ
 6. ಔಚಿತ್ಯವಿಚಾರಚರ್ಚೆ, ಕ್ಷೇಮೇಂದ್ರ

 

ಈ. ಕನ್ನಡದಲ್ಲಿ ಸ್ವತಂತ್ರ ಕೃತಿಗಳು:

 1. ಕನ್ನಡದಲ್ಲಿ ಕಾವ್ಯತತ್ವ
 2. ಆನಂದವರ್ಧನನ ಕಾವ್ಯಮೀಮಾಂಸೆ
 3. ರಸೋಲ್ಲಾಸ
 4. ಸೃಜನಶೀಲತೆ ಮತ್ತು ಪಾಂಡಿತ್ಯ
 5. ಭಾರತೀಯ ಕಾವ್ಯಮೀಮಾಂಸೆ: ತತ್ವ ಮತ್ತು ಪ್ರಯೋಗ

 

ಉ. Original Works in English:

 1. ‘Essays in Sanskrit Criticism’, 1964, Karnatak University, Dharwar.
 2. ‘Some Thoughts on Indian Aesthetics and Literary Criticism’, 1968, Mysore University.
 3. ‘The Dhvanyaloka and its Critics’ 1983, Bharateeya Vidyapeetha Publications.
 4. ‘New Bearings of Indian Literary theory and criticism’, 1982, B.J.Institute of Learning and Research.
 5. ‘A Critical Inventory of Ramayana Studies in the World’, 1991, Sahitya Academy, (Edited Work, with others)
 6. ‘Aspects of Poetic language: An Indian perspective’ 1986, University of Poona.
 7. ‘Indian literary theories: A re appraisal’, Meharchand Lachhmandas Publications.
 8. ‘Theory of Suggestion in Poetry’, 1955, Oriental Book Agency
 9. ‘Studies in Indian Aesthetics and Criticism’, 1979, D.V.K. Murthy, Mysore.

 

            ಇವುಗಳಲ್ಲದೆ, ಸಂಸ್ಕೃತದ ದೊಡ್ಡ ಲೇಖಕರಾದ ಕಾಳಿದಾಸ, ಭಾಸ, ಭವಭೂತಿ, ಪಾಣಿನಿ, ಮತ್ತು ಬಾಣಭಟ್ಟರನ್ನು ಕುರಿತ ಪುಸ್ತಿಕೆಗಳನ್ನು(ಮಾನೋಗ್ರಾಫ್) ಕೃಸ್ಣಮೂರ್ತಿಯವರು ಬರೆದಿದ್ದಾರೆ. ಅವರು ಹೆಸರುವಾಸಿಯಾಸ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ನಿಯತಕಾಲಿಕಗಳಲ್ಲಿ ನೂರಾರು ಪುಸ್ತಕಗಳನ್ನು ವಿಮರ್ಶಿಸಿದ್ದಾರೆ.

          ಕೃಷ್ಣಮೂರ್ತಿಯವರ ಪಾಂಡಿತ್ಯಪೂರ್ಣವಾದ ಬರವಣಿಗೆಯು ಅನೇಕ ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದೆ. ರಾಷ್ಟ್ರಪತಿಯವರು ನೀಡಿರುವ ಅರ್ಹತಾಪತ್ರಿಕೆ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ಉತ್ತರ ಪ್ರದೇಶ ಸಂಸ್ಕೃತ ಅಕಾಡೆಮಿಯ ಪ್ರಶಸ್ತಿ ಮತ್ತು ಮುಂಬಯಿಯ ಕಾಣೆ ಸ್ವರ್ಣಪದಕಗಳು ಇವುಗಳಲ್ಲಿ ಕೆಲವು. ಅವರಿಗೆ ಆನಂದಭಾರತಿ(ಇಂಗ್ಲಿಷ್) ಮತ್ತು ಅಭಿಜ್ಞಾನ(ಕನ್ನಡ) ಎಂಬ ಅಭಿನಂದನ ಗ್ರಂಥಗಳನ್ನು ಕೊಡಲಾಗಿದೆ. ಕನ್ನಡ ಮತ್ತು ಸಂಸ್ಕೃತಗಳ ನಡುವಿನ ಅರ್ಥಪೂರ್ಣ ಸಂವಾದಕ್ಕೆ ಅಗತ್ಯವಾದ ತಳಹದಿಯನ್ನು ಹಾಕಿಕೊಟ್ಟಿದ್ದರಿಂದ ಕೃಷ್ಣಮೂರ್ತಿಯವರು ಗೌರವಪಾತ್ರರು.

                          ಮುಖಪುಟ / ಸಂಶೋಧಕರು