ಸಂಶೋಧಕರು
ಕೃಷ್ಣ ಎಂ.ಎಚ್., 1892-1947

            ಎಂ.ಎಚ್. ಕೃಷ್ಣ ಎನ್ನುವುದು ಮೈಸೂರು ಹಟ್ಟಿ ಕೃಷ್ಣ ಅಯ್ಯಂಗಾರ್ ಅವರ ಸಂಕ್ಷಿಪ್ತವಾದ ಹೆಸರು. ಅವರು ಇಪ್ಪತ್ತನೆಯ ಶತಮಾನದ ಮೊದಲ ಅರ್ಧದಲ್ಲಿ, ಮೈಸೂರುರಾಜ್ಯದಲ್ಲಿ ಇಂಡಾಲಜಿ, ಪುರಾತತ್ವಶಾಸ್ತ್ರ, ಚರಿತ್ರೆ ಮುಂತಾದ ವಿಷಯಗಳ ಅಧ್ಯಯನಕ್ಕೆ ಅಡಿಪಾಯವನ್ನು ಹಾಕಿದ ಹಿರಿಯರಲ್ಲಿ ಒಬ್ಬರು. ಸೂಕ್ತವಾದ ಶೈಕ್ಷಣಿಕ ಹಿನ್ನೆಲೆ, ಕಠಿಣ ಮತ್ತು ವ್ಯವಸ್ಥಿತ ಪರಿಶ್ರಮಗಳು ಅವರ ಯಶಸ್ಸಿಗೆ ಕಾರಣವಾದವು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ, ಇತಿಹಾಸದಲ್ಲಿ ಎಂ.ಎ. ಪದವಿಯನ್ನು ಪಡೆದರು.(1916) ಅನಂತರ, 1924ರಲ್ಲಿ ಲಂಡನ್ನಿಗೆ ಹೋಗಿ, ಪುರಾತತ್ವಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳ ಆಳವಾದ ತಿಳಿವಳಿಕೆಯನ್ನು ಪಡೆದರು. ನಾಣ್ಯಶಾಸ್ತ್ರವು ಅವರ ವಿಶೇಷ ಆಸಕ್ತಿಯ ವಿಷಯವಾಗಿತ್ತು. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿರುವ, ದಕ್ಷಿಣ ಭಾರತದ ನಾಣ್ಯಗಳ ಬೃಹತ್ ಸಂಗ್ರಹವನ್ನು ಕುರಿತು ನಡೆಸಿದ ಅಧ್ಯಯನವು, ಅವರಿಗೆ ಡಿ.ಲಿಟ್. ಪದವಿಯನ್ನು ತಂದುಕೊಟ್ಟಿತು. ಈಜಿಪ್ಟಿನ ಪಿರಮಿಡ್ಡುಗಳ ಉತ್ಖನನದ ಕೆಲಸದಲ್ಲಿ ಪಡೆದ ಕ್ಷೇತ್ರಕಾರ್ಯದ ಅನುಭವವು, ಮುಂದೆ ಬಹಳ ಉಪಯುಕ್ತವಾಯಿತು. ಲಂಡನ್ನಿನಿಂದ ಹಿಂದಿರುಗಿದ ಬಳಿಕ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ, ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ, ಮೈಸೂರು ಸರ್ಕಾರದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ನೇಮಕವಾದ ಕೃಷ್ಣ ಅವರು, ಅಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು.

          ಮೈಸೂರುರಾಜ್ಯದಲ್ಲಿ ಪುರಾತತ್ವ ಶೋಧನೆಯು ಪ್ರಾರಂಭವಾಗಿದ್ದೇ ಬ್ರಹ್ಮಗಿರಿ(1940) ಮತ್ತು ಚಂದ್ರವಳ್ಳಿಗಳಲ್ಲಿ(1939) ಕೃಷ್ಣ ಅವರು ನಡೆಸಿದ ಉತ್ಖನನಗಳಿಂದ. ಅವರು ಈ ಪ್ರದೇಶದ ಬೇರೆ ಬೇರೆ ಜಾಗಗಳಲ್ಲಿ ಕೆಲಸಮಾಡಿ ಹದಿನಾರು ನಿವೇಶನಗಳನ್ನು(ಟ್ರೆಂಚ್ಸ್) ಕಂಡುಹಿಡಿದರು. ಅವುಗಳಲ್ಲಿ ಅನೇಕ ರಚನೆಗಳು ಮತ್ತು ವಸ್ತುಗಳು ಬೆಳಕಿಗೆ ಬಂದವು. ಅವರು, ಬ್ರಹ್ಮಗಿರಿಯಲ್ಲಿ ಮೈಕ್ರೋಲಿಥಿಕ್, ಹೊಸ ಶಿಲಾಯುಗ, ಕಬ್ಬಿಣದ ಯುಗ, ಮೌರ್ಯಯುಗ ಮತ್ತು ಚಾಳುಕ್ಯ-ಹೊಯ್ಸಳ ಯುಗ ಎಂಬ ಐದು ಶ್ರೇಣಿಗಳನ್ನು ಗುರುತಿಸಿದರು. ಇವುಗಳಲ್ಲಿ ಮೊದಲನೆಯದು ರೊಪ್ಪ ಎನ್ನುವ ಹಳ್ಳಿಯ ಹತ್ತಿರ ಸಿಕ್ಕಿತು. ಆದ್ದರಿಂದ ಅದಕ್ಕೆ ರೊಪ್ಪ ಸಂಸ್ಕೃತಿ ಎಂಬ ಹೆಸರನ್ನೇ ಕೊಟ್ಟರು. ಅವರು ನಡೆಸಿದ ಉತ್ಖನನಗಳು ಇಸಿಲ ಎಂಬ ಪ್ರದೇಶದ ಆಸುಪಾಸಿನಲ್ಲಿ ಮನುಷ್ಯ ವಸತಿಯಿತ್ತೆನ್ನುವುದಕ್ಕೆ ಪುರಾವೆಗಳನ್ನು ಒದಗಿಸಿತು.

          ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ, ಪುರಾತತ್ವ ಇಲಾಖೆಯು ಒಂದು ಸಾವಿರಕ್ಕಿಂತ ಹೆಚ್ಚು ಶಾಸನಗಳನ್ನು ಕಂಡುಹಿಡಿಯಿತು. ಅವುಗಳಲ್ಲಿ ಕನ್ನಡ ಭಾಷೆಯ ಮೊಟ್ಟಮೊದಲ ಲಿಖಿತ ದಾಖಲೆಯಾದ ಹಲ್ಮಿಡಿ ಶಾಸನ ಮತ್ತು ಚಂದ್ರವಳ್ಳಿಯ ಶಾಸನಗಳು ಮುಖ್ಯವಾದವು. 1929 ರಿಂದ 1945 ರವರೆಗೆ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಇಲಾಖೆಯು ಪ್ರಕಟಿಸಿದ ವಾರ್ಷಿಕ ವರದಿಗಳು ಪುರಾತತ್ವ ಮತ್ತು ಶಿಲ್ಪಗಳಿಗೆ ಸಂಬಂಧಿಸಿದ ಆಸಕ್ತಿ ಹುಟ್ಟಿಸುವ ಅನೇಕ ವಿಷಯಗಳನ್ನು ಹೇಳುತ್ತವೆ.

          ಹಾಸನ ಮತ್ತು ಮೈಸೂರುಗಳಿಗೆ ಸಂಬಂಧಿಸಿದ ಎಪಿಗ್ರಾಫಿಯಾ ಕರ್ನಾಟಿಕಾದ ಸಂಪುಟಕ್ಕೆ ಕೃಷ್ಣ ಅವರು ಅನುಬಂಧವನ್ನು ರಚಿಸಿದರು. ಕರ್ನಾಟಕದ ಹಲವಾರು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸೀ ಮಾರ್ಗದರ್ಶಿಗಳನ್ನು ಬರೆದು ಪ್ರಕಟಿಸಿದ ಕೃಷ್ಣ ಅವರು, ಕೊನೆಗೆ ಅವೆಲ್ಲದರ ಸಮಗ್ರ ಸಂಪುಟವನ್ನು ತಂದರು.

          ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಕೃಷ್ಣರ ಅವರ ಪ್ಟಕಟಿತ ಕೃತಿಗಳು ಈ ರೀತಿ ಇವೆ:

  1. ಕನ್ನಡನಾಡಿನ ಚರಿತ್ರೆ, ಭಾಗ-3, ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
  2. ಅಜಂತಾ ಮತ್ತು ಎಲ್ಲೋರಾ
  3. ಹಿಂದೂ ದೇಶದ ಚರಿತ್ರಸಾರ
  4. ‘A Guide to Seringapatam’, 1937, Govt. of Mysore, Bangalore
  5. ‘Annual Reports of the Mysore Archaeological Department’
  6. ‘Excavations at Chandravalli’, 1931.

          ಎಂ.ಎಚ್. ಕೃಷ್ಣ ಅವರು 1934 ರಲ್ಲಿ ಮೈಸೂರಿನಲ್ಲಿ ನಡೆದ ಓರಿಯೆಂಟಲ್ ಕಾನ್ಫರೆನ್ಸ್ನ ಕಾರ್ಯದರ್ಶಿಗಳಾಗಿದ್ದರು. ಹಾಗೆಯೇ 1942 ರಲ್ಲಿ ನಡೆದ ಇಂಡಿಯನ್ ಸೈನ್ಸ್ ಕಾಂಗ್ರಸ್ನಲ್ಲಿ ಮಾನವಿಕಗಳನ್ನು ಕುರಿತ ಅಧಿವೇಶನದ ಅಧ್ಯಕ್ಷರಾಗಿದ್ದರು.

                          ಮುಖಪುಟ / ಸಂಶೋಧಕರು