ಸಂಶೋಧಕರು
ಕಿಟ್ಟಲ್, ಜಾರ್ಜ್, ಫರ್ಡಿನಂಡ್, 1832-1903

ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯಗಳಿಗಾಗಿ ನಿರಂತರವಾಗಿ ದುಡಿದ ಹತ್ತೊಂಬತ್ತನೆಯ ಶತಮಾನದ ವಿದ್ವಾಂಸರ ಸಾಲಿನಲ್ಲಿ ರೆವರೆಂಡ್ ಕಿಟ್ಟಲ್ ಅವರಿಗೆ ಮೊದಲ ಮನ್ನಣೆ ಸಿಗುತ್ತದೆ. ನಿಘಂಟು ರಚನೆ, ಗ್ರಂಥಸಂಪಾದನೆ, ಸಾಹಿತ್ಯ ಚರಿತ್ರೆ ಮತ್ತು ಸಾಹಿತ್ಯ ವಿಮರ್ಶೆ, ಪಾರಂಪರಿಕ ತಿಳಿವಳಿಕೆಯ ಆಕರಗಳಾದ ಛಂದಸ್ಸು, ವ್ಯಾಕರಣ, ಅಲಂಕಾರಶಾಸ್ತ್ರ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಮಾಡಿರುವ ಕೆಲಸಗಳು ಅವರಿಗೆ ಸಾಟಿಯಿಲ್ಲದ ಕೀರ್ತಿಯನ್ನು ತಂದುಕೊಟ್ಟಿವೆ. ತನ್ನ ಇತರ ಚಟುವಟಿಕೆಗಳ ನಡುವೆಯೂ ಇಷ್ಟೆಲ್ಲವನ್ನು ಮಾಡಿದ್ದು ಅವರ ವಿದ್ವತ್ತು, ಬದ್ಧತೆ ಮತ್ತು ಪರಿಶ್ರಮಗಳಿಗೆ ಸಾಕ್ಷಿಯಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಸ್ಥಳೀಯರ ಭಾಷೆ, ಇತಿಹಾಸ ಮತ್ತು ಧರ್ಮಗಳ ನಿಕಟವಾದ ತಿಳಿವಳಿಕೆಯನ್ನು ಹೊಂದಿರಬೇಕೆನ್ನುವುದು ಕಿಟ್ಟಲ್ಲರ ಖಚಿತವಾದ ನಂಬಿಕೆ. ಜನಸಮುದಾಯಗಳ ದೈನಂದಿನ ಚಟುವಟಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಅವರಿಗೆ ಕಾಳಜಿಯಿತ್ತು.

ಜರ್ಮನಿಯ ವಾಯುವ್ಯ ಭಾಗದಲ್ಲಿರುವ ರಾಸ್ಟರ್ ಹಾಫ್ ಎಂಬ ಊರಿನಲ್ಲಿ ಕಿಟಲ್ ಅವರು ಹುಟ್ಟಿದರು. ಬಾಸೆಲ್ ನಗರದ ಮಿಷನ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಧರ್ಮಶಾಸ್ತ್ರದಲ್ಲಿ (ಥಿಯಾಲಜಿ) ತರಬೇತಿಯನ್ನು ಪಡೆದ ನಂತರ, ಅವರು 1853 ರಲ್ಲಿ ಪ್ರಾಟೆಸ್ಟಂಟ್ ಮಿಷನರಿಯಾಗಿ ಮಂಗಳೂರಿಗೆ ಬಂದರು. ಅನಂತರ ಧರ್ಮಪ್ರಚಾರದ ಕೆಲಸಕ್ಕಾಗಿ ಧಾರವಾಡ ಮತ್ತು ಹುಬ್ಬಳ್ಳಿಗಳಲ್ಲಿದ್ದ ಕೇಂದ್ರಗಳಿಗೆ ಹೋಗಬೇಕಾಯಿತು. ಆಗ ಅವರು ಕನ್ನಡ ಭಾಷೆಯನ್ನು ಗಂಭೀರವಾಗಿ ಅಭ್ಯಾಸ ಮಾಡಿ, ಕೇವಲ ಆಡು ಮಾತಿನ ಮೇಲೆ ಮಾತ್ರವಲ್ಲ, ಕನ್ನಡದ ಐತಿಹಾಸಿಕ ಮಜಲುಗಳು ಮತ್ತು ಉಪಭಾಷೆಗಳ ಮೇಲೆ ಕೂಡ ಪ್ರಭುತ್ವವನ್ನು ಪಡೆದರು. ಈ ದೇಶದ ಚರಿತ್ರೆ ಮತ್ತು ಧರ್ಮಗಳನ್ನು ಕುರಿತ ಅನೇಕ ಇಂಗ್ಲಿಷ್ ಹಾಗೂ ಸಂಸ್ಕೃತ ಗ್ರಂಥಗಳ ಓದು ಅವರಿಗೆ ಗಟ್ಟಿಯಾದ ಹಿನ್ನೆಲೆಯನ್ನು ಒದಗಿಸಿತು. ಸುಮಾರು ನಲವತ್ತು ವರ್ಷಗಳ ಕಾಲ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮಡಿಕೇರಿ, ಆನಂದಪುರ ಮುಂತಾದ ಸ್ಥಳಗಳಲ್ಲಿ ಜವಾಬ್ದಾರಿಯುತವಾದ ಹುದ್ದೆಗಳನ್ನು ನಿರ್ವಹಿಸಿದ ನಂತರ, ಅವರು 1892 ರಲ್ಲಿ ಟ್ಯೂಬಿಂಗೆನ್ ನಗರಕ್ಕೆ ಹಿಂದಿರುಗಿದರು. ಕ್ರಮೇಣ ಅವರ ದೃಷ್ಟಿಯು ಮಂದವಾಗುತ್ತಿತ್ತು. ಕೆಲವು ಕಾಲ ಅವರು ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರಿಗೆ ಆಡಳಿತಾತ್ಮಕವಾದ ಕೆಲಸಗಳಲ್ಲಿ ಆಸಕ್ತಿಯೂ ಇರಲಿಲ್ಲ.

ಕನ್ನಡ ಭಾಷೆಗೆ ಕಿಟ್ಟಲ್ ಅವರು ನೀಡಿರುವ ಕೊಡುಗೆಯನ್ನು ಭಾಷಾಂತರಗಳು, ಗ್ರಂಥಸಂಪಾದನೆ, ಸ್ವತಂತ್ರ ಕೃತಿಗಳು ಮತ್ತು ಕ್ರೈಸ್ತಸಾಹಿತ್ಯ ಎಂಬ ಗುಂಪುಗಳಾಗಿ ವಿಂಗಡಿಸಬಹುದು. ಅವರ ಮೇರು ಕೃತಿಯಾದ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು ಪ್ರತ್ಯೇಕವಾದ ಪರಿಶೀಲನೆಯನ್ನೇ ಬೇಡುತ್ತದೆ. ಇನ್ನು ಮುಂದೆ ಅವುಗಳನ್ನು ಪಟ್ಟಿ ಮಾಡಲಾಗಿದೆ.

ಅ. ಗ್ರಂಥ ಸಂಪಾದನೆ:

1. ಶಬ್ದಮಣಿದರ್ಪಣ, 1872

2. ಛಂದೋಂಬುಧಿ, 1875.

 

ಆ. ಸ್ವತಂತ್ರ ಕೃತಿಗಳು:

1.ಸಣ್ಣ ಕರ್ನಾಟಕ ಕಾವ್ಯಮಾಲೆ (Minor Canarese Poetical Anthology,compiled with introduction, notes and vocabulary, 1868, Basel Mission Press, Mangalore 

2.Abridged Sutras of Old Kannada Grammar, 1866

3. ಕಾವ್ಯಮಂಜರಿ, 1877, ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಸಿದ್ಧಪಡಿಸಿದ ಪಠ್ಯಪುಸ್ತಕ, (First book of Canarese Poetry with notes and vocabulary, 1877, Basel Mission Press, Mangalore 

4. Grammar of the Kannada Language, 1903, Basel Mission Press, Mangalore (A Grammar of the Kannada Language in English, comprising the thhree dialects of the language, ancient, medieval and modern)

5. Third Book of Lessons in Canarese Adapted to the vernacular of the Madras Presidency, 2nd revised edition, 1866, Basel Mission Press, Mangalore

6. Indian Antiquary ಮತ್ತು ಇತರ ನಿಯತಕಾಲಿಕಗಳಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯ ಮತ್ತು ಸಂಬಂಧಿಸಿದ ಇತರ ವಿಷಯಗಳನ್ನು ಕುರಿತ ಅನೇಕ ಲೇಖನಗಳು.

 

ಇ. ಅನುವಾದಗಳು:

1 ಕಥಾಮಾಲೆ, 1862, ಕನ್ನಡಕ್ಕೆ

2. ಪಂಚತಂತ್ರ, ಇಂಗ್ಲಿಷ್ಗೆ

3. 'ಇಂಗ್ಲೆಂಡಿನ ಇತಿಹಾಸ', 1864, ಮಾರಿಸ್ ಅವರ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ

 

ಈ. ಧರ್ಮಸಂಬಂಧಿಯಾದ ಕೃತಿಗಳು:

1. 'ಪರಮಾತ್ಮ ಜ್ಞಾನ', 1863, ಬಾಸೆಲ್ ಮಿಷನ್ ಪ್ರೆಸ್, ಮಂಗಳೂರು

2. 'ಯೇಸುಕ್ರಿಸ್ತನ ಶ್ರಮೆಯ ಚರಿತ್ರ', 1869, ('The Sufferings of Christ' ಕೃತಿಯ ಅನುವಾದ) ಬಾಸೆಲ್ ಮಿಷನ್ ಪ್ರೆಸ್, ಮಂಗಳೂರು

3. 'ಕ್ರೈಸ್ತ ಸಭಾ ಚರಿತ್ರೆ'

4. Short Survey in the Vedic Polytheism and Pantheism

5. 'Tract on Sacrifice' (ಯಜ್ಞಸುಧಾನಿಧಿ)

6. Ueber den Ursprung des LingKultus in Indien (German Work)

 

ಉ. ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು, 1894

     ಇದು ಕಿಟಲ್ ಅವರ ಅತ್ಯುತ್ತಮ ಕೃತಿ. ಕಿಟಲ್ ಅವರ ವಿದ್ವತ್ತನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ ಬಾಸೆಲ್ ಮಿಷನ್ನಿನ ಪದಾಧಿಕಾರಿಗಳು, ಕನ್ನಡಕ್ಕೆ ಒಂದು ಶಬ್ದಕೋಶವನ್ನು ರೂಪಿಸುವ ಕೆಲಸವನ್ನು ಅವರಿಗೆ ವಹಿಸಿದರು. 1872 ರಲ್ಲಿ ಪ್ರಾರಂಭವಾದ ಈ ಕಾರ್ಯವು ಇಪ್ಪತ್ತೆರಡು ವರ್ಷಗಳ ಸುದೀರ್ಘ ಶ್ರಮದ ನಂತರ 1894 ರಲ್ಲಿ ಪ್ರಕಟವಾಯಿತು. ಕಿಟಲ್ ಅವರು ನಿಘಂಟಿನ ನಿರ್ಮಾಣದಲ್ಲಿ ವಸ್ತ್ರದ ಶಿವಲಿಂಗಯ್ಯ, ಎಂ.ಸಿ. ಶ್ರೀನಿವಾಸಾಚಾರ್ಯ, ಶಿವರಾಮ ಭಾರದ್ವಾಜ್ ಮುಂತಾದ ದೇಶೀ ಪಂಡಿತರ ನೆರವನ್ನು ಪಡೆದರು. ಈ ನಿಘಂಟು ಇಂದಿಗೂ ಉಪಯುಕ್ತವಾಗಿದ್ದು ಭಾಷಿಕ ತಿಳಿವಳಿಕೆಯ ಅಧಿಕೃತ ಆಕರವಾಗಿದೆ. ಯಾವುದೇ ಭಾರತೀಯ ಭಾಷೆಯಲ್ಲಿ ಇಂತಹ ಕೃತಿ ಇರುವ ಸಂಭವ ಕಡಿಮೆ. ಈ ನಿಘಂಟು ವೈಜ್ಞಾನಿಕವಾಗಿ ರೂಪಿತವಾಗಿದ್ದು ಅನೇಕ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಪ್ರತಿಯೊಂದು ಪದದ ಅರ್ಥಛಾಯೆಗಳಿಗೂ ಆಡುಮಾತು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಕೃತಿಗಳು ಮತ್ತು ಉಪಭಾಷೆಗಳಿಂದ ನಿದರ್ಶನಗಳನ್ನು ಕೊಡಲಾಗಿದೆ. ಅವರು ಕೊಟ್ಟರುವ ಗಾದೆಗಳು ಮತ್ತು ವಾಗ್ರೂಢಿಗಳು ಬಹಳ ಆಕರ್ಷಕವಾಗಿವೆ. ಮೂಲ ಶಬ್ದದ ಇಂಗ್ಲಿಷ್ ಅರ್ಥವನ್ನೂ ಕನ್ನಡದಲ್ಲಿರುವ ಅನೇಕ ಅರ್ಥಛಾಯೆಗಳನ್ನೂ ಕೊಡಲಾಗಿದೆ. ಕಿಟಲ್ ಗೆ ಕನ್ನಡವು ದ್ರಾವಿಡ ಭಾಷೆಯೆಂಬ ಅರಿವು ಖಚಿತವಾಗಿತ್ತು. ಆದ್ದರಿಂದಲೇ ಅವರ ನಿರ್ಣಯಗಳು ಮತ್ತು ಧೋರಣೆಗಳು ವಸ್ತುನಿಷ್ಠವಾಗಿಯೂ ಸರಿಯಾಘಿಯೂ ಇವೆ.

     ಕಿಟಲ್ ನಿಘಂಟು ಎಲ್ಲರಿಂದಲೂ ಮುಕ್ತವಾದ ಪ್ರಶಂಸೆಯನ್ನು ಪಡೆಯಿತು. ಜರ್ಮನಿಯ ಟ್ಯೂಬಿಂಗೆನ್ ವಿಶ್ವವಿದ್ಯಾಲಯವು ಈ ಸಾಧನೆಗಾಗಿ ಕಿಟ್ಟಲ್ ಅವರಿಗೆ ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ರೆವರೆಂಡ್ ಕಿಟಲ್, ಬಿ.ಎಲ್. ರೈಸ್ ಮುಂತಾದ ವಿದ್ವಾಂಸ ಮಹನೀಯರ ಸ್ವಾರ್ಥರಹಿತವಾದ ಸೇವೆ ಇಲ್ಲದಿದ್ದರೆ, ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ನಡೆದ ಕನ್ನಡ ನವೋದಯವು ತಿರುಕನ ಕನಸಿನಂತೆ ಹುಸಿಯಾಗುತ್ತಿತ್ತು.  

 

 ಮುಂದಿನ ಓದು:

  1. 'ಹೊಸಗನ್ನಡ ಅರುಣೋದಯ', ಡಾ. ಶ್ರೀನಿವಾಸ ಹಾವನೂರು, 1974, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು
  2. Ferdinand-Kittel-Seminar 2003 - FRAMEWORK

                          ಮುಖಪುಟ / ಸಂಶೋಧಕರು