ಸಂಶೋಧಕರು
ಗುಂಡಪ್ಪ ಎಲ್., 1903-1986

          ಲಿಂಗಣ್ಣಯ್ಯ ಗುಂಡಪ್ಪನವರು, ಕನ್ನಡದ ಅಧ್ಯಾಪಕ-ಸಾಹಿತಿಗಳ ಪರಂಪರೆಗೆ ಸೇರಿದವರು. ಅವರು ತಮ್ಮ ಆಯ್ಕೆಯ ಕ್ಷೇತ್ರಗಳಾದ ಭಾಷಾಂತರ, ಗ್ರಂಥಸಂಪಾದನೆ ಮತ್ತು ಆಧುನಿಕ ಸಾಹಿತ್ಯಗಳಲ್ಲಿ ನಿರಂತರವಾಗಿ ಕೆಲಸಮಾಡಿ ಕನ್ನಡ ಸಂಸ್ಕೃತಿಗೆ ಕಾಣಿಕೆ ನೀಡಿದ್ದಾರೆ. ಅವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಹಳ್ಳಿಯಲ್ಲಿ ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಬಿ.ಎಂ.ಶ್ರೀಕಂಠಯ್ಯನವರು ಅವರ ಮಾರ್ಗದರ್ಶಿಗಳೂ ಗುರುಗಳೂ ಆಗಿದ್ದರು. ಸಂಸ್ಕೃತ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಅವರಿಗಿದ್ದ ಪಾಂಡಿತ್ಯವು, ಅವರು ಭಾಷಾಂತರದಲ್ಲಿ ತೋರಿಸಿದ ಒಲವಿಗೆ ಕಾರಣ. ಹಲವು ವರ್ಷಗಳವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಾಠಹೇಳಿದ ನಂತರ, ಗುಂಡಪ್ಪನವರು, ಇಂಗ್ಲಿಷ್-ಕನ್ನಡ ನಿಘಂಟು ಯೋಜನೆಯಲ್ಲಿ ಸಹಾಯಕ ಸಂಪಾದಕರಾದರು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿದ್ದ ಕನ್ನಡ-ಕನ್ನಡ ನಿಘಂಟಿನ ಸಂಪಾದಕರಾಗಿಯೂ ಅವರು ಕೆಲಸ ಮಾಡಿದರು.

          ಗುಂಡಪ್ಪನವರಿಗೆ ತಮಿಳಿನ ಮೇಲೆ ಇದ್ದ ಪ್ರಭುತ್ವವು, ಅವರು ಆ ಭಾಷೆಯಿಂದ ಮಾಡಿದ ಅನುವಾದಗಳಿಗೆ ಸಾಂಸ್ಕೃತಿಕ ಮಹತ್ವವನ್ನು ದೊರಕಿಸಿ ಕೊಟ್ಟಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯಗಳಿಗೆ ಇದ್ದಿರಬಹುದಾದ ದ್ರಾವಿಡ ಸಂಸ್ಕೃತಿಯ ಸಂಪರ್ಕಗಳನ್ನು ಕಂಡುಕೊಳ್ಳುವುದು ನಮ್ಮ ಕಾಲದ ಅಗತ್ಯವಾಗಿದೆ. ಗುಂಡಪ್ಪನವರು ನೇರವಾಗಿ ತಮಿಳಿನಿಂದಲೇ ಅನುವಾದವಾಗಿರುವ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಅವರು, ತಮಿಳಿನ ಪ್ರಾಚೀನ ಕೃತಿಗಳಾದ ತಿರುಕ್ಕುರಳ್, ಮಣಿಮೇಖಲೈ, ಶಿಲಪ್ಪದಿಕಾರಂ, ಅವ್ವೆಯಾರ್, ಪೆರಿಯಪುರಾಣಂ, ನಾಲ್ಮಣಿಕಡುಕು, ತಿರುವಾಚಕಂ, ಪೆರುಂಗದೈ ಮತ್ತು ಉಳಗನೀತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ತಮಿಳು ಪದಗಳಿಗೆ ಸರಿಸಮನಾದ ಸಂಸ್ಕೃತ ಪದಗಳನ್ನು ಬಳಸಿಬಿಡುವ ಸರಳ ಉಪಾಯಕ್ಕೆ ಅವರು ಮನಸೋತಿಲ್ಲ. ಬದಲಾಗಿ ಮೂಲ ತಮಿಳಿನ ಸೊಗಡನ್ನು ಕಾಪಾಡಿಕೊಳ್ಳಲು,  ಯಶಸ್ವಿಯಾಗಿ ಪ್ರಯತ್ನಿಸಿದ್ದಾರೆ. ಮೂಲ ತಮಿಳಿನಲ್ಲಿರುವ ವಾಕ್ಯರಚನೆಯ ವಿನ್ಯಾಸಗಳನ್ನು ಹಾಗೆಹಾಗೆಯೇ ಕನ್ನಡಕ್ಕೆ ತರಬೇಕೆಂಬ ಅವರ ಅಪೇಕ್ಷೆಯು, ಕನ್ನಡದಲ್ಲಿಯೂ ಅಂತಹುದೇ ವಿನ್ಯಾಸಗಳನ್ನು ಹುಡುಕುವ ಗಂಭೀರ ಪ್ರಯತ್ನಕ್ಕೆ ಅವಕಾಶ ಮಾಡಿಕೊಟ್ಟಿದೆ. ಗುಂಡಪ್ಪನವರು ಕೆಲವು ಕನ್ನಡ ಕೃತಿಗಳನ್ನು ತಮಿಳಿಗೆ ಅನುವಾದಿಸಿದ್ದಾರೆ.

          ಅವರ ಭಾಷಾಂತರ ಕಾರ್ಯವು, ಪ್ರಾಚೀನ ತಮಿಳಿಗೆ ಸೀಮಿತವಾಗಿಲ್ಲ. ಸುಬ್ರಹ್ಮಣ್ಯ ಭಾರತಿಯವರ ಕವಿತೆಗಳ ಕನ್ನಡ ರೂಪವಾದ ಭಾರತಿಯವರ ಕವಿತೆಗಳು’, ಮು. ವರದರಾಜನ್ ಅವರ ತಮಿಳು ಸಾಹಿತ್ಯಚರಿತ್ರೆ, ತಮಿಳಿನ ಶ್ರೇಷ್ಠ ಅಭಿಜಾತ ವಿದ್ವಾಂಸರಾದ ಯು. ಸ್ವಾಮಿನಾಥ ಅಯ್ಯರ್ ಅವರ ಆತ್ಮಕಥೆಯಾದ ನನ್ನ ಚರಿತ್ರೆಗಳು ಅವರು ಆಧುನಿಕ ತಮಿಳಿನಿಂದ ಕನ್ನಡಕ್ಕೆ ತಂದಿರುವ ಕೃತಿಗಳು.

ಗುಂಡಪ್ಪನವರು ಕೌಂಟ್ ಲಿಯೋ ಟಾಲ್ ಸ್ಟಾಯ್ ಅವರ ಕಥೆಗಳನ್ನು ಅನುವಾದಿಸಿದ್ದಾರೆ. ಅವು ಇಂದಿಗೂ ಜನಪ್ರಿಯವಾಗಿವೆ. ಆರ್.ಎಲ್. ಸ್ಟೆಫೆನ್ ಸನ್ ಅವರ ಕಾದಂಬರಿಯಾದ  ಡಾಕ್ಟರ್ ಜೆಕಿಲ್ ಅಂಡ್ ಮಿಸ್ಟರ್ ಹೈಡ್’’ ಅನ್ನು ಗುಂಡಪ್ಪನವರು ನರರಾಕ್ಷಸ ಎಂಬ ಹೆಸರಿನಲ್ಲಿ ಕನ್ನಡಿಸಿದ್ದಾರೆ. ಹಾಗೆಯೇ ಮ್ಯಾಥ್ಯೂ ಅರ್ನಾಲ್ಡನ ಕಥನಕವನವಾದ ಸೊಹ್ರಾಬ್ ಅಂಡ್ ರುಸ್ತುಂಕೂಡ ಅವರಿಂದ ಅನುವಾದವಾಗಿದೆ. ಸಂಸ್ಕೃತದ ನಾಟಕಕಾರನಾದ ಭಾಸನ ಸ್ವಪ್ನ ವಾಸವದತ್ತಾ ಮತ್ತು ಬೇರೆ ಕೆಲವು ಏಕಾಂಕ ನಾಟಕಗಳು ಕೂಡ ಗುಂಡಪ್ಪನವರಿಂದ ಕನ್ನಡಕ್ಕೆ ಬಂದಿವೆ. ಅವರು, ಭಾಷಾಂತರದ ತಾತ್ವಿಕತೆಯನ್ನು ಕುರಿತ ಕನ್ನಡಿ ಸೇವೆ ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಆದಿಪುರಾಣ ಸಂಗ್ರಹ’(1954) ಗುಂಡಪ್ಪನವರ ಬಹು ದೊಡ್ಡ ಸಾಧನೆ. ಅದನ್ನು ಕೇವಲ ಸಂಗ್ರಹಿತ ಕೃತಿಯೆಂದು ಕಡೆಗಣಿಸುವಂತಿಲ್ಲ. ಇದು ಪಂಪನ ಅಭಿಜಾತ ಕೃತಿಯಾದ ಆದಿಪುರಾಣದ ಸಂಗ್ರಹಿತ ಆವೃತ್ತಿ. ಅನೇಕ ಮಹತ್ವದ ಪ್ರಾಚೀನ ಕಾವ್ಯಗಳ ಸಂಗ್ರಹ ಆವೃತ್ತಿಯನ್ನು ಸಿದ್ಧಪಡಿಸುವ ಮನೋಧರ್ಮವು ರೂಪಿತವಾಗುತ್ತಿದ್ದ ಆ ಕಾಲದಲ್ಲಿ, ಗುಂಡಪ್ಪನವರು ಒಂದು ಬಗೆಯ ಮೇಲುಪಂಕ್ತಿಯನ್ನು ಹಾಕಿಕೊಟ್ಟರು. ಸಾಹಿತ್ಯವನ್ನು ಧರ್ಮನಿರಪೇಕ್ಷವಾಗಿ ನೋಡುವ ಮನೋಧರ್ಮವು ಮೈದಳೆಯುತ್ತಿದ್ದ ದಿನಗಳಲ್ಲಿ ಜೈನಕಾವ್ಯವೇ ಇರಲಿ, ವೈದಿಕ ಕಾವ್ಯವೇ ಇರಲಿ, ಧಾರ್ಮಿಕ ವಿವರಗಳನ್ನು ಕಡಿಮೆ ಮಾಡಿ, ಸಾಹಿತ್ಯಕವಾಗಿ ಆಕರ್ಷಕವಾದ ಭಾಗಗಳನ್ನು ಉಳಿಸಿಕೊಳ್ಳುವುದು ಅಂತಹ ಮನೋಧರ್ಮದ ಪ್ರಮುಖ ನಿಲುವು. ಗುಂಡಪ್ಪನವರೂ ಈ ಮಾತಿಗೆ ಅಪವಾದವಲ್ಲ. ಆದರೆ, ತಾವು ನೀಡಿರುವ ಪ್ರವೇಶಿಕೆಯಲ್ಲಿ ಗುಂಡಪ್ಪನವರು, ಜೈನಧರ್ಮದ ಬಹಳ ವಿವರವೂ ಹಾಗೂ ವಿದ್ವತ್ಪೂರ್ಣವೂ ಆದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅದರ ಜೊತೆಗೆ ಆ ಧರ್ಮದ ಪುರಾಣಗಳು ಹಾಗೂ ಸಾಹಿತ್ಯದ ಪರಿಚಯವೂ ಇದೆ. ಆದಿಪುರಾಣದ ಕಥೆಯನ್ನು ಬಹಳ ಸರಳವಾದ ಕನ್ನಡದಲ್ಲಿ ನಿರೂಪಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಉಪಯುಕ್ತವಾದ ಶಬ್ದಕೋಶವೂ ಇದೆ.

ಇದರ ಜೊತೆಗೆ ಗುಂಡಪ್ಪನವರು ಸ್ವತಃ ಸೃಜನಶೀಲ ಲೇಖಕರೂ ಆಗಿದ್ದರು. ಅವರು ಮಕ್ಕಳಿಗೆಂದು ಬರೆದ ಕೆಲವು ಕವಿತೆಗಳು ಇಂದಿಗೂ ಪಠ್ಯಪುಸ್ತಕಗಳಲ್ಲಿ ಮತ್ತು ಸಂಕಲನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಚಟಾಕಿ ಮತ್ತು ಇತರ ಕನಗಳು ಎನ್ನುವುದು ಇಂತಹ ಕವಿತೆಗಳ ಸಂಕಲನ. ಪಂಪ ಪರಿಚಯ, ‘ಥಾಮಸ್ ಆಲ್ವಾ ಎಡಿಸನ್’, ‘ಫ್ಲಾರೆನ್ಸ್ ನೈಟಿಂಗೇಲ್, ಮತ್ತು  ‘ಕನ್ನಡ ವ್ಯಾಕರಣ ಪಾಠಗಳು ಅವರ ಇತರ ಸ್ವತಂತ್ರ ಕೃತಿಗಳು.

ಗುಂಡಪ್ಪನವರ ಶ್ರದ್ಧೆ ಹಾಗೂ ಪ್ರಾಮಾಣಿಕತೆಗಳಿಂದ ಕೂಡಿದ ಸಾಧನೆಯು, ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಬಹುಮಾನ ಮುಂತಾದ ಗೌರವಗಳನ್ನು ತಂದಿದೆ.

                          ಮುಖಪುಟ / ಸಂಶೋಧಕರು