ಸಂಶೋಧಕರು
ಗೋವಿಂದ ಪೈ ಎಂ., 1883-1963

          ಎಂ. ಗೋವಿಂದ ಪೈ ಅವರು, ಕನ್ನಡದ ಪ್ರಸಿದ್ಧ ಸಂಶೋಧಕ, ಕವಿ ಮತ್ತು ನಾಟಕಕಾರ. ಅವರು ಈಗ ಕೇರಳದಲ್ಲಿರುವ ಮಂಜೇಶ್ವರ ಎಂಬ ಊರಿನವರು. ಆದರೂ ಅವರ ಸರಿಯಾದ ಹೆಸರು ಮಂಗಳೂರು  ಗೋವಿಂದ ಪೈ ಎನ್ನುವುದು. ಅವರು, ಕನ್ನಡ ಭಾಷೆ, ಸಾಹಿತ್ಯ ಮತ್ತು ಕರ್ನಾಟಕದ ಸಂಸ್ಕೃತಿಯಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿದ್ದು, ತಮ್ಮ ಜೀವಮಾನವೆಲ್ಲ ಆ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ನಿರತರಾಗಿದ್ದರು. ಪೈ ಅವರು, ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಮಂಜೇಶ್ವರವೆಂಬ ಊರಿನಲ್ಲಿ ಹುಟ್ಟಿದರು. ಸ್ವಲ್ಪ ಕಾಲ ಮದ್ರಾಸು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದನಂತರ, ತಮ್ಮ ತಂದೆಯವರ ಮರಣದಿಂದ ಊರಿಗೆ ಹಿಂದಿರುಗಬೇಕಾಯಿತು. ಕನ್ನಡ, ಕೊಂಕಣಿ, ಮಲೆಯಾಳಂ, ಮರಾಠಿ, ಪಾಳಿ, ಪ್ರಾಕೃತ, ಅರ್ಧಮಾಗಧಿ, ಹಿಂದಿ, ಬಂಗಾಳೀ, ಜಪಾನೀಸ್, ಗ್ರೀಕ್ ಮತ್ತು ಲ್ಯಾಟಿನ್ ಗಳನ್ನು ಕಲಿತ ಗೋವಿಂದ ಪೈ ಬಹುಭಾಷಾವಿದರಾದರು. ಅವರು ಜಪಾನೀ ಭಾಷೆಯ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

          ಗೋವಿಂದ ಪೈಯವರು, ಸೃಜನಶೀಲ ಸಾಹಿತ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದರೂ ಪ್ರಸ್ತುತ ಟಿಪ್ಪಣಿಯು ಅವರ ಸಂಶೋಧನೆಗಳಿಗೆ ಹೆಚ್ಚಿನ ಒತ್ತನ್ನು ಕೊಡುತ್ತದೆ. ಅವರು ಅನೇಕ ವಿಷಯಗಳಲ್ಲಿ ಆಸಕ್ತರಾಗಿದ್ದರು. ಕೊಂಕಣಿ ಸಮುದಾಯಗಳ ಇತಿಹಾಸ ಮತ್ತು ತುಳು ಪ್ರದೇಶದ ಚರಿತ್ರೆಯಲ್ಲಿ ಅವರಿಗೆ ವಿಶೇಷವಾದ ಆಸಕ್ತಿಯಿತ್ತು. ಕನ್ನಡನಾಡು ಮತ್ತು ಕರ್ನಾಟಕದ ಸಂಸ್ಕೃತಿಗಳ ಪ್ರಾಚೀನತೆಯನ್ನು ಕುರಿತ ಹುಡುಕಾಟವು, ಅವರನ್ನು ಎಡೆಬಿಡದೆ ಕಾಡಿದ ಸಂಗತಿಯಾಗಿತ್ತು. ಪ್ರಾಚೀನ ಕನ್ನಡ ಲೇಖಕರ ದೇಶ-ಕಾಲ ನಿರ್ಣಯದಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಪೈ ಅವರು, ವಿಂಧ್ಯಸೀಮೆಯ ವಾಕಾಟಕರು ಮತ್ತು ತಮಿಳುನಾಡಿನ ಪಲ್ಲವರ ಇತಿಹಾಸವನ್ನು ಕುರಿತು ಬರೆದಿದ್ದಾರೆ.

ಅತ್ಯಂತ ಪ್ರಾಚೀನವಾದ ಗ್ರೀಕ್ ನಾಟಕವೊಂದರಲ್ಲಿ, ಕೆಲವು ಕನ್ನಡ ಪದಗಳ ಇರುವಿಕೆಯನ್ನು ಗುರುತಿಸಿದ ಮೊಟ್ಟಮೊದಲ ವಿದ್ವಾಂಸರು ಗೋವಿಂದ ಪೈ. (ಆಕ್ಸಿರಿಂಕಸ್ ಪಾಪ್ಪಿರಿ ಎಂಬ ಗ್ರೀಕ್ ಪ್ರಹಸನ.) ಅದರೊಳಗೆ ಇದ್ದ ಹಬ್ಬ, ತೆರಿಗೆ, ಸಂರಕ್ಷಿಸು, ಎತ್ತು, ಒಸೆ ಮುಂತಾದ ಪದಗಳು ಕನ್ನಡದಿಂದ ಬಂದವೆಂದು, ಗೋವಿಂದ ಪೈ ಅವರ ಊಹೆ. ಈ ಪ್ರಹಸನವು ಕ್ರಿಸ್ತಪೂರ್ವ ಮೊದಲನೆಯ ಶತಮಾನಕ್ಕೆ ಸೇರಿರುವುದೆಂದು ಹೇಳಲಾಗಿದೆ. ಈ ಆಧಾರದ ಮೇಲೆ, ಕನ್ನಡವು ಕ್ರಿಸ್ತಪೂರ್ವ ಯುಗದಲ್ಲಿಯೇ ಇತ್ತೆಂದು ಗೋವಿಂದ ಪೈ ಅವರು  ವಾದಿಸುತ್ತಾರೆ. ಹಲ್ಮಿಡಿ ಶಾಸನವೂ ಕೂಡ ಕ್ರಿ.ಶ. 450 ರಷ್ಟು ಈಚಿನದು. ಆದ್ದರಿಂದ ಪೈ ಅವರ ಊಹೆಯು ಗಮನೀಯವಾದುದು. ಪ್ರಸಿದ್ಧ ಕವಿಗಳಾದ ಪಂಪ, ರನ್ನ, ನಾಗಚಂದ್ರ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಮತ್ತು ಪಾರ್ತಿ ಸುಬ್ಬ ಮುಂತಾದ ಕವಿಗಳ ಕಾಲ-ದೇಶಗಳನ್ನು ಕುರಿತು ಪೈಯವರು ವ್ಯಾಪಕವಾದ ಕೆಲಸ ಮಾಡಿದ್ದಾರೆ. ಅವರೆಲ್ಲರ ಕಾಲವನ್ನು, ಈಗ ಒಪ್ಪಿತವಾಗಿರುವುದಕ್ಕಿಂತಲೂ ಬಹಳ ಹಿಂದೆ ಒಯ್ಯುವುದು ಅವರ ವಾಡಿಕೆ. ಗ್ರೀಕ್ ಪ್ರಹಸನವನ್ನು ಕುರಿತ  ಅವರ ಅನಿಸಿಕೆಗಳನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಅಲ್ಲಿ ಬರುವ ಕೆಲವು ಪದಗಳು ತುಳು ಭಾಷೆಗೆ ಸೇರಿದವೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಗ್ರೀಸಿನ ಭೂಗೋಳಶಾಸ್ತ್ರಜ್ಞನೂ ಖಗೋಳ ಶಾಸ್ತ್ರದಲ್ಲಿ ಆಸಕ್ತನೂ ಆದ ಟಾಲೆಮಿಯ ಕೃತಿಗಳಲ್ಲಿಯೂ ಬಾದಾಮಿ, ಮೌದ್ಗಲ್ ಮುಂತಾದ ಕನ್ನಡಮೂಲದ ಪದಗಳನ್ನು ಪೈ ಅವರು ಗುರುತಿಸಿದ್ದಾರೆ.

ಗೋವಿಂದ ಪೈಗಳ ಪ್ರಕಾರ ಕೊಂಕಣಿ ಸಮುದಾಯದವರು, ಪಂಜಾಬಿನ ಸರಸ್ವತೀ ನದಿಯ ದಂಡೆಯಿಂದ ಬಂದವರು. ಪ್ರಕಾರ ಕೊಂಕಣಿಯು ಅರ್ಧಮಾಗಧಿಯ ಮೂಲದಿಂದ ಹುಟ್ಟಿಕೊಂಡಿದೆಯೆಂದು ಅವರ ಅಭಿಪ್ರಾಯ. ಮರಾಠಿಯಾದರೋ ಕೊಂಕಣಿಗಿಂತ ತಡವಾಗಿ ಒಡಮೂಡಿತೆಂದು ಅವರು ಹೇಳುತ್ತಾರೆ.  ಅವರ ‘Flashes from the Past’ ಎಂಬ ಲೇಖನವು ಈ ವಿಷಯವನ್ನು ಪ್ರಸ್ತಾಪಿಸುತ್ತದೆ. ಇದು ಅನಂತರ ನಮ್ಮ ಹಿರಿಯರನ್ನು ಕುರಿತುಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಬಂತು. ಎರಡನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ತುಳುನಾಡನ್ನು ನಿರಂತರವಾಗಿ ಆಳಿದ ಆಳುಪ ರಾಜವಂಶವನ್ನು ಕೇಂದ್ರವಾಗಿಟ್ಟುಕೊಂಡು, ಪೈಯವರು ತುಳುನಾಡಿನ ಇತಿಹಾಸವನ್ನು ನಿರೂಪಿಸಿದ್ದಾರೆ. ಗಂಗರು, ಪುನ್ನಾಟರು, ಶಾತವಾಹನರು, ಕದಂಬರು ಮುಂತಾದ ಪ್ರಸಿದ್ಧ ರಾಜವಂಶಗಳನ್ನು ಕುರಿತು ಅವರು ವ್ಯಾಪಕವಾಗಿ ಬರೆದಿದ್ದಾರೆ. ಅವರ ಪ್ರಕಾರ, ಭದ್ರಬಾಹು ಭಟಾರರ ಸಂಗಡ ಶ್ರವಣ ಬೆಳಗೊಳಕ್ಕೆ ಬಂದಿದ್ದು ಚಂದ್ರಗುಪ್ತ ಮೌರ್ಯನಲ್ಲ. ಬದಲಾಗಿ, ಅದು ಕ್ರಿ.ಪೂ. 520 ರಲ್ಲಿ ಉಜ್ಜಯನಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಸಂಪ್ರತಿ ಚಂದ್ರಗುಪ್ತ. ಹನ್ನೆರಡನೆಯ ಶತಮಾನದ ಶಿವಶರಣರಾದ ಬಸವೇಶ್ವರ, ಮರುಳಸಿದ್ದ ಮತ್ತಯು ದೇವರ ದಾಸಿಮಯ್ಯರ ಐತಿಹಾಸಿಕತೆಯನ್ನು ಕುರಿತಂತೆಯೂ ಅವರು ವ್ಯಾಪಕವಾಗಿ ಬರೆದಿದ್ದಾರೆ. ಅವರು ಅನೇಕ ವಿದ್ವತ್ ಪತ್ರಿಕೆಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಈಗ ಅವೆಲ್ಲವೂ 1500 ಕ್ಕೂ ಹೆಚ್ಚು ಪುಟಗಳಿರುವ ಬೃಹತ್ ಸಂಪುಟದಲ್ಲಿ ಸಂಕಲಿತವಾಗಿವೆ.

ಗೋವಿಂದ ಪೈ ಅವರು 1950 ರಲ್ಲಿ ಮುಂಬಯಿ ನಗರದಲ್ಲಿ ನಡೆದ ಮೂವತ್ತ್ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಗೆ ಮದ್ರಾಸ್ ಸರ್ಕಾರವು ರಾಷ್ಟ್ರಕವಿ ಎಂಬ ಪದವಿಯನ್ನು ನೀಡಿ ಗೌರವಿಸಿತ್ತು. ದೀವಿಗೆ ಎನ್ನುವುದು ಅವರಿಗೆ ಅರ್ಪಿತವಾಗಿರುವ ಅಭಿನಂದನ ಗ್ರಂಥ.

ಅವರ ಮುಖ್ಯವಾದ ಕೃತಿಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:

 1. ಕಾವ್ಯ:

ಅ. ಗಿಳಿವಿಂಡು

ಆ. ನಂದಾದೀಪ

ಇ. ಹೃದಯರಂಗ

ಈ. ಗೊಲ್ಗೊಥಾ ಮತ್ತು ವೈಶಾಖಿ

 1. ನಾಟಕಗಳು

ಅ. ಹೆಬ್ಬೆರಳು

ಆ. ಚಿತ್ರಭಾನು

ಇ. ಎಂಟು ನೋ ನಾಟಕಗಳು

 1. ಸಂಶೋಧನೆ

ಅ. ಮೂರು ಉಪನ್ಯಾಸಗಳು, ಮದ್ರಾಸ್ ವಿಶ್ವವಿದ್ಯಾಲಯ.

ಆ. ಗೋವಿಂದ ಪೈ ಸಂಶೋಧನ ಸಂಪುಟ’, ಸಂ. ಹೆರಂಜೆ ಕೃಷ್ಣಭಟ್, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

ಇ.Indiana: Studies In Indian Culture, history and civilsation by Govinda Pai, Manjeshvar, 1997, Ed. Prabhu M. Mukunda, Krishnabhatta Heranje, Udupi, Karnataka.  

 

 

ಮುಂದಿನ ಓದು:

  1. ‘Govind Pai M’. by M. Thirumaleshvara Bhat, 1993, Sahitya Academy, New Delhi.
  2. ‘M. Govinda Pai, a Man of Letters, A.N. Upadhye, 1976, Gokhale Institute of Public Affairs, Bangalore.
  3. ‘Govinda Pai’, by V.M. Inamdar, 1983, Institute of Kannada Studies, University of Mysore.
  4. ಮಹಾಕವಿ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, 2001, ಬಸ್ತಿ ಪ್ರಕಾಶನ.
  5. ಬದುಕಿದ್ದರಿಲ್ಲಿ ಗೋವಿಂದ ಪೈ’, ಕು.ಶಿ. ಹರಿದಾಸ ಭಟ್ಟ,

                          ಮುಖಪುಟ / ಸಂಶೋಧಕರು