ಸಂಶೋಧಕರು
ಫ್ಲೀಟ್, ಜಾನ್, ಫೇತ್ ಫುಲ್, 1847-1917

          ಪಶ್ಚಿಮ ಭಾರತದಲ್ಲಿ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಮತ್ತು ಇತಿಹಾಸಗಳ ಅಧ್ಯಯನದಲ್ಲಿ ತೀವ್ರವಾದ ಆಸಕ್ತಿಯನ್ನು ಕುದುರಿಸಿದ, ಕಾಪಾಡಿದ ಮೊದಲಿಗರಲ್ಲಿ ಜೆ.ಎಫ್. ಫ್ಲೀಟ್ ಅವರೂ ಒಬ್ಬರು. ತನಗಿದ್ದ ಗುರುತರವಾದ ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಇಂತಹ ಸಂಗತಿಗಳಲ್ಲಿ ಮಗ್ನರಾಗಿದ್ದು, ಅವರ ಬದ್ಧತೆಗೆ ಸಾಕ್ಷಿಯಾಗಿದೆ.

          ಲಂಡನ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತವೂ ಸೇರಿದಂತೆ ಹಲವು ವಿಷಯಗಳನ್ನು ಅಧ್ಯಯನ ಮಾಡಿದ ನಂತರ, ಅವರು ಇಂಡಿಯನ್ ಸಿವಿಲ್ ಸರ್ವೀಸಸ್ಗೆ ಆಯ್ಕೆಯಾದರು. 1867ರಲ್ಲಿ, ಮುಂಬಯಿ ಪ್ರಾಂತ್ಯದ ರೆವೆನ್ಯೂ ಇಲಾಖೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ, ಅವರು ಭಾರತಕ್ಕೆ ಬಂದರು. ಮೂವತ್ತು ವರ್ಷಗಳು ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ದುಡಿದರು. 1897 ರಲ್ಲಿ ಕಸ್ಟಮ್ಸ್ ಕಮಿಷನರ್ ಹುದ್ದೆಯಿಂದ ನಿವೃತ್ತರಾದರು. ಅವರು ಕೆಲ ಕಾಲ. ಭಾರತದ ಪ್ರಧಾನ ಶಾಸನಶಾಸ್ತ್ರಜ್ಞರಾಗಿಯೂ(ಚೀಫ್ ಎಪಿಗ್ರಫಿಸ್ಟ್) ಕೆಲಸ ಮಾಡಿದರು.

          ಫ್ಲೀಟ್ ಅವರು ತನ್ನ ಅಧಿಕಾರದ ನಿರ್ವಹಣೆಗಾಲಿ ಪಶ್ಚಿಮ ಭಾರತದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದರು. ಆಗ ಅವರು ದಕ್ಷಿಣ ಮಹಾರಾಷ್ಟ್ರದ ಶಾಸನಗಳ ಅಧ್ಯಯನದಲ್ಲಿ ಆಸಕ್ತರಾದರು. ಐತಿಹಾಸಿಕವಾಗಿ, ಆ ಪ್ರದೇಶವು ಕರ್ನಾಟಕದ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿದ ಜಾಗ.

          ಲಿಖಿತ ಇತಿಹಾಸವನ್ನು ಕಟ್ಟಿಕೊಡಬೇಕೆಂಬ ಅವರ ಆಸಕ್ತಿಗೂ, ಶಾಸನಗಳ ಬಗೆಗಿನ ಅವರ ಒಲವಿಗೂ ನಿಕಟವಾದ ಸಂಬಂಧವಿದೆ. ಏಕೆಂದರೆ, ಐತಿಹಾಸಿಕ ನಿಕರತೆಯಲ್ಲಿ, ಸಾಹಿತ್ಯಕ್ಕೆ ಹೋಲಿಸಿದರೆ ಶಾಸನಗಳೇ ಹೆಚ್ಚು ವಿಶ್ವಸನೀಯವೆನ್ನುವುದು ಅವರ ನಿಲುವು ಅವರಿಗೆ ಸ್ಥಳೀಯವಾದ ಐತಿಹ್ಯಗಳು ಮತ್ತು ನಾಣ್ಯಗಳಿಗಿಂತಲೂ ಶಾಸನಗಳೇ ಮುಖ್ಯ ಆಕರವಾಗಿದ್ದವು. ಆಡಳಿತಕ್ಕೆ ಸಂಬಂಧಿಸಿದ ರಿವಾಜುಗಳು, ಧಾರ್ಮಿಕ ಆಚರಣೆಗಳು ಮತ್ತು ಲಿಪಿಯ ಬೆಳವಣಿಗೆಯನ್ನು ಕಂಡುಕೊಳ್ಳುವುದರಲ್ಲಿ ಶಾಸನಗಳು ನೆರವಾಗುವ ಬಗೆಯನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ತಿಳಿವಳಿಕೆಯ ಫಲವಾಗಿ, ತಾನು ಕಂಡುಹಿಡಿದು ವಿಶ್ಲೇಷಣೆ ಮಾಡಿದ ಶಾಸನಗಳ ಬಗ್ಗೆ ಫ್ಲೀಟ್ ಅವರು ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಅವು ಆ ಪ್ರದೇಶದ ರಾಜಕೀಯ ಇತಿಹಾಸವನ್ನು ಕುರಿತ ನಮ್ಮ ಅರಿವನ್ನು ಹೆಚ್ಚಿಸಿವೆ. ಅವರ ಲೇಖನಗಳು, ಇಂಡಿಯನ್ ಆಂಟಿಕ್ವರಿ, ಜರ್ನಲ್ ಆಫ್ ದಿ ರಾಯಲ್ ಏಶಿಯಾಟಿಕ್ ಸೊಸೈಟಿ ಮುಂತಾದ ಹೆಸರಾಂತ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಫ್ಲೀಟ್ ಅವರು, ಆರ್.ಸಿ. ಟೆಂಪಲ್ ಅವರ ಸಂಗಡ, ಏಳು ವರ್ಷಗಳ ಕಾಲ ಇಂಡಿಯನ್ ಆಂಟಿಕ್ವರಿಯ ಸಂಪಾದಕರಾಗಿದ್ದರು. (1885-1892) ಬಸವಣ್ಣ ಮತ್ತು ಏಕಾಂತ ರಾಮಯ್ಯನವರ ಜೀವನಚರಿತ್ರೆಯ ಮರುರಚನೆಯಲ್ಲಿ, ಅಂತೆಯೇ ಕದಂಬ ರಾಜವಂಶವನ್ನು ಕುರಿತ ಮಾಹಿತಿಗಳ ಶೋಧದಲ್ಲಿ ಫ್ಲೀಟ್ ಅವರ ಕಾಣಿಕೆಯು ಅಮೂಲ್ಯವಾಗಿದೆ.

          Some Sanskrit, Pali and Halakannada Inscriptions’(1878) ಎಂಬ ಕೃತಿಯು ಭಾರತೀಯ ಇತಿಹಾಸದ ಮರುರಚನೆಯಲ್ಲಿ ಕರ್ನಾಟಕದ ಶಾಸನಗಳು ನೀಡಿರುವ ಕೊಡುಗೆಯನ್ನು ನಿರೂಪಿಸುತ್ತದೆ. ‘Dynasties of the Canarese Districts of the Bombay Presidency’ ಮೊದಲು 1882 ರಲ್ಲಿ ಬಾಂಬೆ ಗೆಝೆಟಿಯರ್ ನಲ್ಲಿ ಪ್ರಕಟವಾಯಿತು. ಅದರ ಪುಸ್ತಕರೂಪವು 1895 ರಲ್ಲಿ ಹೊರಬಂತು. ಅದು ಉತ್ತರ ಕರ್ನಾಟಕದ ರಾಜಮನೆತನಗಳಾದ ಕದಂಬರು, ಕಳಚೂರ್ಯರು, ಬಾದಾಮಿ ಚಾಳುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ರಟ್ಟರು ಮತ್ತು ಯಾದವರ ರಾಜಕೀಯ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ‘Corpus Inscriptionum Indicarum’ ಎಂಬ ಶಾಸನ ಸಂಕಲನಗಳ ಸರಣಿಯಲ್ಲಿ, ಗುಪ್ತರ ಕಾಲದ ಶಾಸನಗಳನ್ನು ಸಂಕಲನ ಮಾಡಿದ್ದು ಫ್ಲೀಟ್ ಅವರ ಇನ್ನೊಂದು ಸಾಧನೆ. ಇಂತಹುದೊಂದು ಸರಣಿಯನ್ನು ಪ್ರಕಟಿಸಬೇಕೆಂಬ ಯೋಜನೆಯೇ ಫ್ಲೀಟ್ ಅವರದು.

          ಫ್ಲೀಟ್ ಅವರಿಗೆ ಜ್ಯೋತಿಶ್ಶಾಸ್ತ್ರದಲ್ಲಿ ಅಪಾರ ಆಸಕ್ತಿಯಿತ್ತು. ಈ ಕಲೆಯು, ಶಾಸನಗಳ ಕಾಲನಿರ್ಣಯ ಮಾಡುವ ಕೆಲಸದಲ್ಲಿ ನೆರವಾಯಿತು. ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ಶಾಲಿವಾಹನ ಶಕೆ, ವಿಕ್ರಮಶಕೆ, ಮುಂತಾದುವನ್ನು ಸರಿಯಾಗಿ ಗುರುತಿಸಲು ಅವರಿಗೆ ಸಾಧ್ಯವಾಯಿತು.

          ಜನಪದ ಗೀತೆಗಳು ಮತ್ತು ಲಾವಣಿಗಳನ್ನು ಸಂಗ್ರಹಿಸಿದ್ದು ಫ್ಲೀಟ್ ಅವರ ಮತ್ತೊಂದು ಅನನ್ಯವಾದ ಕೊಡುಗೆ. ಅವರು ಭಾಷಾಸಾಹಿತ್ಯಗಳ ಮೌಖಿಕ ಪರಂಪರೆಯಲ್ಲಿ ಆಸಕ್ತಿಯನ್ನು ತೋರಿಸಿದ್ದನ್ನು ಮೆಚ್ಚಲೇ ಬೇಕು. ಅವರು ಸಂಗೊಳ್ಳಿ ರಾಯಣ್ಣ, ಕಿತ್ತೂರು ಈರವ್ವ ಮುಂತಾದ ವ್ಯಕ್ತಿಗಳ ಬಗೆಗಿನ, ಹಾಗೆಯೇ ನರಗುಂದದ ಬಂಡಾಯ ಮತ್ತು ಬಾದಾಮಿಕೋಟೆಯ ಬಂಡಾಯದಂತಹ ಘಟನೆಗಳ ಬಗೆಗಿನ ಲಾವಣಿಗಳನ್ನು ಸಂಗ್ರಹಿಸಿದ್ದಾರೆ. ಬ್ರಿಟಿಷ್ ಸರ್ಕಾರವು ನಿಶ್ಶಸ್ತ್ರೀಕರಣದ ಕಾಯಿದೆಯನ್ನು ಜಾರಿಗೆ ತಂದಾಗ ಹಲಗಲಿಯೆಂಬ ಗ್ರಾಮದ ಬೇಡರ ಸಮುದಾಯವು ಪಟ್ಟ ಪಾಡನ್ನು, 'ಹಲಗಲಿಯ ಬೇಡರ ಲಾವಣಿ'ಯು ದಾಖಲೆ ಮಾಡುತ್ತದೆ. ಬ್ರಿಟಿಷ್ ಆಳ್ವಿಕೆಗೆ ನೇರವಾದ ಪ್ರತಿಭಟನೆ ತೋರಿಸುವ ಇಂತಹ ಲಾವಣಿಗಳನ್ನು ಸಂಗ್ರಹಿಸಿದ್ದು, ಫ್ಲೀಟ್ ಅವರ ವಸ್ತುನಿಷ್ಠ ಧೋರಣೆಗೆ ಸಾಕ್ಷಿಯಾಗಿದೆ. ಇಂಗ್ಲೆಂಡಿಗೆ ಹಿಂದಿರುಗಿದ ನಂತರವೂ ಅವರು ಲಂಡನ್ ಏಷಿಯಾಟಿಕ್ ಸೊಸೈಟಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.    

            ಹೀಗೆ ಫ್ಲೀಟ್ ಅವರು ಕರ್ನಾಟಕದ ಶಾಸನಗಳ ಅಧ್ಯಯನ ಮತ್ತು ಇತಿಹಾಸ ರಚನೆಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಅವರ ಕೆಲಸವು, ಹಳೆಯ ಮೈಸೂರು ಸಂಸ್ಥಾನದಲ್ಲಿ ಬಿ.ಎಲ್.ರೈಸ್ ಅವರ ಮಹತ್ವದ ಸಾಧನೆಗೆ ಸಮಾನವಾದುದು.

                          ಮುಖಪುಟ / ಸಂಶೋಧಕರು