ಸಂಶೋಧಕರು
ಬುಖನನ್-ಹ್ಯಾಮಿಲ್ಟನ್ ಫ್ರಾನ್ಸಿಸ್, 1762-1829

          ಬ್ರಿಟಿಷ್ ಸರ್ಕಾರವು, ಭಾರತಕ್ಕೆ ಕಳಿಸಿದ ಅಧಿಕೃತ ಪ್ರವಾಸಿಗಳಲ್ಲಿ ಬುಖನನ್ ಕೂಡ ಒಬ್ಬರು. ಈ ದೇಶದ ಕೆಲವು ಭಾಗಗಳಲ್ಲಿ ಸಂಚರಿಸಿ, ತಾನು ಪಡೆದ ಅನುಭವಗಳನ್ನು ಮತ್ತು ಗಮನಿಸಿದ ಸಂಗತಿಗಳನ್ನು ದಾಖಲೆ ಮಾಡುವುದು ಅವರಿಗೆ ಕೊಡಲಾಗಿದ್ದ ಕೆಲಸ.  ವಿದ್ಯಾಭ್ಯಾಸ ಮತ್ತು ತರಬೇತಿಗಳ ನೆಲೆಯಲ್ಲಿ ವೈದ್ಯರಾಗಿದ್ದರೂ ಅವರು ಇಲ್ಲಿ ನಿರ್ವಹಿಸಿದ ಕೆಲಸಗಳು ಬೇರೆ ಬಗೆಯವು. ಭೂಗೋಳ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳಲ್ಲಿ ಪರಿಣಿತರಂತೆ ಬುಕನನ್ ಅವರು ಕರ್ತವ್ಯ ನಿರ್ವಹಿಸಿದರು. ತಾವು ಪ್ರವಾಸಮಾದಿದ ಪ್ರದೇಶಗಳ ಪರಿಸರ, ಜನಜೀವನ, ಆಚರಣೆಗಳು ಮುಂತಾದ ಸಂಗತಿಗಳನ್ನು ಬಹಳ ವಿವರವಾಗಿ ಗಮನಿಸಿ, ದಾಖಲೆ ಮಾಡಲು ಅವರಿಗೆ ಸಾಧ್ಯವಾಯಿತು. ಈಸ್ಟ್ ಇಂಡಿಯಾ ಕಂಪನಿಯು, ಆ ಪ್ರದೇಶಗಳ ಭೂಲಕ್ಷಣಗಳು, ಇತಿಹಾಸ, ಧರ್ಮ, ಪ್ರಾಚೀನ ಸ್ಮಾರಕಗಳು, ನೈಸರ್ಗಿಕ ುತ್ಪನ್ನಗಳು ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಕುರಿತ ವರದಿಯನ್ನು ಸಿದ್ಧಪಡಿಸುವ ಕೆಲಸವನ್ನು ಬುಖನನ್ ಅವರಿಗೆ ವಹಿಸಿತು. ಮೊದಲಿನಿಂದಲೂ ಅವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕೆಲಕಾಲದ ನಂತರ, ದಕ್ಷಿಣಭಾರತದಲ್ಲಿ ಪ್ರವಾಸ ಮಾಡುವಾಗ, ಈ ಅನುಭವವು ಅವರ ನೆರವಿಗೆ ಬಂತು.  ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟೀಪೂಸುಲ್ತಾನ್ ಸೋಲನ್ನು ಅನುಭವಿಸಿದ ನಂತರ, ಬುಖನನ್ ಗೆ, ದಕ್ಷಿಣ ಬಾರತದಲ್ಲಿ ಕೆಲಮಾಡುವ ಈ ಜವಾಬ್ದಾರಿಯನ್ನು ಕೊಡಲಾಯಿತು. ತನ್ನ ಆಡಳಿತದಲ್ಲಿರುವ ಪ್ರದೇಶಗಳನ್ನು ಕುರಿತ ಆಳವಾದ ತಿಳಿವಳಿಕೆಯಿಲ್ಲದೆ, ಆಳ್ವಿಕೆಯನ್ನು ನಡೆಸುವುದು ಅಸಾಧ್ಯವೆಂಬ ತಿಳಿವಳಿಕೆ ಬ್ರಿಟಿಷರಿಗೆ ಇತ್ತು. ಇಂಥ ಮಾಹಿತಿಸಂಗ್ರಹದ ಕೆಲಸದಲ್ಲಿ ಅವರು ಅನೇಕ ವಿದ್ವಾಂಸರನ್ನು ನಿಯೋಜಿಸಿದ್ದರು. 

          ಅದೇನೇ ಇರಲಿ, ಬುಖನನ್ ಅವರು ಈ ಪ್ರವಾಸವನ್ನು ಕ್ರಿ.ಶ. 1800 ರಲ್ಲಿ ಪ್ರಾರಂಭಿಸಿದರು, ಸತತವಾಗಿ ಒಂದು ವರ್ಷದವರೆಗೆ, ಇಂದಿನ ತಮಿಳುನಾಡು, ಆಂಧ್ರ ಮತ್ತು ಕರ್ನಾಟಕಗಳಲ್ಲಿ ಪ್ರವಾಸ ಮಾಡಿದರು. ಈ ಪಯಣವು ಮದ್ರಾಸಿನಲ್ಲಿ ಮೊದಲಾಗಿ ಅಲ್ಲಿಯೇ ಮುಕ್ತಾಯವಾಯಿತು. ಅವರು, ಸುಮಾರು 1500 ಪುಟಗಳಷ್ಟು ದೀರ್ಘವಾದ ವರದಿಯನ್ನು ಸಿದ್ಧಪಡಿಸಿದರು. ಅದು ಇಂದಿಗೂ ಪ್ರಸ್ತುತವಾಗಿದೆ. ಕರ್ನಾಟಕದ ಟೇಕಲ್, ಮಾಲೂರು, ದೊಡ್ಡಬಳ್ಳಾಪುರ, ಸಿರಾ, ಮಂಗಳೂರು, ಬಿದನೂರು, ಸೋಂದಾ, ಇಕ್ಕೇರಿ ಮತ್ತು ಹಿರಿಯೂರುಗಳು ಅವರು ಅಧ್ಯಯನ ಮಾಡಿದ ಸ್ಥಳಗಳಲ್ಲಿ ಮುಖ್ಯವಾದವು. ದಿನಚರಿಯ ರೂಪದಲ್ಲಿ ದಾಖಲೆಯಾಗಿದ್ದ  ಈ ಅನುಭವಗಳನ್ನು ಇಂಗ್ಲೆಂಡಿಗೆ ಕಳಿಸಲಾಯಿತು. ಅಲ್ಲಿ ಆ ಮಾಹಿತಿಭಂಡಾರವನ್ನು ಡಾ. ವಿಲ್ಕಿನ್ಸ್ ಅವರು ಪರಿಶೀಲಿಸಿದರು, ಅವರಿಗೆ ಬುಖನನ್ ಮಾಡಿದ್ದ ಕೆಲಸದ ಮಹತ್ವವು ಗೊತ್ತಾಯಿತು. ಅದನ್ನು ಆ ಕೂಡಲೇ ಮುದ್ರಿಸಿ ಪ್ರಕಟಿಸಬೇಕೆಂದು ಅವರು ತೀರ್ಮಾನಿಸಿದರು. ಹೀಗೆ ಬುಖನನ್ ಅವರ ಸಮಗ್ರ ಬರವಣಿಗೆಯು ಯಾವುದೇ ಮರುಪರಿಶೀಲನೆಯಾಗಲೀ ಬದಲಾವಣೆಯಾಗಲೀ ಇಲ್ಲದೆ, 1807 ರಲ್ಲಿ ಪ್ರಕಟವಾಯಿತು. A Journey from Madras through the countries of Mysore, Canara and Malabar’ ಆ ಪುಸ್ತಕದ ಶೀರ್ಷಿಕೆ. ಕುತೂಹಲದ ಸಂಗತಿಯೆಂದರೆ, ಬುಖನನ್ ಗೆ ಈ ಪ್ರಕಟಣೆಯ ವಿಷಯವು ಗೊತ್ತೇ ಇರಲಿಲ್ಲ.

          ಈ ಪುಸ್ತಕದಲ್ಲಿ ಇಪ್ಪತ್ತು ಅಧ್ಯಾಯಗಳಿವೆ. ಸಂಬಂಧಪಟ್ಟ ಪ್ರದೇಶಗಳ ಸಸ್ಯಗಳು, ಪ್ರಾಣಿಗಳು, ಆಹಾರ ಮತ್ತು ವಾಣಿಜ್ಯ ಬೆಳೆಗಳು, ಪ್ರಾಣಿಸಾಕಾಣಿಕೆಯ ವಿವರಗಳು, ಹವಾಗುಣ, ಗಣಿಗಾರಿಕೆ, ಹಬ್ಬಗಳು ಮತ್ತು ಇತರ ಆಚರಣೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ವಿವರವಾಗಿ ದಾಖಲಿಸಲಾಗಿದೆ. ಮಾಹಿತಿಯನ್ನು ಕೋಷ್ಟಕಗಳು ಹಾಗೂ ರೇಖಾಚಿತ್ರಗಳ ಸ್ವರೂಪದಲ್ಲಿಯೂ ಕೊಡಲಾಗಿದೆ. ಅನಂತರ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ  ಸಿ. ಹಯವದನರಾವ್, ಬಿ.ಕೃಷ್ಣಯ್ಯಂಗಾರ್, ಬಿ.ಎಲ್. ರೈಸ್ ಮುಂತಾದ ವಿದ್ವಾಂಸರಿಗೆ ಈ ಪುಸ್ತಕವು ಅಮೂಲ್ಯವಾದ ಮಾಹಿತಿಮೂಲವಾಯಿತು. ಬುಖನನ್ ಅವರು, ಕರ್ನಾಟಕದಲ್ಲಿ ತನ್ನ ಗಮನಕ್ಕೆ ಬಂದ ಅನೇಕ ಶಿಲಾಶಾಸನಗಳು ಮತ್ತು ತಾಮ್ರಶಾಸನಗಳನ್ನು ನಕಲು ಮಾಡಿಸಿ, ಕಲ್ಕತ್ತಾಗೆ ಕಳಿಸಿದರು. ಕರ್ನಾಟಕದ ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಕಡತಗಳನ್ನು ಅವರು ಸಂಗ್ರಹಿಸಿದರು. ಹಿರಿಯ ವಿದ್ವಾಂಸರಾದ ಶ್ರೀನಿವಾಸ ಹಾವನೂರು ಅವರು ಬುಖನನ್ ತೋರಿಸಿದ ಚಾರಿತ್ರಕಪ್ರಜ್ಞೆ ಮತ್ತು ನಿಕರವಾದ ಮಾಹಿತಿಗಳ ಸಂಗ್ರಹದಲ್ಲಿ ಅವರು ತೋರಿಸಿದ ಆಸ್ಥೆಯನ್ನು ಮನದುಂಬಿ ಹೊಗಳಿದ್ದಾರೆ. The Tiger and the Thistle- Tipu Sultan and the Scots in India) ಎನ್ನುವುದು ಬುಖನನ್ ಅವರು ಬರೆದ ಮತ್ತೊಂದು ಪುಸ್ತಕ.   

                          ಮುಖಪುಟ / ಸಂಶೋಧಕರು