ಸಂಶೋಧಕರು
ಬಸವನಾಳ ಎಸ್. ಎಸ್., 1893-1951

ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಅವರು ಕನ್ನಡದ ದೊಡ್ಡ ವಿದ್ವಾಂಸರು. ಅವರು ಶಿಕ್ಷಣ, ಪತ್ರಿಕೋದ್ಯಮ ಮತ್ತು ಸಮಾಜಸೇವೆಯಂತಹ ಕ್ಷೇತ್ರಗಳಲ್ಲಿಯೂ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಆ ದಿನಗಳಲ್ಲಿ ಇಂದಿನ ಉತ್ತರ ಕರ್ನಾಟಕವು ಮುಂಬೈ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಆ ಪ್ರದೇಶದಲ್ಲಿ, ಕನ್ನಡ ನವೋದಯಕ್ಕಾಗಿ ಕೆಲಸಮಾಡಿದ ಮುಖಂಡರಲ್ಲಿ ಬಸವನಾಳರು ಅಗ್ರಗಣ್ಯರು.

ಬಸವನಾಳರು ಹುಟ್ಟಿದ್ದು ಧಾರವಾಡದಲ್ಲಿ. ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಎಂ.ಎ. ಪದವಿಯನ್ನು ಪಡೆದರು. ಸರ್ಕಾರೀ ಕೆಲಸಕ್ಕೆ ಸೇರಿಕೊಳ್ಳುವ ಅವಕಾಶವನ್ನು ನಿರಾಕರಿಸಿ, ಸಮಾಜಸೇವೆ ಮತ್ತು ವೀರಶೈವ ಸಮುದಾಯದ ಏಳಿಗೆಗಾಗಿ ತಮ್ಮ ಜೀವಮಾನವನ್ನೇ ಮುಡುಪಿಡಲು ಅವರು ತೀರ್ಮಾನಿಸಿದರು. ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿಯ ಸ್ಥಾಪಕರಾದ ಬಸವನಾಳರು, ಆ ಸಂಸ್ಥೆಯ ವತಿಯಿಂದ ಧಾರವಾಡ, ಸೊಲ್ಲಾಪುರ ಮತ್ತು ಬೆಳಗಾವಿಗಳಲ್ಲಿ ಪ್ರೌಢಶಾಲೆಗಳನ್ನು ಪ್ರಾರಂಭಿಸಿದರು. ಬೆಳಗಾವಿಯ ಪ್ರಸಿದ್ಧ ಶಿಕ್ಷಣ ಲಿಂಗರಾಜ ಕಾಲೇಜುಕೂಡ ಈ ಸಂಸ್ಥೆಯಿಂದಲೇ ಪ್ರಾರಂಭವಾಯಿತು.(1923) ಬಸವನಾಳರು ಧಾರಾವಾಡದ ಆರ್.ಎಲ್.ಎಸ್. ಪ್ರೌಢಶಾಲೆಯ ಮುಖ್ಯ ಅಧ್ಯಾಪಕರೂ ಲಿಂಗರಾಜ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಇತಿಹಾಸಗಳ ಉಪನ್ಯಾಸಕರೂ ಆಗಿದ್ದರು. ಅವರು ವೀರಶೈವ ತರುಣಸಂಘವನ್ನು ಸ್ಥಾಪಿಸಿ, ಅದರ ಆಶ್ರಯದಲ್ಲಿ ಹೊರಬರುತ್ತಿದ್ದಪ್ರಬೋಧ ಮಾಸಪತ್ರಿಕೆಯ ಸಂಪಾದಕರಾದರು.(1918) ಎಚ್.ಎಫ್. ಕಟ್ಟೀಮನಿಯವರು ಆ ಪತ್ರಿಕೆಯ ಸಹ ಸಂಪಾದಕರಾಗಿದ್ದರು. ಹಾಗೆಯೇ, ಬಸವನಾಳರು ಜಯಕರ್ನಾಟಕ ಪತ್ರಿಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಕೆಲ ಕಾಲ ಅದರ ಸಂಪಾದಕರೂ ಆಗಿದ್ದರು.

ಬಸವನಾಳರು ಗ್ರಂಥಸಂಪಾದನೆ ಮತ್ತು ಸಾಹಿತ್ಯವಿಮರ್ಶೆಗಳಲ್ಲಿ ಬಹಳ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ. ಅವರಿಗೆ, ಕನ್ನಡ, ಇಂಗ್ಲಿಷ್ ಮತ್ತು ಮರಾಠೀ ಭಾಷೆಗಳ ಮೇಲೆ ಪ್ರಭುತ್ವವಿತ್ತು. ಅವರು ಸಂಪಾದನೆ ಮಾಡಿದ ಕೆಲವು ಮಹತ್ವದ ಕೃತಿಗಳ ವಿವರಗಳು ಈ ರೀತಿ ಇವೆ:

 1. ಕಾವ್ಯಾವಲೋಕನ, ನಾಗವರ್ಮ
 2. ಚೆನ್ನಬಸವಪುರಾಣ, ವಿರೂಪಾಕ್ಷಪಂಡಿತ
 3. ಪ್ರಭುಲಿಂಗಲೀಲೆ, ಚಾಮರಸ
 4. ಕೈವಲ್ಯಪದ್ಧತಿ, ನಿಜಗುಣ ಶಿವಯೋಗಿ
 5. ಶಬರಶಂಕರವಿಲಾಸ, ಷಡಕ್ಷರದೇವ
 6. ಬಸವಣ್ಣನವರ ಷಟ್ಸ್ಥಳದ ವಚನಗಳು
 7. ರೇವಣಸಿದ್ದೇಶ್ವರದೇವರ ರಗಳೆ
 8. ಪಂಪಾಶತಕ, ಹರಿಹರ
 9. ಕರ್ನಾಟಕ ಶಬ್ದಾನುಶಾಸನ ಪ್ರಕಾಶಿಕೆ
 10. ಮೈಲಾರದ ಬಸಲಿಂಗಶರಣರ ಕೃತಿಗಳು
 11. ಕೈವಲ್ಯ ಕಲ್ಪವಲ್ಲರಿ, ನಿಜಗುಣ ಶಿವಯೋಗಿ
 12. ವೀರಶೈವ ತತ್ವಪ್ರಕಾಶನ, (ಸಂಕಲನ ಗ್ರಂಥ)

ಮ್ಯೂಸಿಂಗ್ಸ್ ಆಫ್ ಬಸವಣ್ಣ’ (Musings of Basavanna) ಎನ್ನುವುದು ಬಸವಣ್ಣನವರ ಕೆಲವು ವಚನಗಳ ಇಂಗ್ಲಿಷ್ ಅನುವಾದ. ಈ ಅನುವಾದದ ಕೆಲಸವನ್ನು ಬಸವನಾಳ ಮತ್ತ ಕೆ.ಆರ್. ಶ್ರೀನಿವಾಸ ಅಯ್ಯಂಗಾರ್ ಅವರು ನಿರ್ವಹಿಸಿದ್ದಾರೆ.

   ಈ ಎಲ್ಲ ಕೃತಿಗಳಿಗೆ, ಬಸವನಾಳರು ನೀಡಿರುವ ಪ್ರವೇಶಿಕೆಗಳು ಹಾಗೂ ಪೂರಕ ಮಾಹಿತಿಗಳು ವಿದ್ವತ್ಪೂರ್ಣವಾಗಿವೆ. ಅವುಗಳಲ್ಲಿ ಅನೇಕ ಮಹತ್ದದ ಒಳನೋಟಗಳಿವೆ. ಬಸವಣ್ಣವರ ಷಟ್ಸ್ಥಳದ ವಚನಗಳ ಸಂಗ್ರಹಕ್ಕೆ ಅವರು ಬರೆದಿರುವ ಮುನ್ನುಡಿಯನ್ನು ವಿಶೇಷವಾಗಿ ಹೆಸರಿಸಬೇಕು. ಅದು, ಪ್ರಾಚೀನ ಸಾಹಿತ್ಯದ ಬಗೆಗಿನ ಆಳವಾದ ತಿಳಿವಳಿಕೆ ಮತ್ತು ಆಧುನಿಕ ಜ್ಞಾನಶಿಸ್ತುಗಳ ಮೇಲಿನ ಪ್ರಭುತ್ವಗಳ ಅತ್ಯುತ್ತಮ ಸಂಯೋಜನೆಯಾಗಿದೆ. ಅವರು ವಚನಗಳನ್ನು ಶೈಲಿಶಾಸ್ತ್ರ, ಛಂದಸ್ಸು ಮತ್ತು ಕಾವ್ಯಮೀಮಾಂಸೆಗಳ ನೆಲೆಯಲ್ಲಿ ಪರಿಶೀಲಿಸಿದ್ದಾರೆ. ಅಗ, ಕನ್ನಡದ ಸಂದರ್ಭದಲ್ಲಿ ಅಂತಹ ಅಧ್ಯಯನಗಳು ಶೈಶವಾವಸ್ಥೆಯಲ್ಲಿದ್ದವು. ವಚನಗಳನ್ನು, ಲಯವಿನ್ಯಾಸ ಮತ್ತು ಅರ್ಥಘಟಕಗಳ ಆಧಾರದ ಮೇಲೆ, ವಿಭಿನ್ನ ಸಾಲುಗಳಾಗಿ ಒಡೆದು ಮುದ್ರಿಸುವ ಕೆಲಸವನ್ನು ಅವರೇ ಪ್ರಾರಂಭಿಸಿದರೆಂದು ಹೇಳಲಾಗಿದೆ. ಅದುವರೆಗೆ, ಅವುಗಳನ್ನು ಸಾಲುಗಳಾಗಿ ವಿಂಗಡಿಸದೆ ಒಂದೇ ಸಮನೆ ಬರೆಯುವ ಪದ್ಧತಿ ಇತ್ತು. ಈ ಹೊಸ ಉಪಕ್ರಮವು ವಚನಗಳ ಓದಿಗೆ ನೂತನ ಆಯಾಮವನ್ನು ನೀಡಿತು. ಕೆಲವು ವಚನಗಳನ್ನು ಬಸವನಾಳರು ವಿಶ್ಲೇಷಣೆ ಮಾಡಿರುವ ರೀತಿಯು ಪ್ರಾಯೋಗಿಕ ವಿಮರ್ಶೆಯ ಒಳ್ಳೆಯ ಮಾದರಿಯಾಗಿದೆ.

                          ಮುಖಪುಟ / ಸಂಶೋಧಕರು