| 
                                 
                                    ಕೆಳದಿಯು, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಉತ್ತರ
                                        ದಿಕ್ಕಿನಲ್ಲಿ, ಸುಮಾರು ಎಂಟು ಕಿಲೋಮೀಟರುಗಳ ದೂರದಲ್ಲಿರುವ ಚಿಕ್ಕ ಹಳ್ಳಿ. ಅದು ಮಧ್ಯಕಾಲೀನ
                                            ಕರ್ನಾಟಕದಲ್ಲಿ ಪ್ರಸಿದ್ಧವಾದ ಅರಸೊತ್ತಿಗೆಯೊಂದರ ರಾಜಧಾನಿಯಾಗಿತ್ತು. ಈ ಪಟ್ಟಣವು ಹನ್ನೆರಡನೆಯ ಶತಮಾನದಲ್ಲಿ,
                                                    ಸಾಂತರ ರಾಜವಂಶಕ್ಕೆ ಸೇರಿದ ಅರಸರ ನಿಯಂತ್ರಣದಲ್ಲಿತ್ತು. ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸ
                                                    ಎನ್ನುವವನು ಸ್ಥಾಪಿಸಿದ, ಈಗ ಜೀರ್ಣಾವಸ್ಥೆಯಲ್ಲಿರುವ ಶಾಸನವು ಈ ಮಾತಿಗೆ ಪುರಾವೆಯಾಗಿದೆ. ಹದಿನಾರನೆಯ
                                                    ಶತಮಾನದ ಮೊದಲ ಭಾಗದಲ್ಲಿ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಈ ಊರಿಗೆ ಹೆಚ್ಚಿನ ಮಹತ್ವ ಬಂತು.
                                                        ಆಗ, ಕೃಷ್ಣದೇವರಾಯನು ಕೆಳದಿ ರಾಜವಂಶದ ಸ್ಥಾಪಕನಾದ ಚೌಡೇಗೌಡನಿಗೆ ಒಂದಷ್ಟು ಭೂಮಿಯನ್ನು ಕೊಟ್ಟು,
                                                        ಅವನು ತನಗೆ ಅಧೀನನಾದ ಪಾಳೆಯಗಾರನೆಂದು ಘೋಷಿಸಿದನು. ಅರವತ್ತು ವರ್ಷಗಳವರೆಗೆ ಕೆಳದಿಯೇ ರಾಜಧಾನಿಯಾಗಿ
                                                        ಮುಂದುವರೆಯಿತು. ಕಾಲಕ್ರಮದಲ್ಲಿ ಇಕ್ಕೇರಿ ಮತ್ತು ಬಿದನೂರುಗಳು ರಾಜಧಾನಿಗಳಾದವು. ಆದರೂ ಕೆಳದಿಯು
                                                        ತನ್ನ ವೈಭವವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿಲ್ಲ. ಅದರ ಬಗೆಗಿನ, ರಾಜರುಗಳ ಆಸಕ್ತಿಯು ಕುಂದಲಿಲ್ಲ.
                                                        ಹಳೆಯ ನಗರದ ವೈಭವದ ಕುರುಹುಗಳಾದ ನಿವೇಶನಗಳು, ಕೊಳಗಳು, ದೇವಾಲಯಗಳು, ಮತ್ತು ಮಠಗಳು ಇಂದಿಗೂ ಕಾಣಸಿಗುತ್ತವೆ.
                                                        ಕೆಳದಿಯಲ್ಲಿ, ಒಂದೇ ಪ್ರಾಕಾರದಲ್ಲಿರುವ, ಆದರೆ, ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರಾಜರುಗಳಿಂದ
                                                        ನಿರ್ಮಿತವಾದ ಮೂರು ದೇವಾಲಯಗಳಿವೆ. ಅವು ರಾಮೇಶ್ವರ, ವೀರಭದ್ರ ಮತ್ತು ಪಾರ್ವತಿ ದೇವಾಲಯಗಳು. ರಾಜವಂಶದ
                                                        ಸ್ಥಾಪಕನಾದ ಚೌಡೇಗೌಡನು ರಾಮೇಶ್ವರಲಿಂಗವನ್ನು ಒಂದು ಚಿಕ್ಕ ಕಟ್ಟಡದಲ್ಲಿ ಪ್ರತಿಷ್ಠಾಪಿಸಿದನು. ಆದರೆ,
                                                        ಅದು ವಾಸ್ತುವೈಭವವನ್ನು ಪಡೆದುಕೊಂಡಿದ್ದು, ಹದಿನೇಳನೆಯ ಶತಮಾನದಲ್ಲಿ ಆಳಿದ, ಸದಾಶಿವನಾಯಕ ಮತ್ತು
                                                        ಹಿರಿಯ ವೆಂಕಟಪ್ಪನಾಯಕರ ಕಾಲದಲ್ಲಿ. ಆ ಗುಡಿಯಲ್ಲಿ ಹೊಯ್ಸಳ, ದ್ರಾವಿಡ ಮತ್ತು ಇಸ್ಲಾಮಿಕ್ ಶೈಲಿಗಳ
                                                        ಸಂಯೋಜನೆಯಿದೆ. ಇಡೀ ದೇವಾಲಯವು ಒಂದು ವೇದಿಕೆಯ ಮೇಲೆ ನಿಂತಿದೆ. ಅದರಲ್ಲಿ ಚಿತ್ರಗಳೂ ಇವೆ, ಕೆತ್ತನೆಗಳೂ
                                                        ಇವೆ. ಅವುಗಳಲ್ಲಿ ಬೇಡರ ಕಣ್ಣಪ್ಪ, ಗರುಡ, ಹನುಮಂತ ಮುಂತಾದವರ ಬದುಕಿನ ಘಟನೆಗಳ ನಿರೂಪಣೆಯಿದೆ. ಆನೆ,
                                                        ಒಂಟೆಗಳಂತಹ ವಾಸ್ತವಿಕ ಪ್ರಾಣಿಗಳು ಮಾತ್ರವಲ್ಲದೆ, ಗಂಡಭೇರುಂಡ, ಯಾಳಿಗಳಂತಹ ಕಾಲ್ಪನಿಕ ಪ್ರಾಣಿಗಳಿಗೂ
                                                        ಇಲ್ಲಿ ಅವಕಾಶ ಸಿಕ್ಕಿದೆ.
                                    
                                 
                                
                                    ಈ ದೇವಾಲಯದ ಮುಖಮಂಟಪ, ರಂಗಮಂಟಪ ಮತ್ತು
                                        ಗರ್ಭಗುಡಿಗಳ ಸುತ್ತಲೂ ಇನ್ನೊಂದು ಮಂಟಪಗಳ ಸಮುದಾಯವನ್ನು ಕಟ್ಟಲಾಗಿದೆ. ಇವು ದ್ರಾವಿಡ ಶೈಲಿಯಲ್ಲಿವೆ.
                                        ಇಲ್ಲಿ ಮಹಿಷಾಸುರಮರ್ದಿನಿ ಮತ್ತು ಗಣೇಶರ ವಿಗ್ರಹಗಳನ್ನು ನೋಡಬಹುದು. ರಾಮೇಶ್ವರ ಲಿಂಗವು ಮೂರು ಅಡಿ
                                        ಎತ್ತರ ಇದೆ. ಈ ದೇವಸ್ಥಾನದ ನಿರ್ಮಾಣದ ವಿವಿಧ ಹಂತಗಳನ್ನು ಲಿಂಗಣ್ಣಕವಿಯು ಬರೆದಿರುವ 
                                    ‘ಕೆಳದಿನೃಪವಿಜಯ’ದಲ್ಲಿ
                                            ವಿವರಿಸಲಾಗಿದೆ. 
                                 
                                
                                    ರಾಮೇಶ್ವರ ದೇವಾಲಯದ ನಂತರ ನಿರ್ಮಾಣವಾದ
                                        ವೀರಭದ್ರನ ಗುಡಿಯು, ಅದೇ ಬಗೆಯ ರಚನೆಯನ್ನು ಹೊಂದಿದ್ದರೂ ಅಲ್ಲಿರುವ ಶಿಲ್ಪಗಳ ಸಂಖ್ಯೆ ಜಾಸ್ತಿ. ದೇವಾಲಯದ
                                        ಹೊರಗೋಡೆಯಲ್ಲಿ ಕೊರೆದಿರುವ ವಾಸ್ತುಪುರುಷನ ಶಿಲ್ಪವು ಅನನ್ಯವಾದುದು. ಹಾಗೆಯೇ ದಕ್ಷಬ್ರಹ್ಮ ಮತ್ತು
                                        ನರಸಿಂಹರ ಪ್ರತಿಮೆಗಳೂ ಕುತೂಹಲಕರವಾಗಿವೆ. ಈ ದೇವಾಲಯದ ಒಳಭಾಗದ ಛತ್ತಿನಲ್ಲಿ(ಸೀಲಿಂಗ್) ಬಹಳ ಸೂಕ್ಷ್ಮವೂ
                                        ಸುಂದರವೂ ಆದ ಕೆತ್ತನೆಗಳಿವೆ. ಅದರಲ್ಲಿಯೂ ಗಂಡಭೇರುಂಡದ ಶಿಲ್ಪವು ಬಹಳ ಪರಿಣಾಮಕಾರಿಯಾಗಿದೆ. ಈ ದೇವಸ್ಥಾನವನ್ನು
                                        ಕಟ್ಟಿಸಿದವನು ಭದ್ರಪ್ಪನಾಯಕ. ಪಾರ್ವತಿ ದೇವಾಲಯದಲ್ಲಿ ಏನೂ ವಿಶೇಷವಿಲ್ಲ.
                                        
                                 
                                
                                    ಕೆಳದಿಯಲ್ಲಿ ಆಂಜನೇಯ, ವೆಂಕಟರಮಣ, ಗೋಪಾಲಕೃಷ್ಣ,
                                        ವೀರಭದ್ರರ ದೇವಾಲಯಗಳೂ ಒಂದು ಜೈನ ಬಸದಿಯೂ ಇವೆ. ಕೆಳದಿಯ ಕೊಳವು ಸಾಕಷ್ಟು ದೊಡ್ಡದು. ಅಲ್ಲಿ ಕೆಳದಿಗೆ
                                        ಸಂಬಂಧಿಸಿದ ಸ್ಮಾರಕಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸುವ ಚಿಕ್ಕ ವಸ್ತುಸಂಗ್ರಹಾಲಯವೂ ಇದೆ.
                                    
                                 
                             |