ಪ್ರಮುಖ ಸ್ಥಳಗಳು
ಬಿಜಾಪುರ

ಬಿಜಾಪುರವು ಕರ್ನಾಟಕದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ. ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಾಪುರ ಎಂಬ ಹೆಸರನ್ನೇ ಬಳಸುತ್ತಾರೆ.

ಬಿಜಾಪುರವು ಬೆಂಗಳೂರಿನಿಂದ 580 ಮತ್ತು ಸೊಲ್ಲಾಪುರದಿಂದ ಸುಮಾರು 100 ಕಿಲೋಮೀಟರುಗಳ ದೂರದಲ್ಲಿದೆ. ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ.

ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ಬಿಜಾಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ಬಿಜಾಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಮುಖ್ಯರು. ವಿಜಯನಗರ ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಷ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ಬಿಜಾಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬೈ ಪ್ರೆಸಿಡೆನ್ಸಿಗೆ ಸೇರಿಸಿದರು.

ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಬಿಜಾಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ.

ಈ ಕಿರು ಬರೆಹದಲ್ಲಿ, ಬಿಜಾಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪೂರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ಬಿಜಾಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 1820 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ. ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ. ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ. ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲ್ ನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುಬ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ಇಲ್ಲಿರುವ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ. ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ.

ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.

ಅರಾಕಿಲ್ಲಾ, ನಗರದ ಮಧ್ಯದಲ್ಲಿರುವ ಒಳಕೋಟೆ. ಆನಂದಮಹಲ್ 1589 ರಲ್ಲಿ ಇಬ್ರಾಹಿಂ ಆದಿಲ್ ಷಾ ಕಟ್ಟಿಸಿದ ಅರಮನೆ. ಗಗನಮಹಲ್ 1561 ರಲ್ಲಿ ನಿರ್ಮಿತವಾದ ರಾಜಾಸ್ಥಾನ. ಅಸರ್ ಮಹಲ್, ಇನ್ನೊಂದು ಮುಖ್ಯವಾದ ಸ್ಮಾರಕ. ಮೆಕ್ಕಾ ಮಸೀದಿ, ಜಾಮೀ ಮಸೀದಿ, ಯಾಕುಬ್ ದಾಬುಲೀ ಮಸೀದಿ ಮತ್ತು ಐನ್ ಉಲ್ ಮುಲ್ಕ್ ಮಸೀದಿಗಳು ನಗರದ ಬೇರೆ ಬೇರೆ ಭಾಗಗಳಲ್ಲಿ ಇರುವ ಮುಖ್ಯವಾಧ ಪ್ರಾರ್ಥನಾಮಂದಿರಗಳು. ನಗರದಿಂದ ಐದು ಮೈಲಿ ದೂರದಲ್ಲಿರುವ ಬಾರಾ ಕಮಾನು ಅಪೂರ್ಣವಾದ ನಿರ್ಮಿತಿ. ಅದಕ್ಕೆ ಹನ್ನೆರಡು ಕಮಾನುಗಳಿವೆ.

ಮಾಲಿಕ್ ಎ ಮೈದಾನ್’, ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಳ್ಲಿರುವ ಶಾಸನಗಳಿವೆ. ಕರ್ನಾಟಕದಲ್ಲಿರುವ

ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಮೆಹ್ತರ್ ಮಹಲ್ ಇನ್ನೊಂದು ಚಿಕ್ಕದಾದರೂ ಬಹಳ ಸುಂದರವಾದ ರಚನೆ.

ಬಿಜಾಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ಬಿಜಾಫುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ.

ಮುಂದಿನ ಓದು ಮತ್ತು ಲಿಂಕುಗಳು:

  1. Sufis of Bijapur, 1300-1700: Social Roles of Sufis in Medieval India (Hardcover) by Richard M. Eaton , published by Princeton Univ Pr (1978)
  2. The New Cambridge History of India: Architecture and Art of the Deccan Sultanates By George, Michell
  3. ‘Karnatakada Sufigalu’ by Rahamath Tarikere, Kannada University, Hampi.
  4. Indian Islamic Architecture: Forms and Typologies, Sites and Monuments J Burton, 2007 - Brill Academic Publishers.
  5. A History of Karnataka: From Pre-history to Unification by P.B. Desai, 1970, Kannada Research Institute, Karnatak University
  6. Bijapur Web Site Main Page

ಮುಖಪುಟ / ಪ್ರಮುಖ ಸ್ಥಳಗಳು