ಪ್ರಮುಖ ಸ್ಥಳಗಳು
ಬಸವಕಲ್ಯಾಣ

ಬಸವಕಲ್ಯಾಣವು, ಹೈದರಾಬಾದು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ, ಬೀದರ್ ನಗರದಿಂದ ಎಂಬತ್ತು ಕಿಲೋಮೀಟರ್ ದೂರಲ್ಲಿರುವ ಊರು. ತಾಲ್ಲೂಕಿನ ಮುಖ್ಯಸ್ಥಳವಾದ, ಬಸವಕಲ್ಯಾಣವು ಬೆಂಗಳೂರಿನಿಂದ 683 ಕಿ.ಮೀ. ದೂರದಲ್ಲಿದೆ. ಮೊದಲಿನಿಂದಲೂ ಕಲ್ಯಾಣವೆಂದು ಹೆಸರಾಗಿದ್ದ ಈ ಪಟ್ಟಣಕ್ಕೆ, ಕರ್ನಾಟಕದ ಸಂತ-ಕವಿಯೂ ಸಮಾಜಸುಧಾರಕರೂ ಆದ ಬಸವಣ್ಣನವರ ಗೌರವಾರ್ಥವಾಗಿ, ಬಸವ ಕಲ್ಯಾಣ ಎಂಬ ಹೊಸ ಹೆಸರನ್ನು ಇಡಲಾಗಿದೆ. ಕಲ್ಯಾಣ ನಗರಕ್ಕೆ ಅದರದೇ ಆದ ಭವ್ಯ ಇತಿಹಾಸವಿದೆ.

ಕಲ್ಯಾಣವು, ಹನ್ನೊಂದನೆಯ ಶತಮಾನದ ಮಧ್ಯಭಾಗದಲ್ಲಿ ಕಲ್ಯಾಣಿ ಚಾಲುಕ್ಯವಂಶದ ರಾಜಧಾನಿಯಾಗಿತ್ತು. ಕ್ರಿ.ಶ. 1041 ರಿಂದ 1068 ರವರೆಗೆ ರಾಜ್ಯಭಾರ ಮಾಡಿದ ಮೊದಲನೆಯ ಸೋಮೇಶ್ವರನು, ಈ ನಗರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಅನಂತರ, ಆ ವಂಶದವರು ಕಲ್ಯಾಣಿ ಚಾಲುಕ್ಯರೆಂದೇ ಹೆಸರಾದರು. ಅವರನ್ನು ಬಾದಾಮಿ ಚಾಳುಕ್ಯರಿಂದ ಪ್ರತ್ಯೇಕವಾಗಿ ಗುರುತಿಸಲು ಈ ನಾಮಕರಣವು ಅಗತ್ಯವಾಯಿತು. ಆ ಕಾಲದ ಹಲವು ಶಾಸನಗಳಲ್ಲಿ ಮತ್ತು ಬಿಲ್ಹಣನ ವಿಕ್ರಮಾಂಕದೇವ ಚರಿತೆ ಮತ್ತು ವಿಜ್ಞಾನೇಶ್ವರನ ಮಿತಾಕ್ಷರದಂತಹ ಕೃತಿಗಳಲ್ಲಿ ಕಲ್ಯಾಣದ ಪ್ರಸ್ತಾಪವು ಬರುತ್ತದೆ. ಜಗತ್ತಿನಲ್ಲಿ ಇಂಥ ನಗರವು ಹಿಂದೆ ಇರಲಿಲ್ಲ, ಈಗ ಇಲ್ಲ ಮತ್ತು ಇನ್ನು ಮುಂದೆ ಬರುವುದೂ ಇಲ್ಲಎನ್ನುವಷ್ಟು ಮಟ್ಟದ ಕೀರ್ತಿಯನ್ನು ಕಲ್ಯಾಣವು ಪಡೆದಿತ್ತು. ಬಸವಣ್ಣ, ಅಕ್ಕಮಹಾದೇವಿ ಮುಂತಾದ ವಚನಕಾರರೂ ತಮ್ಮ ವಚನಗಳಲ್ಲಿ ಈ ನಗರದ ವರ್ಣನೆ ಮಾಡಿದ್ದಾರೆ. ಅವನ ನಂತರ ಇಮ್ಮಡಿ ಸೋಮೇಶ್ವರ, ಪ್ರಸಿದ್ಧ ದೊರೆಯಾದ ವಿಕ್ರಮಾದಿತ್ಯ-6, ಮುಮ್ಮಡಿ ಸೋಮೇಶ್ವರ, ಮುಮ್ಮಡಿ ಜಗದೇಕಮಲ್ಲ, ಮುಮ್ಮಡಿ ತೈಲಪ ಮುಂತಾದವರು ಈ ಕೇಂದ್ರದಿಂದ ರಾಜ್ಯಭಾರ ಮಾಡಿದರು. ಕಲ್ಯಾಣಿ ಚಾಳುಕ್ಯರ ನಂತರ ಪಟ್ಟಕ್ಕೆ ಬಂದ ಕಳಚೂರ್ಯ ವಂಶದವರಿಗೂ ಕಲ್ಯಾಣವೇ ರಾಜಧಾನಿಯಾಗಿತ್ತು. ಬಸವೇಶ್ವರರ ನಾಯಕತ್ವದಲ್ಲಿ ನಡೆದ ಶಿವರಣರ ಕ್ರಾಂತಿಗೆ, ಚಕ್ರವರ್ತಿ ಬಿಜ್ಜಳನು(1156-67) ಸಾಕ್ಷಿಯಾಗಿದ್ದನು. ಅನಂತರದ ಅವಧಿಯಲ್ಲಿ ಕಲ್ಯಾಣವನ್ನು ದೇವಗಿರಿಯ ಯಾದವರು, ಮುಹಮ್ಮದ್ ಬಿನ್ ತುಘಲಕ್, ಬಿಜಾಪುರ, ಬೀದರ್ ಮತ್ತು ಗುಲ್ಬರ್ಗಗಳ ಸುಲ್ತಾನರು ಮತ್ತು ಮುಘಲರು ಆಳಿದರು. ಆಮೇಲೆ, ಅದು ಹೈದರಾಬಾದಿನ ನಿಜಾಮರ ಕೈವಶವಾಯಿತು. ಈ ಕಾಲದ ಹಲವಾರು ಸಂಘರ್ಷಗಳಲ್ಲಿ, ಕಲ್ಯಾಣದ ಅನೇಕ ಶ್ರೇಷ್ಠ ಕಲಾಕೃತಿಗಳು ನಾಶವಾದವು. ಆದ್ದರಿಂದಲೇ ಈಗ ನಮಗೆ ಸಿಗುವುದು ದೇವಾಲಯ ಹಾಗೂ ಅರಮನೆಗಳ ಪಾಳುಗಳೇ ವಿನಾ ಭವ್ಯನಿರ್ಮಾಣಗಳಲ್ಲ. ಬಸವಕಲ್ಯಾಣಕ್ಕೆ ಸಮೀಪದಲ್ಲಿರುವ, ನಾರಾಯಣಪುರ ಮತ್ತು ಶಿವಪುರ ಎಂಬ ಚಿಕ್ಕ ಹಳ್ಳಿಗಳಲ್ಲಿ ಈಗಲೂ ಸುಂದರವಾದ ದೇವಾಲಯಗಳನ್ನು ನೋಡಬಹುದು. ಕಲ್ಯಾಣವು ಅನೇಕ ಚದರಮೈಲಿಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದ ಬಹು ದೊಡ್ಡ ನಗರವಾಗಿತ್ತು. ಅದನ್ನು ಸುತ್ತುವರಿದಿದ್ದ ಪ್ರತಾಪಪುರ, ತ್ರಿಪುರಾಂತಕಪುರ, ಉಮಾಪುರ ಮುಂತಾದವು ಕಲ್ಯಾಣದ ಉಪನಗರಗಳಾಗಿದ್ದವು. ಬಸವಕಲ್ಯಾಣದ ವಾಸ್ತು, ಶಿಲ್ಪ ಮತ್ತು ಸೈನ್ಯಕ್ಕೆ ಸಂಬಂಧಿಸಿದ ನಿರ್ಮಿತಿಗಳು ಬೇರೆ ಬೇರೆ ಕಾಲಘಟ್ಟಗಳಿಗೆ ಸೇರಿದ್ದು ಆ ಪ್ರದೇಶದಲ್ಲಿ ಹರಡಿಕೊಂಡಿವೆ. ಕಗ್ಗಲ್ಲಿನಿಂದ ಕಟ್ಟಲಾದ ಕೋಟೆಯು ಚಾಳುಕ್ಯರಿಂದಲೇ ನಿರ್ಮಿತವಾದರೂ ಅನಂತರದ ಶತಮಾನಗಳಲ್ಲಿ ಜೀರ್ಣೋದ್ಧಾರವಾಗಿದೆ. ಚಾಳುಕ್ಯರ ಕಾಲದ ದೇವಾಲಯಗಳು ಮತ್ತು ಅರಮನೆಗಳ ಅವಶೇಷಗಳನ್ನು ಈ ಕೋಟೆಯೊಳಗೆ ಸಂಗ್ರಹಿಸಿ ಇಡಲಾಗಿದೆ. ಜಲಸಂಗ್ವಿ, ನಾರಾಯಣಪುರ ಮತ್ತು ಶಿವಾಪುರಗಳಲ್ಲಿ ಚಾಳುಕ್ಯರ ಕಾಲಕ್ಕೆ ಸೇರಿದ ದೇವಸ್ಥಾನಗಳಿವೆ. ಅದರಲ್ಲಿಯೂ ಜಲಸಂಗ್ವಿಯ ದೇವಾಲಯವು ವಾಸ್ತುಶಿಲ್ಪದ ನೆಲೆಯಲ್ಲಿ ವಿಶಿಷ್ಟವಾದುದು. ಕೋಟೆಯೊಳಗಿರುವ ಬಿಜ್ಜಳರಾಯನ ಅರಮನೆ ದಿಬ್ಬದ ಪರಿಸರದಲ್ಲಿ ಅರಮನೆ ಮತ್ತು ಕಂದಕಗಳು ಇದ್ದ ಕುರುಹುಗಳಿವೆ. ಊರಿನ ಮಧ್ಯ ಭಾಗದಲ್ಲಿ ಬಸವೇಶ್ವರರ ದೇವಾಲಯವಿದೆ. ಮೋತಿಮಹಲ್, ಹೈದರೀ ಮಹಲ್ ಮತ್ತು ಪೀರಾನ್ ದರ್ಗಾಗಳನ್ನು ಮುಸ್ಲಿಂ ದೊರೆಗಳ ಆಳ್ವಿಕೆಯಲ್ಲಿ ಕಟ್ಟಲಾಯಿತು. ವೀರಶೈವ ಪ್ರವಾಸಿಗಳಿಗೆ ಮುಖ್ಯವಾದ ಕಂಬ್ಳಿ ಮಠ, ಗಚ್ಚಿನ ಮಠ ಮತ್ತು ಸದಾನಂದ ಮಠಗಳೂ ಪ್ರೇಕ್ಷಣೀಯವಾದವು. ಹನ್ನೆರಡನೆಯ ಶತಮಾನದ ಶರಣರ ನೆನಪಿಗಾಗಿ ಈ ಊರಿನಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಿಸಲಾಗಿದೆ.

ಬಸವಕಲ್ಯಾಣದಲ್ಲಿ, ಆ ಊರಿನ ಭವ್ಯ ಪರಂಪರೆಯ ದ್ಯೋತಕವಾದ ಅನೇಕ ವಸ್ತುಗಳನ್ನು ಸಂಗ್ರಹಿಸಿರುವ ವಸ್ತುಸಂಗ್ರಹಾಲಯವಿದೆ.

 

ಮುಂದಿನ ಓದು ಮತ್ತು ವಿದ್ಯುನ್ಮಾನ ಲಿಂಕುಗಳು:

    1. Basavakalyana :: Fotopic.Net
    2. Basavakalyan - Wikipedia, the free encyclopedia

     

ಮುಖಪುಟ / ಪ್ರಮುಖ ಸ್ಥಳಗಳು