ಪ್ರಮುಖ ಸ್ಥಳಗಳು
ಆನೆಗೊಂದಿ

ಆನೆಗೊಂದಿಯು, ಮಧ್ಯ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಚಿಕ್ಕ ಹಳ್ಳಿ. ಇದು ಹೊಸಪೇಟೆಯಿಂದ ಸುಮಾರು ಹತ್ತು ಕಿಲೋಮೀಟರುಗಳ ದೂರದಲ್ಲಿ, ತುಂಗಭದ್ರಾ ನದಿಯ ಉತ್ತರ ದಂಡೆಯ(ಎಡ ದಂಡೆ) ಕಡೆಗೆ ಇದೆ. ವಿಜಯನಗರದ ಅರಸರು, ತಮ್ಮ ಸೈನ್ಯದ ಅನೆಗಳ ಸಮೂಹವನ್ನು ಇಲ್ಲಿ ನೆಲೆಗೊಳಿಸಿದ್ದರಿಂದ, ಆನೆಗೊಂದಿಯೆಂಬ ಹೆಸರು ಬಂತೆಂದು ಪ್ರತೀತಿ. ಇತಿಹಾಸ ಮತ್ತು ಪುರಾಣಗಳ ಬೇರೆ ಬೇರೆ ಹಂತಗಳಲ್ಲಿ, ಈ ಊರನ್ನು ಹಸ್ತಿನಾವತಿ, ಕುಂಜರಕೋನ, ಕಿಷ್ಕಿಂದಾ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅರೇಬಿಯಾದ ಪ್ರವಾಸಿಗಳು ಈ ಊರನ್ನು ನಾಗುಂಡಿಮ್ ಎಂದು ಕರೆದಿದ್ದಾರೆ. ಪೋರ್ಚುಗಲ್ ನಿಂದ ಬಂದಿದ್ದ ಡಾಮಿಂಗೋ ಪಯಸ್ ಎನ್ನುವ ಪ್ರವಾಸಿಯು ಸೇನಾಗೊಂಡಿಂ ಎಂಬ ಹೆಸರನ್ನು ಬಳಸಿದ್ದಾನೆ. ಬಂಡೆಗಳಿಂದ ತುಂಬಿದ ಈ ಪ್ರದೇಶವು, ಶತ್ರುಗಳಿಂದ ರಕ್ಷಿಸಿಕೊಳ್ಳಲು ನೈಸರ್ಗಿಕವಾದ ನೆಲೆಯಂತೆ ಕೆಲಸ ಮಾಡುತ್ತದೆ. ಆದ್ದರಿಂದಲೇ, ವಿಭಿನ್ನ ರಾಜವಂಶಗಳಿಗೆ ಸೇರಿದ ರಾಜರು ಇದನ್ನು ತಮ್ಮ ರಾಜಧಾನಿಯಾಗಿ ಆರಿಸಿಕೊಂಡರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗಿಂತ ಮೊದಲು ಮತ್ತು ಅದರ ಪತನದ ನಂತರ, ಆನೆಗೊಂದಿಯು ಮಹತ್ವದ ಘಟನೆಗಳಲ್ಲಿ ಭಾಗಿಯಾಗಿದೆ. ಕಂಪಿಲರಾಯ ಮತ್ತು ಕುಮಾರರಾಮರು, ಅಲ್ಲಾವುದ್ದೀನ್ ಖಿಲ್ಜಿಯ ಸೇನಾಧಿಪತಿಯಾದ ಮಲ್ಲಿಕಾಫರರನನ್ನು ಎದುರಿಸಿದ್ದು ಈ ಸ್ಥಳದಲ್ಲಿಯೇ. ಅನಂತರ, ಆನೆಗೊಂದಿಯು ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು. ಆ ಸಾಮ್ರಾಜ್ಯದ ಪತನದ ನಂತರ ಅರವೀಡು ವಂಶದ ಅರಸರು ಇಲ್ಲಿ ಆಳ್ವಿಕೆ ನಡೆಸಿದರು. ಆನೆಗೊಂದಿಯ ಶ್ರೀರಂಗರಾಯನು ಇಲ್ಲಿರುವ ಕೋಟೆಯನ್ನೂ ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ಧ ದೇವಾಲಯವನ್ನೂ ಕಟ್ಟಿಸಿದನೆಂದು ಹೇಳಲಾಗಿದೆ. ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ, ಆನೆಗೊಂದಿಯನ್ನು ಬಿಜಾಪುರದ ಸುಲ್ತಾನರು, ಮುಘಲರು ಹಾಗೂ ಮರಾಠರು ಆಳಿದರು. ಕ್ರಿ.ಶ. 1777 ರಲ್ಲಿ, ಟೀಪೂ ಸುಲ್ತಾನನು ಇದರ ಮೆಲೆ ದಾಳಿ ನಡೆಸಿದನು. ಅನಂತರ, ಬ್ರಿಟಿಷರು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಈ ಸ್ಥಳವನ್ನು ಅನೆಗೊಂದಿಯ ಅರಸರಿಗೆ ಹಸ್ತಾಂತರ ಮಾಡಿದರು. 1949 ರವರೆಗೆ ಅದು ಆ ರಾಜವಂಶದ ಸ್ವಾಧೀನದಲ್ಲಿ ಇತ್ತು.

ಆನೆಗೊಂದಿಯಲ್ಲಿ ಮಾಧ್ವ ಯತಿಗಳ ಒಂಬತ್ತು ಬೃಂದಾವನಗಳಿವೆ. ಆ ಪ್ರದೇಶವನ್ನು ನವ ಬೃಂದಾವನ ಎಂದು ಕರೆಯುತ್ತಾರೆ. ಈ ಊರಿನಲ್ಲಿ, ಅನೇಕ ಪ್ರವಾಸೀ ಆಕರ್ಷಣೆಯ ತಾಣಗಳಿವೆ. ಪಂಪಾ ಸರೋವರ, ಶೇಷಶಾಯೀ ದೇವಾಲಯ, ವಾಲಿ ಭಂಡಾರ, ಆಂಜನೇಯಾದ್ರಿ,(ಬೆಟ್ಟದ ಮೇಲಿರುವ, ಆಂಜನೇಯನ ದೇವಸ್ಥಾನ) ಗಗನಮಹಲ್, ರಂಗನಾಥ ದೇವಾಲಯ, ಋಷ್ಯಮೂಕ ಪರ್ವತ, ಹಾಳು ಸೇತುವೆಯ ಸಮೀಪದಲ್ಲಿರುವ ಚಂದ್ರಮೌಳೀಶ್ವರ ದೇವಾಲಯ ಮತ್ತು ಜೈನ ಬಸದಿಗಳು ಇವುಗಳಲ್ಲಿ ಮುಖ್ಯವಾದವು. ಇಲ್ಲಿ ಒಂದು ಜೀರ್ಣಾವಸ್ಥೆಯಲ್ಲಿರುವ ಅರಮನೆಯೂ ಇದೆ. ಆನೆಗೊಂದಿಯ ಪಾಳುಗಳು ಸುತ್ತಮುತ್ತಲೂ ಹರಡಿಕೊಂಡಿವೆ. ಹುಚ್ಚಪ್ಪಯ್ಯನ ಮಠದಲ್ಲಿರುವ ಭಿತ್ತಿಚಿತ್ರಗಳು ಸುಂದರವಾಗಿವೆ ಹಾಗೂ ಗಮನೀಯವಾಗಿವೆ.

 

ಮುಂದಿನ ಓದು:

1. Anegondi; Architectural Ethnography of a Royal Village by Tobert, Natalie (Illustrated by Reed, Graham) 2000, pp. 241

 

ಈ ಪುಸ್ತಕವನ್ನು ಕುರಿತು: ಇದು, ಹಲವು ಜ್ಞಾನಶಿಸ್ತುಗಳನ್ನು ಬಳಸಿಕೊಂಡಿರುವ ಹೊಸ ಬಗೆಯ ಪುಸ್ತಕ. ಇಲ್ಲಿ ಮಾನವಶಾಸ್ತ್ರ, ವಾಸ್ತುಶಿಲ್ಪ, ಜನಾಂಗೀಯ ಪುರಾತತ್ವಶೋಧನೆ(ಎಥ್ನೋ ಆರ್ಕಿಯಾಲಜಿ) ಮುಂತಾದ ತಿಳಿವಳಿಕೆಗಳನ್ನು ಉಪಯೋಗಿಸಿ, ಮಧ್ಯಕರ್ನಾಟಕದಲ್ಲಿರುವ ರಾಜ-ಗ್ರಾಮ(ರಾಯಲ್ ವಿಲೇಜ್)ವೊಂದನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಸುಮಾರು ಒಂದು ನೂರರಷ್ಟು, ವಿವರಣೆಗಳಿಂದ ಕೂಡಿದ ರೇಖಾಚಿತ್ರಗಳಿವೆ. ಐವತ್ತಕ್ಕೂ ಹೆಚ್ಚು ಮನೆಗಳನ್ನು ಆಮೂಲಾಗ್ರವಾಗಿ ಆಧ್ಯಯನ ಮಾಡುವುದು ಈ ಲೇಖಕಿಯ ಉದ್ದೇಶ. ಆ ಮನೆಗಳಲ್ಲಿ ಒಂದೇ ಒಂದು ಕೋಣೆಯಿರುವ ಚಿಕ್ಕ ಮನೆಯಿಂದ ಮೊದಲು ಮಾಡಿಕೊಂಡು, ಆನೆಗೊಂದಿಯ ರಾಜವಂಶಸ್ಥರು ವಾಸವಾಗಿರುವ ದೊಡ್ಡ ಮಹಲುಗಳವರೆಗೆ ಸಾಕಷ್ಟು ವೈವಿಧ್ಯವಿದೆ.

ಮುಖಪುಟ / ಪ್ರಮುಖ ಸ್ಥಳಗಳು