ತುಳು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಪ್ರಮುಖ ಭಾಷೆಗಳಲ್ಲಿ
ಒಂದು. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂಗಳು ಅದರ ಸಂಗಾತಿ(ಜ್ಞಾತಿ) ಭಾಷೆಗಳು. ಅದು ಕರಾವಳಿ
ಕರ್ನಾಟಕದಲ್ಲಿ ಬಳಕೆಯಾಗುತ್ತಾ ಬಂದಿರುವ ಭಾಷೆ. ಕರ್ನಾಟಕದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು
ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಈ ಭಾಷೆಯನ್ನು ವಿಶೇಷವಾಗಿ ಬಳಸುತ್ತಾರೆ. ಅರಬ್ಬೀ ಸಮುದ್ರ,
ಪಶ್ಚಿಮ ಘಟ್ಟಗಳು, ಚಂದ್ರಗಿರಿ ನದಿ ಮತ್ತು ಕಲ್ಯಾಣಪುರ ನದಿಗಳಿಂದ ಸುತ್ತುವರೆದಿರುವ ಭೂಪ್ರದೇಶವನ್ನು
ತುಳು ನಾಡು ಎಂದು ಕರೆಯಬಹುದು. ಪ್ರಾಚೀನಕಾಲದಲ್ಲಿ, ತುಳುನಾಡು ಇನ್ನಷ್ಟು ವಿಶಾಲವಾಗಿತ್ತೆಂದು ಚರಿತ್ರಕಾರರ
ಅಭಿಪ್ರಾಯ. ಅದೇನೇ ಇರಲಿ, ತುಳುಭಾಷಿಕರು ಈಗ ಕರ್ನಾಟಕದೊಳಗೆ ಮಾತ್ರವಲ್ಲ ಅದರಾಚೆಗೂ ಹರಡಿಕೊಂಡಿದ್ದಾರೆ.
ಈಚೆಗೆ ಅನೇಕ ತುಳುಭಾಷಿಕರು ಗಲ್ಫ್ ದೇಶಗಳಲ್ಲಿಯೂ ನೆಲೆಸಿದ್ದಾರೆ. ಸುಮಾರು ಮೂವತ್ತರಿಂದ ಐವತ್ತು
ಲಕ್ಷ ತುಳುಭಾಷಿಕರು ಇರುವರೆಂದು ಊಹಿಸಲಾಗಿದೆ. ತುಳು ಎಂದರೆ, ಕೇವಲ ಭಾಷೆಯಲ್ಲ. ಅದು ಬಹಳ ವಿಶಿಷ್ಟವಾದ
ಸಂಸ್ಕೃತಿ ಮತ್ತು ಜೀವನಶೈಲಿಗಳನ್ನು ಪ್ರತಿನಿಧಿಸುತ್ತದೆ. ತುಳು ಭಾಷೆಯ ನೆಲೆಗಳಿರುವುದು ಬಹುಭಾಷಿಕವಾದ
ಸಮುದಾಯಗಳ ನಡುವೆ. ಕನ್ನಡ, ಕೊಂಕಣಿ, ಮಲಯಾಳಂ, ಬ್ಯಾರಿಭಾಷೆ ಮತ್ತು ಮರಾಠೀ ಭಾಷೆಗಳು ಅದರ ಸಂಗಡವೇ
ಬಳಕೆಯಾಗುವ ಇತರ ಭಾಷೆಗಳು. ಆದರೂ ಈ ಪ್ರದೇಶದಲ್ಲಿ ವಾಸಿಸುವವರ ನಡುವೆ ಸಂಪರ್ಕಭಾಷೆಯಾಗಿ ಬಳಕೆಯಾಗುವುದು
ತುಳುವೇ ಆಗಿದೆ. ಆಡಳಿತ ಮತ್ತು ಶಿಕ್ಷಣದ ಮಾಧ್ಯಮವು ಕನ್ನಡವಾದರೂ ಈ ಮಾತು ನಿಜ. ಈಗ ತುಳು ಭಾಷೆಗೆ
ತನ್ನದೇ ಆದ ಲಿಪಿಯಿಲ್ಲ. ಆದರೂ ಪ್ರಾಚೀನ ಕಾಲದಲ್ಲಿ, ತುಳು-ಮಲಯಾಳಂ ಲಿಪಿಯೊಂದು ಇತ್ತೆಂದು ವಿದ್ವಾಂಸರು
ಊಹಿಸಿದ್ದಾರೆ. ಈ ಲಿಪಿಯು ಮಧ್ಯಕಾಲೀನ ಶತಮಾನಗಳಿಂದಲೇ ವಿಕಸನವಾಗಿತ್ತು. ಈ ಲಿಪಿಯಲ್ಲಿ ಬರೆದಿರುವ
‘ಶ್ರೀ
ಭಾಗವತೊ’
ಎಂಬ ಗ್ರಂಥದ ಹಸ್ತಪ್ರತಿಗಳು ಸಿಕ್ಕಿವೆ. ತುಳೂ ಭಾಷೆಗೆ ಅನೇಕ ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳಿವೆ.
ಮಂಗಳೂರಿನ ದಕ್ಷಿಣಕ್ಕೆ ಮಾತನಾಡುವ ತುಳುವಿಗೂ ಅದರ ಉತ್ತರಭಾಗದಲ್ಲಿ ಬಳಸುವ ತುಳುವಿಗೂ ಖಚಿತವಾದ ವ್ಯತ್ಯಾಸಗಳಿವೆ.
ಹಾಗೆಯೇ ಮುಖ್ಯವಾದ ಜಾತಿಸಮುದಾಯಗಳಾದ ಬಂಟರು, ಬಿಲ್ಲವರು, ಮೊಗವೀರರು, ಜೈನರು, ದಲಿತರು ಮತ್ತು ಬ್ರಾಹ್ಮಣರು
ಬಳಸುವ ತುಳುವಿನ ಪ್ರಭೇದಗಳು ಬೇರೆ ಬೇರೆಯೇ ಆಗಿವೆ.
ಈ ಭಾಷೆಯ ಪ್ರಾಚೀನತೆಯು ಕ್ರಿಸ್ತ ಶಕದ ಆರಂಭದ ವರ್ಷಗಳಷ್ಟು ಹಿಂದೆ
ಹೋಗುತ್ತದೆ. ಮಧ್ಯದ್ರಾವಿಡದ ಮೂಲಗಳಿಂದ ತುಳುವು ಬೇರ್ಪಟ್ಟಾಗ ಕನ್ನಡಕ್ಕೆ ಇನ್ನೂ ತನ್ನದೇ ಆದ ಅಸ್ತಿತ್ವ
ಇರಲಿಲ್ಲ. ಆದ್ದರಿಂದಲೇ ಶಬ್ದಕೋಶ ಮತ್ತು ವ್ಯಾಕರಣಗಳ ನೆಲೆಯಲ್ಲಿ ತುಳು ಮತ್ತು ಅನೇಕ ಮಧ್ಯದ್ರಾವಿಡ
ಭಾಷೆಗಳ ನಡುವೆ ಅನೇಕ ಹೋಲಿಕೆಗಳನ್ನು ಕಾಣಬಹುದು. ಆಕ್ಸಿರಿಂಕಸ್ ಎನ್ನುವ ಸ್ಥಳದಲ್ಲಿ ದೊರಕಿದ ಗ್ರೀಕ್
ಭಾಷೆಯ ಪ್ರಹಸನದಲ್ಲಿ ಇರುವ ಪದಗಳು ತುಳುವಿನಿಂದ ಬಂದವೆಂದು ಈಗ ವಾದಿಸುತ್ತಿದ್ದಾರೆ. ಮುಂಚೆ ಈ ಪದಗಳನ್ನು
ಕನ್ನಡ ಭಾಷೆಯ ಪ್ರಾಚೀನತೆಗೆ ಸಾಕ್ಷಿಯಾಗಿ ಬಳಸುತ್ತಿದ್ದರು.
ಪದರಚನೆಯ ನೆಲೆಯಲ್ಲಿ
ತುಳುವಿಗೂ ಕನ್ನಡಕ್ಕೂ ಇರುವ ಕೆಲವು ವ್ಯತ್ಯಾಸಗಳನ್ನು ಡಾ. ಬಿ.ರಾಮಚಂದ್ರ ರಾವ್ ಅವರು ತೋರಿಸಿಕೊಟ್ಟಿದ್ದಾರೆ:
- ಅನೇಕ ಕನ್ನಡ ಪದಗಳ, ಆದಿಸ್ವರಗಳನ್ನು ತುಳುವಿನಲ್ಲಿ ಉಚ್ಚರಿಸುವುದಿಲ್ಲ. ಉದಾಹರಣೆ: ಕನ್ನಡದ ಎಳದು,
ಅಡಗು ಮತ್ತು ಎರಡು ಎಂಬ ಪದಗಳು ತುಳುವಿನಲ್ಲಿ ಲತ್ತ್,
ಡೆಂಗ್ ಮತ್ತು ರಡ್ಡ್ ಎಂಬ ರೂಪಗಳನ್ನು ಪಡೆಯುತ್ತವೆ.
- ಕನ್ನಡ ಪದಗಳ ಮೊದಲಿನಲ್ಲಿ ಬರುವ ಅ ಮತ್ತು ಆ ಎಂಬ ಸ್ವರಗಳು
ತುಳುವಿನಲ್ಲಿ ಎ ಮತ್ತು ಏ ಗಳಾಗಿ ಬದಲಾಗುತ್ತವೆ. ಉದಾಹರಣೆಗೆ ಕನ್ನಡದ ಪಾಲ್ ತುಳುವಿನಲ್ಲಿ ಪೇರ್
ಎಂಬ ರೂಪ ಪಡೆಯುತ್ತದೆ.
- ಕನ್ನಡದ ದಂತ್ಯ ವ್ಯಂಜನಗಳು ತುಳುವಿನಲ್ಲಿ ತಾಲವ್ಯಗಳಾಗಿ
ಬದಲಾಗುತ್ತವೆ. ಕನ್ನಡದ ಒಂದು ಮತ್ತು ಪಂದಿ ಎಂಬ ಪದಗಳು ಒಂಜಿ ಮತ್ತು ಪಂಜಿ ಎಂಬ ರೂಪಗಳನ್ನು ಹೊಂದಿವೆ.
- ಮಧ್ಯಮಪುರುಷ ಏಕವಚನ ಸರ್ವನಾಮದ ನೀನು ಎಂಬ ರೂಪವು ತುಳುವಿನಲ್ಲಿ
ಮೊದಲಿನಲ್ಲಿ ಬರುವ ನ್ ಕಾರವನ್ನು ಕಳೆದುಕೊಂಡು ಈ ಎಂಬ ರೂಪ ತಳೆಯುತ್ತದೆ.
- ಕನ್ನಡ ಪದಗಳ ಮಧ್ಯದಲ್ಲಿ ಬರುವ ಸ ಕಾರವು ಕೆಲವೊಮ್ಮೆ ತುಳುವಿನಲ್ಲಿ
ದ ಕಾರವಾಗಿ ಬದಲಾಗುತ್ತದೆ. (ಪೆಸರ್>>>>ಪುದರ್)
ತುಳು ಸಾಹಿತ್ಯದ
ಸ್ಥೂಲ ಪರಿಚಯಕ್ಕಾಗಿ ಸಂಬಂಧ ಪಟ್ಟ ನಮೂದನ್ನು ಗಮನಿಸಿ.
ಮುಂದಿನ ಓದು ಮತ್ತು ಲಿಂಕುಗಳು:
- ‘A Grammar of the Tulu Language’ By J. Brigel,
1872, !982 (Asian Book Services)
- “The grammar of the Tulu Language’ Jules Bloch,
- ‘Studies in Tuluva history and culture, from the
pre-historic times to the modern’ By P.Gururaja Bhat, 1975, published by the author.
- ‘A Comparative study of Tulu dialects’ By K.Padmanabha
Kekunnaya, 1994, Rashtrakavi Govinda Pai Research Centre, Udupi.
- ‘Coastal Karnataka: Studies in the folkloristic
and linguistic traditions of Dakshina Kannada region of the western coast of
India’ By
U.Padmanabha Upadhyaya, 1996, Rashtrakavi Govinda Pai Research Centre, Udupi.
- ‘Descriptive Analysis of Tulu’ By D.N. Shankara
Bhat, 1967, Deccan College Post-graduate
and Research Institute, Poona.
- ‘tuLu niGanTu” (Tulu Lexicon) in
4 volumes, 1988, ‘Rashtrakavi Govinda Pai Research Centre’, Udupi.
- ‘Tulu-English Dictionary’, By A.Manner,
1886, Mangalore
- ‘Tulu-English Dictionary’ By M.Mariyappa
Bhat and A.Shankaar Kedilaya, 1967,
Madras.
- “A grammar of Tulu: A Dravidian
language’ By Sooda Lakshminarayana Bhatt, 1971, 2005, Dravidian Linguistics Association.
(Ph. D. dissertation submitted to the
University of
Wisconsin)
- ‘ತುಳು ವ್ಯಾಕರಣ’, ಎಸ್.ಯು. ಪಣಿಯಾಡಿ, 1932, ಉಡುಪಿ.
- ‘ವರ್ಣನಾತ್ಮಕ ತುಳು ವ್ಯಾಕರಣ’, ಎಸ್ ಟಿ. ಶೆಟ್ಟಿ, 1986, ವಿವೇಕಾನಂದ ಕಾಲೇಜು, ಪುತ್ತೂರು.
-
‘ತುಳು ಭಾಷೆ- ಕಿರು ಪರಿಚಯ’, ಬಿ. ರಾಮಚಂದ್ರರಾವ್, 1976, ಐ.ಬಿ.ಎಚ್. ಪ್ರಕಾಶನ ಬೆಂಗಳೂರು.
|