ಶಾಸನಗಳು
ಬಾದಾಮಿ ಶಾಸನ (ಕಪ್ಪೆ ಅರಭಟ್ಟನ ಶಾಸನ)

            ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಇದು ಕರ್ನಾಟಕದ ಅಜ್ಞಾತ ವೀರನೊಬ್ಬನ ಗುಣಗಳನ್ನು ಮುಕ್ತವಾಗಿ ವಿವರಿಸುತ್ತದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ  ರಚಿತವಾಗಿರುವ ದ್ವಿಭಾಷಾ ಶಾಸನ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ತ್ರಿಪದಿಯು ದ್ರಾವಿಡ ಮೂಲಗಳಿಂದ ಒಡಮೂಡಿರುವ ಸಂಭವವಿದೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ.

            ಕಪ್ಪೆ ಅರಭಟ್ಟನಿಗೂ ಕಪ್ಪೆಗೂ ಯಾವ ಸಂಬಂಧವೂ ಇಲ್ಲ. ಈ ಪದವನ್ನು ಕಪ್ಪೆಯರ ಭಟ್ಟ(ತೀ.ನಂ.ಶ್ರೀ.) ಮತ್ತು ಕಪ್ಪಡಿ ಯರ ಭಟ್ಟ (ಎಂ. ಎಂ. ಕಲಬುರ್ಗಿ) ಎಂಬುದಾಗಿ ಅರ್ಥೈಸಲಾಗಿದೆ. ಎರಡೂ ವಿವರಣೆಗಳು ಅವನ ವಂಶನಾಮದಿಂದ ಸ್ಫೂರ್ತಿ ಪಡೆದಿವೆ.

            ಈ ಶಾಸನದ ಅರ್ಥವನ್ನು ಹೀಗೆ ಸಂಗ್ರಹಿಸಬಹುದು: ಅರಭಟ್ಟನನ್ನು ಒಳ್ಳೆಯ ಜನರು ಇಷ್ಟಪಡುತ್ತಾರೆ ಮತ್ತು ದುಷ್ಟರು ಅವನಿಗೆ ಹೆದರುತ್ತಾರೆ. ಅವನು ತನ್ನ ಬಗ್ಗೆ ಸರಿಯಾಗಿ ನಡೆದುಕೊಳ್ಳುವವರಿಗೆ ತಾನೂ ಒಳ್ಳೆಯವನು. ಆದರೆ, ತನಗೆ ತೊಂದರೆ ಕೊಡುವವರಿಗೆ ಅವನು ಅತ್ಯಂತ ಕ್ರೂರಿಯಾಗಿರುತ್ತಾನೆ. ಈ ಗುಣದಲ್ಲಿ ಅವನು ಸಾಕ್ಷಾತ್ ವಿಷ್ಣುವಿಗೆ ಸರಿಸಮಾನ. ತಮ್ಮ ಪೂರ್ವಜನ್ಮದ ಕರ್ಮಗಳ ಪರಿಣಾಮವಾಗಿ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವ ಜನರು ಇರುತ್ತಾರೆ. ಸ್ವಲ್ಪವೂ ವಿಚಾರ ಮಾಡದ ಇಂತಹವರು, ಪಂಜರದಲ್ಲಿ ಸೆರೆಯಾಗಿರುವ ಸಿಂಹವನ್ನು ಹಿಂದೆ ಮುಂದೆ ನೋಡದೆ ಹೊರಗೆ ಬಿಡುವ ಮೂರ್ಖರಂತೆ, ಸತ್ತು ನಾಶವಾಗುತ್ತಾರೆ.

            ಈ ಶಾಸನವನ್ನು ಬಾದಾಮಿ ಪಟ್ಟಣದ ಉತ್ತರ ಗುಡ್ಡದ ಒಂದು ಬದಿಯಲ್ಲಿ ನೆಲಮಟ್ಟದಿಂದ ಸುಮಾರು ಹತ್ತು ಹನ್ನೆರಡು ಅಡಿ ಎತ್ತರದಲ್ಲಿ ಕಂಡರಿಸಲಾಗಿದೆ. ಊರಿನ ನೈರುತ್ಯ ಭಾಗದಲ್ಲಿರುವ ಕೃತಕವಾದ ಕೊಳಕ್ಕೆ ಇದು ಎದುರಾಗಿದೆ. ಈ ಶಾಸನವು 2 ಅಡಿ, 10 1/3 ಅಂಗುಲ ಅಗಲ ಮತ್ತು 3 ಅಡಿ 4 1/2 ಅಂಗುಲ ಎತ್ತರದ  ಚದುರಳತೆಯ ಜಾಗದಲ್ಲಿ ಲಿಖಿತವಾಗಿದೆ. ಶಾಸನದ ಅರ್ಥವು ಸ್ಪಷ್ಟವಾಗಿಲ್ಲ. ಆದರೆ ಅದು ಸ್ಥಳೀಯ ವೀರನೂ ಸಂತನೂ ಆದ ಕಪ್ಪೆ ಅರಭಟ್ಟನ ಗುಣವರ್ಣನವೆಂಬ ಸಂಗತಿಯು ಸ್ಪಷ್ಟವಾಗಿದೆ. ಶಾಸನದ ಕೆಳಗೆ ಸುಮಾರು ವೃತ್ತಾಕಾರದ ಪ್ರದೇಶದೊಳಗೆ ಹತ್ತು ದಳಗಳಿರುವ ಕಮಲದಂತೆ ಕಾಣುವ ಹೂವನ್ನು ಕೆತ್ತಲಾಗಿದೆ. ಅದರಿಂದ ಒಂದು ವಸ್ತ್ರ ವಿನ್ಯಾಸವು ನೇತಾಡುತ್ತಿರುವಂತೆ ಕೆತ್ತಲಾಗಿದೆ.

            ಈ ಶಾಸನದಲ್ಲಿ ಬಳಸಿರುವ ಕನ್ನಡವು ಪೂರ್ವದ ಹಳಗನ್ನಡವು ಹಳಗನ್ನಡವಾಗಿ ಪರಿವರ್ತನೆಯಾಗುತ್ತದ್ದ ಹಂತಕ್ಕೆ ಸೇರಿದ್ದು, ಪದರಚನೆ ಮತ್ತು ವಾಕ್ಯರಚನೆಗೆ ಸಂಬಂಧಿಸಿದ ಕೆಲವು ಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ.

            ಹೀಗೆ ಬಾದಾಮಿಯ ಶಾಸನವು ಭಾಷಾಶಾಸ್ತ್ರ, ಛಂದಸ್ಸು ಮತ್ತು ಸಾಹಿತ್ಯ ಎಂಬ ಮೂರು ನೆಲೆಗಳಿಂದಲೂ ಬಹಳ ಮುಖ್ಯವಾದುದು.

 

 

ಶಾಸನದ ಮೂಲಪಾಠ 

ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನವರ್ಜಿತನ್ ಕಲಿಯುಗ ವಿಪರೀತನ್ ವರನ್ತೇಜಸ್ವಿನೋ ಮೃತ್ತ್ಯರ್‍ನತು ಮಾನಾವಖಣ್ಡನಂ ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ ದಿನೇದಿನೇ ಸಾಧುಗೆ ಸಾಧು ಮಾಧೂರ್ಯ್ಯಂಗೆ ಮಾಧೂರ್ಯ್ಯಂ ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ ಒಳ್ಳಿತ್ತ ಕೆಯ್ವೊರ್ ಆರ್ ಪ್ಪೊಲ್ಲದುಮ್ ಅದರನ್ತೆ ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತಂ ಇಲ್ಲಿ ಸನ್ಧಿಕ್ಕುಂ ಅದು ಬಂದು ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್ ಕಲಿಗೆ ವಿ[]ರೀತ ಅಹಿತರ್ಕ್ಕಳ್ ಕೆಟ್ಟರ್ ಮೇಣ್ ಸತ್ತರ್ ಅವಿಚಾರಮ್.

 

                          ಮುಖಪುಟ / ಶಾಸನಗಳು