ಜಾನಪದ ಮತ್ತು ಜನಪದ ಕಲೆಗಳು
ನಂದಿಕೋಲು ಕುಣಿತ

          ನಂದಿಕೋಲು ಕುಣಿತ ಅಥವಾ ನಂದಿಧ್ವಜ ಕುಣಿತವು, ಮೂಲತಃ ಧಾರ್ಮಿಕವಾದ ನೃತ್ಯಪ್ರಕಾರ. ಅದನ್ನು ವೀರಶೈವ ಧರ್ಮಕ್ಕೆ ಸೇರಿದವರು ಕರ್ನಾಟಕದ ಅನೇಕ ಭಾಗಗಳಲ್ಲಿ ಆಚರಿಸುತ್ತಾರೆ. ಅವರಂತೆಯೇ ನಾಯಕರ ಸಮುದಾಯಕ್ಕೆ ಸೇರಿದ, ಚಿತ್ರದುರ್ಗ ಜಿಲ್ಲೆಯಲ್ಲಿರುವ ನಾಯಕನಹಟ್ಟಿ ತಿಪ್ಪೇಸ್ವಾಮಿಯ ಭಕ್ತರು ಕೂಡ ಈ ಕಲೆಯನ್ನು ಪ್ರದರ್ಶಿಸುತ್ತಾರೆ. ಈ ಕುಣಿತವನ್ನು ನವರಾತ್ರಿಯ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿಯೂ ನೋಡಬಹುದು. ವೀರಶೈವರ ಪ್ರಕಾರ, ವೀರಭದ್ರನು, ದಕ್ಷಬ್ರಹ್ಮನನ್ನು ಸಂಹಾರ ಮಾಡಿದ ನಂತರ ನಡೆಸಿದ ವಿಜಯಯಾತ್ರೆಯ ಭಾಗವಾಗಿ ಈ ಕುಣಿತವನ್ನು ಪರಿಗಣಿಸಬೇಕು. ಬದಲಾಗಿ ನಾಯಕನಹಟ್ಟಿಯ ತಿಪ್ಪೇಸ್ವಾಮಿಯ ಭಕ್ತರಿಗೆ ಅದು ತಮ್ಮ ಸಾಂಸ್ಕೃತಿಕ ನಾಯಕನು ಪಡೆದುಕೊಂಡ ವಿಜಯಗಳ ಸಂಕೇತ. ಮೈಸೂರು ಅರಸರ ಪರಿವಾರದವರು ಈ ಕುಣಿತವನ್ನು ತಮ್ಮ ದೊರೆಗಳು ಯುದ್ಧಗಳಲ್ಲಿ ಗಳಿಸಿದ ಗೆಲುವುಗಳ ಸಂಭ್ರಮದ ಸಂಕೇತವಾಗಿ ಆಚರಿಸುತ್ತಾರೆ. ಈ ಮೂರು ಸಂದರ್ಭಗಳಲ್ಲಿ ಆಕ್ರಮಣಶೀಲತೆ ಮತ್ತು ವೀರಾವೇಶಗಳನ್ನು ಗುರುತಿಸಬಹುದು.

ನಂದಿಕೋಲು ಕುಣಿತವು, ನಂದಿಕೋಲನ್ನು ಮೇಲೆತ್ತಿ ಹಿಡಿದು ಮಾಡುವ ನೃತ್ಯ. 

ನಂದಿಕೋಲು ಬಹಳ ಗಟ್ಟಿಮುಟ್ಟಾದ ಬಿದಿರಿನ ಗಳ. ಆಯಾಪ್ರದೇಶವನ್ನು ಅವಲಂಬಿಸಿ ಈ ಕೋಲು ಹದಿನೈದು ಅಡಿಗಳಿಂದ ಹಿಡಿದು, ಐದು ಅಡಿಗಳವರೆಗೆ ಇರುತ್ತದೆ. ಅದನ್ನು ಬಿರಡೆ ಕಂಬ, ವ್ಯಾಸಗೋಲು, ನಂದಿಕಂಬ, ನಂದಿಪಟ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇದು ಮರದಿಂದ ಮಾಡಿದ ಮಂಟಪಾಕೃತಿಯ ಪುಟ್ಟ ಪೀಠ. ಇದನ್ನು ಆ ಬಿದಿರಗಳಕ್ಕೆ, ಬುಡದಿಂದ ನಾಲ್ಕು ಅಡಿಗಳ ಎತ್ತರದಲ್ಲಿ ಕಟ್ಟುತ್ತಾರೆ. ಹಿತ್ತಾಳೆಯಿಂದ ಮಾಡಿದ, ನಂದಿಯ ಪುಟ್ಟ ವಿಗ್ರಹವನ್ನು ಆ ಪೀಠದ ಮೇಲೆ ಇಡುತ್ತಾರೆ. ಆ ವಿಗ್ರಹದಿಂದ ಮೇಲೆ, ಅನೇಕ ಟೊಳ್ಳಾದ ಬಳೆಗಳನ್ನು, ಒಂದರ ಮೇಲೆ ಒಂದರಂತೆ, ಗಳದ ಸುತ್ತಲೂ ಇಡುತ್ತಾರೆ. ಈ ಬಳೆಗಳ ಟೊಳ್ಳಿನೊಳಗೆ ಅನೇಕ ಚಿಕ್ಕ ಕಲ್ಲುಗಳನ್ನೋ ಹುಣಿಸೆಯ ಬೀಜಗಳನನ್ನೋ ತುಂಬಿರುತ್ತಾರೆ. ನಂದಿಕೋಲನ್ನು ಕುಣಿಸಿದಾಗ ಇವು ಅಪಾರವಾದ ಖಣಿಖಣಿ ಶಬ್ದ ಮಾಡುತ್ತವೆ. ಈ ಬಳೆಗಳನ್ನು ಹರಡೆ, ಗಗ್ಗರ, ಗಗ್ಗ್ರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಬಿದಿರುಗಳದ ೆತ್ತರವನ್ನು ಅವಲಂಬಿಸಿ, ಹತ್ತರಿಂದ ಇಪ್ಪತ್ತು ಹರಡೆಗಳನ್ನು ಜೋಡಿಸುತ್ತಾರೆ. ಪ್ರತಿಯೊಂದು ಹರಡೆಯ ಮೇಲೆ ಮತ್ತು ಕೆಳಗೆ, ಪ್ಯಾರಿಯ ಅಥವಾ ಕೊಳಗ ಎಂದು ಕರೆಯುವ, ತಟ್ಟೆಯಾಕಾರದ, ಲೋಹದ ಉಂಗುರಗಳನ್ನು ಜೋಡಿಸಿರುತ್ತಾರೆ. ಅಷ್ಟೇ ಅಲ್ಲ, ಈ ಗಗ್ಗರಗಳ ನಡುವೆ, ವರ್ತುಲಾಕಾರದ, ತಗಡಿನ ತಟ್ಟೆಗಳನ್ನು ಜೋಡಿಸುತ್ತಾರೆ. ಈ ತಟ್ಟೆಗಳನ್ನು ಜಾಲರ ಅಥವಾ ಜಾಲ್ರ ಎಂದು ಕರೆಯುತ್ತಾರೆ. ಈ ಜಾಲರಗಳಿಗೆ,  ಇನ್ನಷ್ಟು ಚಿಕ್ಕಪುಟ್ಟ ತಗಡಿನ ಚೂರುಗಳನ್ನು ಅಂಟಿಸಿರುತ್ತಾರೆ. ಇವು ಆ ಕಡೆ ಈಕಡೆ ಚಲಿಸಬಲ್ಲವು. ಗಳದಲ್ಲಿ ಮೇಲೆ ಹೋದಂತೆಲ್ಲ ಜಾಲರಗಳ ಹಾಗೂ ಗಗ್ಗರಗಳ ಗಾತ್ರವು ಕಡಿಮೆಯಾಗುತ್ತದೆ. ನಂದಿಕೋಲಿನ ಮೇಲ್ಭಾಗವನ್ನು ಸುಮಾರು ನಾಲ್ಕು ಅಡಿಗಳವರೆಗೆ ಬಿಳಿ-ಕೆಂಪು ಬಟ್ಟೆಗಳಿಂದ ಸುತ್ತುತ್ತಾರೆ. ಇದೆಲ್ಲದರ ಅನಂತರ, ನಂದಿಕೋಲಿನ ತುದಿಯಲ್ಲಿ, ಕೆಂಪು ಅಥವಾ ಕೇಸರಿ ಬಣ್ಣದ ಬಾವುಟ ಇರುತ್ತದೆ. ಈ ಬಾವುಟದ ಬಟ್ಟೆಯಲ್ಲಿ, ಶಿವಲಿಂಗ ಮತ್ತು  ಒಂದೆರಡು ನಂದಿಗಳ ಚಿತ್ರವನ್ನು ಹೊಲಿದಿರುತ್ತಾರೆ. ಈ ಬಾವುಟಕ್ಕಿಂತ ಮೇಲೆ, ಕಳಶವೆಂದು ಕರೆಯಲಾಗುವ ಚಿಕ್ಕ ಛತ್ರಿ ಇರುತ್ತದೆ.

ನಂದಿಕೋಲಿನ ಕೆಳಭಾಗದಲ್ಲಿ, ಬುಡದಿಂದ ಸುಮಾರು ಎರಡು ಅಡಿಗಳ ಎತ್ತರದಲ್ಲಿ ಒಂದು ರಂಧ್ರವನ್ನು ಕೊರೆದಿರುತ್ತಾರೆ. ಆ ರಂಧ್ರದ ಮೂಲಕ ಹಾದುಬರುವ ಹಗ್ಗವನ್ನು ನರ್ತಕನ ಭುಜಗಳಿಗೆ ಕಟ್ಟುತ್ತಾರೆ. ಈಗ ನರ್ತಕನು ಆ ಕೋಲನ್ನು ಎತ್ತಿಕೊಂಡು ಮುಂದೆ ನಡೆಯುತ್ತಾನೆ. ನಂದಿಕೋಲಿನ ಒಟ್ಟು ಭಾರವು ಸುಮಾರು ಇಪ್ಪತ್ತು ಕಿಲೋಗ್ರಾಮುಗಳಷ್ಟು. ಇದನ್ನು ಮೇಲೆತ್ತಿ ಹಿಡಿದು, ನರ್ತನ ಮಾಡಲು, ಅಪಾರವಾದ ಶಕ್ತಿ ಮತ್ತು ಕುಶಲತೆಗಳು ಬೇಕು. ನರ್ತಕನು ಕುಣಿಯುವಾಗ. ನಂದಿಕೋಲಿನ ಅನೇಕ ಭಾಗಗಳು ತಡೆಯಲಾಗದಷ್ಟು ಗಟ್ಟಿಯಾದ ಹಲವು ಬಗೆಯ ಶಬ್ದಗಳನ್ನು ಮಾಡುತ್ತವೆ.

ನಂದಿಕೋಲು ಕುಣಿತವನ್ನು ಕರಡೆ, ಡೊಳ್ಳು, ಸೊನಾಮಿ, ತಾಳ ಮತ್ತು ಚಮ್ಮಾಳ ಮುಂತಾದ ಉಪಕರಣಗಳ ಹಿನ್ನೆಲೆಯೊಂದಿಗೆ ನಡೆಸುತ್ತಾರೆ. ಈ ನರ್ತನದಲ್ಲಿ ಹಲವು ಬಗೆಯ ಹಲವು ವೇಗದ ಲಯಗಳಿರುತ್ತವೆ. ಕೆಲವೊಮ್ಮೆ ಅದರದು ಅತ್ಯಂತ ವೇಗದ ದ್ರುತಗತಿಯಾದರೆ ಕೆಲವೊಮ್ಮೆ ನಿಧಾನಗತಿ. ಕೆಲವು ಸಲ ನಂದಿಕಂಬವನ್ನು ಹಣೆ, ಗಲ್ಲ, ಭುಜ, ಎದೆ ಮುಂತಾದ ಅವಯವಗಳ ಮೇಲೆ, ಸ್ಥಿರವಾಗಿ ನಿಲ್ಲಿಸುವ ಚಮತ್ಕಾರವನ್ನೂ ತೋರಿಸುತ್ತಾರೆ. ನಂದಿಕೋಲು ಕುಣಿತದಲ್ಲಿ, ಅನೇಕ, ಜಟಿಲವಾದ ಹೆಜ್ಜೆಹಾಕುವಿಕೆ ಮತ್ತು ಚಲನವಲನಗಳಿರುತ್ತವೆ. ಅವುಗಳನ್ನು ಒಂದ್ಹೆಜ್ಜೆ, ಎರಡ್ಹೆಜ್ಜೆ, ದೌಡ್ಹೆಜ್ಜೆ, ತಟ್ಟಿ ಹೆಜ್ಜೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.  ಈ ನರ್ತಕರ ಪೋಷಾಕು ಬಹಳ ಸರಳವಾಗಿರುತ್ತದೆ. ಬಿಳಿಯ ಅಂಗಿ, ಕಚ್ಚೆ ಪಂಚೆ, ಬಣ್ಣದ ರುಮಾಲು ಮತ್ತು ಬಿಳಿಯ ಸೊಂಟಪಟ್ಟಿ, ಇಷ್ಟೇ ಅವರ ವೇಷಭೂಷಣ. ಹಣೆಯ ತುಂಬ ವಿಭೂತಿಯ ಲೇಪವಿರುತ್ತದೆ.

ಮುಖ್ಯವಾಗಿ, ನಂದಿಕೋಲು ಕುಣಿತವು ಭಕ್ತಿ, ವೀರಾವೇಶ, ಮನರಂಜನೆ ನೀಡುವ ಹಂಬಲ ಮತ್ತು ಕೌಶಲ್ಯಗಳ ಸಂಯೋಜನೆ. ಪ್ರತಿಯೊಬ್ಬರೂ ತಮ್ಮ ನಿಲುವಿಗೆ ಅನುಗುಣವಾಗಿ ಅದರ ಅನುಭವ ಪಡೆಯುತ್ತಾರೆ.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು