ಜಾನಪದ ಮತ್ತು ಜನಪದ ಕಲೆಗಳು
ಕಂಬಳ

          ಕಂಬಳವು, ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ಇದರಲ್ಲಿ ನೀರುತುಂಬಿದ ಕೆಸರುಗದ್ದೆ ಅಥವಾ ನದಿಯ ದಡದ ಮರಳುದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದಲ್ಲಿ, ಕೋಣಗಳ ನಡುವೆ ಓಟದ ಪಂದ್ಯವನ್ನು ನಡೆಸಲಾಗುತ್ತದೆ. ಇದು ತುಳುಸಂಸ್ಕೃತಿಗೆ ವಿಶಿಷ್ಟವಾದ ಚಟುವಟಿಕೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಗಳಲ್ಲಿ ಈ ಪಂದ್ಯಗಳನ್ನು ನಡೆಸುತ್ತಾರೆ. ಕಂಬಳ ಮತ್ತು ಕೋಳಿ ಅಂಕಗಳು ನೂರಾರು ವರ್ಷಗಳಿಂದ ಈ ಸಮುದಾಯಗಳನ್ನು ಆಕರ್ಷಿಸಿವೆ. ಈಗ ಕೇವಲ ಮನರಂಜನೆಯ ಮಟ್ಟಕ್ಕೆ ಇಳಿದಿರುವ ಕಂಬಳವು ಒಂದು ಕಾಲದಲ್ಲಿ, ಸಾಮಾಜಿಕ-ಆರ್ಥಿಕ ಆಯಾಮಗಳನ್ನು ಪಡೆದ ಫಲವಂತಿಕೆಗೆ ಸಂಬಂಧಿಸಿದ ಧಾರ್ಮಿಕ ಆಚರಣೆಯಾಗಿತ್ತು. ಕಂಬಳ ಅಥವಾ ತುಳು ಭಾಷೆಯಲ್ಲಿ ಹೇಳುವಂತೆ ಕಂಬುಲ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ಧವಾಗಿರುವ ಕೆಸರುಗದ್ದೆ ಎಂದೇ ಅರ್ಥ. ಕಂಬಳ ಎಂದರೆ ಕೇವಲ ಕೋಣಗಳ ಓಟದ ಪಂದ್ಯವಲ್ಲ. ಅದಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳಿವೆ.   

          ಸಾಮಾನ್ಯವಾಗಿ, ಕಂಬಳಗಳು ನವೆಂಬರ್ ಮತ್ತು ಮಾರ್ಚ್ ತಿಂಗಳುಗಳ ನಡುವಿನ ಅವಧಿಯಲ್ಲಿ ನಡೆಯುತ್ತವೆ. ಕಂಬಳದಲ್ಲಿ ಬಾರೆ ಕಂಬಳ, ಪೂಕರೆ ಕಂಬಳ, ಅರಸು ಕಂಬಳ ಮತ್ತು ಈಗ ನಡೆಯುತ್ತಿರುವ ಆಧುನಿಕ ಕಂಬಳ ಎಂಬ ನಾಲ್ಕು ಬಗೆಗಳನ್ನು ಗುರುತಿಸಬಹುದು. ಬಾರೆ ಕಂಬಳ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಪಂದ್ಯಕ್ಕಿಂತ, ಇತರ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ. ಬಾರೆಕಂಬಳದಲ್ಲಿ, ಗದ್ದೆಯ ನಡುವೆ ಒಂದು ಬಾಳೆಯ ಗಿಡವನ್ನು ನೆಡುವುದೇ ಬಹಳ ಮುಖ್ಯ. ಕೋಣಗಳ ಓಟ ಕೇವಲ ಸಾಂಕೇತಿಕವಾದುದು. ಅರಸು ಕಂಬಳದಲ್ಲಿ ಆಚರಣೆಗಳು ಮತ್ತು ಪಂದ್ಯ ಎರಡಕ್ಕೂ ಸಮಾನ ಮಹತ್ವವಿದೆ. ಆಧುನಿಕ ಕಾಲದಲ್ಲಿ, ಆಚರಣೆಗಳು ಹಿನ್ನೆಲೆಗೆ ಸರಿದು, ಪಂದ್ಯಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ.

          ಕಂಬಳಕ್ಕೆ ಸಂಬಂಧಿಸಿದ ಆಚರಣೆಗಳು, ಅದಕ್ಕಾಗಿ ನಿಗದಿ ಪಡಿಸಿರುವ ದಿನಕ್ಕಿಂತ, ಕೆಲವು ದಿನಗಳು ಮುಂಚಿತವಾಗಿಯೇ ಪ್ರಾರಂಭವಾಗಿ, ಅದು ಮುಗಿದ ನಂತರವೂ ಮುಂದುವರಿಯುತ್ತವೆ. ಹಳ್ಳಿಯ ಹಿರಿಯರನ್ನು ಕಂಬಳಕ್ಕೆ ಆಹ್ವಾನಿಸುವುದು, ಕಂಬಳದ ಗದ್ದೆಯನ್ನು ಅಲಂಕರಿಸುವುದು, ಬೇರೆ ಬೇರೆ ಜಾನಪದ ದೈವಗಳನ್ನು ಪೂಜಿಸುವುದು, ಡೋಲು ಕುಣಿತ, ಕೊರಗ ಮತ್ತು ಮುಂಡಾಲ ಜಾತಿಗಳಿಗೆ ಸೇರಿದವರು ಹಾಡುವ ಹಾಡುಗಳು ಮತ್ತು ಕೋಣಗಳ ಮೆರವಣಿಗೆ ಇವೆಲ್ಲವನ್ನೂ ವಿಜೃಂಭಣೆಯಿಂದ ಆರಾಧನೆಯ ಹಾಗೆ ನಡೆಸಲಾಗುವುದು.  

          ಕೋಣಗಳ ಓಟದ ಪಂದ್ಯವನ್ನು ನಡೆಸುವ ವಿಧಾನವನ್ನು ಅವಲಂಬಿಸಿ ಕಂಬಳದಲ್ಲಿ ಮತ್ತೆ ನಾಲ್ಕು ಬಗೆಗಳಿವೆ. ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ. ಹಗ್ಗದ ಓಟದಲ್ಲಿ, ಕೋಣಗಳು ಒಂದು ನೊಗವನ್ನು ಕಟ್ಟಿಕೊಂಡು ಓಡುತ್ತವೆ. ಆ ನೊಗದ ಮಧ್ಯಕ್ಕೆ ಕಟ್ಟಿದ ಹಗ್ಗಗಳನ್ನು ಹಿಡಿದುಕೊಂಡಿರುವ ಮನುಷ್ಯನು ಕೋಣಗಳ ಸಂಗಡ ತಾನೂ ಓಡುತ್ತಾನೆ. ಅಡ್ಡ ಹಲಗೆ ಓಟದಲ್ಲಿ ಆ ಮನುಷ್ಯನು, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳ ಓಟವನ್ನು ನಿಯಂತ್ರಿಸುತ್ತಾನೆ. ನೇಗಿಲ ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಇಲ್ಲಿ ಸಾರಥಿಯು ನೇಗಿಲನ್ನು ಹಿಡಿದಿರುತ್ತಾನೆ. ಆ ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ. ಈ ಮೂರು ಪ್ರಭೇದಗಳಲ್ಲಿ, ಮಂಜೊಟ್ಟಿಯನ್ನು (ಪಂದ್ಯದ ಹಾದಿಯ ಕೊನೆ ಬಿಂದು), ಮೊದಲು ತಲುಪುವ ಕೋಣಗಳ ಜೋಡಿಯನ್ನು ವಿಜಯಿಯೆಂದು ಘೋಷಿಸಲಾಗುವುದು. ಆದರೆ, ಕಣೆ ಹಲಗೆ ಓಟದಲ್ಲಿ ಪಂದ್ಯದಲ್ಲಿ ಗೆಲ್ಲುವ ಜೋಡಿಯನ್ನು ನಿರ್ಧರಿಸುವ ವಿಧಾನ ಬೇರೆ. ಕಂಬಳದ ಗದ್ದೆಯ ಎರಡೂ ಬದಿಗಳಲ್ಲಿ, ನೆಲಮಟ್ಟದಿಂದ ಸುಮಾರು ಎರಡು ಮೀಟರುಗಳ ಎತ್ತರದಲ್ಲಿ, ಅಗಲವಾದ ಬಟ್ಟೆ ಅಥವಾ ಮರದ ಹಲಗೆಗಳನ್ನು ಕಟ್ಟಿರುತ್ತಾರೆ. ಇವುಗಳನ್ನು ನಿಶಾನೆಎಂದು ಕರೆಯುತ್ತಾರೆ. ಕೋಣಗಳು ಓಡುವಾಗ, ನೀರು ಮತ್ತು ಕೆಸರುಗಳ ಮಿಶ್ರಣವು ಎಗರುವ ಎತ್ತರವನ್ನು ಪರಿಗಣಿಸಿ, ಗೆಲ್ಲುವ ಜೋಡಿಯನ್ನು ತೀರ್ಮಾನಿಸುತ್ತಾರೆ. ಪಂದ್ಯದಲ್ಲಿ ಗೆದ್ದ ಜೋಡಿಯ ಒಡೆಯರಿಗೆ ಬಂಗಾರದ ಪದಕ ಮತ್ತು ಷೀಲ್ಡುಗಳನ್ನು ಬಹುಮಾಣವಾಗಿ ಕೊಡುತ್ತಾರೆ. ಗೆಲುವನ್ನು ತಂದಿಕೊಟ್ಟ ಕೋಣಗಳಿಗೆ ಬಾಳೇಹಣ್ಣು, ಎಳನೀರು ಮುಂತಾದ ರುಚಿಯಾದ ಆಹಾರ ದೊರೆಯುತ್ತದೆ.

          ಈಚಿನ ದಿನಗಳಲ್ಲಿ ಕಂಬಳವು ಬಹಳ ವೈಭವಯುತವಾಗಿದೆ. ಸೋಲು-ಗೆಲುವುಗಳು ಮರ್ಯಾದೆಯ ಪ್ರಶ್ನೆಯಾಗಿಬಿಟ್ಟಿವೆ. ಅದೇನೇ ಇರಲಿ, ಕಂಬಳಗಳು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗಗಳಾಗಿ ಮುಂದುವರಿದಿವೆ.

       

 

           

     

     

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು