ಜಾನಪದ ಮತ್ತು ಜನಪದ ಕಲೆಗಳು
ಜುಂಜಪ್ಪ

'ಜುಂಜಪ್ಪನು ಕಾಡುಗೊಲ್ಲರ ಸಮುದಾಯಕ್ಕೆ ಸೇರಿದ ಸಾಂಸ್ಕೃತಿಕ ನಾಯಕ. ನಂಬಿಕೆಗಳು ಮತ್ತು ಆಚರಣೆಗಳ ನೆಲೆಯಲ್ಲಿ ತಾವು ಊರು ಗೊಲ್ಲರಿಗಿಂತ ಭಿನ್ನವೂ ಅನನ್ಯವೂ ಆಗಿರುವುದಾಗಿ ಕಾಡುಗೊಲ್ಲರು ಸ್ಪಷ್ಟಪಡಿಸುತ್ತಾರೆ. 'ಜುಂಜಪ್ಪನ ಕಾವ್ಯ' ಅಥವಾ 'ಕಾಡುಗೊಲ್ಲರ ಮಹಾಕಾವ್ಯ'ವು ಕನ್ನಡದ ಮುಖ್ಯವಾದ ಮೌಖಿಕ ಕಾವ್ಯಗಳ ಸಾಲಿಗೆ ಸೇರುತ್ತದೆ.

ಬಹುಪಾಲು ವಿವರಗಳು ಪ್ರಾದೇಶಿಕವಾದರೂ ಜುಂಜಪ್ಪನ ಕಥೆಗೂ ಕೃಷ್ಣನ ಕಥೆಗೂ ಅನೇಕ ಸಾಮ್ಯಗಳಿವೆ. ಕೃಷ್ಣನ ಹಾಗೆಯೇ ಜುಂಜಪ್ಪನೂ ತನ್ನ ಸೋದರಮಾವನಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾನೆ. ಅವನ ಪಶುಸಂಪತ್ತನ್ನು ವಶಪಡಿಸಿಕೊಳ್ಳುವ ಹುನ್ನಾರ ಹೂಡಿದ ಸೋದರಮಾವಂದಿರು ವಿಷಪೂರಿತವಾದ ಸಿಹಿತಿಂಡಿಗಳನ್ನು ಕೊಟ್ಟು ಜುಂಜಪ್ಪನನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಆ ತಿಂಡಿಯನ್ನು ಸೇವಿಸಿದ ಜುಂಜಪ್ಪನು ಸಾಯುತ್ತಾನೆ. ಆದರೆ, ಅವನು ಏಳು ದಿವಸಗಳ ನಂತರ ಮರಳಿ ಬದುಕಿ ಬರುತ್ತಾನೆ. ಆ ಸೋದರಮಾವಂದಿರನ್ನು ಬೆಂಕಿಯ ಬಾಣಗಳನ್ನು ಬಳಸಿ ಕೊಲ್ಲುತ್ತಾನೆ.

ನಿರ್ದಿಷ್ಟವಾದ ಪುರಾವೆಗಳು ದೊರಕದಿದ್ದರೂ, ಜುಂಜಪ್ಪನು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ  ರಾಯಕಳವೇರಹಳ್ಳಿಯಲ್ಲಿ ಅಥವಾ ಅದೇ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಹುಟ್ಟಿದನೆಂದು ಹೇಳಲು ಅವಕಾಶವಿದೆ. ಜುಂಜಪ್ಪನ ಕಾವ್ಯದ ಪಾರಂಪರಿಕ ಗಾಯಕರು ಅವನ ವಂಶಾವಳಿಯನ್ನು ಕರಡಿಗೊಲ್ಲರ ಸಮುದಾಯದ ಪೂಜಾರಿ ಕೊಂಡಪ್ಪನವರೆಗೆ ಕರೆದೊಯ್ಯುತ್ತಾರೆ. ಅವನಿಗೆ ಮಾರಣ್ಣ ಮತ್ತು ಮಲ್ಲಣ್ಣ ಎಂಬ ಸೋದರರೂ ಮಾರಕ್ಕ ಎಂಬ ಸೋದರಿಯೂ ಇದ್ದರು. ಹಾಗಲವಾಡಿಯಲ್ಲಿರುವ ಜುಂಜಪ್ಪನ ದೇವಾಲಯ ಮತ್ತು ಅದರ ಸಮೀಪದಲ್ಲಿಯೇ ಇರುವ ಜುಂಜಪ್ಪನ ಹಟ್ಟಿಗಳು ಮುಖ್ಯವಾದ ಸ್ಥಳಗಳು.

ಜುಂಜಪ್ಪನ ಕಾವ್ಯವು ಐತಿಹಾಸಿಕವಾದ ಘಟನೆಗಳಿಗೆ ಪೌರಾಣಿಕವಾದ ಆಯಾಮಗಳನ್ನು ನೀಡುತ್ತದೆ. ಆ ಮೂಲಕ ಒಟ್ಟು ಗೊಲ್ಲರ ಸಮುದಾಯದ ಐತಿಹಾಸಿಕ ವಿಕಸನವನ್ನೇ ತನ್ನೊಳಗೆ ಹುದುಗಿಸಿಕೊಂಡಿದೆ. ಜುಂಜಪ್ಪನು ವೀರಭದ್ರನ ಅವತಾರ. ಅವು ಇತರರ ಹಾಗೆ ಜನ್ಮ ತಳೆಯಲಿಲ್ಲ. ಅವನು ಕಂಬೇರ ಗೊಲ್ಲರ ಸಮುದಾಯದ ಚಿನ್ನಮ್ಮನ ಬೆನ್ನಿನಲ್ಲಿ ಮೂಡಿಬಂದವನು. ಕ್ರಮೇಣ, ಅವನು ತನ್ನ ಸಾಹಸಕೃತ್ಯಗಳಿಂದ, ಸಮುದಾಯದ ನಾಯಕನಾಗಿ ರೂಪುಗೊಳ್ಳುತ್ತಾನೆ. ಗೊಲ್ಲರ ಸಂಸ್ಕೃತಿಯನ್ನು ಬಹಳ ವ್ಯವಸ್ಥಿತವಾಗಿ ರೂಪಿಸಿದ್ದರಿಂದಲೇ ಅವನನ್ನು ಮರಣಾನಂತರದಲ್ಲಿ ದೈವತ್ವಕ್ಕೆ ಏರಿಸಲಾಗುತ್ತದೆ. ದಕ್ಷಿಣ ಕರ್ನಾಟಕದ ವನಪ್ರದೇಶಗಳಾದ ಶಿವಗಂಗೆ, ಬಾಬಾಬುಡನ್ ಗಿರಿ, ಮದಗದ ಗುಡ್ಡ, ಮಾರಿಕಣಿವೆ ಮುಂತಾದ ಪ್ರದೇಶಗಳಲ್ಲಿ ಅವನು ನಡೆಸಿದ ಪರ್ಯಟನೆಯನ್ನು ಕಾವ್ಯವು ಬಹಳ ಚಿತ್ರಮಯವಾಗಿ ಕಟ್ಟಿಕೊಡುತ್ತದೆ. ಈ ಸ್ಥಳಗಳಲ್ಲಿದ್ದ ಶತ್ರುಗಳನ್ನು ಜುಂಜಪ್ಪನು ತನ್ನ ಸೋದರರ ನೆರವಿನಿಂದ ನಾಶಮಾಡುತ್ತಾನೆ.

ಜುಂಜಪ್ಪನ ಭಕ್ತರು 'ಜುಂಜಪ್ಪನ ಗಣೆ' ಎಂಬ, ಕೊಳಲಿನಂತಹ ವಾದ್ಯದೊಂದಿಗೆ ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಿರುತ್ತಾರೆ. ಬಿದಿರಿನಿಂದ ಮಾಡಿದ ಈ ಗಣೆಯನ್ನು ಬಣ್ಣ ಬಣ್ಣದ ಬಟ್ಟೆಗಳು, ನವಿಲುಗರಿಗಳು, ನಾಗರ ಹೆಡೆ ಮುಂತಾದ ವಸ್ತುಗಳಿಂದ ಸಿಂಗರಿಸಿರುತ್ತಾರೆ. ಅವರು ತಮ್ಮ ಸಮುದಾಯಕ್ಕೆ ಸೇರಿದವರು ಮಾತ್ರವಲ್ಲದೆ ಇತರರಿಂದಲೂ ದಾನಧರ್ಮಗಳನ್ನು ಸಂಗ್ರಹಿಸುತ್ತಾರೆ. ಜುಂಜಪ್ಪನು ಗಣೆಯನ್ನು ಊದುವ ಕಲೆಯಲ್ಲಿ ನಿಪುಣನಾದವನು. 'ಪಿಳ್ಳಂಗೋವಿ' ಎಂದು ಕರೆಯಲಾಗುವ ಈ ವಾದ್ಯವು ಜುಂಜಪ್ಪನ ಕಾವ್ಯದ ಓದಿಗೆ ಹಿನ್ನೆಲೆ ಸಂಗೀತವನ್ನು ಒದಗಿಸುತ್ತದೆ.

ಜುಂಜಪ್ಪನ ವ್ಯಕ್ತಿತ್ವದ ಸುತ್ತಲೂ ಮಾಟ-ಮಂತ್ರಗಳ ನಿಗೂಢ ಆವರಣವೊಂದು ಹರಡಿಕೊಂಡಿದೆ. ಮಹಾಕಾವ್ಯವು ನಮ್ಮನ್ನು ಮಾಟ-ಮಂತ್ರಗಳು ವ್ಯಾಪಕವಾಗಿದ್ದ ಪ್ರಾಚೀನ ಕಾಲಕ್ಕೆ ಕರೆದೊಯ್ಯುತ್ತದೆ. ಏನೇ ಆದರೂ ಜುಂಜಪ್ಪನು ದುಷ್ಟ ಶಕ್ತಿಗಳನ್ನು ವಿರೋಧಿಸುವವನು. ಅವನು ತನಗಿರುವ ವಿಶೇಷ ಶಕ್ತಿಗಳನ್ನು ಸಮುದಾಯದ ಒಳಿತಿಗೆ ಬಳಸುತ್ತಾನೆ. ಜುಂಜಪ್ಪನನ್ನು ಹಾವು ಮತ್ತು ಚೇಳುಗಳ ಮೇಲೆ ಅವನಿಗಿರುವ ನಿಯಂತ್ರಣಶಕ್ತಿಗಾಗಿಯೂ ಪೂಜಿಸಲಾಗುತ್ತದೆ.

 

ಮುಂದಿನ ಓದು:

    1. 'ಕಾಡುಗೊಲ್ಲರು ಮತ್ತು ಅವರ ಸಂಪ್ರದಾಯಗಳು', ಟಿ.ಎನ್. ಶಂಕರನಾರಾಯಣ

    2. 'ಜುಂಜಪ್ಪನ ಕಾವ್ಯ', ಸಂ. ಕಾಳೇಗೌಡ ನಾಗವಾರ ಮತ್ತು ಅಗ್ರಹಾರ ಕೃಷ್ಣಮೂರ್ತಿ

    3. 'ಗೊಲ್ಲ ಕಡಗ', ಮೀರಾಸಾಬಿಹಳ್ಳಿ ಶಿವಣ್ಣ

    4. 'ಜುಂಜಪ್ಪ', ಸಂ. ಚೆಲುವರಾಜು, ಕನ್ನಡ ವಿಶ್ವವಿದ್ಯಾಲಯ, ಹಂಪಿ

 

ವಿದ್ಯುನ್ಮಾನ ಸಂಪರ್ಕಗಳು

    1. The epic of Junjappa text and performance By Śaṅkaranārāyaṇa, Ṭi. Naṃ.

 Published in 1994, Regional Resources Centre for Folk Performing Arts, M.G.M. College (Udupi, Karnataka, India)

 

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು