ಜಾನಪದ ಮತ್ತು ಜನಪದ ಕಲೆಗಳು
ಜೋಕುಮಾರ

ಜೋಕುಮಾರನು ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ದೈವ. ಅವನು ಮಳೆ ಮತ್ತು  ಫಲಸಮೃದ್ಧಿಗಳ ದೇವತೆಯೆಂದು ಹೆಸರುವಾಸಿಯಾಗಿದ್ದಾನೆ. ಅವನ ಹುಟ್ಟಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳು ಮತ್ತು ಪುರಾಣಕಥೆಗಳಿವೆ. ಅವುಗಳಲ್ಲಿ ಒಂದರ ಪ್ರಕಾರ ಅವನು ಸಪ್ತರ್ಷಿಗಳ ಶಿಷ್ಯನಾಗಿದ್ದವನು. ಆಗ ಅವನ ಹೆಸರು ಜೋಕ. ಅವನು, ತಮ್ಮ ಸಮುದಾಯಕ್ಕೆ ಸೇರಿದ ಒಬ್ಬ ಹೆಂಗಸಿನ  ಸಂಗಡ ಅನುಚಿವರ್ತನೆಯಲ್ಲಿ ತೊಡಗಿದ್ದರಿಂದ ಕುಪಿತರಾದ, ಅಗಸರು ಅವನನ್ನು ಕೊಲ್ಲುತ್ತಾರೆ. ಅವನ ಸಾವಿನ ನಂತರ ಧಾರಾಕಾರವಾದ ಮಳೆ ಬರುತ್ತದೆ. ಆದ್ದರಿಂದ ಅನಾವೃಷ್ಟಿಯಿಂದ ಪೀಡಿತರಾದವರು ಮತ್ತು ಮಕ್ಕಳನ್ನು ಬಯಸುವವರು ಜೋಕುಮಾರನನ್ನು ಪೂಜಿಸುತ್ತಾರೆ. ಇನ್ನೊಂದು ದಂತಕಥೆಯ ಪ್ರಕಾರ ಜೋಕುಮಾರನು ಜೋಕ ಮತ್ತು ದಿಟ್ಟವ್ವ ಎನ್ನುವವರ ಮಗ. ಅದೇ ಅವನ ಹೆಸರಿಗೆ ಕಾರಣವಾಗಿದೆ. ಇನ್ನು ಒಂದು ದಂತಕತೆಯಂತೆ, ಅವನು ಗಣಪತಿಯ ಅನಂತರ ಶಿವನ ಮಗನಾಗಿ ಹುಟ್ಟಿದವನು. ಅವನಿಗಿರುವ ಮಳೆ ತರಿಸುವ ಶಕ್ತಿಗೆ, ತಂದೆಯಾದ ಶಿವನ ಅನುಗ್ರಹವೇ ಕಾರಣ. ಕನ್ನಡದ ಲಿಖಿತ ಕೃತಿಗಳಲ್ಲಿಯೂ ಜೋಕುಮಾರನ ಪ್ರಸ್ತಾಪ ಬರುತ್ತದೆ. ಇಂತಹ ಪ್ರಸ್ತಾಪಗಳನ್ನು ಹನ್ನೊಂದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಸತತವಾಗಿ ನೋಡಬಹುದು. ಜಾತಕತಿಲಕ(ಕ್ರಿ.ಶ. 1049),ಜೀವಸಂಬೋಧನೆ(ಕ್ರಿ.ಶ. 1200), ನೇಮಿನಾಥಪುರಾಣ(ಕ್ರಿ.ಶ. 1180),ಸಮಯಪರೀಕ್ಷೆ, ಬಸವವಚನ(ಕ್ರಿ.ಶ. 1222), ಪಾರ್ಶ್ವಪುರಾಣ(ಕ್ರಿ.ಶ. 1766), ಮತ್ತು  ‘ಅನುಭವಶಿಖಾಮಣಿಗಳು ಅಂತಹ ಪುಸ್ತಕಗಳಲ್ಲಿ ಕೆಲವು. ಅವೆಲ್ಲವೂ ಜೋಕುಮಾರನ ಮಾಂತ್ರಿಕಶಕ್ತಿಗಳನ್ನು ವಿವರಿಸಿ ಅವನು ಮಾಡಿರುವ ಪವಾಡಗಳನ್ನು ಬಣ್ಣಿಸುತ್ತವೆ.

ಬೆಸ್ತರು, ಮಡಿವಾಳರು, ಅಕ್ಕಸಾಲಿಗರು, ಒಕ್ಕಲಿಗರು ಮುಂತಾದ ಹಲವು ಸಮುದಾಯಗಳು ಜೋಕುಮಾರನನ್ನು ಆರಾಧಿಸುತ್ತವೆ. ರೈತರು ಬಹಳ ಆತಂಕದಿಂದ ಮಳೆಯ ಆಗಮನವನ್ನು ನಿರೀಕ್ಷಿಸುತ್ತಿರುವ ಭಾದ್ರಪದ ತಿಂಗಳಿನಲ್ಲಿ ಅವನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಅವನು ಹುಟ್ಟಿದ ದಿನವಾದ ಭಾದ್ರಪದ ಶುಕ್ಲ ಅಷ್ಟಮಿಯಂದು ಮೊದಲಾಗುವ ಸಮಾರಂಭಗಳು, ಅದೇ ತಿಂಗಳಿನ ಪೂರ್ಣಿಮೆಯವರೆಗೆ ನೆಡೆಯುತ್ತವೆ. ಅದು ಅವನ ಸಾವಿನ ದಿನ. 

ಮೇಲೆ ಹೇಳಿದ ಸಮುದಾಯಗಳಿಗೆ ಸೇರಿದ ಹೆಣ್ಣುಮಕ್ಕಳು, ಹತ್ತಿರದ ಕೆರೆಗಳಿಂದ ಜೇಡಿಮಣ್ಣನ್ನು ಸಂಗ್ರಹಿಸಿ ತರುತ್ತಾರೆ. ಆ ಮಣ್ಣಿನಿಂದ, ಚುಚ್ಚುವಂತಹ ಕಣ್ಣುಗಳು, ಅಗಲವಾದ ಹಣೆ, ದಪ್ಪ ತುಟಿಗಳು, ತಕ್ಷಣ ಗಮನ ಸೆಳೆಯುವ ದೊಡ್ಡ ಮೂಗು, ದಪ್ಪ ಮೀಸೆಗಳು ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ, ಅವನ ಕಾಮುಕತೆ ಮತ್ತು ಲೈಂಗಿಕಶಕ್ತಗಳ ಸಂಕೇತವಾದ ಬೃಹದಾಕಾರದ ಶಿಶ್ನ ಇವಿಷ್ಟು  ಆ ಪ್ರತಿಮೆಯ ಮುಖ್ಯ ಲಕ್ಷಣಗಳು. ಈ ಮೂರ್ತಿಯ ತುಟಿಗಳಿಗೆ ಬೆಣ್ಣೆಯ ಲೇಪನಮಾಡಿ, ಅದನ್ನು ಬೇವಿನೆಲೆಗಳಿಂದ ಅಲಂಕೃತವಾದ ಬುಟ್ಟಿಯೊಳಗೆ ಇಡುತ್ತಾರೆ. ಬುಟ್ಟಿಯೊಳಗೆ ಆಸೀನವಾದ ಈ ಮೂರ್ತಿಯನ್ನು ಮನೆಯಿಂದ ಮನೆಗೆ, ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅದರ ಹಿಂದೆ, ಹಾಡುಗಳನ್ನು ಹೇಳುವ ಹೆಂಗಸರು ಹೋಗುತ್ತಿರುತ್ತಾರೆ. ಆಹಾರಧಾನ್ಯಗಳು ಮತ್ತು ಇತರ ವಸ್ತುಗಳ ರೂಪದಲ್ಲಿ ದಾನನೀಡಿದ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಆ ಹಾಡುಗಳು ಜೋಕುಮಾರನ ಸಾಹಸಗಳು ಮತ್ತು ಪವಾಡಗಳನ್ನು ಬಿತ್ತರಿಸುತ್ತವೆ. ಈ ದೇವತೆಯೊಂದಿಗೆ ಪಡವಲಕಾಯಿಯನ್ನು ಬಹುವಾಗಿ ಪ್ರಸ್ತಾಪಿಸುತ್ತಾರೆ. ಆ ತರಕಾರಿಯ ಆಕಾರಕ್ಕಿರುವ ಸಾಂಕೇತಿಕ ಗುಣವೇ ಹಾಗೆ ಮಾಡಲು ಕಾರಣವಿರಬೇಕು. 

ಈ ಹಬ್ಬದ ಕೊನೆಯ ದಿನದಂದು ಭಕ್ತರೆಲ್ಲರೂ ಪೂರ್ವನಿಶ್ಚಿತವಾದ ಜಾಗದಲ್ಲಿ ಒಟ್ಟುಗೂಡುತ್ತಾರೆ. ಆಲ್ಲಿ ಒಂದುಬಗೆಯ ಅಂಬಲಿಯನ್ನು ತಯಾರಿಸಲಾಗುತ್ತದೆ. ಇದನ್ನು ಎಲ್ಲ ಭಕ್ತರಿಗೂ ಜೋಕುಮಾರಸ್ವಾಮಿಯ ಪ್ರಸಾದವೆಂದು ವಿತರಣೆ ಮಾಡಲಾಗುತ್ತದೆ. ಈ ಅಂಬಲಿಯನ್ನು ರೈತರು ತಮ್ಮ ಹೊಲಗದ್ದೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅದನ್ನು ಮತ್ತೊಮ್ಮೆ ಪೂಜಿಸಿ ಹೊಲದ ತುಂಬಾ ಸಿಂಪಡಿಸುತ್ತಾರೆ. ಹೀಗೆ ಮಾಡುವುದರಿಂದ, ಹೊಲದಲ್ಲಿ ಸಮೃದ್ಧವಾದ ಬೆಳೆ ಬರುವುದೆಂಬ ನಂಬಿಕೆ ಅವರದು.

ಮಕ್ಕಳಿಲ್ಲದ ಹೆಂಗಸರು ಕೂಡ, ಮಕ್ಕಳನ್ನು ಪಡೆಯುವ ನಿರೀಕ್ಷೆಯಿಂದ ಜೋಕುಮಾರಸ್ವಾಮಿಯನ್ನು ಪೂಜಿಸುತ್ತಾರೆ. ಈ ದೇವತೆಯನ್ನು ಕುರಿತಂತೆ ರಚಿತವಾಗಿರುವ ಹಾಡುಗಳಿಗೆ ಕೆಲವು ನಿರ್ದಿಷ್ಟವಾದ ಲಕ್ಷಣಗಳಿವೆ. ಅವುಗಳಲ್ಲಿ ಕಲಾತ್ಮಕವಾದ ಗುಣಗಳನ್ನೂ ಕಾಣಬಹುದು.

ಜೋಕುಮಾರನ ಬಗ್ಗೆ, ಪ್ರಸಿದ್ಧ ವಿದ್ವಾಂಸರಾದ ಎಡ್ಗಾರ್ ಥರ್ಸ್ಟನ್ ಮತ್ತು ರಂಗಾಚಾರಿಯವರು , ತಮ್ಮ ‘Castes and Tribes of South India’ ಎಂಬ ಪುಸ್ತಕದಲ್ಲಿ, ಜೋಕುಮಾರನ ಬಗ್ಗೆ ಕೇಳಿರುವ ಕೆಲವು ಮಾತುಗಳನ್ನು ಇಲ್ಲಿ ಕೊಡಲಾಗಿದೆ:

ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕೃಷಿ ಆಚರಣೆಯನ್ನು ಕುರಿತು ನಾನು ಕೆಳಕಂಡ ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ. ಆದರಲ್ಲಿ ಕಬ್ಬೇರ ಜಾತಿಯ ಜನರು ಭಾಗವಹಿಸುತ್ತಾರೆ: ‘ಭಾದ್ರಪದ ಮಾಸದ ಹುಣ್ಣಿಮೆಯ ದಿನ, ಕೃಷಿಸಮುದಾಯಗಳಿಗೆ ಸೇರಿದ ಜನರು ಜೋಕುಮಾರ ಎನ್ನುವ ಹಬ್ಬವನ್ನು ಆಚರಿಸುತ್ತಾರೆ. ಮಳೆದೇವರನ್ನು ಒಲಿಸುವುದು ಅದರ ಉದ್ದೇಶ. ಕಬ್ಬೇರ ಜಾತಿಗೆ ಸೇರಿದ ಉಪಪಂಗಡಗಳಲ್ಲಿ ಒಂದಾದ ಬಾರಿಕರ ಹೆಣ್ಣುಮಕ್ಕಳು, -ಅದರಲ್ಲಿಯೂ ಗೌರಿಮಕ್ಕಳು ವಿಭಾಗಕ್ಕೆ ಸೇರಿದವರು- ತಮ್ಮ ಊರು ಅಥವಾ ಹಳ್ಳಿಯ ಹಾದಿಬೀದಿಗಳಲ್ಲಿ ಮನೆಯಿಂದ ಮನೆಗೆ ಮೆರವಣಿಗೆ ಹೋಗುತ್ತಾರೆ. ಅವರ ತಲೆಯ ಮೇಲೆ, ಬೇವಿನ ಎಲೆಗಳು, ಬಗೆಬಗೆಯ ಹೂಗಳು ಮತ್ತು ವಿಭೂತಿ ತುಂಬಿದ ಬುಟ್ಟಿಗಳಿರುತ್ತವೆ. ಅವರು ಕೃಷಿಕರ ಸಮುದಾಯಕ್ಕೆ ಸೇರಿದ ಕಾಪು ಜಾತಿಯವರ ಮನೆಗಳಲ್ಲಿ ಭಿಕ್ಷೆ ಬೇಡುತ್ತಾರೆ. ತಾವು ಪಡೆಯುವ ದವಸ ಧಾನ್ಯಗಳು ಮತ್ತು ಆಹಾರಪದಾರ್ಥಗಳಿಗೆ ಪ್ರತಿಯಾಗಿ, ಆ ಕುಟುಂಬಗಳಿಗೆ ತಮ್ಮ ಬುಟ್ಟಿಯಲ್ಲಿರುವ ಬೇವಿನೆಲೆ ಮುಂತಾದ ವಸ್ತುಗಳ ಒಂದು ಭಾಗವನ್ನು ಕೊಡುತ್ತಾರೆ. ಕಾಪು ಕುಟುಂಬಗಳವರು ಾ ವಸ್ತುಗಳನ್ನು ತಮ್ಮ ಹೊಲಗಳಿಗೆ ತೆಗೆದುಕೊಂಡುಹೋಗುತ್ತಾರೆ. ಅಲ್ಲಿ ಅವರು ಜೋಳದ ಅಂಬಲಿಯನ್ನು ತಯಾರಿಸುತ್ತಾರೆ. ಆ ಗಂಜಿಗೆ ತಾವು ತಂದಿರುವ ಬೇವಿನೆಲೆ, ಹೂವು ಮತ್ತು ವಿಭೂತಿಗಳನ್ನು ಬೆರೆಸುತ್ತಾರೆ. ಆ ಮಿಶ್ರಣವನ್ನು ಹೊಲಗಳಲ್ಲಿ ಸಿಂಪಡಿಸುತ್ತಾರೆ. ಅನಂತರ ಈ ಕಾಫುಗಳು ಕುಂಬಾರನ ಆವುಗೆಗೆ ಹೋಗಿ ಅಲ್ಲಿನ ಬೂದಿಯನ್ನು ಸಂಗ್ರಹಿಸಿ, ಅದರಿಂದ ಮನುಷ್ಯಾಕಾರದ ಮೂರ್ತಿಯನ್ನು ತಯಾರಿಸುತ್ತಾರೆ. ಈ ಮೂರ್ತಿಯನ್ನು, ಹೊಲದಲ್ಲಿ ಎದ್ದು ಕಾಣುವ ಜಾಗದಲ್ಲಿ ಪ್ರತಿಷ್ಠಾಪಿಸುತ್ತಾರೆ. ಅದನ್ನು ಜೋಕುಮಾರ ಅಥವಾ ಮಳೆದೇವರು ಎಂದು ಕರೆಯಲಾಗುತ್ತದೆ.......... ಜೋಕುಮಾರನ ಪೂಜೆಯ ಎರಡನೆಯ ವಿಧಾನವನ್ನು ಮುದ್ದಂಎಮದು ಕರೆಯುತ್ತಾರೆ. ಇದರಲ್ಲಿ, ನೆಲದ ಮೇಲೆ, ಇದ್ದಲಿನ ಪುಡಿಯಿಂದ, ಮನುಷ್ಯಾಕೃತಿಯ ಸ್ಥೂಲವಾದ ಹೊರಗೆರೆಗಳನ್ನು ಬರೆಯಲಾಗುತ್ತದೆ. ಈ ಆಕೃತಿಯನ್ನು ಸೂರ್ಯೋದಯಕ್ಕಿಂತ ಬಹಳ ಮುಂಚಿತವಾಗಿ, ಹಗಲಿನ ಜನಜಂಗುಳಿಯು ಕಾಣಿಸಿಕೊಳ್ಳುವುದಕ್ಕೆ ಮೊದಲೇ ಬರೆಯುತ್ತಾರೆ. ಎರಡು ರಸ್ತೆಗಳು ಕೂಡುವ ಕಡೆ, ಅಥವಾ ಹಳ್ಳಿಯ ಕೇಂದ್ರಪ್ರದೇಶದಲ್ಲಿ ಈ ಬರೆಹವು ಮೈದಳೆಯುತ್ತದೆ. ಈ ಆಕೃತಿಗಳನ್ನು ಬರೆಯುವ ಬಾರಿಕರಿಗೆ ಹಣಕಾಸಿನ ರೂಪದಲ್ಲಿ ಅಥವಾ ವಸ್ತುಗಳ ರೂಪದಲ್ಲಿ ಒಂದಿಷ್ಟು ಪ್ರತಿಫಲವನ್ನು ಕೊಡುತ್ತಾರೆ. ಈ ಆಕೃತಿಯು ಜೋಕುಮಾರನ ಪ್ರತಿನಿಧೀಕರಣ. ಬೀದಿಯಲ್ಲಿ ಹೋಗುವ ಜನರು ಅದನ್ನು ತುಳಿದು ಅವಮಾನ ಮಾಡಿದಾಗ ಜೋಕುಮಾರನು ಮಳೆಸುರಿಸುವನೆಂಬ ಪ್ರತೀತಿಯಿದೆ. ಈ ಜಿಲ್ಲೆಯಲ್ಲಿ ಜೋಕುಮಾರನ ಆರಾಧನೆಯ ಇನ್ನೊಂದು ಪ್ರಭೇದವೂ ಇದೆ. ಮಳೆ ಬಂದಾಗ, ಕಾಪು ಜನಾಂಗದ ಹೆಣ್ಣುಮಕ್ಕಳು, ಚಿಕ್ಕ ಪ್ರಮಾಣದ, ಬತ್ತಲೆ ಮನುಷ್ಯನ ವಿಗ್ರಹವನ್ನು ತಯಾರಿಸುತ್ತಾರೆ. ಅದನ್ನು ತೆರೆದ ಪಲ್ಲಕ್ಕಿಯಲ್ಲಿ ಇಟ್ಟುಕೊಂಡು, ಅಶ್ಲೀಲವಾದ ಹಾಡುಗಳನ್ನು ಹಾಡುತ್ತಾ, ಕಾಣಿಕೆಗಳನ್ನು ಸಂಗ್ರಹಿಸುತ್ತಾ ಮನೆಯಿಂದ ಮನೆಗೆ ಹೋಗುತ್ತಾರೆ. ಇಂತಹ ಮೆರವಣಿಗಯು ಮೂರು-ನಾಲ್ಕು ದಿನಗಳವರೆಗೆ ಮುಂದುವರಿಯುತ್ತದೆ. ಅನಂತರ ಆ ಮೂರ್ತಿಯನ್ನು ಹಳ್ಳಿಯ ಪಕ್ಕದ ಹೊಲದಲ್ಲಿ ವಿಸರ್ಜನೆ ಮಾಡುತ್ತಾರೆ. ಮಾಲರ ಜಾತಿಗೆ ಸೇರಿದವರು ಹೀಗೆ ವಿಸರ್ಜಿತವಾದ ಮೂರ್ತಿಯನ್ನು ತೆಗೆದುಕೊಂಡು, ಮತ್ತೆ ಅಶ್ಲೀಲವಾದ ಹಾಡುಗಳನ್ನು ಹೇಳುತ್ತಾ ಮನೆಮನೆ ತಿರುಗಿ ದಾನ-ಧರ್ಮಗಳನ್ನು ಸಂಗ್ರಹಿಸುತ್ತಾರೆ’ “

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು