ಜಾನಪದ ಮತ್ತು ಜನಪದ ಕಲೆಗಳು
ಹೆಳವರು

          ಹೆಳವರು ಬಹಳ ವಿಶಿಷ್ಟವಾದ ಗಾಯಕರ ಸಮುದಾಯಕ್ಕೆ ಸೇರಿದವರು. ಇವರಿಗೆ ಒಂದು ಗೊತ್ತಾದ ಹಳ್ಳಿಯ ಬಹುಪಾಲು ಎಲ್ಲ ಕುಟುಂಬಗಳ ವಂಶವೃಕ್ಷ ಹಾಗೂ ವಂಶಚರಿತ್ರೆಯ ವಿವರಗಳ ಸಂಪೂರ್ಣವಾದ ಪರಿಚಯವಿರುತ್ತದೆ. ಅವು ಅವರ ನೆನಪುಗಳ ಭಂಡಾರದ ಭಾಗವಾಗಿರುತ್ತದೆ. ಇವರು ಹಿಂದುಳಿದ ವರ್ಗಗಳಿಗೆ ಸೇರಿದವರು. ಎಷ್ಟೋ ಸಲ ಅನಕ್ಷರಸ್ಥರು. ಆದರೆ, ತಮ್ಮ ಬಳಿ ಇರುವ ಅಪಾರವಾದ ಮಾಹಿತಿಗಳ ಸಮುಚ್ಚಯವನ್ನು ಪೀಳಿಗೆಯಿಂದ ಪೀಳಿಗೆಗೆ ಬಳುವಳಿಯಾಗಿ ಪಡೆದಿರುತ್ತಾರೆ. ಯಾವುದೇ ಸಂದರ್ಭದಲ್ಲಿ ಅದನ್ನು ನೆನಪು ಮಾಡಿಕೊಂಡು ಮಂಡಿಸುವ ಸಾಮರ್ಥ್ಯವು ಅವರಿಗೆ ಸಹಜವಾಗಿಯೇ ಬಂದಿರುತ್ತದೆ. ಈ ನಿರೂಪಣೆಯಲ್ಲಿ ಮೌಖಿಕತೆ ಮತ್ತು ಗೇಯತೆಗಳೆರಡೂ ಅಳವಟ್ಟಿರುವುದರಿಂದ ಸಹಜವಾಗಿಯೇ ಅವಕ್ಕೆ ಜಾನಪದ ಪ್ರದರ್ಶನದ ಗುಣ ಬರುತ್ತದೆ. ಆಂಧ್ರಪ್ರದೇಶದಲ್ಲಿ ಹೆಳವರನ್ನು ಪಿಚ್ಚಕೊಂಡ್ಲು ಎಂಬ ಹೆಸರಿನಿಂದ ಕರೆಯುತ್ತಾರೆ. ಹೆಳವರು ಒಂದು ಮನೆತನದ  ‘ವಂಶವೃಕ್ಷದ ವಿವರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು, ಸಮುದಾಯಗಳು ಮತ್ತು ಜಾತಿಗಳ ವೀರರನ್ನು ಕುರಿತ ಹಾಡುಗಳನ್ನು ಹೇಳುವುದು ಮತ್ತು ಇನ್ನೂ ಕೆಲವು ಕ್ರಿಯಾವಿಧಿಗಳನ್ನು ನಡೆಸಿಕೊಡುವ ಹೊಣೆಗಳನ್ನು ಹೊತ್ತಿರುತ್ತಾರೆ.

          ಹೆಳವರು ಕರ್ನಾಟಕದ ಬಹಪಾಲು ಪ್ರದೇಶಗಳು ಮತ್ತು ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ನೆಲೆಸಿದ್ದಾರೆ. ಹೆಳವ ಎನ್ನುವ ಪದಕ್ಕೆ ಇರುವ ಅನೇಕ ಅರ್ಥಗಳಲ್ಲಿ ಕಾಲಿಲ್ಲದವನು ಎನ್ನುವುದೂ ಒಂದು. ಆದರೆ, ಈ ವೃತ್ತಿಗೂ ಆ ಅಂಗವಿಕಲತೆಗೂ ಯಾವುದೇ ಸಂಬಂಧವಿರುವಂತೆ ಕಾಣುವುದಿಲ್ಲ. ಕನ್ನಡದ ಹೇಳು ಎನ್ನುವ ಪದವು ಹೇಳುವವರು ಎನ್ನುವ ರೂಪದ ಮೂಲಕ ಅಂತಿಮವಾಗಿ ಹೆಳವರು ಎಂದಾಗಿರಬಹುದು. ಬೇರೆ ಕೆಲವು ವಿದ್ವಾಂಸರು ತಮಿಳುನಾಡಿನ ಎರವರು ಎಂಬ ಸಮುದಾಯಕ್ಕೂ ಕರ್ನಾಟಕದ ಹೆಳವರಿಗೂ ಸಂಬಂಧವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಸ್ವತಃ ಹೆಳವರು ತಮ್ಮ ಹೆಸರಿಗೂ ಅಂಗವಿಕಲತೆಗೂ ಸಂಬಂಧವಿದೆಯೆಂದೇ ಹೇಳುತ್ತಾರೆ. ಈ ಸಮುದಾಯದ ಉಗಮಕ್ಕೆ ಸಂಬಂಧಿಸಿದ ದಂತಕಥೆಗಳು ಕೂಡ ಇದೇ ವಿವರಣೆಯ ಕಡೆಗೆ ಒಲಿಯುತ್ತವೆ. ಕೆಲವು ಪ್ರದೇಶಗಳಲ್ಲಂತೂ ಈ ನಿರೂಪಕರು ಹೆಳವತನದ ಸಂಕೇತವೋ ಎನ್ನುವಂತೆ, ತಮ್ಮ ಬಲಗಾಲನ್ನು ಬಿಳಿಯ ಬಟ್ಟೆಯಿಂದ ಮರೆಮಾಡಿಕೊಳ್ಳುತ್ತಾರೆ.

          ಅದೇನೇ ಇರಲಿ, ಹೆಳವರು ವಂಶಚರಿತ್ರೆಗಳನ್ನು ನಿರೂಪಿಸುವ ಈ ಕೆಲಸವಲ್ಲದೆ, ಬೇರೆ ಕಸುಬುಗಳಲ್ಲೂ ತೊಡಗಿಕೊಂಡಿರುತ್ತಾರೆ. ಆದ್ದರಿಂದಲೇ ಅವರ ಕಸುಬುಗಳು ಮತ್ತು ಅನನ್ಯತೆಗಳನ್ನು ಅವಲಂಬಿಸಿ ಹೆಳವರಲ್ಲಿ ಅನೇಕ ಒಳಪಂಗಡಗಳಿವೆ. ಎತ್ತಿನ ಹೆಳವ, ಗೂಬೆ ಹೆಳವ, ಚಾಪೆ ಹೆಳವ, ಮಂಡಲ ಹೆಳವ ಮತ್ತು ಅಡವಿ ಹೆಳವಗಳು ಅವುಗಳಲ್ಲಿ ಕೆಲವು. ಎತ್ತಿನ ಹೆಳವರು ಮನೆಯಿಂದ ಮನೆಗೆ ಹೋಗುವಾಗ ಎತ್ತುಗಳನ್ನು ತಮ್ಮ ವಾಹನವಾಗಿ ಬಳಸುತ್ತಾರೆ. ಗೂಬೆ ಹೆಳವರು ತಮ್ಮ ಓಡಾಟಗಳಲ್ಲಿ ಸಂಗಡ ಒಂದು ಗಂಟೆಯನ್ನು ಇಟ್ಟುಕೊಂಡಿರುತ್ತಾರೆ. ಚಾಪೆ ಹೆಳವರಂತೂ ಚಾಪೆಗಳನ್ನು ಹೆಣೆಯುವ ಕೆಲಸದಲ್ಲಿ ನಿಪುಣರು. ಅವರಿಗೆ ಹೇಳವರ ಕೆಲಸವೇ ಗೌಣವಾದುದು. ಮಂಡಲ ಹೆಳವರು ಔಷಧಗಳ ತಯಾರಿಕೆಯನ್ನು ತಮ್ಮ ಮೂಲ ಕಸುಬಾಗಿ ಮಾಡಿಕೊಂಡಿದ್ದಾರೆ.  

          ಹೆಳವರ ವೃತ್ತಿಗೆ ಧಾರ್ಮಿಕವಾದ ಆಯಾಮಗಳೇನೂ ಇಲ್ಲ. ಅವರ ಪೈಕಿ ಯಾರೂ ದಲಿತರ ವಂಶಚರಿತ್ರೆಗಳನ್ನು ನಿರೂಪಿಸುವುದಿಲ್ಲ. ಸಾಧು ಹೆಳವರಂತೂ ವೀರಶೈವರ ಉಪಪಂಗಡವಾದ ಸಾದರ ಲಿಂಗಾಯತರ ವಂಶಚರಿತ್ರೆಯನ್ನು ಮಾತ್ರ ಹೇಳುತ್ತಾರೆ. ಕುತೂಹಲದ ಸಂಗತಿಯೆಮದರೆ, ಅವರು ಹೆಣ್ಣು ಮಕ್ಕಳ ಬಗೆಗಿನ ವಿವರಗಳನ್ನು ಕೊಡುತ್ತಾರೆ. ಈ ಕಲಾವಿದರ ಬಳಿ ಇರುವ ಸಂಗ್ರಹಿತ ಜ್ಞಾನವು ಹಲವು ಪೀಳಿಗೆಗಳವರೆಗೆ ವ್ಯಾಪಿಸಿರುತ್ತದೆ.                                                                 

ಕೆಲವೊಮ್ಮೆ ಭೂವಿವಾದಗಳು ಕೂಡ ಹೆಳವರು ನೀಡಿದ ಸಾಕ್ಷಿಗಳಿಂದಲೇ ತೀರ್ಮಾನವಾಗಿರುವುದುಂಟು. ಹೆಳವರಿಗೆ ಯಾವುದೇ ವಿಶೇಷ ವೇಷಭೂಷಣಗಳನ್ನು ನಿಗದಿಪಡಿಸಿಲ್ಲ.

ಹೆಳವರು, ವಂಶಚರಿತ್ರೆಗಳಲ್ಲದೆ ಬೇರೆ ಕೆಲವು ಜನಪದ ಕಾವ್ಯಗಳನ್ನೂ ಹಾಡುತ್ತಾರೆ, ನಿರೂಪಿಸುತ್ತಾರೆ.ನಂಜಯ್ಯನ ಕಥೆ,ಮಾಗಡಿ ಕೆಂಪೇಗೌಡನ ಲಾವಣಿ,ಕರಿಬಂಟನ ಕಥೆ, ಹೆಳವೇಗೌಡ, ಮತ್ತುದೊಡ್ಡ ಬೆಳ್ಳಿ-ಚಿಕ್ಕ ಬೆಳ್ಳಿಗಳು ಅಂತಹ ಜನಪ್ರಿಯವಾದ ನಿರೂಪಣೆಗಳಲ್ಲಿ ಕೆಲವು. ಅವು ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ವಸ್ತುಗಳನ್ನು ಒಳಗೊಂಡಿವೆಯೆಂಬ ಸಂಗತಿಯನ್ನು ಇಲ್ಲಿ ಗಮನಿಸಬಹುದು. ಎರಡು ಅಥವಾ ಮೂರು ಜನ ಹೆಳವರ ತಂಡವು ಇಂತಹ ಪ್ರದರ್ಶನವನ್ನು ನೀಡುತ್ತದೆ. ಹೆಳವರು ತಮ್ಮ ನೆಚ್ಚಿನ ಹಿನ್ನೆಲೆ ಸಂಗೀತದ ವಾದ್ಯವಾಗಿ ಒಂದು ದೊಡ್ಡ ಗಂಟೆಯನ್ನು ಉಪಯೋಗಿಸುತ್ತಾರೆ. ಈ ಗಂಟೆಯು ಪೀಳಿಗೆಯಿಂದ ಪೀಳಿಗೆಗೆ ಬಳುವಳಿಯಾಗಿ ಬರುತ್ತದೆ. ಈ ಗಂಟೆಯ ಹಿಡಿಕೆಗೆ ಯಾವಾಗಲೂ ಒಂದು ಬಟ್ಟೆಯನ್ನು ಕಟ್ಟಿರುತ್ತಾರೆ. ಕಲಾವಿದರು ಈ ಹಿಡಿಕೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಲಯಬದ್ಧವಾಗಿ ಗಂಟೆಯನ್ನು ಬಾರಿಸುತ್ತಾರೆ. ವಂಶಚರಿತ್ರೆಗಳನ್ನು ಹೇಳುವ ಮತ್ತು ಜನಪದ ಕಾವ್ಯಗಳನ್ನು ಹಾಡುವ ಎರಡೂ ಸಂದರ್ಭಗಳಲ್ಲಿ ಈ ಹಿನ್ನೆಲೆ ವಾದ್ಯವನ್ನು ಬಳಸುತ್ತಾರೆ.

ಹೆಳವರ ಪರಂಪರೆಯು ನಿಧಾನವಾಗಿ ಮರವೆಗೆ ಸಲ್ಲುತ್ತಿದೆ. ಆ ಕಲಾವಿದರು ಜೀವನನಿರ್ವಹಣೆಯ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ.

 

ಹೆಚ್ಚಿನ ಓದು ಮತ್ತು ಲಿಂಕುಗಳು:

  1. ಹೆಳವರ ಸಂಸ್ಕೃತಿ’, ಡಾ. ಹರಿಲಾಲ್ ಪವಾರ್, 1993, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು