ಜಾನಪದ ಮತ್ತು ಜನಪದ ಕಲೆಗಳು
ಹಗರಣ

          ಹಗರಣವು ಕರ್ನಾಟಕದ ಬಹಳ ಹಳೆಯ ರಂಗರೂಪಗಳಲ್ಲಿ ಒಂದು. ಅದು ನೂರಾರು ವರ್ಷಗಳಿಂದ ಜಾನಪದ ಕಲಾಪ್ರದರ್ಶನವಾಗಿ ಉಳಿದುಕೊಂಡು ಬಂದಿದೆಯೇ ವಿನಾ ಸ್ಪಷ್ಟವಾದ ನಾಟಕವಾಗಿ ಅಲ್ಲ. ಕವಿರಾಜಮಾರ್ಗ, ವಡ್ಡಾರಾಧನೆ, ಧರ್ಮಾಮೃತ, ವಚನಗಳು ಮುಂತಾದ ಪ್ರಾಚೀನ ಸಾಹಿತ್ಯಕೃತಿಗಳಲ್ಲಿಯೇ ಈ ಕಲೆಯ ಉಲ್ಲೇಖವನ್ನು ಕಾಣಬಹುದು. ಕೇವಲ ಹೆಸರುಗಳ ಉಲ್ಲೇಖ ಮಾತ್ರವಲ್ಲ, ಅವುಗಳಲ್ಲಿ ಹಗರಣದ ಬಗ್ಗೆ ಅಲ್ಪಸ್ವಲ್ಪ ಮಾಹಿತಿಗಳೂ ಇವೆ. ಈ ಮಾಹಿತಿಗಳು, ಹಗರಣ ಆಥವಾ ಟನಾಳ್ ಪಗರಣಟವು, ಸಾಕಷ್ಟು ತರಬೇತಿ ಪಡೆದಿದ್ದ, ವಿಶಿಷ್ಟವಾದ ವೇಷಭೂಷಣಗಳು ಮತ್ತು ಮುಖವಾಡಗಳನ್ನು ಉಪಯೋಗಿಸುತ್ತಿದ್ದ, ವೃತ್ತಿನಿರತ ಕಲಾವಿದರಿಂದ ಪ್ರದರ್ಶಿತವಾಗುತ್ತಿದ್ದವೆಂದು ತೀರ್ಮಾನಿಸಲು ನೆರವಾಗುತ್ತವೆ. ಅವುಗಳಲ್ಲಿ ಮರ ಮೊಗ (ಮರದ ಮುಖವಾಡ) ಎಂಬ ಪದವನ್ನು ಬಳಸಿದ್ದಾರೆ. ಕೆಲವು ವಿದ್ವಾಂಸರ ಪ್ರಕಾರ, ಹಗರಣ ಎನ್ನುವ ಪದದ ಮೂಲವು ಸಂಸ್ಕೃತದ ಪ್ರಕರಣದಲ್ಲಿದೆ.

          ಆದರೆ, ಈಗ ಹಗರಣವು ಪ್ರದೇಶವಿಶಿಷ್ಟವೂ ಜಾತಿವಿಶಿಷ್ಟವೂ ಆಗಿಬಿಟ್ಟಿರುವ ಕಲೆ. ಸಂಶೋಧಕರು ಕರ್ನಾಟಕದ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ ಜಾನಪದ ಕಲೆಯೊಂದನ್ನು ಗುರುತಿಸಿದ್ದಾರೆ. ಇವೆರಡಕ್ಕೂ ಪರಸ್ಪರ ಸಂಬಂಧವಿಲ್ಲವೆನ್ನುವುದು ಮೇಲುನೋಟಕ್ಕೇ ತಿಳಿಯುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ, ಈ ಕಲೆಯನ್ನು ಮುಖ್ಯವಾಗಿ ಹಾಲಕ್ಕಿ ಒಕ್ಕಲಿಗರು ಮತ್ತು ಕೊಂಚ ಕಡಿಮೆ ಪ್ರಮಾಣದಲ್ಲಿ ಗಾಮೊಕ್ಕಲು, ಮುಕ್ರಿ ಮತ್ತು ಅಂಬಿಗ ಸಮುದಾಯಗಳಿಗೆ ಸೇರಿದವರು ಪ್ರದರ್ಶಿಸುತ್ತಾರೆ. ಈ ಕಲೆಯನ್ನು ಸುಗ್ಗಿ ಕಾಲದಲ್ಲಿ ಅಥವಾ ತಿರುಪತಿ, ಗೋಕರ್ಣ ಮುಂತಾದ ತೀರ್ಥಕ್ಷೇತ್ರಗಳ ಯಾತ್ರೆಯನ್ನು ಮುಗಿಸಿಕೊಂಡು ಬಂದನಂತರ ಪ್ರದರ್ಶಿಸುತ್ತಾರೆ. ಇದನ್ನು ಆಯಾ ಕುಟುಂಬದವರ ಮನೆಗಳಲ್ಲಿ (ಕೊಪ್ಪ) ನಡೆಸುತ್ತಾರೆ. ಎಲ್ಲರೂ ತುಳಸೀಕಟ್ಟೆಯ ಬಳಿ ಒಂದುಗೂಡಿ ಜಟ್ಟಿಗ ದೇವತೆಯನ್ನು ಪೂಜಿಸಿದ ನಂತರ ಪ್ರದರ್ಶನದ ಆರಂಭ.

ಹಗರಣವೆಂದರೆ, ಬೇರಬೇರೆ ಮುಖವಾಡಗಳನ್ನು, ಉಡುಗೆ ತೊಡಿಗೆಗಳನ್ನು ಮತ್ತು ಮಾರುವೇಷಗಳನ್ನು ತೊಟ್ಟುಕೊಂಡು ಮೆರವಣಿಗೆಯಲ್ಲಿ ಚಲಿಸುವುದು. ಕೆಲವು ಕಲಾವಿದರು ಮರಗಾಲುಗಳನ್ನು ಕಟ್ಟಿಕೊಂಡು ನಡೆಯುತ್ತಾರೆ. ತನ್ನ ವೇಷಭೂಷಣಗಳಿಂದ, ನೋಡುವವರ ಗನವನ್ನು ಸೆಳೆಯುವುದೇ ಪ್ರತಿಯೊಬ್ಬ ಕಲಾವಿದನ ಉದ್ದೇಶವೂ ಆಗಿರುತ್ತದೆ. ಈ ಮಾರುವೇಷಗಳಿಗೆ ಯಾವುದೇ ಸಾಂಪ್ರದಾಯಿಕ ಚೌಕಟ್ಟು ಅಥವಾ ಧಾರ್ಮಿಕತೆಯ ಲೇಪವಿಲ್ಲ. ಕಲಾವಿದನು ತನಗೆ ಇಷ್ಟಬಂದ ವೇಷವನ್ನು ಹಾಕಬಹುದು. ಪೋಲೀಸಿನವನು, ವಿದ್ಯುಚ್ಛಕ್ತಿ ಇಲಾಖೆಯ ಲೈನ್ಸ್ ಮನ್, ಕ್ರಿಶ್ಚಿಯನ್ ಪಾದ್ರಿ, ಮುಸ್ಲಿಂ ಮಾರಾಟಗಾರ, ಕಾಲೇಜು ವಿದ್ಯಾರ್ಥಿಗಳು, ಹನುಮಂತನಂತಹ ದೇವತಗೆಗಳು ಹೀಗೆ ಹತ್ತು ಹಲವು ವೈವಿಧ್ಯಮಯವಾದ ವೇಷಗಳನ್ನು ಈ ಕಲಾವಿದರು ಧರಿಸುತ್ತಾರೆ. ಅವರು ಅಪಾರ ಸಂಭ್ರಮ-ಉತ್ಸಾಹಗಳಿಂದ ಆ ಕಡೆ-ಈಕಡೆ ಚಲಿಸುತ್ತಾರೆ. ಆಗ ಯಾವುದೇ ಧಾರ್ಮಿಕ ಆಚರಣೆಗಳು ಇರುವುದಿಲ್ಲ. ಈ ಪ್ರದರ್ಶನದಲ್ಲಿ ಮಹಿಳೆಯರು ಭಾಗವಹಿಸುವುದಿಲ್ಲ. ಈ ಮೆರವಣಿಗೆಯ ಸಂಗಡ ಗುಮಟೆ, ಮದ್ದಳೆ ಮುಂತಾದ ವಾದ್ಯಗಳನ್ನು ನುಡಿಸುತ್ತಾರೆ. ಎಷ್ಟೋ ಸಲ, ಸುಗ್ಗಿ ಕಾಲದ ಹಗರಣವು ಅಘನಾಶಿನಿ ನದಿಯು ಸಮುದ್ರವನ್ನು ಸೇರುವ ಪ್ರದೇಶದಲ್ಲಿ ಮುಕ್ತಾಯವಾಗುತ್ತದೆ. ಕ್ರಮೇಣ ಹಗರಣವು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಪ್ರಸಿದ್ಧ ಇತಿಹಾಸಕಾರರಾದ ಡಾ. ಜ್ಯೋತ್ಸ್ನಾ ಕಾಮತ್ ಅವರು ಹೇಳುವಂತೆ, ಈಚಿನ ದಿನಗಳಲ್ಲಿ, ಹಗರಣವು ಕೇವಲ ಹವ್ಯಾಸಿಗಳಾದ, ಪರಸ್ಪರ ಸಂಬಂಧವಿಲ್ಲದ ಚಿಕ್ಕಪುಟ್ಟ ತಂಡಗಳ ಪ್ರದರ್ಶನಕ್ಕೆ ಸೀಮಿತವಾಗಿದೆ. ಅವರು ಕೂಡ ಯಾವುದೋ ಹರಕೆಯನ್ನು ತೀರಿಸಲೆಂದು ಇದನ್ನು ಆಚರಿಸುತ್ತಾರೆ.     

        ಹಗರಣದ ಇನ್ನೊಂದು ಬಗೆಯನ್ನು ಚಿಕ್ಕಮಗಳೂರು ಜಿಲ್ಲೆಯ ಹಿರೇಗೌಜ ಮತ್ತು ಅದರ ಸುತ್ತಮುತ್ತಲಿನ ಆರು ಹಳ್ಳಿಗಳಲ್ಲಿ ನೋಡಬಹುದು. ಇಲ್ಲಿ ಇದು ಬಳಲಿಕವ್ವ ಎಂಬ ದೇವತೆಯ ಆರಾಧನೆಯೊಂದಿಗೆ ಸಂಬಂಧ ಪಡೆದಿದೆ. ಎಳು ವರ್ಷಗಳಲ್ಲಿ ಒಮ್ಮೆ ನಡೆಯುವ ಈ ದೇವತೆಯ ಜಾತ್ರೆಯಲ್ಲಿ ಹಗರಣದ ಕಲೆಯ ಪ್ರದರ್ಶನವಿರುತ್ತದೆ. ಈ ಜಾತ್ರೆಯನ್ನು ಹಗರಣದ ಹಬ್ಬ ಎಂದೂ ಕರೆಯುತ್ತಾರೆ. ಬಳಲಿಕವ್ವನಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಘಟನೆಗಳನ್ನು ಹೇಳುತ್ತಾರೆ. ಹಗರಣವು ಬಳಲಿಕವ್ವ ಮತ್ತು ಅವಳ ಮಕ್ಕಳ ಆಚರಣಾತ್ಮಕವಾದ ಸಾವು (ರಿಚುಯಲ್ ಡೆತ್) ಸಂಭವಿಸಿದ ದಿನ ಪ್ರಾರಂಭವಾಗಿ ಅನಂತರದ ಏಳು ದಿನಗಳ ಕಾಲ ನಡೆಯುತ್ತದೆ. ವಾಸ್ತವವಾಗಿ ಈ ಆಚರಣೆಯಲ್ಲಿ ಆಳವಡಿಸಿರುವ ಹಾಸ್ಯ ಮತ್ತು ಜಾಣತನದ ಮಾತುಗಳು (ವಿಟ್ ಅಂಡ್ ಹ್ಯೂಮರ್) ಬಳಲಿಕವ್ವನ ಸಾವಿನ ನಂತರದ ದುಃಖತಪ್ತ ಸ್ಥಿತಿಯಿಂದ ಒಂದು ಬಗೆಯ ಮಾನಸಿಕ ಬಿಡುಗಡೆಯನ್ನು ಉಂಟುಮಾಡುತ್ತವೆ. ಅದೇನೇ ಇರಲಿ, ಇಲ್ಲಿ ಕೆಲವು ಆಚರಣೆಗಳನ್ನು ಕಡ್ಡಾಯವಾಗಿ ನಡೆಸುತ್ತಾರೆ. ನಿರ್ದಿಷ್ಟ ನಾಟಕರೂಪಗಳು ಹಾಗೂ ಪಾತ್ರಗಳನ್ನು ಗೊತ್ತಾದ ಹಳ್ಳಿಗಳು ಮತ್ತು ಜಾತಿಗಳಿಗೆ ಮೀಸಲಿಟ್ಟಿರುತ್ತಾರೆ. ಉಳಿದವರು ಅವುಗಳನ್ನು ನಡೆಸಿಕೊಡುವುದನ್ನು ನಿಷೇಧಿಸುತ್ತಾರೆ. ಉದಾಹರಣೆಗೆ ಬೇಡರ ಕಣ್ಣಪ್ಪನ ವೇಷವನ್ನು ಕುರಿಚಿಕ್ಕನಹಳ್ಳಿಯ ಕುರುಬ ಸಮುದಾಯದವರು ಮಾತ್ರ ಹಾಕಬೇಕು. ಹಾಗೆಯೇ ಮಾರಮ್ಮನ ವೇಷವು ಹಿರೇಗೌಜದ ಲಿಂಗಾಯತರಿಗೆ ಮೀಸಲಾದುದು.

          ಇಲ್ಲಿನ ಬಹುಪಾಲು ಪ್ರದರ್ಶನಗಳ ಅಭಿನಯ, ಹಾಡುಗಳು ಮತ್ತು ಸಂಭಾಷಣೆಗಳು ಅಶ್ಲೀಲತೆಯ ಅಂಚಿನಲ್ಲಿಯೇ ಚಲಿಸುತ್ತಿರುತ್ತವೆ. ಇಲ್ಲಿಯೂ ಖಚಿತವಾದ ಕಥಾಶರೀರವೇನೂ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಬೇರೆಬೇರೆ ಜಾತಿ ಮತ್ತು ಸಮುದಾಯಗಳಿಗೆ ಸೇರಿದ ಜನರು, ಕೆಲವು ಗಂಟೆಗಳ ಕಾಲವಾದರೂ ಒಟ್ಟುಗೂಡಿ, ತಮ್ಮನ್ನು ಬೇರ್ಪಡಿಸಿರುವ ಸಾಮಾಜಿಕ ಗಡಿಗೆರೆಗಳನ್ನು ಮರೆತು ಸಂತೋಷವಾಗಿ ಕಾಲಕಳೆಯುತ್ತಾರೆ. ಈ ಮಾತು ಚಿಕ್ಕಮಗಳೂರು ಮತ್ತು ಉತ್ತರ ಕನ್ನಡಗಳೆರಡರ ವಿಷಯದಲ್ಲಿಯೂ ನಿಜ.     

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು