ಜಾನಪದ ಮತ್ತು ಜನಪದ ಕಲೆಗಳು
ಗುಮಟೆ, ಗುಮಟೆ ಪಾಂಗು

          ಗುಮಟೆ ಮತ್ತು ಗುಮಟೆಪಾಂಗುಗಳು ಒಂದೇ ಸಂಗೀತವಾದ್ಯದ ಬೇರೆ ಬೇರೆ ಹೆಸರುಗಳು. ಇದನ್ನು ಉತ್ತರ ಕನ್ನಡ  ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದವರ ಜನಪದ ನೃತ್ಯಕ್ಕೆ ಹಿನ್ನೆಲೆಯಾಗಿ ಬಳಸುತ್ತಾರೆ. ಇದನ್ನು ನುಡಿಸುವ ಕಲೆಯಲ್ಲಿ ಪರಿಣಿತರಾಗಿರುವ ಇತರ ಕೆಲವು ಸಮುದಾಯಗಳೆಂದರೆ, ಮುಕ್ರಿಗಳು, ಕುಮಾರಪಂತರು, ನಾಮಧಾರಿಗಳು ಮತ್ತು ಅಂಬಿಗರು. ದಕ್ಷಿಣಕನ್ನಡ ಜಿಲ್ಲೆಯ ಕುಡುಬಿ ಎಂಬ ಗಿರಿಜನ ಸಮುದಾಯದವರೂ ಈ ವಾದ್ಯವನ್ನು ಉಪಯೋಗಿಸುತ್ತಾರೆ. ಕೇವಲ ಮನರಂಜಕವಾದ ಈ ಕಲೆಗೆ ಯಾವುದೇ ಧಾರ್ಮಿಕ ಆಯಾಮಗಳಿಲ್ಲ.

          ಗುಮಟೆಯು ಸುಮಾರು ಇಪ್ಪತ್ತು ಅಂಗುಲ ಉದ್ದವಿರುವ ಹೂಜಿಯಾಕಾರದ ಟೊಳ್ಳಾಗಿರುವ ವಾದ್ಯ. ಅದರ ಎರಡು ತುದಿಗಳೂ ತೆರೆದಿರುತ್ತವೆ. ಹೆಚ್ಚು ವಿಶಾಲವಾಗಿ ತೆರೆದಿರುವ ತುದಿಯನ್ನು ಚಾಪ (ಉಡ) Iguana) ಎನ್ನುವ ಪ್ರಾಣಿಯ ಅಥವಾ ಕಾಡುಕುರಿಯ ಚರ್ಮದಿಂದ ಬಿಗಿಯಾಗಿ ಮುಚ್ಚಿರುತ್ತಾರೆ. ಇನ್ನೊಂದು ತುದಿಯನ್ನು ಆಚ್ಛಾದಿಸದೆ ಹಾಗೆಯೇ ಬಿಟ್ಟಿರುತ್ತಾರೆ. ಈ ವಾದ್ಯವನ್ನು ಜಾಮಟೆ (ಜಾಗಟೆ) ಮತ್ತು ಕಂಸಾಳೆಗಳ (ಕಂಚಿನ ತಾಳಗಳು) ಸಹಯೋಗದಲ್ಲಿ ಬಳಸುತ್ತಾರೆ. ಗುಮಟೆ ಪಾಂಗು ಕೇವಲ ಹದಿನೆಂಟು ಆಂಗುಲ ಉದ್ದವಿರುತ್ತದೆ. ಉಳಿದಂತೆ ಅದಕ್ಕೂ ಗುಮಟೆಗೂ ಯಾವ ವ್ಯತ್ಯಾಸವೂ ಇಲ್ಲ. ಕಲಾವಿದರು ಈ ವಾದ್ಯಗಳನ್ನು ಹಗ್ಗಗಳ ನೆರವಿನಿಂದ ಕುತ್ತಿಗೆಗೆ ನೇತುಹಾಕಿಕೊಂಡಿರುತ್ತಾರೆ.

          ಗುಮಟೆಯ ಪ್ರದರ್ಶನವು ಸುಗ್ಗಿಯ ಕಾಲದಲ್ಲಿ ಮತ್ತು ಹೋಳಿ ಹಬ್ಬವೂ ಸೇರಿದಂತೆ ಬೇರೆಬೇರೆ ಹಬ್ಬಗಳ ಸಂದರ್ಭದಲ್ಲಿ ನುಡಿಸುತ್ತಾರೆ.          

          ಗುಮಟೆ ವಾದಕರ ತಂಡವು ಹಳ್ಳಿಯ ಕುಟುಂಬಗಳ ಅಪೇಕ್ಷೆಯ ಮೇರೆಗೆ, ಅವರ ಮನೆಗಳಿಗೆ ಹೋಗಿ, ತನ್ನ ಪ್ರದರ್ಶನವನ್ನು ನೀಡುತ್ತದೆ. ತಂಡದಲ್ಲಿ 4-5 ಕಲಾವಿದರು ಇರುತ್ತಾರೆ. ಪ್ರಧಾನ ಗಾಯಕನು ವಾದ್ಯಗಳನ್ನೂ ನುಡಿಸುತ್ತಾನೆ. ಉಳಿದವರು ಅವನ ಹಾಡುಗಳನ್ನು ಮರುನುಡಿಯುತ್ತಾರೆ. ನರ್ತನದ ಲಯ ಮತ್ತು ವೇಗಗಳು ಬಹುಮಟ್ಟಿಗೆ ಹಾಡಿನ ಹಾಡುವಿಕೆಯನ್ನೇ ಅವಲಂಬಿಸಿರುತ್ತದೆ. ಬೇರೆ ಕೆಲವು ತಂಡಗಳಲ್ಲಿ ಆರು ಜನ ಇರುತ್ತಾರೆ. ಅವರಲ್ಲಿ ಐವರು ವರ್ತುಲಾಕಾರದಲ್ಲಿ ನಿಂತು ಗುಮಟೆಗಳನ್ನು ನುಡಿಸುತ್ತಾರೆ. ಆರನೆಯವನು, ವರ್ತುಲದ ಮಧ್ಯದಲ್ಲಿ ನಿಂತು ಕಾಳಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ವಾದ್ಯಗಳ ಲಯಕ್ಕೆ ಅನುಗುಣವಾಗಿ ಕುಣಿಯುತ್ತಾನೆ. ಬಹಳ ಅಪರೂಪವಾಗಿ ಈ ಕಲಾವಿದರು ವಿಶೇಷ ವೇಷಭೂಷಣಗಳನ್ನು ಧರಿಸುತ್ತಾರೆ. ಒಮ್ಮೊಮ್ಮೆ ಈ ಕಲಾವಿದರು ಪೌರಾಣಿಕ ಅಥವಾ ಚಾರಿತ್ರಿಕ ಕಥೆಯನ್ನು ಹಾಡುತ್ತಾರೆ. ಆಗ ಅವರ ಪ್ರದರ್ಶನಕ್ಕೆ ನಾಟಕೀಯತೆಯ ಆಯಾಮ ಬರುತ್ತದೆ. ಅವರ ಭಂಡಾರದಲ್ಲಿ ಸುಮಾರು ಮೂವತ್ತರಷ್ಟು ದೇವ-ದೇವತೆಗಳನ್ನು ಹೊಗಳುವ ಹಾಡುಗಳಿರುತ್ತವೆ. ಈಚಗೆ ಗುಮಟೆ ಕಲಾವಿದರು ಸಾಮಾಜಿಕ/ರಾಜಕೀಯ ಆಶಯಗಳನ್ನು ಹೊಂದಿರುವ ಹಾಡುಗಳನ್ನೂ ಹಾಡುತ್ತಾರೆ.    

 

ಮುಂದಿನ ಓದು ಮತ್ತು ಲಿಂಕುಗಳು:

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು