ಜಾನಪದ ಮತ್ತು ಜನಪದ ಕಲೆಗಳು
ಗಂಜೀಫಾ ಕಲೆ

          ಗಂಜೀಫಾ ಎಂದರೆ ಬೇರೆ ಬೇರೆ ಆಕಾರದ ಕಾಗದದ ಕಾರ್ಡುಗಳ ಸಮುಚ್ಚಯ. ಅವುಗಳ ಮೇಲೆ ಬಹಳ ಸೂಕ್ಷ್ಮವೂ ಆಕರ್ಷಕವೂ ಆದ ವರ್ಣಚಿತ್ರಗಳನ್ನು ಬಿಡಿಸಿರುತ್ತಾರೆ. ಗಂಜೀಫಾ ಎಲೆಗಳನ್ನು ಬಳಸಿಕೊಂಡು ಆಡುವ ಇಸ್ಪೇಟಿನಂತಹ ಆಟವನ್ನೂ ಅದೇ ಹೆಸರಿನಿಂದ ಕರೆಯುತ್ತಾರೆ. ಗಂಜೀಫಾ ಎನ್ನುವುದು ಪರ್ಷಿಯನ್ ಭಾಷೆಯ ಪದ. ಹಾಗೆಂದರೆ ಇಸ್ಪೇಟ್ ಕಾರ್ಡ್(ಪ್ಲೇಯಿಂಗ್ ಕಾರ್ಡ್) ಎಂದೇ ಅರ್ಥ. ಗಂಜ್’‘ ಎಂದರೆ ನಿಧಿ ಎನ್ನುವ ಅರ್ಥವೂ ಇದೆ. ಇದು ಮೊಗಲ್ ಸಾಮ್ರಾಟರ ಆಸ್ಥಾನಗಳಲ್ಲಿ ಮೊದಲಾಗಿ ಈಗ ಅಖಿಲ ಭಾರತ ವ್ಯಾಪ್ತಿಯನ್ನು ಪಡೆದಿದೆ. ಒರಿಸ್ಸಾ, ಬಂಗಾಳ, ರಾಜಾಸ್ಥಾನ, ಕಾಶ್ಮೀರ ಮತ್ತು ಮಹಾರಾಷ್ಟ್ರಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದ ಈ ಕಲೆಗೆ ಮೈಸೂರು ರಾಜ್ಯದಲ್ಲಿ ಬೇರೆಯದೇ ಆದ ಇತಿಹಾಸವಿದೆ. ಈ ಸಂಸ್ಥಾನವು ಮುಮ್ಮಡಿ ಕೃಷ್ಣರಾಜ ಒಡೆಯರ (ಕ್ರಿ.ಶ. 1794-1868) ಕಾಲದಿಂದಲೂ, ತನ್ನದೇ ಆದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಆಗ ಇದನ್ನು ಛಾದ್, (ದೇವರ ಆಟ) ಅಥವಾ ದೇವರ ಪಟದ ಆಟ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಏಕೆಂದರೆ, ಈ ಆಟದ ಎಲೆಗಳ ಮೇಲೆ ದೇವರ ಚಿತ್ರಗಳಿರುತ್ತಿದ್ದವು. ಕೆಲವು ಪ್ರದೇಶಗಳಲ್ಲಿ ಇವುಗಳನ್ನು ಕ್ರೀಡಾಪಟ ಎಂದೂ ಕರೆಯುತ್ತಿದ್ದರು.

ಆದರೆ, ಈಗ ಗಂಜೀಫಾಕಾರ್ಡುಗಳು ಆಟಕ್ಕಿಂತ ಹೆಚ್ಚಾಗಿ ಅವುಗಳ ಮೇಲಿನ ಕಲಾತ್ಮಕವಾದ ಚಿತ್ರಗಳಿಗಾಗಿಯೇ ಹೆಚ್ಚು ಪ್ರಸಿದ್ಧವಾಗಿವೆ. ಮೈಸೂರು ಶೈಲಿಯ ಕಾರ್ಡುಗಳು ವರ್ತುಲಾಕಾರದಲ್ಲಿಯೋ ಅಥವಾ ಆಯತಾಕಾರದಲ್ಲಿಯೋ ಇರುತ್ತವೆ. ಇವುಗಳನ್ನು ಕಾಗದದ ತಿರುಳು, (ಪೇಪರ್ ಪಲ್ಪ್) ನಾರು, ಎಲೆಗಳು ಮತ್ತು ಸಮುದ್ರದಲ್ಲಿ ಸಿಗುವ ಚಿಪ್ಪುಗಳನ್ನು (ಸೀ ಷೆಲ್ಸ್) ಬಳಸಿ ತಯಾರಿಸುತ್ತಾರೆ. ಇವುಗಳಲ್ಲಿ ಸಸ್ಯಮೂಲದ ಸಹಜವಾದ ಬಣ್ಣಗಳನ್ನೇ ಬಳಸುತ್ತಾರೆ. ಚಿತ್ರರಚನೆಯ ನಂತರ, ಹೊಳಪಿಗಾಗಿ ಅರಗಿನ ಲೇಪವನ್ನು ಕೊಡುತ್ತಾರೆ.

ಮೈಸೂರು ಶೈಲಿಯ ಕಾರ್ಡುಗಳ ಮೇಲೆ, ಬಂಗಾರದ ಎಳೆಗಳನ್ನು ಕೂಡಿಸಿರುವ ಬಹಳ ಸುಂದರವಾದ ಚಿಕಣಿಚಿತ್ರಗಳಿರುತ್ತವೆ. ಈ ಕಾರ್ಡುಗಳು ಸಮತಲವಾಗಿರುವುದಿಲ್ಲ. ಶರೀರದ ಭಾಗಗಳು ಕಾರ್ಡಿನ ಮಟ್ಟಕ್ಕಿಂತ ಮೇಲೆ ಉಬ್ಬಿಕೊಂಡಿರುತ್ತವೆ. ಬಂಗಾರದ ಎಳೆಗಳನ್ನುಕಾರ್ಡಿನ ಒಳಗೆ ಕೊರೆದಿರುವ ಬಿರುಕುಗಳಲ್ಲಿ ಕೂಡಿಸುತ್ತಾರೆ. ಆದ್ದರಿಂದ ಅವು ಹೆಚ್ಚು ಬಾಳಿಕೆ ಬರುತ್ತವೆ. ಪ್ರತಿಯೊಂದು ಕಾರ್ಡಿಗೂ ಅದರದೇ ಆದ ವಿನ್ಯಾಸವಿರುತ್ತದೆ.

ಮುಮ್ಮಡಿ ಕೃಷ್ಣರಾಜ ಒಡೆಯರು, ಶ್ರೀತತ್ವನಿಧಿ ಎಂಬ ಬೃಹತ್ ಗ್ರಂಥವನ್ನು ಕೈಬರೆಹದಲ್ಲಿ ಸಿದ್ಧಪಡಿಸಿ, ಅದರ ತುಂಬಾ ಕಲಾವಿದರಿಂದ ಚಿತ್ರಗಳನ್ನು ಬಿಡಿಸಿಸಿದರು. ಅದರಲ್ಲಿ ಅವರು ಸರ್ವ ಸಾಮ್ರಾಜ್ಯ ಪೇಟಿಕಾ ಎಂಬ ಹೆಸರಿನ ಗಂಜೀಫಾ ಆಟವನ್ನು ಪ್ರಸ್ತಾಪಿಸುತ್ತಾರೆ. ಆ ಆಟದಲ್ಲಿ 600 ಕಾರ್ಡುಗಳನ್ನು ಬಳಸುವರಂತೆ. ಈ ಆಟಗಳನ್ನು ಸೃಷ್ಟಿಸಿದವರು ಮತ್ತು ಕಲಾವಿದರು ಭಾರತೀಯ ಪುರಾಣಗಳು, ಮಹಾಕಾವ್ಯಗಳು ಮತ್ತು ಇತರ ಸಾಹಿತ್ಯಕೃತಿಗಳಿಂದ ಆಸಕ್ತಿಹುಟ್ಟಿಸುವ ಘಟನೆಗಳನ್ನು ಆರಿಸಿಕೊಂಡು, ಅವುಗಳನ್ನು ಆಧರಿಸಿದ ವರ್ಣಚಿತ್ರಗಳನ್ನು ರಚಿಸಿದ್ದಾರೆ. ರಾಮಾಯಣ, ಮಹಾಭಾರತ, ಭಾಗವತ ಮತ್ತು ಶಿವಪುರಾಣಗಳು ಅವರಿಗೆ ಪರಮಪ್ರಿಯವಾದ ಆಕರಗಳು. ಒಂದು ಕಾರ್,ಡು ಸುಶ್ರುತನೆಂಬ ಪ್ರಸಿದ್ಧ ವೈದ್ಯನು  ರೋಗಿಯ ಕಣ್ಣುಗಳನ್ನು ಪರೀಕ್ಷೆ ಮಾಡುತ್ತಿರುವ ಚಿತ್ರವನ್ನು  ಒಳಗೊಂಡಿದೆ.

ಗಂಜೀಫಾ ರಘುಪತಿಭಟ್ ಎಂದೇ ಹೆಸರುವಾಸಿಯಾಗಿರುವ ಜಿ. ರಘುಪತಿಭಟ್ ಅವರು ಪ್ರಸಿದ್ಧ ಗಂಜೀಫಾ ಕಲಾವಿದರು ಮತ್ತು ಸಂಗ್ರಾಹಕರು. ಅವರು ಗಂಜೀಫಾ ಕಲೆಗೆಂದೇ ಮೀಸಲಾದ ಅಂತಾರಾಷ್ಟ್ರೀಯ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಆದ್ದರಿಂದಲೇ ಮೈಸೂರು ಆ ಕಲೆಯು ಇನ್ನೂ ಜೀವಂತವಾಗಿರುವ ಕೆಲವೇ ಕೇಂದ್ರಗಳಲ್ಲಿ ಒಂದು. ಅವರು ಇತ್ತೀಚೆಗೆ ಪ್ರಕಟವಾದ ಕುಮಾರವ್ಯಾಸ ಭಾರತದ ಹೊಸ ಆವೃತ್ತಿಗೆ ಗಂಜೀಫಾ ಮಾದರಿಯ ಅನೇಕ ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ.     

 

ಮುಂದಿನ ಓದು ಮತ್ತು ಲಿಂಕುಗಳು:

  1. www.hindu.com/.../stories/2008091054970600.htm
  2. www.thehindu.com/.../2003060800150200.htm
  3. ignca.nic.in/srcdd001.htm
  4. Ganjifa: the playing cards of India : a general survey, with a catalogue of ...‎ - Page    81, by Rudolf von Leyden and Michael A.E. Dummet, 1982, Victoria and Albert Museum, London.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು