ಜಾನಪದ ಮತ್ತು ಜನಪದ ಕಲೆಗಳು
ದೊಂಬರಾಟ

         ದೊಂಬರು ಕರ್ನಾಟಕದ ಪ್ರಮುಖ ಅಲೆಮಾರಿ ಸಮುದಾಯಗಳಲ್ಲಿ ಸೇರುತ್ತಾರೆ. ಅವರನ್ನು ಉತ್ತರ ಕರ್ನಾಟಕದಲ್ಲಿ ಕೊಲ್ಲಟಿಗರೆಂದೂ ಕರೆಯುತ್ತಾರೆ. ಅವರ ಪ್ರದರ್ಶನವನ್ನು ದೊಂಬರಾಟ. ಕೊಲ್ಲಟಿಗರ ಆಟ ಮುಂತಾದ ಹೆಸರುಗಳಿಂದ ಗುರುತಿಸುತ್ತಾರೆ. ದೊಂಬರು ಆಂಧ್ರಪ್ರದೇಶದಿಂದ, ಅದರಲ್ಲಿಯೂ ಕಡಪಾ, ನೆಲ್ಲೂರು, ಚಿತ್ತೂರು ಮತ್ತು ವಿಶಾಖಪಟ್ಟಣ ಜಿಲ್ಲೆಗಳಿಂದ ವಲಸೆ ಬಂದಿರುವಂತೆ ತೋರುತ್ತದೆ. ಅವರು ತಮ್ಮ ತಾಯಿನುಡಿಯಾದ ತೆಲುಗು ಮತ್ತು ಪ್ರಾದೇಶಿಕ ಭಾಷೆಯಾದ ಕನ್ನಡ ಎರಡರಲ್ಲಿಯೂ ಸರಾಗವಾಗಿ ಮಾತನಾಡುತ್ತಾರೆ. ವಾಸ್ತವವಾಗಿ ದೊಂಬರ ಸಮುದಾಯವು ಭಾರತದ ಉದ್ದಗಲಕ್ಕೂ ಹರಡಿಕೊಂಡಿದ್ದು ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಈ ಬುಡಕಟ್ಟಿನ ಹುಟ್ಟು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅನೇಕ ಐತಿಹ್ಯಗಳಿವೆ. ಅವರು ಐತಿಹಾಸಿಕ ವ್ಯಕ್ತಿಯಾದ ಕುಮಾರರಾಮನ ಮಲತಾಯಿ ರತ್ನಾಜಿಯೊಂದಿಗೆ ತಮ್ಮ ಸಂಬಂಧವನ್ನು ಹೇಳಿಕೊಳ್ಳುತ್ತಾರೆ. ಹತ್ತನೆಯ ಶತಮಾನದ ಪಂಪ ಮತ್ತು ಹನ್ನೆರಡನೆಯ ಶತಮಾನದ ವಚನಕಾರರ ಬರವಣಿಗೆಯಲ್ಲಿಯೇ ದೊಂಬರನ್ನು ಕುರಿತಾದ ಉಲ್ಲೇಖಗಳು ಕಂಡುಬರುತ್ತವೆ. ಬಿಜಾಪುರ ಜಿಲ್ಲೆಯ ಹೊನ್ನಿಹಾಳಿನಲ್ಲಿ ಸಿಕ್ಕಿರುವ ಶಾಸನವು ದೊಂಬರಿಗೆ ಒಂದು ಹಳ್ಳಿಯನ್ನೇ ದಾನವಾಗಿ ಕೊಟ್ಟ ಪ್ರಸಂಗವನ್ನು ದಾಖಲೆ ಮಾಡಿದೆ. ಅಲ್ಲಿಯೇ ದೊಂಬರ ಹೆಣ್ಣುಮಕ್ಕಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುವ ಶಿಲ್ಪಗಳು ದೊರಕಿವೆ. ಒಬ್ಬ ದೊಂಬಿತಿಯು ಒಂಟಿ ಕಾಲಿನ ಮೇಲೆ ನಿಂತುಕೊಂಡು ಇಬ್ಬರು ಮಕ್ಕಳು ಮತ್ತು ಒಂದು ಬಿಲ್ಲನ್ನು ಸಮತೋಲನ ಮಾಡಿ ಎತ್ತಿಕೊಂಡಿದ್ದಾಳೆ.’ (ಮಾಹಿತಿ ಋಣ: ಕಾಮತ್ಸ್ ಪಾಟ್ ಪೌರಿ ವೆಬ್ ಸೈಟಿನಿಂದ)

          ದೊಂಬರು ಯೆಲ್ಲಮ್ಮ, ದ್ಯಾಮವ್ವ, ಮಾರಮ್ಮ, ದುರ್ಗಮ್ಮ, ಹನುಮಂತ ಮುಂತಾದ ಸ್ಥಳೀಯ/ಪಪ್ರಾದೇಶಿಕ ದೇವತೆಗಳನ್ನು ಪೂಜಿಸುತ್ತಾರೆ. ಚೈತ್ರ ಮಾಸದ ಹುಣ್ಣಿಮೆಯ ದಿನ ಅವರೆಲ್ಲರೂ ಯೆಲ್ಲಮ್ಮ ದೇವಿಯನ್ನು ಆರಾಧಿಸುತ್ತಾರೆ. ಅವರ ವಿವಾಹ ಸಮಾರಂಭಗಳು ಬಹಳ ಸರಳವಾದವು. ಬಹು ಪಾಲು ಮದುವೆಗಳು ಅವರ ಮೂಲನೆಲೆಯಾದ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತವೆ. ಬೆಳಗಾಂ ನಗರದ ಹೊರವಲಯವು ದೊಂಬರ ಪ್ರಧಾನವಾದ ಬಿಡದಿಗಳಲ್ಲಿ ಒಂದು.

          ದೊಂಬರ ಕುಣಿತವು ಶಿವಮೊಗ್ಗ ಜಿಲ್ಲೆಯಲ್ಲಿರುವ ದೊಂಬರ ಉಪಸಮುದಾಯವೊಂದರ ಮಹಿಳೆಯರು ಪ್ರದರ್ಶಿಸುವ ವಿಶಿಷ್ಟವಾದ ಕಲೆ. ಆ ಮಹಿಳೆಯರು ಬಿಳಿಯ ಸೀರೆಗಳನ್ನು ಉಟ್ಟುಕೊಂಡು ನರ್ತಿಸಿದರೆ, ಅವರ ಸಂಗಡ ಕುಣಿಯುವ ಗಂಡಸರು ಮುಖವಾಡಗಳನ್ನು ಧರಿಸಿಕೊಳ್ಳಬೇಕು.

          ದೊಂಬರು ತಮ್ಮ ದೊಂಬರಾಟಕ್ಕಾಗಿ ಮತ್ತು ಮೋಡಿ ಪ್ರದರ್ಶನಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಈ ಕಲೆಯಲ್ಲಿ ಧಾರ್ಮಿಕತೆಯಾಗಲೀ ಆಚರಣೆಗಳಾಗಲೀ ಒಂದಿನಿತೂ ಇಲ್ಲವೆನ್ನುವುದನ್ನು ಗಮನಿಸಬೇಕು. ಇದು ಹೊಟ್ಟೆಪಾಡಿಗಾಗಿ ಕಲಿತಿರುವ ಮನರಂಜನೆಯ ಕಲೆ. ಇದರ ಪರಿಣಾಮವಾಗಿ ದೊಂಬರು ತಮ್ಮ ಗಂಟುಗದಡಿಗಳ ಸಮೇತ ಊರೂರು ತಿರುಗುವುದು ಅನಿವಾರ್ಯವಾಯಿತು. ಅವರು ತಮ್ಮ ಹೊರೆಯನ್ನು ಎತ್ತುಗಳು ಹಾಗೂ ಕತ್ತೆಗಳ ಮೇಲೆ ಸಾಗಿಸುತ್ತಾರೆ. ಸಹಜವಾಗಿಯೇ ಅವರು ವಾಸಿಸುವುದು ತಾತ್ಕಾಲಿಕವಾಗಿ ಕಟ್ಟಿಕೊಂಡ ಗುಡಿಸಲುಗಳು ಮತ್ತು ಡೇರಾಗಳಲ್ಲಿ.   

          ಸಾಮಾನ್ಯವಾಗಿ ದೊಂಬರಾಟದ ಪ್ರದರ್ಶನವು ಹಳ್ಳಿಯ ಮಧ್ಯಭಾಗದಲ್ಲಿ ಅಥವಾ ರಸ್ತೆಗಳು ಸಂಧಿಸುವ ಸ್ಥಳದಲ್ಲಿ ನಡೆಯುತ್ತವೆ. ದೊಂಬರಾಟದ ಸುದ್ದಿಯನ್ನು ಡೋಲು ಬಡಿದುಕೊಂಡು ಹೋಗಿ ಹಳ್ಳಿಯ ಜನರೆಲ್ಲರಿಗೂ ತಿಳಿಸುತ್ತಾರೆ. ಪ್ರೇಕ್ಷಕರು ವರ್ತುಲಾಕಾರದಲ್ಲಿ ಕುಳಿತುಕೊಳ್ಳುತ್ತಾರೆ. ಮಧ್ಯದಲ್ಲಿ ಬಣ್ಣಬಣ್ಣದ ಉಡುಪುಗಳನ್ನು ಧರಿಸಿದ ದೊಂಬರ ಗಂಡಸರು, ಹೆಂಗಸರು ಮತ್ತು ಮಕ್ಕಳ ಕಸರತ್ತುಗಳು ಹಾಗೂ ಕಲೆಯ ಪ್ರದರ್ಶನವು ಎಡೆಬಿಡದೆ ನಡೆಯುತ್ತದೆ. ಹೆಣ್ಣುಮಕ್ಕಳು ಹಲವು ಬಣ್ಣಗಳ ಲಂಗಗಳು ಮತ್ತು ರವಿಕೆಗಳನ್ನು ಹಾಕಿಕೊಂಡು, ಮಣಿಸರಗಳು, ಕಿವಿಯೋಲೆ, ನತ್ತು ಮುಂತಾದ ಒಡವೆಗಳನ್ನು ತೊಟ್ಟಿರುತ್ತಾರೆ. ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು, ಹೂಮುಡಿದಿರುತ್ತಾರೆ. ಅವರು ತಮಟೆ ಮತ್ತು ತೆಂಗಿನಚಿಪ್ಪಿನಿಂದ ಮಾಡಿದ ಸರಳವಾದ ತಂತೀವಾದ್ಯದ ತಾಳಕ್ಕೆ ಅನುಗುಣವಾಗಿ ಕುಣಿಯುತ್ತಾರೆ. ಪೈಜಾಮ, ಕೋಟು ಮತ್ತು ತಲೆಯುಡುಪನ್ನು ಧರಿಸಿದ ಮುದುಕನು ತನ್ನ ನಗೆಮಾತುಗಳು ಹಾಗೂ ಮಾತುಗಾರಿಕೆಯಿಂದ ಮನರಂಜನೆ ನೀಡುತ್ತಾನೆ.ಕೋಡಂಗಿಯ ಹಾಗೆ ವೇಷ ಹಾಕಿಕೊಂಡು ಬಗೆಬಗೆಯ ಮಂಗಾಟಗಳಲ್ಲಿ ತೊಡಗಿರುವ ಬೆಳ್ಳಿಕುಳ್ಳ ಎನ್ನುವನದೂ ಮನರಂಜನೆ ನೀಡುವ ಕೆಲಸವೇ.

          ಆದರೆ, ನಿಜವಾದ ದೊಂಬರಾಟದ ಕಲಾವಿದರು ಈ ಕೋಡಂಗಿಗಳಿಗಿಂತ ಭಿನ್ನರಾದವರು. ಅವರು ಮೈನವಿರೇಳಿಸುವ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಚಿಕ್ಕ ಮಕ್ಕಳಿಗೂ ಇಂತಹ ಸಾಹಸಗಳನ್ನು ಕಲಿಸಿರುತ್ತಾರೆ. ಹದನೈದು ಅಡಿಗಳಷ್ಟು ಉದ್ದವಿರುವ ಕೋಲಿನ ಮೇಲೆ ಚಿಕ್ಕ ಮಗುವನ್ನು ಕೂಡಿಸಿ, ಆ ಕೋಲನ್ನು ಆಕಾಶಕ್ಕೆ ಎತ್ತಿಹಿಡಿಯುತ್ತಾರೆ. ಹಠಾತ್ತನೆ ಕೋಲನ್ನು ಬದಿಗೆ ಸರಿಸಿ, ಕೆಳಗೆ ಬೀಳುತ್ತಿರುವ ಮಗುವನ್ನು ಕೈಗಳಲ್ಲಿ ಆತುಕೊಳ್ಳುತ್ತಾರೆ. ಅವರ ಪ್ರದರ್ಶನದ ವಿವಿಧ ಮಜಲುಗಳಲ್ಲಿ ಕತ್ತಿಗಳು, ಬಾಕುಗಳು, ಚಾಕುಗಳು, ಕಬ್ಬಿಣದ ಗುಂಡುಗಳು, ಮಂತ್ರದಂಡಗಳು, ಹಲವು ಅಳತೆಗಳ ಕಬ್ಬಿಣದ ಬಳೆಗಳು, ಬಾಣ ಚಕ್ರಗಳು, ಕಾಲ್ಗೆಜ್ಜೆಗಳು, ಮನುಷ್ಯರ ಮೂಳೆಗಳು, ತಲೆಬುರುಡೆಗಳು ಮುಂತಾದ ವಸ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಕೌಶಲ್ಯವನ್ನು ತೋರಿಸುತ್ತಾರೆ. ಇವಲ್ಲದೆ ಅವರ ಹತ್ತಿರ ಚರ್ಮದ ವಸ್ತುಗಳು, ಬಿದಿರು ಗಳಗಳು, ಹಗ್ಗಗಳು, ಚಾವಟಿಗಳು ಮುಂತಾದ ಸಾಮಗ್ರಿಗಳ ಲೋಕವೇ ಇರುತ್ತದೆ. ಅವುಗಳನ್ನು ಬಳಸಿಕೊಂಡು ಅವರು ಮಾಯಾಲೋಕವನ್ನೇ ಸೃಷ್ಟಿಸುತ್ತಾರೆ. 

          ಪ್ರದರ್ಶನದ ಪ್ರಾರಂಭದಲ್ಲಿ ಸಗಣಿಯಿಂದ ಮಾಡಿದ ಗಣಪತಿಯನ್ನು ಪೂಜಿಸಿ, ರಂಗಸ್ಥಳದ ನಡುವೆ ಒಂದು ಬೊಂಬನ್ನು ಹೂಳಿ ನಿಲ್ಲಿಸುತ್ತಾರೆ. ಅವರ ಪ್ರದರ್ಶನದ ಮುಖ್ಯ ಐಟಂಗಳು ಈ ರೀತಿ ಇವೆ.

  1. ಬಿದಿರುಗಳವನ್ನು ಹತ್ತುವುದು ಮತ್ತು ದಿಢೀರನೆ ಅದರಿಂದ ಜಾರಿಕೊಂಡು ಕೆಳಗೆ ಇಳಿಯುವುದು.
  2. ಆ ಬೊಂಬನ್ನು ಹಿಡಿದಿಕೊಂಡೇ ಬಗೆಬಗೆಯ ಲಾಗಗಳನ್ನು ಹಾಕುವುದು.
  3. ಎತ್ತಿನ ಬಂಡಿಯನ್ನು ತನ್ನ ಕೂದಲಿಗೆ ಕಟ್ಟಿಕೊಂಡು ಎಳೆಯುವುದು.
  4. ನೆಲದ ಮೇಲೆ ಅಂಗಾತ್ತಾಗಿ ಮಲಗಿಕೊಂಡು, ಎದೆಯ ಮೇಲೆ ದೊಡ್ಡ ಬಂಡೆಯನ್ನು ಇಟ್ಟುಕೊಳ್ಳುವುದು.
  5. ಹಗ್ಗದ ಮೇಲಿನ ನಡಿಗೆ.
  6. ನೀರುತುಂಬಿದ ಕೊಡವನ್ನು ಹಲ್ಲುಗಳಿಂದಲೇ ಎತ್ತುವುದು.
  7. ಮರಗಾಲುಗಳನ್ನು ಕಟ್ಟಿಕೊಂಡು ನಡೆಯುವುದು.
  8. ಚಿಕ್ಕ ಮಕ್ಕಳು ಕಬ್ಬಿಣದ ಹೂಪುಗಳಲ್ಲಿ (Hoop) ಒಳಗೆ ಮೈಮಣಿಸಿಕೊಂಡು ಹೋಗಿ ಹೊರಬರುವುದು. ಇತ್ಯಾದಿ

ಆಟ ಮುಗಿದ ನಂತರ ನೋಟಕರಿಂದ ಹಣವನ್ನು ವಸೂಲುಮಾಡುತ್ತಾರೆ. ಹೆಣ್ಣುಮಕ್ಕಳು ಮನೆಯಿಂದ ಮನೆಗೆ ಹೋಗಿ ದವಸ ಧಾನ್ಯಗಳು ಮತ್ತು ಇತರ ಆಹಾರವಸ್ತುಗಳನ್ನು ಸಂಗ್ರಹಿಸುತ್ತಾರೆ. ಕೆಲವೊಮ್ಮೆ ಅವರು ಮರದ ಅಥವಾ ಕೊಂಬಿನ ಬಾಚಣಿಗೆಗಳು ಮತ್ತು ಕಾಗದದ ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ, ಸೂತ್ರದಗೊಂಬೆಯಂತಹುದನ್ನು ಸಂಗಡ ತೆಗದುಕೊಂಡು ಹೋಗಿ, ಅದು ತಮ್ಮ ಹಾಡುಗಳ ತಾಳಕ್ಕೆ ಅನುಗುಣವಾಗಿ ಕುಣಿಯುವಂತೆ ಮಾಡುತ್ತಾರೆ.

ಇಷ್ಟೇ ಅಲ್ಲದೆ, ದೊಂಬರು ಕಣಿಹೇಳುವುದು, ದೆವ್ವಬಿಡಿಸುವುದು, ಕೆಲವು ರೋಗಗಳನ್ನು ಗುಣಪಡಿಸುವುದು ಮುಂತಾದ ಕೆಲಸಗಳನ್ನು ಮಾಡಬಲ್ಲರೆಂಬ ನಿರೀಕ್ಷೆಯೂ ಇರುತ್ತದೆ. ಆಧುನಿಕ ಜೀವನದ ನಾಗರೀಕರಣ ಮತ್ತು ವಿದ್ಯಾಭ್ಯಾಸದ ಫಲವಾಗಿ, ಕ್ರಮೇಣ ದೊಂಬರಾಟದ ಕಲೆಯು ಕಾಣೆಯಾಗುತ್ತಿದೆ.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು