ಜಾನಪದ ಮತ್ತು ಜನಪದ ಕಲೆಗಳು
ಡೊಳ್ಳು ಕುಣಿತ

           ಡೊಳ್ಳುಕುಣಿತವು ಶಕ್ತಶಾಲಿಗಳ ಕಲೆ. ಅಪಾರವಾದ ದೈಹಿಕಬಲ, ಪ್ರತಿಭೆ ಮತ್ತು ಪರಿಶ್ರಮಗಳನ್ನು ಬಯಸುವ ಕಲೆಯು, ಮೊದಲಿನಿಂದಲೂ ಗಂಡಸರಿಗೆ ಮೀಸಲಾಗಿತ್ತು. (ಈಚೆಗೆ ಕೆಲವು ಮಹಿಳೆಯರು ಧಾರ್ಮಿಕ ಆಚರಣೆಯೆನ್ನುವುದಕ್ಕಿಂತ ಹೆಚ್ಚಾಗಿ, ಆಕರ್ಷಕವಾದ ಕಲೆಯೆಂದು ಇದರಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡೊಳ್ಳುಕುಣಿತವು ಕರ್ನಾಟಕದ ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆದ ಕಲೆಗಳಲ್ಲಿ ಒಂದು. ಡೊಳ್ಳುಕುಣಿತ ಮತ್ತು ಅದರ ಸಂಗಾತಿಕಲೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆಚರಣೆಯಲ್ಲಿವೆ. ಬಿಜಾಪುರ, ಬಾಗಲಕೋಟೆ, ಬೆಳಗಾಂ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಈ ಕಲೆಗಾಗಿ ಹೆಸರುವಾಸಿಯಾಗಿವೆ. ಈ ಕಲೆಯನ್ನು ಸಾಂಪ್ರದಾಯಿಕವಾಗಿ ಕುರುಬರ ಸಮುದಾಯದೊಂದಿಗೆ ಗುರುತಿಸುತ್ತಾರೆ. ಆದರೆ, ಉಪ್ಪಾರರು ಮತ್ತು ಪರಿವಾರ ನಾಯಕರು ಕೂಡ ಇದರಲ್ಲಿ ಭಾಗವಹಿಸುತ್ತಾರೆ. (ಕಡಿಮೆ ಪ್ರಮಾಣದಲ್ಲಿ) ಡೊಳ್ಳುಕುಣಿತವು ನರ್ತನ, ಸಂಗೀತ ಮತ್ತು ಕುರುಬರ ಸಮುದಾಯ ಹಾಗೂ ಅವರ ದೇವರುಗಳಿಗೆ ಸಂಬಂಧಿಸಿದ ಕಥೆಗಳ ಹಾಡುವಿಕೆಗೆ ಮೀಸಲಾದ ಸಂಯೋಜಿತ ಕಲೆ. ಡೊಳ್ಳುಗಳನ್ನು ಬಡಿಯುವುದು ಇದರ ಮುಖ್ಯವಾದ ಭಾಗ.

          ಹಳ್ಳಿಗಳಲ್ಲಿ ಹಬ್ಬಹರಿದಿನಗಳಲ್ಲಿ ಹಾಗೂ ವಾರ್ಷಿಕ ಜಾತ್ರೆಗಳಲ್ಲಿ ಡೊಳ್ಳುಕುಣಿತವನ್ನು ಪ್ರದರ್ಶಿಸುತ್ತಾರೆ. ಇದು ಹಲವು ಪೀಳಿಗೆಗಳಿಂದ ಆಚರಣಾತ್ಮಕ ಕಲೆಯಾಗಿ ಬೆಳೆದುಬಂದಿದೆ. ಕನ್ನಡದ ಹತ್ತು ಹಲವು ಪ್ರಾಚೀನ ಸಾಹಿತ್ಯಕೃತಿಗಳು ಮತ್ತು ಇತರ ಗ್ರಂಥಗಳಲ್ಲಿ ಈ ಕಲೆಯ ಪ್ರಸ್ತಾಪವಿದೆ.

          ಡೊಳ್ಳು, ಈ ಕಲಾಪ್ರದರ್ಶನದಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಚರ್ಮವಾದ್ಯ. ಅವುಗಳನ್ನು ಬೇರೆ ಬೇರೆ ಆಕೃತಿಗಳು ಮತ್ತು ಗಾತ್ರಗಳಲ್ಲಿ ತಯಾರಿಸುತ್ತಾರೆ. ಕುರುಬರು ಬಳಸುವ ಡೊಳ್ಳುಗಳು ಬಹಳ ದೊಡ್ಡವು. ಅದನ್ನು ತಾಳೆ, ಸುರಹೊನ್ನೆ, ಬೇವು, ಬೈನೆ, ಮಾವು ಮುಂತಾದ ಗಟ್ಟಿಯಿಲ್ಲದ ಮರಗಳ  ಕಾಂಡದಿಂದ ತಯಾರಿಸುತ್ತಾರೆ. ಕೊಳವೆಯಾಕಾರದ (ಸಿಲಿಂಡರ್) ಟೊಳ್ಳು ಕಾಂಡವನ್ನು ಸಂಪೂರ್ಣವಾಗಿ ತೆಗೆದುಕೊಂಡು ಅದರೊಳಗಿನ ಅಳಿದುಳಿದ ತಿರುಳನ್ನು ತೆಗೆದುಹಾಕುತ್ತಾರೆ. ಈ ಕೊಳವೆಯು ಸುಮಾರು 24-30 ಅಂಗುಲ ಉದ್ದ ಮತ್ತು 18 ಅಂಗುಲ ವ್ಯಾಸವನ್ನು ಹೊಂದಿರುತ್ತದೆ. ಈ ಡ್ರಮ್ಮಿನ ಎಡ ಮತ್ತು ಬಲ ಬದಿಗಳನ್ನು ಅನುಕ್ರಮವಾಗಿ ಮೇಕೆ ಮತ್ತು ಕುರಿಗಳ ಚರ್ಮದಿಂದ ಗಟ್ಟಿಯಾಗಿ ಕಣಿಕಣಿ ಎನ್ನುವಂತೆ ಮುಚ್ಚುತ್ತಾರೆ. ಈ ಡೊಳ್ಳನ್ನು ಹಗ್ಗ ಅಥವಾ ಕಂಬಳಿಗಳ ನೆರವಿನಿಂದ ಬಾರಿಸುವವನ ಸೊಂಟಕ್ಕೆ ಕಟ್ಟಲಾಗುತ್ತದೆ. ಡೊಳ್ಳಿನ ಬಲಬದಿಗೆ ಔಡಲೆಣ್ಣೆಯ ಲೇಪನವನ್ನು ಮಾಡುವುದರಿಂದ ವಿಶಿಷ್ಟವೂ ನಾದಮಯವೂ ಆದ ಧ್ವನಿ ಬರುತ್ತದೆ. ಡೊಳ್ಳಿನ ಬಲಬದಿಯನ್ನು ಬಡಿಯಲು ಗುಣಿ ಎಂಬ ಕೋಲನ್ನು ಬಳಸಿದರೆ, ಎಡಬದಿಯನ್ನು ಎಡಗೈಯಿಂದಲೇ ಬಡಿಯುತ್ತಾರೆ. ಸುಮಾರು ಹದಿನೆಂಟು ಅಂಗುಲ ಇರುವ ಗುಣಿಯನ್ನು ಸಾಮಾನ್ಯವಾಗಿ ಬಿದಿರಿನಿಂದ ಮಾಡಿರುತ್ತಾರೆ. ಕುರುಬರ ದೇವರಾದ ಬೀರೇದೇವರನ್ನು ಪೂಜಿಸುವಾಗ ಬಳಸುವ ಡೊಳ್ಳು ಇನ್ನೂ ಡೊಡ್ಡದಾಗಿರುತ್ತದೆ.

          ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ.

          ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆ.  ಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ಹಾಲುಮತ ಪುರಾಣ, ಅನಸೂಯ ಪುರಾಣ, ಪಾಂಡವರ ಪದ, ಮಾರ್ಕಂಡೇಯ ಚರಿತೆ ಮತ್ತು ನಿಂಬೆಕ್ಕನ ಪದಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ಡೊಳ್ಳಿನ ಪದಗಳುಎಂದೇ ಕರೆಯುತ್ತಾರೆ. ಬೀರಲಿಂಗೇಶ್ವರನ ಪದವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ.       

 

ಮುಂದಿನ ಓದು ಮತ್ತು ಲಿಂಕುಗಳು:

  1. Dollu Kunitha  (ವಿಕಿಪೀಡಿಯಾದಲ್ಲಿರುವ ಒಂದು ಚಿತ್ರ)
  2. flickr.com/photos/21051743@N00/270968811/ (ಕೆಲವು ಛಾಯಾಚಿತ್ರಗಳು)

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು