ಜಾನಪದ ಮತ್ತು ಜನಪದ ಕಲೆಗಳು
ಚೌಡಿಕೆ ಮೇಳ

   ಚೌಡಿಕೆ ಮೇಳವು, ಸಂಗೀತ, ನೃತ್ಯ ಮತ್ತು ಜಾನಪದ ಕಥನಗಳ ಸಂಯೋಜನೆ. ಈ ಕಲಾವಿದರು ಧಾರ್ಮಿಕ, ವೃತ್ತಿಪರ ಗಾಯಕರ ಸಮುದಾಯಕ್ಕೆ ಸೇರುತ್ತಾರೆ. ಏಕೆಂದರೆ, ಅವರೆಲ್ಲರೂ ಬೆಳಗಾಂ ಜಿಲ್ಲೆಯ ಸವದತ್ತಿಯಲ್ಲಿರುವ ದೇವತೆಯಾದ ಎಲ್ಲಮ್ಮನಿಗೆ ನಿಷ್ಠರಾದವರು. ಈ ಕಲಾವಿದರನ್ನು ಉತ್ತರ ಕರ್ನಾಟಕದಲ್ಲಿ ಗೊಂದಲಿಗರು ಎಂದೂ ಕರೆಯುತ್ತಾರೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಅವರು ನೊಣವಿನಕೆರೆ, ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಚಿತ್ರದುರ್ಗ ಮುಂತಾದ ಊರುಗಳ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹರಡಿಕೊಂಡಿದ್ದಾರೆ.

            ಚೌಡಿಕೆಯು ತಂತೀವಾದ್ಯ. ಇದನ್ನು ಚೌಟಗಿ, ಚವ್ಡಗಿ ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ. ಇದರಲ್ಲಿ ಲೋಹದ ತಂತಿಯ ಬದಲು ವಯಸ್ಸಾದ ಕುರಿಯ ಬೆನ್ನುಹುರಿ ಅಥವಾ ಕರುಳಿನ ಹುರಿಯನ್ನು ಬಳಸುತ್ತಾರೆ. ಸುಮಾರು ನಾಲ್ಕು ಅಡಿ ಉದ್ದವಿರುವ ಮರದ ಕೋಲಿನ ತುದಿಗೆ, ಪಿಪಾಯಿಯ ಆಕಾರದ, ಟೊಳ್ಳಾದ, ಎರಡೂ ಕಡೆ ತೆರೆದಿರುವ, ಮರದ ಉಪಕರಣವನ್ನು ಹಿಡಿಯುತ್ತಾರೆ. ಅದರ ಕೆಳಬದಿಯನ್ನು ಬಾತುಕೋಳಿಯ ಚರ್ಮ ಅಥವಾ ಎಳೆಯ ಹೋತದ ಚರ್ಮದಿಂದ ಮುಚ್ಚಿ ಕಟ್ಟುತ್ತಾರೆ. ಈ ವರ್ತುಲಕಾರದ ಚರ್ಮದ ಮಧ್ಯಭಾಗದಲ್ಲಿ ಒಂದು ರಂಧ್ರವನ್ನು ಮಾಡಿ, ಆ ರಂಧ್ರಕ್ಕೆ ತೂತಿರುವ ನಾಣ್ಯವನ್ನು ಅಂಟಿಸುತ್ತಾರೆ. ಈಗಾಗಲೇ ಸಿದ್ಧವಾಗಿರುವ ಬೆನ್ನುಹುರಿಯನ್ನು ಈ ರಂಧ್ರದ ಮೂಲಕ ಹಾಯಿಸಿ, ಗಟ್ಟಿಯಾಗಿ ಎಳೆದು ಅದರ ಇನ್ನೊಂದು ತುದಿಯನ್ನು ಮರದ ಕೋಲಿನ ಮೇಲ್ತುದಿಗೆ ಕಟ್ಟುತ್ತಾರೆ. ಮೇಲುಗಡೆ ಇರುವ ತಿರುಪುಮೊಳೆಯು (ಸ್ಕ್ರೂ) ಹುರಿಯನ್ನು ಬಿಗಿಗೊಳಿಸಲು ನೆರವಾಗುತ್ತದೆ. ಈ ಹುರಿಯನ್ನು ಚಿಕ್ಕ ಕಡ್ಡಿಯಿಂದ ಮಿಡಿದಾಗ ನಾದವು ಹೊರಡುತ್ತದೆ. ಚೌಡಿಕೆ ಸಂಗೀತವನ್ನು ಈ ವಾದ್ಯದ ಹಿನ್ನೆಲೆಯಲ್ಲಿ ಹಾಡುತ್ತಾರೆ.

            ದಂತಕಥೆಗಳು ಈ ವಾದ್ಯಕ್ಕೂ ಜಮದಗ್ನಿ, ಕಾರ್ತವೀರ್ಯಾರ್ಜುನ, ಪರಶುರಾಮ ಮುಂತಾದ ಪುರಾಣಪುರುಷರಿಗೂ ಸಂಬಂಧ ಕಲ್ಪಿಸುತ್ತವೆ. ಚೌಡಿಕೆಯ ಬೇರೆಬೇರೆ ಭಾಗಗಳನ್ನು ಕಾರ್ತವೀರ್ಯನ ದೇಹದ ವಿವಿಧ ಅಂಗಗಳಿಗೆ ಹೋಲಿಸಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಈ ವಾದ್ಯವನ್ನು ಸ್ವತಃ ಪರಶುರಾಮನೇ ತನ್ನಿಂದ ಹತನಾದ ಹತನಾದ ಬೇಟಾಸುರನ ತಲೆಯಿಂದ ಸೃಷ್ಟಿಸಿದನು.

            ಶ್ರುತಿ ಚೌಡಿಕೆಮತ್ತು ಬಾರ್ಕಿ ಚೌಡಿಕೆ (ಬಾರಿಕೆ ಚೌಡಿಕೆ) ಎಂಬ ಎರಡು ಬಗೆಯ ಚೌಡಿಕೆಗಳಿವೆ. ಇವಗಳಲ್ಲಿ ಎರಡನೆಯದು ಗಾತ್ರದಲ್ಲಿ ಚಿಕ್ಕದು. ಆದರೆ, ಅದೇ ಮುಖ್ಯವಾದ ಉಪಕರಣ. ಚೌಡಿಕೆಮೇಳದ ಪ್ರದರ್ಶನವು ಎಲ್ಲಮ್ಮ ದೇವಿ ಮತ್ತು ಚೌಡಿಕೆ ವಾದ್ಯದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಗಣೇಶ, ಸರಸ್ವತಿ, ಶಿವ ಮುಂತಾದ ದೇವತೆಗಳನ್ನೂ ಪ್ರಾರ್ಥಿಸುತ್ತಾರೆ. ಈ ಪ್ರದರ್ಶನವು ನೆಲಮಟ್ಟದಿಂದ ಸುಮಾರು ಹದಿನೆಂಟು ಅಂಗುಲ ಎತ್ತರವಿರುವ ವೇದಿಕೆಯ ಮೇಲೆ ನಡೆಯುತ್ತದೆ. ಅದನ್ನು ಹಸಿರೆಲೆಗಳಿಂದ ಸಿಂಗರಿಸುತ್ತಾರೆ. ಕಲಾವಿದರು ಹಳದಿ ಅಂಗಿ, ಹಳದಿ ಪಂಚೆ ಮತ್ತು ಹಳದಿ ಅಥವಾ ಬಿಳಿಯ ಬಣ್ಣದ ರುಮಾಲನ್ನು ಧರಿಸಿರುತ್ತಾರೆ. ಇವುಗಳ ಜೊತೆಗೆ ಕಪ್ಪು ಬಣ್ಣದ ಕೋಟು ಇರುತ್ತದೆ. ಅವರು ಕಾಲುಗೆಜ್ಜೆ ಮತ್ತು ಎಲ್ಲಮ್ಮನ ತಾಳಿಯನ್ನೂ ಕಟ್ಟಿಕೊಂಡಿರುತ್ತಾರೆ.

            ಸಾಮಾನ್ಯವಾಗಿ ಚೌಡಿಕೆ ಮೇಳದಲ್ಲಿ ಮೂವರು ಕಲಾವಿದರು ಇರುತ್ತಾರೆ. ಅವರು ಅನುಕ್ರಮವಾಗಿ ಶ್ರುತಿ ಚೌಡಿಕೆ, ಬಾರ್ಕಿ ಚೌಡಿಕೆ ಮತ್ತು ಚಿಟ್ ತಾಳಗಳನ್ನು ನುಡಿಸುತ್ತಾರೆ. ಕೆಲವು ಬಾರಿ ತುಂತುಣಿ ಎಂಬ ವಾದ್ಯವನ್ನೂ ನುಡಿಸಲಾಗುತ್ತದೆ. ಮುಖ್ಯ ಕಲಾವಿದನು ಪದ್ಯ ಮತ್ತು ಗದ್ಯಗಳ ಮಿಶ್ರಣವಿರುವ ಕಥನವನ್ನು ಮಾಡುತ್ತಾನೆ. ಹಾಡುವುದೂ ಅವನೇ, ಹೇಳುವುದೂ ಅವನೇ. ಉಳಿದ ಇಬ್ಬರು ಹಾಡುವಿಕೆ ಮತ್ತು ವಾದ್ಯಗಳ ಹಿನ್ನೆಲೆಯನ್ನು ಒದಗಿಸುತ್ತಾರೆ. ಈ ಕಥನದ ನಡುನಡುವೆ ನರ್ತನಗಳ ಪ್ರದರ್ಶನವೂ ಇರುತ್ತದೆ.           

            ಎಲ್ಲಮ್ಮನ ಕಥೆಯೇ ಈ ಕಲಾವಿದರ ಮೊದಲ ಆಯ್ಕೆ. ಅದರ ಸಂಗಡ ಸರ್ಜಾನಾಯಕನ ಲಾವಣಿ, ಬಂಜೆ ಹೊನ್ನಮ್ಮ, ಬಳ್ಳಾರಿ ತತ್ವ ಮತ್ತು ವಿಶ್ವಬ್ರಹ್ಮನ ಪ್ರಸಂಗಗಳನ್ನೂ ಪ್ರದರ್ಶಿಸುತ್ತಾರೆ. ಈ ಉಪಕರಣಗಳನ್ನು ಹೆಂಗಸರು ನುಡಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಕೆಲವು ಬಾರಿ ಅವರು ನೃತ್ಯವೃಂದದ ಭಾಗವಾಗಿರುತ್ತಾರೆ. ಈ ಮಹಿಳೆಯರು ತಲೆಯ ಮೇಲೆ ಎಲ್ಲಮ್ಮನ ಕೊಡವನ್ನು ಹೊತ್ತುಕೊಂಡು ಹಾಡುಗಾರಿಕೆ ಮತ್ತು ವಾದ್ಯಗಳ ಲಯಕ್ಕೆ ಅನುಗುಣವಾಗಿ ಕುಣಿಯುತ್ತಾರೆ. ಅವರು ಅತ್ಯಂತ ಚಲನಶೀಲವಾದ, ದೊಂಬರಾಟದಂತಹ ನರ್ತನದಲ್ಲಿ ತೊಡಗಿಕೊಂಡಾಗಲೂ ಆ ಕೊಡವು ಕೆಳಗೆ ಬೀಳುವುದಿಲ್ಲ. ಈ ನರ್ತನ ಮಾಡಲು ತುಂಬ ಕುಶಲತೆ ಬೇಕು, ಸತತವಾದ ಅಭ್ಯಾಸ ಬೇಕು. ನೋಡಲು ಬಹಳ ಆಕರ್ಷಕವಾದ ಚೌಡಿಕೆಮೇಳವು, ಕ್ರಮೇಣ ಧರ್ಮದ ಆಚೆಗಿನ ಆಯಾಮಗಳನ್ನೂ ಪಡೆದುಕೊಳ್ಳುತ್ತಿದೆ. 

 

ಮುಂದಿನ ಓದು ಮತ್ತು ಲಿಂಕುಗಳು:

    • 1.     Smithsonian Global Sound (ಈ ವೆಬ್ ಸೈಟಿನಲ್ಲಿ,  ‘Chaudike Padagalu’ ಎನ್ನುವ ನಮೂದನ್ನು ಹುಡುಕಿದರೆ ಕೆಲವು ಚೌಡಿಕೆ ಹಾಡುಗಳನ್ನು ಕೇಳಬಹುದು)
    • 2.    www.simoncharsley.co.uk/yell.html  ( ಮಾತಂಗಿ ಸಂಪ್ರದಾಯವನ್ನು ಕುರಿತ ಲೇಖನ ಮತ್ತು ಒಂದು ಛಾಯಾಚಿತ್ರ)

     

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು