ಜಾನಪದ ಮತ್ತು ಜನಪದ ಕಲೆಗಳು
ಬಿದ್ರಿ ಕಲೆ

   ಬಿದ್ರಿ ಕಲೆಯು ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ಬೀದರ್ ಜಿಲ್ಲೆಯಲ್ಲಿ ಹುಟ್ಟಿಕೊಂಡ ಆಲಂಕಾರಿಕ ಕರಕುಶಲ ಕಲೆ. ಈ ಕಲೆಯು, ಹದಿನಾಲ್ಕರಿಂದ ಹದಿನಾರನೆಯ ಶತಮಾನದವರೆಗೆ ಆ ಪ್ರದೆಶದಲ್ಲಿ ರಾಜ್ಯಭಾರ ನಡೆಸಿದ ಬಹಮನಿ ಸುಲ್ತಾನರ ಕಾಲದಲ್ಲಿ ಮೂಡಿಬಂತು. ಆ ದೊರೆಗಳು ತಾವು ನಿರ್ಮಿಸಿದ ರಂಗೀನ್ ಮಹಲಿನಂತಹ ಅಪರೂಪದ ಭವ್ಯ ವಾಸ್ತುರಚನೆಗಳ ನಿರ್ಮಾಣಕ್ಕಾಗಿ ಇರಾನ್ ದೇಶದಿಂದ ಕುಶಲಕರ್ಮಿಗಳನ್ನು ಕರೆಸಿದರು. ತಾವು ಕಟ್ಟಿಸಿದ ಮೋಹಕ ಇಮಾರತುಗಳಲ್ಲಿ ಚಿತ್ರಗಳನ್ನು ಹಾಗೂ ಚಿಕಣಿ ಚಿತ್ರಗಳನ್ನು ಬರೆಸುವುದು ಅವರ ಉದ್ದೇಶವಾಗಿತ್ತು. ಹಾಗೆ ಬಂದ ಕುಶಲ ಕಲಾವಿದರು, ಈ ಪ್ರದೇಶಕ್ಕೆ ವಿಶಿಷ್ಟವಾದ ಒಂದು ಬಗೆಯ ಜೇಡಿಮಣ್ಣಿನಿಂದ ಪಚ್ರಸ್ ಮಿಶ್ರಣವನ್ನು ತಯಾರಿಸಿಸುವ ಹೊಸ ವಿಧಾನವನ್ನು ರೂಪಿಸಿದರು. ತಾಮ್ರ, ಸತು, ತಗಡು ಮುಂತಾದ ಲೋಹಗಳನ್ನು ಈ ಜೇಡಿಮಣ್ಣಿನೊಂದಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸುವುದರ ಮೂಲಕ ಪಚ್ರಸ್ ಮಿಶ್ರಣವನ್ನು ತಯಾರಿಸುತ್ತಾರೆ. ಈ ಕೆಲಸದಲ್ಲಿ ಕಬ್ಬಿಣವನ್ನು ಉಪಯೋಗಿಸುವುದಿಲ್ಲ. ಈ ಮಿಶ್ರಣದಿಂದ ತಯಾರಿಸಿದ ಕಲಾಕೃತಿಗಳ ಮೇಲ್ಮೆಯಲ್ಲಿ ಸೂಕ್ಷ್ಮವಾದ ಬೆಳ್ಳಿಯ ರೇಕುಗಳನ್ನು ಕೂಡಿಸುವುದರಿಂದ ಬಿದ್ರಿ ಕಲಾಕೃತಿಗಳು ಸೃಷ್ಟಿಯಾಗುತ್ತವೆ.

            ಮೊಟ್ಟಮೊದಲು, ಸಿದ್ಧ ವಸ್ತುಗಳ ಮೇಲೆ, ಬಹಳ ನಾಜೂಕಾದ ವಿಶಿಷ್ಟ ಉಪಕರಣಗಳನ್ನು ಬಳಸಿ, ಬಗೆಬಗೆಯ ವಿನ್ಯಾಸಗಳನ್ನು ಕೊರೆಯುತ್ತಾರೆ. ಹೀಗೆ ಮೂಡಿಬಂದ ಅವಕಾಶಗಳಲ್ಲಿ ತೆಳುವಾದ ಬೆಳ್ಳಿಯ ತಗಡುಗಳನ್ನು,  ಚಿಕ್ಕ ಸುತ್ತಿಗೆಗಳ ನೆರವಿನಿಂದ ಕೂಡಿಸುತ್ತಾರೆ. ಅನಂತರ ಆ ಮೇಲ್ಮೈಯನ್ನು ಬಫಿಂಗ್ ಯಂತ್ರದ ನೆರವಿನಿಂದ ಬಹಳ ನುಣುಪಾಗುವಂತೆ ಪಾಲಿಶ್ ಮಾಡುತ್ತಾರೆ. ಈ ಹಂತದಲ್ಲಿ ಪಚ್ರಸ್ ಮಿಶ್ರಣದ ಬೂದುಬಣ್ಣವು ಹೊಳೆಹೊಳೆಯುವ ಕಪ್ಪು ಬಣ್ಣವಾಗಿ ಮಾರ್ಪಾಡಾಗುತ್ತದೆ. ಈ ಕೆಲಸದಲ್ಲಿ ನೆರವಾಗಲೆಂದು ಕೆಲವು ರಾಸಾಯನಿಕಗಳು ಮತ್ತು ಜೇಡಿಮಣ್ಣನ್ನು ಲೇಪಿಸುತ್ತಾರೆ. ಅಂತಿಮವಾಗಿ, ಕೊಬ್ಬರಿ ಎಣ್ಣೆಯನ್ನು ಹಚ್ಚಿ ಉಜ್ಜುವುದರಿಂದ ಕಲಾಕೃತಿಯ ಹೊಳಪು ಇನ್ನಷ್ಟು ಹೆಚ್ಚುತ್ತದೆ.

            ಈ ಕಲಾಕೃತಿಗಳನ್ನು ಉತ್ಪಾದಿಸುವ ಬೇರೆ ವಿಧಾನಗಳೂ ಇವೆ. ಒಂದು ವಿಧಾನದಲ್ಲಿ, ಪಚ್ರಸ್ ಮಿಶ್ರಣವು ದ್ರವರೂಪದಲ್ಲಿ ಇರುವಾಗಲೇ ಅದಕ್ಕೆ ಬೆಳ್ಳಿಯ ರೇಕುಗಳನ್ನು ಸೇರಿಸುತ್ತಾರೆ. ಮತ್ತೊಂದು ಬಗೆಯಲ್ಲಿ ಬೆಳ್ಳಿಯ ತಗಡುಗಳಿಗೆ ಬದಲಾಗಿ ಅದೇ ಲೋಹದ ತಂತಿಗಳನ್ನು ಬಳಸುತ್ತಾರೆ. ನಾಲ್ಕನೆಯ ವಿಧಾನದಲ್ಲಿ, ಇಡೀ ಪಾತ್ರೆಯನ್ನು ಬೆಳ್ಳಿಯ ತಗಡಿನಿಂದ ಆಚ್ಛಾದಿಸಿ, ಅದರ ಮೇಲೆ ಸೂಕ್ಷ್ಮವಾದ ವಿನ್ಯಾಸಗಳನ್ನು ಬಿಡಿಸುತ್ತಾರೆ. ಹೀಗೆ ಬಿಡಿಸಿದ ಚಿತ್ರಗಳನ್ನು ಚಿಕ್ಕ ಉಳಿಯ ನೆರವಿನಿಂದ ಕೊರೆಯುತ್ತಾರೆ. ಕೆಲವು ಬಾರಿ, ಒಂದೇ ಕಲಾಕೃತಿಯ ಸೃಷ್ಟಿಯಲ್ಲಿ ಈ ನಾಲ್ಕೂ ವಿಧಾನಗಳನ್ನು ಬಳಸಿಕೊಳ್ಳುತ್ತಾರೆ.

            ಬಿದ್ರಿ ಕಲಾಕೃತಿಗಳಲ್ಲಿ ಬಳಸುವ ವಿನ್ಯಾಸಗಳಿಗೆ ಸ್ಫೂರ್ತಿ ನೀಡಿದ್ದು, ಸಮೀಪದ ಅಜಂತಾ ಗುಹೆಗಳಲ್ಲಿ ಇದ್ದ ಕಲಾಕೃತಿಗಳು ಮತ್ತು ಬೀದರ್ ನ ಕೋಟೆಯ ಗೋಡೆಗಳ ಮೇಲಿನ ವಿನ್ಯಾಸಗಳು. ಕಾಲಕ್ರಮದಲ್ಲಿ ಬೌದ್ಧಧರ್ಮದ ಅನೇಕ ಆಶಯಗಳನ್ನು ಬಳಸಿಕೊಳ್ಳಲಾಗಿದೆ. ಈಚೆಗೆ ಈ ಕಲೆಗೂ ಆಧುನಿಕತೆಯ ಲೇಪವಾಗಿ ಅನೇಕ ಉಪಯುಕ್ತ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ನೀರಿನ ಹೂಜಿಗಳು, ಪುಷ್ಪಕರಂಡಕಗಳು, ಆಷ್ ಟ್ರೇಗಳು, ಪ್ಲೇಟುಗಳು, ಪಾನ್-ದಾನ್ ಗಳು (ತಾಂಬೂಲ ಕರಂಡಕಗಳು) ಹುಕ್ಕಾಗಳು, ದೇವತೆಗಳು ಮುಂತಾದವು ಅವುಗಳಲ್ಲಿ ಕೆಲವು.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು