ಜಾನಪದ ಮತ್ತು ಜನಪದ ಕಲೆಗಳು
ಆಸಾದಿಗಳು

ಆಸಾದಿಗಳು ಕರ್ನಾಟಕದ ಧಾರ್ಮಿಕ, ವೃತ್ತಿಗಾಯಕರ ಸಮುದಾಯಗಳಲ್ಲಿ ಒಬ್ಬರು. ಅವರು ದೇವಿ ಮಾರಮ್ಮನನ್ನು ಪೂಜಿಸುವ ದಲಿತ ಪೂಜಾರಿಗಳು ಹಾಗೂ ಗಾಯಕರು. ಆಸಾದಿ ಎನ್ನುವ ಪದವು, ದೇವಿಗೆ ನೀಡಲಾದ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚುವ ಪ್ರಸಾದಿ ಎನ್ನುವ ಮೂಲಪದದಿಂದ ಮೈದಳೆದಿದೆ. ಈ ಪದಕ್ಕೆ ದೇವತೆಯ ಅನುಗ್ರಹವನ್ನು ಪಡೆದವನು, ಅವಳಿಗೆ ಸಮೀಪದಲ್ಲಿರುವವನು ಎಂಬ ಇನ್ನೊಂದು ಮೂಲವನ್ನೂ ಸೂಚಿಸಲಾಗಿದೆ. ಈ ಪದಕ್ಕೆ ಚಮ್ಮಾರ ಎಂಬ ಮತ್ತೊಂದು ಅರ್ಥವನ್ನೂ ಆರೋಪಿಸಲಾಗಿದೆ. ಆಸಾದಿ ಎಂಬ ಪದವನ್ನು ತೆಲುಗು ಭಾಷಯಲ್ಲಿಯೂ ಕಾಣಬಹುದು. ಸಾಮಾನ್ಯವಾಗಿ ಆಸಾದಿಯು ಹಳ್ಳಿಯ ದಲಿತ ಸಮುದಾಯದ ನಾಯಕನಾಗಿರುತ್ತಾನೆ.

ಮುಖ್ಯವಾಗಿ ಆಸಾದಿಗಳು ಮಧ್ಯಕರ್ನಾಟಕದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಂತರಗಟ್ಟೆ ಎಂಬ ಹಳ್ಳಿಯು ಆಸಾದಿಗಳ ಕೇಂದ್ರ ನೆಲೆಗಟ್ಟು. ಆ ಸಮುದಾಯದವರೆಲ್ಲರೂ ಅಂತರಗಟ್ಟೆಯ ವಾರ್ಷಿಕ ಜಾತ್ರೆಯಲ್ಲಿ ಒಟ್ಟುಗೂಡುತ್ತಾರೆ. ಸಿರ್ಸಿಯ ಪ್ರಸಿದ್ಧ ಮಾರಿಕಾಂಬಾ ದೇವತೆಗೆ ನಿಷ್ಠರಾದವರೂ ಕೂಡ ಅಂತರಗಟ್ಟೆಯ ಜಾತ್ರೆಗೆ ಆಗಮಿಸುತ್ತಾರೆ. ಆಸಾದಿಗಳ ಸಮುದಾಯಕ್ಕೆ ಸೇರಿಕೊಳ್ಳುವ ದೀಕ್ಷೆಪಡೆದ ಹೆಣ್ಣುಮಕ್ಕಳನ್ನು ‘ರಾಣಿಗ’ ಎಂದು ಕರೆಯುತ್ತಾರೆ.

ಆಸಾದಿ ಗಾಯಕರನ್ನು ದಕ್ಷಿಣ ಕರ್ನಾಟಕದ ಹೆಸರಾಂತ ವೃತ್ತಿಗಾಯಕ ಸಮುದಾಯಗಳಾದ ನೀಲಗಾರರು, ದೇವರಗುಡ್ಡರು ಮತ್ತು ಚೌಡಿಕೆ ಗಾಯಕರೊಂದಿಗೆ ಹೋಲಿಸಬಹುದು. ಆಸಾದಿಗಳು ಮಾರಮ್ಮನ ಜೀವನಕಥೆ ಮತ್ತು ಅವಳು ನಡೆಸಿದ ಪವಾಡಗಳಿಗೆ ಸಂಬಂಧಿಸಿದ ಸುದೀರ್ಘವಾದ ಜಾನಪದ ಮಹಾಕಾವ್ಯವನ್ನು ಹಾಡುತ್ತಾರೆ. ಈ ಮೌಖಿಕ ಪ್ರದರ್ಶನವು ಎಷ್ಟೋ ಸಲ, ಮೂರರಿಂದ ನಾಲ್ಕು ರಾತ್ರಿಗಳ ಕಾಲ ಸತತವಾಗಿ ನಡೆಯುತ್ತದೆ.

ಪ್ರತಿ ವರ್ಷವೂ ನಡೆಯುವ ಮಾರಮ್ಮನ ಜಾತ್ರೆ ಮತ್ತು ಹಬ್ಬದಲ್ಲಿ ಆಸಾದಿಗಳು ಪ್ರಧಾನ ಪಾತ್ರ ವಹಿಸುತ್ತಾರೆ. ಆಗ ಅವರು ಬಿಳಿಯ ನಿಲುವಂಗಿ, ಕಚ್ಚೆ ಪಂಚೆ ಮತ್ತು ಕೆಂಪು ಬಣ್ಣದ ಮುಂಡಾಸನ್ನು ತೊಟ್ಟುಕೊಳ್ಳುತ್ತಾರೆ. ಅವರ ಭುಜಗಳ ಮೇಲೆ ಕೆಂಪು ಅಂಗವಸ್ತ್ರವು ಹರಡಿಕೊಂಡಿರುತ್ತದೆ. ಹಣೆಯ ಮೇಲೆ ಕುಂಕುಮದ ಭಂಡಾರ, ಕೊರಳಿನಲ್ಲಿ ಮೂರು ಮಣಿಗಳ ಹಾರ, ಕರ್ಣಕುಂಡಲ ಹಾಗೂ ಹೂಗಳ ಅಲಂಕಾರಗಳಿಂದ ಅವರು ಶೋಭಿಸುತ್ತಾರೆ. ಆ ದಿನ ಆಸಾದಿಗಳು ಹಳ್ಳಿಯ ಹಿರಿಯರನ್ನು ಮತ್ತು ಮೇಲು ಜಾತಿಗಳಿಗೆ ಸೇರಿದವರನ್ನು ನಿಂದಿಸಬಹುದು, ಗೇಲಿ ಮಾಡಬಹುದು. ಇದು ಅವರಿಗೆ ಅಪರೂಪದ ಅವಕಾಶ. ಮುಖ್ಯ ಆಸಾದಿಯು ದೇವಿಯ ತೇರಿನ ಸಮೀಪದಲ್ಲಿದ್ದು ಅವಳ ಮಹಿಮೆಗಳನ್ನು ಹಾಡಿ ಹೊಗಳುತ್ತಿರುತ್ತಾನೆ. ಒಂದೊಂದು ಬಾರಿ ಅವಳನ್ನೂ ಟೀಕೆ ಮಾಡುತ್ತಾನೆ. ಆದರೆ, ಅದು ಟೀಕೆಯ ರೂಪದಲ್ಲಿಉವ ಹೊಗಳಿಕೆಯೇ ಆಗಿರುತ್ತದೆ. (ನಿಂದಾಸ್ತುತಿ)

ಆಸಾದಿಗಳು ಮಂಗಳವಾರ ಮತ್ತು ಶುಕ್ರವಾರ ದೇವಾಲಯದಲ್ಲಿ ಮಾರಮ್ಮನ ಪೂಜ ಮಾಡುತ್ತಾರೆ. ಪೂಜೆಯ ನಂತರ ಅವಳ ಭಕ್ತರ ಮನೆಗಳಿಗೆ ಹೋಗಿ, ಅವಳ ಮಹಿಮೆಗಳನ್ನು ಹೊಗಳುವ ಹಾಡುಗಳನ್ನು ಹೇಳಿ, ಅವರಿಂದ ದಾನ-ದಕ್ಷಿಣೆ, ದವಸ-ಧಾನ್ಯಗಳನ್ನು ಪಡೆಯುತ್ತಾರೆ. ಮಾರಮ್ಮನ ಗುಡಿಗಳು ಕರ್ನಾಟಕದ ತುಂಬ ಹರಡಿಕೊಂಡಿದ್ದು ಸಾಮಾನ್ಯವಾಗಿ ಆ ದೇವತೆಯನ್ನು ಅವಳು ವಾಸಮಾಡುವ ಊರಿನಿಂದ ಗುರುತಿಸಲಾಗುತ್ತದೆ. ಅಂತರಗಟ್ಟಮ್ಮ, ಲಕ್ಕವಳ್ಳಿ ಅಮ್ಮ, ಕಲ್ಕೆರೆ ಅಮ್ಮ, ದಿವಾಸದಮ್ಮ ಮುಂತಾದವು ಈ ಮಾತಿಗೆ ಕೆಲವು ಉದಾಹರಣೆಗಳು.

ಆಸಾದಿಗಳನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಾರೆ. ಅವರನ್ನು ಮಾರಮ್ಮನ ಮಕ್ಕಳು, ಅಂಗರಕ್ಷಕರು ಹಾಗೂ ರಾಯಭಾರಿಗಳೆಂದು ಪರಿಗಣಿಸುತ್ತಾರೆ. ಯಾವುದೇ ಹಳ್ಳಿಯಲ್ಲಿ, ಆಸಾದಿಯ ಸಾವು ಸಂಭವಿಸಿದಾಗ, ಅವನ ುತ್ತರಾಧಿಕಾರಿಯ ಾಯ್ಕೆಯ ಪ್ರಕ್ರಿಯೆಯು ಮೊದಲಾಗುತ್ತದೆ. ಸ್ವತಃ ಮಾರಮ್ಮನೇ ಊರಿನಲ್ಲಿ ಮೆರವಣಿಗೆ ಹೊರಟು ಮುಂದಿನ ಆಸಾದಿಯನ್ನು ಆರಿಸುತ್ತಾಳೆ. ಕಡ್ಡಾಯವಾಗಿ ಬ್ರಹ್ಮಚಾರಿಯಾಗಿರಬೇಕಾದ ಈ ಉತ್ತರಾಧಿಕಾರಿಯನ್ನು ಗುಡಿಗೆ ಕರೆದುಕೋಡು ಹೋಗುತ್ತಾರೆ. ಅಲ್ಲಿ ಅವನ ತಲೆ ಬೋಳಿಸುತ್ತಾರೆ. ಅವನು ಹಿರಿಯ ಪೂಜಾರಿಗಳಿಂದ ಬಿಳಿಯ ಬಟ್ಟೆಗಳನ್ನು ಸ್ವೀಕರಿಸುತ್ತಾನೆ. ತಾನು ಇನ್ನು ಮುಂದೆ ಎಂಜಲು ಆಹಾರವನ್ನು ಸೇವಿಸುವುದಿಲ್ಲ, ಪಾದರಕ್ಷೆಗಳನ್ನು ಧರಿಸುವುದಿಲ್ಲ ಮತ್ತು ಕೆಟ್ಟ ಅಭ್ಯಾಸಗಳನ್ನು ಕಲಿಯುವುದಿಲ್ಲ ಎಂದು ಶಪಥ ತೆಗೆದುಕೊಳ್ಳುತ್ತಾನೆ. ಹೀಗೆ ದೀಕ್ಷೆ ತೆಗೆದುಕೊಂಡ ಆಸಾದಿಯು, ಅನುಕ್ರಮವಾಗಿ ಪ್ರಾರ್ಥನೆ, ಮಾರಮ್ಮನನ್ನು ಹೊಗಳುವ ಹಾಡುಗಳು ಮತ್ತು ಮೌಖಿಕ ಮಹಾಕಾವ್ಯವನ್ನು ಕಲಿಯುತ್ತಾನೆ.

ಈ ಮಹಾಕಾವ್ಯವನ್ನು ಹಲಗೆ ಎಂಬ ಚರ್ಮವಾದ್ಯದ ಹಿನ್ನೆಲೆಯಲ್ಲಿ ಹಾಡಲಾಗುತ್ತದೆ. ಈ ಹಲಗೆಯನ್ನು ಬೀಟೆ ಮರ, ಬೇವಿನ ಮರ ಅಥವಾ ತಾರೆ ಮರದಿಂದ ತಯಾರಿಸುತ್ತಾರೆ. ಆ ವಾದ್ಯದ ಎರಡೂ ಬದಿಗಳಲ್ಲಿ ಕೋಣದ ತೊಗಲನ್ನು ಗಟ್ಟಿಯಾಗಿ ಕಟ್ಟುತ್ತಾರೆ. ಆಸಾದಿಗಳ ಕುಣಿತ ಕೂಡ ತಮಟೆ, ಉರುಮೆ ಮುಂತಾದ ವಾದ್ಯಗಳ ಹಿನ್ನೆಲೆಯೊಂದಿಗೆ ನಡೆಯುತ್ತದೆ.
ಹೀಗೆ ಆಸಾದಿಗಳು ಗ್ರಾಮಸಮುದಾಯದಲ್ಲಿ ಸಾಕಷ್ಟು ಮುಖ್ಯವೂ ಗೌರವನೀಯವೂ ಆದ ಪಾತ್ರವನ್ನು ವಹಿಸುತ್ತಾರೆ.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು