ಜಾನಪದ ಮತ್ತು ಜನಪದ ಕಲೆಗಳು
ಅಂಟಿಗೆ-ಪಂಟಿಗೆ

ಅಂಟಿಗೆ-ಪಂಟಿಗೆಯು, ಸಾಮುದಾಯಿಕವಾಗಿ ಆಚರಿಸಲಾಗುವ ಒಂದು ಧಾರ್ಮಿಕ ವಿಧಿಕ್ರಿಯೆ. ಇದನ್ನು ಕರ್ನಾಟಕದ ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಹಾಗೂ ಉತ್ತರಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಆಚರಿಸುತ್ತಾರೆ. ಇದು ಒಕ್ಕಲಿಗರು, ಹಸಲರು, ದೀವರು, ಬಂಟರು ಮತ್ತು ಲಿಂಗಾಯತ ಸಮುದಾಯಗಳಲ್ಲಿ ರೂಢಿಯಲ್ಲಿದೆ. ಅಂಟಿಗೆ-ಪಂಟಿಗೆಯನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಚರಿಸುತ್ತಾರೆ. ಅಂಟಿಗೆ ಎನ್ನುವುದರ ಮೂಲರೂಪ "ದೀಪ ಅಂಟಿಸುವುದು". ಪಂಟಿಗೆ ಎಂಬ ಪದವು ತಮಿಳಿನ ಪಂಟಗೈ ಮತ್ತು ತೆಲುಗಿನ ಪಂಡಗ ಎಂಬ ಪದಗಳ ಸಂಬಂಧವನ್ನು ಹೊಂದಿರುವಂತೆ ತೋರುತ್ತದೆ. ಆ ಪದಗಳ ಅರ್ಥವು ಹಬ್ಬ ಎಂದು. ಬೇರೆ ಕೆಲವು ವಿದ್ವಾಂಸರು ಆ ಪದವನ್ನು ತಮಿಳು ಮತ್ತು ಮಲಯಾಳಂ ಭಾಷೆಗಳ, ದೀಪ ಎಂಬ ಅರ್ಥವನ್ನು ಹೊಂದಿರುವ  ಪಂಟಂ ಪದದಲ್ಲಿ ಹುಡುಕುತ್ತಾರೆ. ಕನ್ನಡದಲ್ಲಿಯೂ ಹಣತೆ ಎನ್ನುವ ಪದವನ್ನು ಗಮನಿಸಬಹುದು. ಅದೇನೇ ಇರಲಿ, ಅಂಟಿಗೆ-ಪಂಟಿಗೆ ಎಂದರೆ, ದೀಪವನ್ನು ಹಚ್ಚಿಕೊಂಡು, ಹಳ್ಳಿಯ ಬೀದಿಗಳಲ್ಲಿ ಚಲಿಸುತ್ತಾ, ಮನೆಮನೆಯಲ್ಲಿಯೂ ಬೆಳಕನ್ನು ತುಂಬುವ ಸಂಪ್ರದಾಯ. ಈ ಸಂದರ್ಭದಲ್ಲಿ ಹಾಡುವ ಗೀತೆಗಳನ್ನು ಅಂಟಿಕೆ-ಪಂಟಿಕೆ ಪದಗಳು ಎಂದು ಕರೆಯುತ್ತಾರೆ.

ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ದೀಪಾವಳಿಯನ್ನು ಐದು ದಿನಗಳು ಆಚರಿಸುತ್ತಾರೆ. ಅಂಟಿಗೆ-ಪಂಟಿಗೆಯು ಎರಡನೆಯ ದಿನದ ಸಂಜೆ ಪ್ರಾರಂಭವಾಗುತ್ತದೆ. ಆಗ, ಹಳ್ಳಿಯ ಸಮೀಪದಲ್ಲಿರುವ ಜಟ್ಟಿಗ ಬನದಲ್ಲಿ ಅಥವಾ ದೇವಾಲಯದ ಮುಂದೆ,  ತರುಣರು ಒಟ್ಟುಗೂಡುತ್ತಾರೆ. ದೇವರನ್ನು ಪೂಜಿಸಿ ಅಲ್ಲಿರುವ ನಂದಾದೀಪದಿಂದ ತಾವು ಸಾಗಿಸಲಿರುವ ಬೆಳಕನ್ನು ಹಚ್ಚಿಕೊಳ್ಳುತ್ತಾರೆ. ಈ ದೀಪವು ಕಂಚಿನದು ಅಥವಾ ಮಣ್ಣಿನದು. ಸಾಕಷ್ಟು ದೊಡ್ಡದು. ಸಾಮಾನ್ಯವಾಗಿ ಅದಕ್ಕೆ ಒಂಡು ಹಿಡಿಕೆಯೂ ಇರುತ್ತದೆ. ತಂಡದ ಇನ್ನೊಬ್ಬ ಸದಸ್ಯನು ಮಣ್ಣಿನ ಹೂಜಿಯಲ್ಲಿ ಎಣ್ಣೆಯನ್ನು ತುಂಬಿಕೊಂಡು ಸಂಗಡ ಬರುತ್ತಾನೆ. ತಂಡದಲ್ಲಿ ಐದು ಜನ ಸದಸ್ಯರಿದ್ದು ಜ್ಯೋತಿಯನ್ನು ಹಿಡಿದುಕೊಂಡ ನಾಯಕನು ಮಧ್ಯದಲ್ಲಿರುತ್ತಾನೆ. ಅವನ ಮುಂದೆ ಇಬ್ಬರು ಗಾಯಕರಿರುತ್ತಾರೆ. ಇನ್ನಿಬ್ಬರು ಅವರನ್ನು ಹಿಂಬಾಲಿಸುತ್ತಾರೆ. ಈ ಕಲಾವಿದರು ಯಾವುದೇ ವಿಶೇಷ ಪೋಷಾಕನ್ನು ಧರಿಸುವುದಿಲ್ಲ. ಪಂಚೆ, ಅಂಗಿ ಅಥವಾ ಜುಬ್ಬ ಮತ್ತು ತಲೆಗೊಂದು ರುಮಾಲು ಇಷ್ಟೇ ಅವರ ವೇಷಭೂಷಣ. ಕಾಡುದಾರಿಯಲ್ಲಿ ಉಂಟಾಗಬಹುದಾದ ಅಪಾಯಗಳನ್ನು ಎದುರಿಸಲು, ಗಾಯಕರ ಕೈಯಲ್ಲಿ ಬಲವಾದ ದೊಣ್ಣೆಗಳಿರುತ್ತವೆ.

ಇವರು ಹಾಡುವಾಗ ಯಾವುದೇ ವಾದ್ಯಗಳನ್ನೂ ಬಳಸುವುದಿಲ್ಲ. ಗಾಳಿಬೀಸಿ ದೀಪವು ಆರಿಹೋಗುವ ಅಪಶಕುನವನ್ನು ತಪ್ಪಿಸಲೆಂದು, ಅದನ್ನು ಕಾಪಾಡಿಕೊಳ್ಳುತ್ತಾರೆ.

ತಂಡವು ಹಳ್ಳಿಯಿಂದ ಹಳ್ಳಿಗೆ ಚಲಿಸುತ್ತದೆ. ಹಳ್ಳಿಯಲ್ಲಿ ಪ್ರತಿಯೊಂದು ಮನೆಗೂ ಹೋಗಿ, ತಾವು ತಂದಿರುವ ದೀಪದಿಂದ, ಮನೆಗಳಲ್ಲಿರುವ ದೀಪವನ್ನು ಬೆಳಗುತ್ತಾರೆ. ಸಾಮಾನ್ಯವಾಗಿ ಅವರು ಹೋಗುವುದು, ಜಾತಿಯ ಶ್ರೇಣೀಕರಣದಲ್ಲಿ ತಮಗಿಂತ ಮೇಲೆ ಇರುವವರು ಮತ್ತು ತಮಗೆ ಸರಿಸಮವಾದವರ ಮನೆಗಳಿಗೆ ಮಾತ್ರ. ಈ ಚಟುವಟಿಕೆಗೆ ಸಂಬಂಧಿಸಿದ ಪ್ರತಿಯೊಂದು ಹಂತದಲ್ಲಿಯೂ ಹಾಡುಗಳಿರುತ್ತವೆ.ಬಾಗಿಲಿ ತೆರೆಯಿರೆಂದು ಮನೆಯವರನ್ನು ಕೇಳುವ ಹಾಡು, ದೀಪ ಹಚ್ಚುವಾಗ ಇನ್ನೊಂದು ಹಾಡು, ಹೀಗೆ ಹಾಡುಗಳ ಸರಣಿಯೇ ಇರುತ್ತದೆ. ಮನೆಯವರು ತಾವು ಬೆಳಗಿಕೊಂಡ ದೀಪವನ್ನು ಬಲೀಂದ್ರಕಂಬ ಇನ್ನುವ ನಿರ್ದಿಷ್ಟ ಜಾಗದಲ್ಲಿ ಇಡುತ್ತಾರೆ. ಒಂದು ಮನೆಯಲ್ಲಿ ದೀಪಬೆಳಗಿದ ನಂತರ ಮೆರೆವಣಿಗೆಯು ಮುಂದುವರಿಯುತ್ತದೆ.

ಹಳ್ಳಿಯಿಂದ ಹಳ್ಳಿಗೆ ಹೋಗುವ ನಿಡಿದಾದ ಹಾದಿಯಲ್ಲಿ ಸಾಕಷ್ಟು ದೀರ್ಘವಾದ ಕಥನಗೀತೆಗಳನ್ನು ಹಾಡಲಾಗುತ್ತದೆ. ಗುಣಸಾಗರಿ ಪದ, ಗೋವಿನ ಪದ, ಗಂಗೆ-ಗೌರಿ ಪದ ಮತ್ತು ಶಿವಯೋಗಿ ಪದಗಳು ಅವುಗಳಲ್ಲಿ ಕೆಲವು. ಕೆಲವೊಮ್ಮೆ ಈ ಹಾಡುಗಳಲ್ಲಿ ಅಶ್ಲೀಲತೆಯ ಸೋಂಕು ಮಿಂಚಿ ಮಾಯವಾಗುತ್ತದೆ. ಈ ಹಾಡುಗಳನ್ನು ಬಲ್ಲಾಳಿ ಪದಗಳು ಮತ್ತು ಬಿಂಗಿ ಪದಗಳು ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

ಅಂಟಿಗೆ-ಪಂಟಿಗೆ ಕೆಲವು ಖಚಿತವಾದ ನಿಯಮಗಳಿಂದ ಬದ್ಧವಾಗಿರುತ್ತವೆ. ಉದಾಹರಣೆಗೆ ಎರಡು ತಂಡಗಳು ಪರಸ್ಪರ ಎದುರುಬದರಾಗಿ ಸಂಧಿಸಿ ಮುಂದೆ ಹೋಗಬಾರದು. ಅಂತಹ ಸಂಭವವು ಎದುರಾದಾಗ ಅವರು ‘ದೀಪ-ದೀಪೋಳ್ಗೆ ‘ ಎಂದು ಗಟ್ಟಿಯಾಗಿ ಕೂಗುವುದರ ಮೂಲಕ ಪರಸ್ಪರ ಎಚ್ಚರಿಕೆ ಕೊಟ್ಟುಕೊಂಡು ಬೇರೆ ಬೇರೆ ಹಾದಿ ಹಿಡಿಯುತ್ತಾರೆ. ಹಾಗೆಯೇ, ಸಾಂಪ್ರದಾಯಿಕವಾಗಿ ಎಲ್ಲಕ್ಕಿಂತ ಮೊದಲು ದೀಫವನ್ನು ಸ್ವೀಕರಿಸಬೇಕಾದ ಕುಟುಂಬದಲ್ಲಿ ಸಾವು, ಮೈಲಿಗೆ ಮುಂತಾದ ಅಶುಭ ಘಟನೆಗಳು ಜರುಗಿದರೆ, ಆ ವರ್ಷ ಆಚರಣೆಯನ್ನು ನಿಲ್ಲಿಸಲಾಗುತ್ತದೆ. ಅಷ್ಟೇ ಅಲ್ಲ, ನಂತರದ ಮೂರು ವರ್ಷಗಳು ಕೂಡ ಅದನ್ನು ನಡೆಸುವುದಿಲ್ಲ. ಪ್ರತಿಯೊಂದು ಕುಟುಂಬವೂ ಕಲಾವಿದರ ತಂಡಕ್ಕೆ ನಗದಾಗಿ ಅಥವಾ ವಸ್ತುಗಳ ರೂಪದಲ್ಲಿ ಯಥಾಶಕ್ತಿ ಕಾಣಿಕೆ ನೀಡುತ್ತಾರೆ. ಹೀಗೆ ಅನೇಕ ದಿನಗಳವರೆಗೆ ಸಂಚರಿಸಿದ ನಂತರ ತಂಡವು ತನ್ನ ಹಳ್ಳಿಗೆ ಹಿಂದಿರುಗುತ್ತದೆ. ಪ್ರಯಾಣವನ್ನು ಮೊದಲು ಮಾಡಿದ ಜಟ್ಟಿಗಬನದಲ್ಲಿ ಅಥವಾ ದೇವಾಲಯದ ಮುಂದೆ ಒಟ್ಟುಗೂಡಿಕೊಂಡು ಆ ವರ್ಷದ ಆಚರಣೆಗೆ ಮಂಗಳಹಾಡುತ್ತಾರೆ. ಬರುವ ವರ್ಷದವರೆಗೆ ಆ ದೀಪವು ಅಲ್ಲಿಯೇ ಉಳಿಯುತ್ತದೆ. 

ಪ್ರಾದೇಶಿಕ ಆಚರಣೆಗಳಿಗೆ ಸರಿಯಾದ ಮಾದರಿಯಾದ ಅಂಟಿಗೆ-ಪಂಟಿಗೆಯು, ಆ ಸಮುದಾಯಗಳ ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸಿದೆ.

                          ಮುಖಪುಟ / ಜಾನಪದ ಮತ್ತು ಜನಪದ ಕಲೆಗಳು