ಪ್ರಮುಖ ಸ್ಥಳಗಳು
ಕೊಪ್ಪಳ (ಕೊಪಣ ನಗರ)

ಕೊಪ್ಪಳವು ಈಗ ಜಿಲ್ಲೆಯ ಮುಖ್ಯಸ್ಥಳವಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಅದು ಬಹಳ ಪ್ರಸಿದ್ಧವಾದ ನಗರ. ಕರ್ನಾಟಕದ ಶಾಸನಗಳು ಮತ್ತು ಸಾಹಿತ್ಯಕೃತಿಗಳಲ್ಲಿ, ಕೊಪ್ಪಳಕ್ಕೆ ಸಂಬಂಧಿಸಿದ ಅನೇಕ ಉಲ್ಲೇಖಗಳನ್ನು ನೋಡಬಹುದು. ಕೊಪ್ಪಳವು, ತುಂಗಭದ್ರಾನದಿಯ ಉಪನದಿಯಾದ ಹಿರೇಹಳ್ಳದ ಎಡ ದಂಡೆಯಲ್ಲಿದೆ. ಊರಿನ ಬೇರೆ ಬೇರೆ ದಿಕ್ಕಿನಲ್ಲಿ ಮೂರು ಬೆಟ್ಟಗಳನ್ನು ಕಾಣಬಹುದು. ಅವುಗಳನ್ನು ಗವಿಮಠ, ಪಾಲ್ಕಿಗುಂಡು ಮತ್ತು ಬಹದ್ದೂರ್ ಬಂಡೆ ಎಂದು ಕರೆಯುತ್ತಾರೆ. ಗವಿಮಠದಲ್ಲಿ ನಾಲ್ಕು ಗುಹೆಗಳೂ ಒಂದು ಹೊಸಕಾಲದ ದೇವಾಲಯವೂ ಇವೆ. ಈ ಗವಿಗಳಲ್ಲಿ ಒಂದರ ಮುಂಭಾಗದಲ್ಲಿ, ಕೆಲವು ಜೈನ ಸಮಾಧಿಗಳಿವೆ. ಕೊಪ್ಪಳ ಪ್ರದೇಶವು ಇಡೀ ದಕ್ಷಿಣ ಭಾರತದಲ್ಲಿಯೇ, ಮನುಷ್ಯ ವಸತಿಯಿದ್ದ ತೀರ ಹಿಂದಿನ ಸ್ಥಳಗಳಲ್ಲಿ ಒಂದು. ಇದಕ್ಕೆ ಸಾಕ್ಷಿಯಾಗಿ ಮಲಿ ಮಲ್ಲಪ್ಪನ ಬೆಟ್ಟದಲ್ಲಿ, ಕಲ್ಲಿನಿಂದ ರಚಿತವಾದ ಕೆಲವು ದೊಡ್ಡ ಸಮಾಧಿಗಳಿವೆ. ಇವು ಮಹಾನ್ ಶಿಲಾಯುಗಕ್ಕೆ ಸೇರಿದವು.(ಗ್ರೇಟ್ ಸ್ಟೋನ್ ಏಜ್) ಈ ಜಾಗವನ್ನು ಮೋರಿಯರ ಅಂಗಡಿ ಎಂದೂ ಕರೆಯುತ್ತಾರೆ. ಈ ಹೆಸರು, ಕೊಪ್ಪಳಕ್ಕೂ ಪ್ರಾಚೀನ ಕಾಲದ ಮೌರ್ಯ ರಾಜವಂಶಕ್ಕೂ ಇದ್ದ ಸಂಬಂಧವನ್ನು ಸೂಚಿಸಬಹುದು.

ಕೊಪ್ಪಳದ ಇತಿಹಾಸವು, ಕ್ರಿಸ್ತಪೂರ್ವ ಯುಗದಷ್ಟು ಹಿಂದೆ ಹೋಗುತ್ತದೆ. ಇಲ್ಲಿ, ಚಕ್ರವರ್ತಿ ಅಶೋಕನು ಕ್ರಿ.ಪೂ.300ರಲ್ಲಿ ಸ್ಥಾಪಿಸಿದ ಎರಡು ಚಿಕ್ಕ ಬಂಡೆಶಾಸನಗಳು ಸಿಕ್ಕಿವೆ.(ಗವಿಮಠ ಬೆಟ್ಟ ಮತ್ತು ಪಾಲ್ಕಿ ಗುಂಡು ಬೆಟ್ಟಗಳಲ್ಲಿ) ಇತಿಹಾಸದ ಬೇರೆ ಬೇರೆ ಹಂತಗಳಲ್ಲಿ ಜೈನ ಮತ್ತು ಬೌದ್ಧ ಧರ್ಮಗಳೆರಡೂ ಇಲ್ಲಿ ತಮ್ಮ ಮುಖ್ಯ ನೆಲೆಗಳನ್ನು ಹೊಂದಿದ್ದವು. ಒಂದು ಶಾಸನದ ಪ್ರಕಾರ ಇಲ್ಲಿ 772 ಜೈನ ದೇವಾಲಯಗಳಿದ್ದವಂತೆ. ಈ ಊರನ್ನು ಜೈನ ಕಾಶಿಯೆಂದೇ ಕರೆಯುತ್ತಿದ್ದರು. ಕೊಪ್ಪಳದಲ್ಲಿ ಸುಮಾರು ಇಪ್ಪತ್ತು ಶಾಸನಗಳೂ ಕೆಲವು ತೀರ್ಥಂಕರರ ವಿಗ್ರಹಗಳೂ ದೊರೆತಿವೆ. ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ, ಚೀನಾ ದೇಶದಿಂದ ಭಾರತಕ್ಕೆ ಬಂದಿದ್ದ ಪ್ರವಾಸಿ, ಹ್ಯು-ಎನ್-ತ್ಸಾಂಗ್, ಕೊಪ್ಪಳವನ್ನು ಕೊಂಕಿನಪುಲೋವು ಎಂದು ನಿರ್ದೇಶಿಸಿದ್ದಾನೆ. ಶ್ರೀವಿಜಯನು ತನ್ನ ಆದ್ಯಕೃತಿಯಾದಕವಿರಾಜಮಾರ್ಗದಲ್ಲಿ, ಕೊಪ್ಪಳವು ತಿರುಳುಗನ್ನಡ ಸೀಮೆಯನ್ನು ಸುತ್ತುವರಿದಿರುವ ಗಡಿ ಪಟ್ಟಣಗಳಲ್ಲಿ ಒಂದೆಂದು ಹೇಳುತ್ತಾನೆ. ಮಹಾಕವಿ ರನ್ನನ ಪ್ರಕಾರ, ಅವನ ಆಶ್ರಯದಾತೆಯಾದ ಅತ್ತಿಮಬ್ಬೆಯು ಕೊಪಣಾಚಲದಷ್ಟು (ಕೊಪ್ಪಳದ ಬೆಟ್ಟ) ಪವಿತ್ರವಾದವಳು. ಕೊಪ್ಪಳವನ್ನು ಶಾತವಾಹನ, ಗಂಗ, ಹೊಯ್ಸಳ, ಚಾಳುಕ್ಯ ಮುಂತಾದ ರಾಜವಂಶಗಳವರು ಪ್ರಸ್ತಾಪಿಸಿದ್ದಾರೆ.

ಕೊಪ್ಪಳದ ಕೋಟೆಯು ನೆಲಮಟ್ಟದಿಂದ 400 ಮೀಟರುಗಳ ಎತ್ತರದಲ್ಲಿದೆ. ಅದರ ಗೋಡೆಗಳ ಮೇಲೆ ಮತ್ತು ಕೋಟೆಯೊಳಗೆ ಅನೇಕ ಶಾಸನಗಳಿವೆ. ಈ ಕೋಟೆಯು ದಕ್ಷಿಣಭಾರತದ ಮಿಲಿಟರಿ ವಾಸ್ತುಶಿಲ್ಪದ ಅತ್ಯುತ್ತಮ ನಿದರ್ಶನಗಳಲ್ಲಿ ಒಂದು.

 

ಮುಂದಿನ ಓದು:

  1. ‘Inscriptions of Koppal Ditrict’ by Chennabasappa S.Patil and Vinoda C. Patil, Director of Archaeology amnd Museums, Mysore.
  2. Koppal : koppalcity.gov.in/tourism.html

ಮುಖಪುಟ / ಪ್ರಮುಖ ಸ್ಥಳಗಳು