ಪ್ರಮುಖ ಸ್ಥಳಗಳು
ಹುಮಚ

ಹುಮಚವು, ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲ್ಲೂಕಿನಲ್ಲಿದೆ. ಹೊಸನಗರದಿಂದ ಹತ್ತೊಂಬತ್ತು ಕಿಲೋಮೀಟರುಗಳ ದೂರದಲ್ಲಿರುವ ಹುಮಚವು ಐತಿಹಾಸಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ಪ್ರಸಿದ್ಧವಾಗಿದೆ. ಈ ಊರನ್ನು, ಚರಿತ್ರೆಯಲ್ಲಿ ಹೊಂಬುಚ, ಪೊಂಬುಚ್ಚ, ಪತ್ತಿ ಪೊಂಬುರ್ಚ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಈ ಹೆಸರುಗಳ ಮೂಲವು ಪೊನ್(ಬಂಗಾರ) ಎನ್ನುವುದು. ನಿಸರ್ಗಸುಂದರವಾಗಿರುವ ಈ ಊರು ಎಂಟರಿಂದ ಹನ್ನೆರಡನೆಯ ಶತಮಾನಗಳ ಅವಧಿಯಲ್ಲಿ ಸಾಂತರ ರಾಜವಂಶದ ರಾಜಧಾನಿಯಾಗಿತ್ತು. ಅವರು ಹದಿನಾರನೆಯ ಶತಮಾನದವರೆಗೆ ಆಳಿದರೂ ಕೂಡ, ಕೊನೆಯ ನಾಲ್ಕು ಶತಮಾನಗಳಲ್ಲಿ ರಾಜಧಾನಿಯು ಬದಲಾಗಿತ್ತು. ಸಾಂತರರು ಸಾಂತಳಿಗೆ ಸಾವಿರ ಎಂಬ ಪ್ರದೇಶವನ್ನು ಆಳುತ್ತಿದ್ದರು. ಉತ್ತರ ಭಾರತದಿಂದ, ಪದ್ಮಾವತೀದೇವಿಯ ವಿಗ್ರಹದೊಂದಿಗೆ ಕರ್ನಾಟಕಕ್ಕೆ ವಲಸೆ ಬಂದ ಜಿನದತ್ತನು ಈ ರಾಜ್ಯವನ್ನು ಸ್ಥಾಪಿಸಿದನು.

ರಾಜಧಾನಿ ನಗರದ ಅವಶೇಷಗಳು, ಬಿಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಇಂದಿಗೂ ಕಾಣಸಿಗುತ್ತವೆ. ಹುಮಚದಲ್ಲಿ ಅನೇಕ ಜೈನ ಬಸದಿಗಳೂ ಒಂದೇ ಒಂದು ಜೈನ ಮಠವೂ ಇವೆ. ಇವುಗಳಲ್ಲಿ ಪಾಲಿಯಕ್ಕನ ಬಸದಿಯು ಅತ್ಯಂತ ಹಳೆಯದು. ಅದರ ಅವಶೇಷಗಳನ್ನು ಪಂಚಕೂಟ ಬಸದಿಯ ಆಸುಪಾಸಿನಲ್ಲಿ ನೋಡಬಹುದು. ಕ್ರಿ.ಶ. 820 ರಲ್ಲಿ ವಿಕ್ರಮಾದಿತ್ಯ ಸಾಂತರನು ಇನ್ನೊಂದು ಚಿಕ್ಕ ಬಸದಿಯನ್ನು ಕಟ್ಟಿಸಿದನು. ಮಠದ ಆವರಣದಲ್ಲಿಯೇ ನಿರ್ಮಿಸಲಾಗಿರುವ ಚಂದ್ರನಾಥ ಬಸದಿಯು ಹತ್ತನೆಯ ಶತಮಾನದಲ್ಲಿ ಮೂಡಿಬಂತು.

ಹುಮಚದಲ್ಲಿ ಶ್ರೀ ಕುಂದಕುಂದಾಚಾರ್ಯನ ನಂದಿಸಂಘಕ್ಕೆ ಸೇರಿದ ಸನ್ಯಾಸಿಗಳಿಂದ ನಿರ್ಮಿತವಾದ ಪ್ರಾಚೀನ ಜೈನಮಠವಿದೆ. ಈ ಮಠದಲ್ಲಿ ವಿಶಾಲವಾದ ಕಟ್ಟಡಗಳಿದ್ದು, ಅವರು ಪಾರ್ಶ್ವನಾಥ ದೇವಾಲಯ ಮತ್ತು ಪದ್ಮಾವತೀ ದೇವಾಲಯಗಳನ್ನು ನಿರ್ವಹಿಸುತ್ತಾರೆ. ಮಾರ್ತಾಂಡ ಬಸದಿ, ಬೋಗಾರ ಬಸದಿ, ಜಟ್ಟಿಂಗರಾಯ ಬಸದಿ ಮತ್ತು ಪದ್ಮಾವತೀ ದೇವಾಲಯಗಳನ್ನು ಮರು ನಿರ್ಮಾಣ ಮಾಡಿರುವಂತೆ ತೋರುತ್ತದೆ. ಈ ಕೆಲಸಕ್ಕೆಂದು, ಹಿಂದೆ ಇದ್ದ ಚಾಳುಕ್ಯ ಮತ್ತು ಹೊಯ್ಸಳ ದೇವಾಲಯಗಳ ಗ್ರಾನೈಟ್ ಕಲ್ಲುಗಳನ್ನು ಬಳಸಿಕೊಂಡಂತೆ ತೋರುತ್ತದೆ. ದೇವಾಲಯಗಳ ಪ್ರವೇಶದಲ್ಲಿಯೇ ಇರುವ ಕಂಬಗಳು ಮತ್ತು ಸುಂದರವಾದ ತೋರಣಗಳ ವಿಷಯದಲ್ಲಿ ಈ ಮಾತು ಇನ್ನಷ್ಟು ನಿಜ.

ಇಲ್ಲಿರುವ ಬಸದಿಗಳಲ್ಲಿ, ಪಂಚಕೂಟ ಬಸದಿಯೇ ಎಲ್ಲಕ್ಕಿಂತ ದೊಡ್ಡದು ಮತ್ತು ಪ್ರಸಿದ್ಧವಾದುದು. ಈ ಬಸದಿಯನ್ನು ಕ್ರಿ.ಶ. 1077 ರಲ್ಲಿ ಚಟ್ಟಲದೇವಿಯು ಚಾಳುಕ್ಯ ಶೈಲಿಯಲ್ಲಿ ಕಟ್ಟಿಸಿದಳು. ಇದರಲ್ಲಿ ಐದು ಗರ್ಭಗುಡಿಗಳು, ಒಂದು ನವರಂಗ ಮತ್ತು ಒಂದು ಬಯಲು ಮುಖಮಂಟಪಗಳಿವೆ. ದೇವಾಲಯದ ಸುತ್ತಲೂ ಪ್ರದಕ್ಷಿಣ ಪಥವಿದೆ. ಬಸದಿಯ ಮುಂಭಾಗದಲ್ಲಿ ಭವ್ಯವಾದ ಮಾನಸ್ತಂಭವಿದೆ. ಇದು ಒಂದೇ ಒಂದು ದೊಡ್ಡ ಕಲ್ಲಿನಿಂದ ನಿರ್ಮಿತವಾಗಿದ್ದು, ಸುಂದರವಾದ ಕೆತ್ತನೆಗಳನ್ನು ಹೊಂದಿದೆ. ಈ ಮಾನಸ್ತಂಭವು ಮೂರು ಹಂತಗಳನ್ನು ಹೊಂದಿರುವ ವೇದಿಕೆಯ ಮೇಲೆ ನಿಂತಿದೆ. ಎಲ್ಲಕ್ಕಿಂತ ಕೆಳಗಿನ ಹಂತದಲ್ಲಿ ನಾಲ್ಕು ಮೂಲೆಗಳಲ್ಲಿ ಮತ್ತು ಮಧ್ಯಬಿಂದುಗಳಲ್ಲಿ ಆನೆಗಳನ್ನು ಕೆತ್ತಲಾಗಿದೆ. ಈ ಆನೆಗಳ ನಡುವೆ ವಿವಿಧ ಭಂಗಿಗಳಲ್ಲಿ ಕುಳಿತಿರುವ ಸಿಂಹಗಳ ಕೆತ್ತನೆಯಿದೆ. ಎರಡನೆಯ ಹಂತದಲ್ಲಿ ಅಷ್ಟ ದಿಕ್ಪಾಲಕರು ಮತ್ತು ಸಂಗೀತಗಾರರೂ ಸೇರಿದಂತೆ ಅವರ ಪರಿವಾರದವರನ್ನು ಕೆತ್ತಲಾಗಿದೆ.

ಇಷ್ಟು ಚಿಕ್ಕ ಹಳ್ಳಿಯಲ್ಲಿ ಐವತ್ತಕ್ಕಿಂತಲೂ ಹೆಚ್ಚು ಶಾಸನಗಳು ದೊರೆತಿರುವುದು ಇನ್ನೊಂದು ವಿಶೇಷ.

ಹಳ್ಳಿಗೆ ಹತ್ತಿರದಲ್ಲಿರುವ ಬೆಟ್ಟದ ಮೇಲೆ, ಮಠದಿಂದ ಕಾಣಿಸುವಂತೆ, ಇನ್ನೊಂದು ಬಸದಿಯಿದೆ. ಇದು ಭಗವಾನ್ ಬಾಹುಬಲಿಯ ಬಸದಿ. ಇದು ಕ್ರಿ.ಶ. 898 ರಲ್ಲಿ ವಿಕ್ರಮಾದಿತ್ಯ ಸಾಂತರನಿಂದ ನಿರ್ಮಿತವಾಯಿತೆಂಬ ಸಂಗತಿಯು ಇಲ್ಲಿಯೇ ಸಿಕ್ಕಿರುವ ಶಾಸನದಿಂದ ಗೊತ್ತಾಗುತ್ತದೆ. ಈ ಪ್ರದೇಶದಲ್ಲಿ ಪದೇ ಪದೇ ಶಾಸನಗಳು ಮತ್ತು ಶಾಸನಗಳನ್ನು ಅಗೆದು ತೆಗೆಯಲಾಗುತ್ತದೆ. ಕಲ್ಲೇಶ್ವರ ದೇವಾಲಯದ ಮುಂಭಾಗದಲ್ಲಿ ಉತ್ಖನನ ಮಾಡಲಾದ ಪಂಚಮಾತೃಕಾ ಶಿಲ್ಪವು ಮುಖ್ಯವಾದುದು.

ಹೀಗೆ ಹುಮಚವು ಜೈನಧರ್ಮೀಯರಿಗೆ ಮಾತ್ರವಲ್ಲ, ಕರ್ನಾಟಕದ ಇತಿಹಾಸದ ವಿದ್ಯಾರ್ಥಿಗಳಿಗೂ ಮುಖ್ಯವಾಗಿದೆ.

 

ಮುಂದಿನ ಓದು ಮತ್ತು ಲಿಂಕುಗಳು:

  1. My life and my views: Day 1 - Humcha - Jain Pilgrimage centre
  2. Humcha Padmavati Mata

ಮುಖಪುಟ / ಪ್ರಮುಖ ಸ್ಥಳಗಳು