ಪ್ರಮುಖ ಸ್ಥಳಗಳು
ಬಳ್ಳಿಗಾವೆ

ಬಳ್ಳಿಗಾವೆ, ಬೆಳಗಾಮಿ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಈ ಚಿಕ್ಕ ಹಳ್ಳಿಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಸುಮಾರು ಎರಡು ಕಿಲೋಮೀಟರುಗಳ ದೂರದಲ್ಲಿದೆ. ಇದು ಅನೇಕ ಶತಮಾನಗಳ ಕಾಲ ಕರ್ನಾಟಕದ ಪ್ರಸಿದ್ಧ ಸ್ಥಳಗಳ ಸಾಲಿಗೆ ಸೇರಿತ್ತು. ಬನವಾಸಿಯ ಸಮೀಪದಲ್ಲಿರುವ ಬಳ್ಳಿಗಾವೆಯು ಧರ್ಮ, ವಾಣಿಜ್ಯ, ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪಗಳ ದೃಷ್ಟಿಯಿಂದ ಗಮನೀಯವಾದ ಸ್ಥಳ.

ಎಂದಿನಂತೆ, ಬಳ್ಳಿಗಾವೆಯನ್ನು ಎರಡು ಪೌರಾಣಿಕ ಸನ್ನಿವೇಶಗಳೊಂದಿಗೆ ತಳುಕು ಹಾಕಲಾಗಿದೆ. ಮೊದಲನೆಯದಾಗಿ, ಈ ಊರನ್ನು ಬಲಿ ಚಕ್ರವರ್ತಿಯು ಆಳುತ್ತಿದ್ದು, ಆಗ ಈ ಸ್ಥಳವನ್ನು ಬಲಿಪುರ ಎಂದು ಕರೆಯುತ್ತಿದ್ದರು. ಎರಡನೆಯದಾಗಿ, ವನವಾಸದ ಅವಧಿಯಲ್ಲಿ ಇಲ್ಲಿಗೆ ಬಂದಿದ್ದ ಪಾಂಡವರು, ಇಲ್ಲಿನ ಪಂಚಲಿಂಗೇಶ್ವರ ದೇವಾಲಯದಲ್ಲಿರುವ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ್ದರು.

ಈ ಪುರಾಣಕಥೆಗಳನ್ನು ಬದಿಗಿಟ್ಟು ನೋಡಿದಾಗ, ನಾವು ತಲುಪುವ ಬಹುಪಾಲು ತೀರ್ಮಾನಗಳು ಈ ಊರಿನಲ್ಲಿ ಸಿಕ್ಕಿರುವ ಸುಮಾರು 120 ಶಾಸನಗಳನ್ನು ಅವಲಂಬಿಸಬೇಕಾಗುತ್ತದೆ. ಹೆಚ್ಚು ವಿಶ್ವಸನೀಯವಾದ ಈ ಶಾಸನಗಳು ಬಳ್ಳಿಗಾಮೆಯ ಇತಿಹಾಸದ ಮೇಲೆ ಖಚಿತವಾದ ಬೆಳಕು ಚೆಲ್ಲುತ್ತವೆ. ಬಳ್ಳಿಗಾಮೆಯನ್ನು ವಲ್ಲಿಗ್ರಾಮೆ, ಬಳ್ಳಿಗಾಮೆ, ವಳ್ಳಿಗ್ರಾಮೆ ಮತ್ತು ಬಲಿ ರಾಜಧಾನಿ ಎಂಬ ಹೆಸರುಗಳಿಂದ ಕರೆಯುತ್ತಿದ್ದರೆನ್ನುವುದಕ್ಕೆ ಪುರಾವೆಯೂ ಶಾಸನಗಳಲ್ಲಿ ದೊರಕಿದೆ.

ಈ ಪಟ್ಟಣವು, ಏಳನೆಯ ಶತಮಾನದಿಂದಲೇ ಅಸ್ತಿತ್ವದಲ್ಲಿದ್ದರೂ ಪ್ರಸಿದ್ಧಿಗೆ ಬಂದಿದ್ದು ಕಲ್ಯಾಣಿ ಚಾಳುಕ್ಯರು ಮತ್ತು ಕಳಚೂರ್ಯರ ಕಾಲದಲ್ಲಿಯೇ. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನಗಳಲ್ಲಿ, ಬಳ್ಳಿಗಾವೆ ನಗರವು ವೈಭವದ ಶಿಖರವನ್ನು ತಲುಪಿತು. ಈ ಊರನ್ನು ಬೇರೆ ಬೇರೆ ಕಾಲಾವಧಿಯಲ್ಲಿ, ಕುಂದಮರಸ, ವಿಕ್ರಮಾದಿತ್ಯ-6 ಮತ್ತು ಬಿಜ್ಜಳ ರಾಜನಿಂದ ನೇಮಕವಾದ ಸಮರ್ಥ ಪಾಳೆಯಗಾರರು ಆಳಿದರು. ಈ ರಾಜರು ನೀಡಿದ ಉದಾರ ದಾನಗಳಿಂದ ಅನೇಕ ದೇವಾಲಯಗಳನ್ನು ಕಟ್ಟಲಾಯಿತು. ಆದರೂ ಹೊಯ್ಸಳವಂಶದ ರಾಜರುಗಳೊಂದಿಗೆ ನಡೆದ ನಿರಂತರವಾದ ಸಂಘರ್ಷಗಳು ಬಳ್ಳಿಗಾವೆಯ ಅವನತಿಗೆ ಕಾರಣವಾದವು. ಈಗ ಈ ಊರಿನಲ್ಲಿ, ಪ್ರದರ್ಶಿಸಬಹುದಾದ ಅಥವಾ ಕಾಪಾಡಿಕೊಳ್ಳಬೇಕಾದ ಸಂಗತಿಗಳ ಮೊತ್ತವು ಕಡಿಮೆ. ಆದರೆ, ಕಳೆದುಹೋದ ಸಾಧನೆಗಳನ್ನು ಮತ್ತೆ ರೂಪಿಸಿಕೊಡಲು, ಶಾಸನಗಳ ನೆರವಿನಿಂದ ಸಾಧ್ಯವಾಗಿದೆ.

ಮೊದಲನೆಯದಾಗಿ, ಬಳ್ಳಿಗಾಮೆಯು ಬೌದ್ಧಧರ್ಮ, ಜೈನಧರ್ಮ, ಹಿಂದೂಧರ್ಮ ಮತ್ತು ತಾಂತ್ರಿಕ ಶೈವಧರ್ಮದ ಸಂಗಮಸ್ಥಾನವಾಗಿತ್ತು. ವೀತರಾಗ ಬುದ್ಧನ ದೇವಾಲಯ, ತಾರಾ ಭಗವತಿಯ ದೇವಾಲಯ, ಜೈನ ಬಸದಿಗಳು ಮತ್ತು ಶಿವ, ವಿಷ್ಣು ಮುಂತಾದವರ ದೇವಸ್ಥಾನಗಳು ಈ ಊರಿನಲ್ಲಿ ಒಂದೇ ಕಾಲದಲ್ಲಿ ನೆಲೆ ಪಡೆದಿದ್ದವು. ಇದು ಧಾರ್ಮಿಕ ಸಮನ್ವಯದ ಉತ್ತಮ ನಿದರ್ಶನ. ಕೇದಾರೇಶ್ವರ ದೇವಸ್ಥಾನದ ಪಕ್ಕದಲ್ಲಿ ಇಂದಿಗೂ ಇರುವ ಕೋಡಿ ಮಠವು, ಪ್ರಬಲ ತಾಂತ್ರಿಕಪಂಥವಾದ ಕಾಳಾಮುಖರ ನೆಲೆ. ಬಳ್ಳಿಗಾವೆಯು ಬಹಳ ಮುಖ್ಯವಾದ ಶಿಕ್ಷಣಕೇಂದ್ರವಾಗಿತ್ತು. ಲೌಕಿಕ ವಿದ್ಯೆ ಮತ್ತು ಆಧ್ಯಾತ್ಮವಿದ್ಯೆಗಳೆರಡನ್ನೂ ಇಲ್ಲಿ ಕಲಿಸುತ್ತಿದ್ದರು. ವಿಭಿನ್ನ ಧರ್ಮಗಳಿಗೆ ಸೇರಿದ ಜ್ಞಾನದ ಆಕರಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡುವ ಕೆಲಸವು ಇಲ್ಲಿ ನಡೆಯುತ್ತಿತ್ತು. ಇದು ಕಲಾತ್ಕವಾದ ಚಟುವಟಿಕೆಗಳ ಕೇಂದ್ರವೂ ಆಗಿತ್ತು. ಭಾರತದ ಮೂಲೆಮೂಲೆಗಳಿಂದ ಬರುತ್ತಿದ್ದ ಪ್ರವಾಸಿಗಳಿಗೆ ಅವಶ್ಯಕವಾದ ಸೌಲಭ್ಯಗಳು ಇಲ್ಲಿ ದೊರೆಯುತ್ತಿದ್ದವು. ಇಲ್ಲಿ ಒಂದು ಆಸ್ಪತ್ರೆಯೂ ಇತ್ತೆನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ.

ಬಾದಾಮಿ ಚಾಳುಕ್ಯರ ವಾಣಿಜ್ಯ ಚಟುವಟಿಕೆಗಳ ಕೇಂದ್ರವನ್ನು, ಐಹೊಳೆಯಿಂದ ಬಳ್ಳಿಗಾವೆಗೆ ಸ್ಥಾನಾಂತರ ಮಾಡಲಾಗಿತ್ತು. ಅಖಿಲ ಭಾರತ ವ್ಯಾಪ್ತಿಯ ಮತ್ತು ಸಾಗರೋತ್ತರ ಸಂಬಂಧಗಳನ್ನು ಹೊಂದಿದ್ದ ಈ ವರ್ತಕರು, ಬಳ್ಳಿಗಾವೆಯ ಹತ್ತಾರು ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದಿದ್ದರು.

ಶಾತವಾಹನರು ಮತ್ತು ಕದಂಬರ ಶೈಲಿಯ ವಾಸ್ತುಶಿಲ್ಪದ ಕೆಲವು ಅವಶೇಷಗಳು ಇಲ್ಲಿ ದೊರಕಿವೆ. ಆದರೂ ಈ ನಗರದ ಉಚ್ಛ್ರಾಯ ಕಾಲವು ಕಲ್ಯಾಣಿ ಚಾಳುಕ್ಯರ ಅವಧಿಗೆ ಸೇರಿದ್ದು. ಆದ್ದರಿಂದ, ಇಲ್ಲಿ ಆ ಶೈಲಿಯದೇ ಮೇಲುಗೈ ಆಗಿದೆ. ಬಳ್ಳಿಗಾವೆಯಲ್ಲಿ ನಿರ್ಮಿಸಲಾದ ತ್ರಿಲೋಕೇಶ್ವರ, ನಂದಿಕೇಶ್ವರ, ಕುಸುಮೇಶ್ವರ, ಮಲ್ಲೇಶ್ವರ, ವೀರಕೇಶವ, ನರಸಿಂಹ, ಅಷ್ಟೋಪವಾಸಿ ಭಟಾರರ ಬಸದಿ, ಗೊಳಪಯ್ಯನ ಬಸದಿ, ಜಯಂತಿಪ್ರಭ ಬುದ್ಧವಿಹಾರ ಮುಂತಾದ ದೇಗುಲಗಳ ಪ್ರಸ್ತಾಪವು ಶಾಸನಗಳಲ್ಲಿ ಸ್ಪಷ್ಟವಾಗಿ ಸಿಗುತ್ತವೆ. ಆದರೆ, ಇವುಗಳಲ್ಲಿ ಯಾವುದೂ ಈಗ ಉಳಿದಿಲ್ಲ.

ಕೇವಲ ಮೂರು ದೇವಾಲಯಗಳು ಕಾಲ ಮತ್ತು ಮನುಷ್ಯರ ಆಘಾತಗಳನ್ನು ಸಹಿಸಿಕೊಂಡು, ಇಂದಿಗೂ ಉಳಿದುಬಂದಿವೆ. ಅವು ತ್ರಿಪುರಾಂತಕ, ಕೇದಾರೇಶ್ವರ ಮತ್ತು ಪಂಚಲಿಂಗ ದೇವಾಲಯಗಳು. ಮೂರರಲ್ಲಿಯೂ ವಾಸ್ತು ಮತ್ತು ಶಿಲ್ಪಕಲೆಗಳ ಸಾಧನೆಯನ್ನು ಗುರುತಿಸಬಹುದು.

ಕ್ರಿ.ಶ. 1070 ರಲ್ಲಿ ನಿರ್ಮಿತವಾಗಿರುವ ತ್ರಿಪುರಾಂತಕ ದೇವಾಲಯದ ಶಿಲ್ಪಕಲಾ ಸೌಂದರ್ಯವು ಬಹಳ ಚೆನ್ನಾಗಿದೆ. ಇಲ್ಲಿ ಎರಡು ಗರ್ಭಗುಡಿಗಳಿದ್ದು ಮೊದಲನೆಯದರಲ್ಲಿ ಶಿವನ ವಿಗ್ರಹವೂ ಎರಡನೆಯದರಲ್ಲಿ ಕೇಶವನ ವಿಗ್ರಹವೂ ಸ್ಥಾಪಿತವಾಗಿದೆ. ಎರಡೂ ದೈವಗಳ ಆಸುಪಾಸಿನಲ್ಲಿ, ಅವರ ಪರಿವಾರ ದೇವತೆಗಳ ಶಿಲ್ಪಗಳನ್ನು ಕೆತ್ತಲಾಗಿದೆ. ಅದಕ್ಕಿಂತ ಕುತೂಹಲಕರವಾದ ಸಂಗತಿಯೆಂದರೆ, ಈ ದೇವಾಲಯದ ಹೊರಗೋಡೆಗಳ ಮೇಲೆ, ಪಂಚತಂತ್ರದ ಕಥೆಗಳನ್ನು ನಿರೂಪಿಸುವ ಸುಂದರವಾದ ಶಿಲ್ಪಗಳ ಸರಣಿ ಇರುವುದು. ಧರ್ಮಕ್ಕೆ ಸಂಬಂಧಿಸದ ಆಶಯಗಳಿಗೆ ನೀಡಿರುವ ಈ ಮಹತ್ವವು ಅನನ್ಯವಾದುದು.

ಪಂಚಲಿಂಗ ದೇವಾಲಯದ ಗರ್ಭಗುಡಿ ಮತ್ತು ಸುಕನಾಸಿಗಳು ಮಾತ್ರ ಇಂದಿಗೂ ಉಳಿದುಕೊಂಡಿವೆ.

ದೇವಾಲಯದ ಉಳಿದ ಭಾಗಗಳನ್ನು ಮತ್ತೆ ಕಟ್ಟಲಾಗಿದೆ. ಈ ದೇವಸ್ಥಾನದಲ್ಲಿ ಸಿಕ್ಕಿದ ಹಲವು ವಿಗ್ರಹಗಳನ್ನು ಈಗ ಬೆಂಗಳೂರು ಮತ್ತು ಶಿವಮೊಗ್ಗಗಳಲ್ಲಿ ಪ್ರದರ್ಶಿಸಲಾಗಿದೆ. ಆದರೂ ವೈಕುಂಠನಾರಾಯಣ, ಮಹಿಷಾಸುರಮರ್ದಿನಿ ಮತ್ತು ಕುಮಾರರ ಅದ್ಭುತವಾದ ಪ್ರತಿಮೆಗಳು ಇಲ್ಲಿಯೇ ಉಳಿದಿವೆ.

ಬಳಪದ ಕಲ್ಲಿನಿಂದ ನಿರ್ಮಿತವಾಗಿದೆಯೆಂದು ಹೇಳಲಾದ ಕೇದಾರೇಶ್ವರ ದೇವಾಲಯವು ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಒಳ್ಳೆಯ ನಿದರ್ಶನ. ಇದರ ಇಳಿಜಾರಾದ ಚಾವಣಿಗಳು ಹೊಳೆಹೊಳೆಯುವ ಮೆರುಗು ಪಡೆದ ಸ್ತಂಭಗಳನ್ನು ಆಧರಿಸಿವೆ. ಕುಳಿತಿರುವ ಭಂಗಿಯ ನಂದೀಶ್ವರನ ವಿಗ್ರಹವು ಚೆಲುವಾಗಿದೆ. ಇದು ಮೂರು ಗರ್ಭಗುಡಿಗಳನ್ನು ಹೊಂದಿರುವ ತ್ರಿಕೂಟಾಚಲ ದೇವಾಲಯ. ವಿಶಾಲವಾದ ಸಭಾಮಂಟಪದ ಪರಿಧಿಯ ಮೂರು ಕಡೆಗಳಲ್ಲಿ ಈ ಗರ್ಭಗುಡಿಗಳಿವೆ. ಎರಡರಲ್ಲಿ ಶಿವಲಿಂಗಗಳಿದ್ದು ಅವುಗಳಲ್ಲಿ ಒಂದು ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಮೂರನೆಯ ಗರ್ಭಗುಡಿಯಲ್ಲಿ ವಿಷ್ಣುವಿನ ವಿಗ್ರಹವಿದೆ. ದೇವಾಲಯವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಚಾವಣಿಯ ಮೆಲೆ ಶಿವ ಮತ್ತು ದಿಕ್ಪಾಲಕರ ಶಿಲ್ಪಗಳೂ ಪರದೆಯ ಮೇಲೆ ಸರ್ಪಗಳ ಶಿಲ್ಪವೂ ಇವೆ. ಒಂದು ನಿಟ್ಟಿನಿಂದ ನೋಡಿದಾಗ, ಈ ದೇವಾಲಯದ ಎರಡು ಗರ್ಭಗುಡಿಗಳನ್ನೂ ಹೊಯ್ಸಳ ರಾಜನು ಶಿಲ್ಪವನ್ನು ಬೇಟೆಯಾಡುತ್ತಿರುವ ಶಿಲ್ಪವನ್ನೂ ಒಟ್ಟಾಗಿ ನೋಡಬಹುದು. ಆ ಬೇಟೆಯ ಶಿಲ್ಪವು ಎಡ ಬದಿಯ ಗೋಪುರದ ಮೇಲಿದೆ. ಬಳ್ಳಿಗಾವೆಯಲ್ಲಿ ಇನ್ನೂ ಕೆಲವು ಪಾಳುಬಿದ್ದಿರುವ ದೇವಸ್ಥಾನಗಳಿವೆ.

ಬಳ್ಳಿಗಾವೆಯು ಕನ್ನಡದ ಸುಪ್ರಸಿದ್ಧ ಸಂತ, ಕವಿ, ತತ್ವಜ್ಞಾನಿ ಮತ್ತು ಅನುಭಾವಿಯಾದ ಅಲ್ಲಮಪ್ರಭು ಹುಟ್ಟಿದ ಸ್ಥಳವೆಂಬ ನಂಬಿಕೆಯಿದೆ. ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಪತ್ನಿಯೂ ಹೆಸರುವಾಸಿಯಾದ ನರ್ತಕಿಯೂ ಆದ ಶಾಂತಲಾದೇವಿಯು ಬಳ್ಳಿಗಾವೆಯ ಧರ್ಮೇಶ್ವರನ ಅನುಗ್ರಹದಿಂದ ಹುಟ್ಟಿದವಳು.

 

ಮುಂದಿನ ಓದು ಮತ್ತು ವಿದ್ಯುನ್ಮಾನ ಲಿಂಕುಗಳು:

  1. New Page 5
  2. The Temple of Muktesvara - Content
  3. ASI Interpretation Centres
  4. Deccan Herald - Banavasis pride

ಮುಖಪುಟ / ಪ್ರಮುಖ ಸ್ಥಳಗಳು