ಪ್ರಮುಖ ಸ್ಥಳಗಳು
ಬಾದಾಮಿ

ಬಾದಾಮಿಯು ಸಮಸ್ತ ಭಾರತದಲ್ಲಿಯೇ ಶಿಲ್ಪಕಲೆ, ಚಿತ್ರಕಲೆ ಮತ್ತು ವಾಸ್ತುಶಿಲ್ಪಗಳಿಗಾಗಿ ಹೆಸರಾಂತ ತಾಣಗಳಲ್ಲಿ ಒಂದು. ಇದಕ್ಕೆ 'ವಿಶ್ವ ಪರಂಪರೆಯ ತಾಣ' (ವರ್ಲ್ಡ್ ಹೆರಿಟೇಜ್ ಸೈಟ್) ಎಂಬ ಮನ್ನಣೆಯನ್ನು ಕೊಡಲಾಗಿದೆ. ಬಾದಾಮಿಯು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿದೆ. ಇದು ಬಿಜಾಪುರ ನಗರದಿಂದ ಸುಮಾರು 120 ಕಿಲೋಮೀಟರುಗಳ ದೂರದಲ್ಲಿದೆ. ಬಾದಾಮಿ ಚಾಲುಕ್ಯ ರಾಜವಂಶದ ಶಿಲ್ಪಕಲಾವೈಭವದ ಇನ್ನೆರಡು ಸಾಕ್ಷಿಗಳಾದ ಐಹೊಳೆ ಮತ್ತು ಪಟ್ಟದಕಲ್ಲುಗಳು ಬಾದಾಮಿಯ ಸಮೀಪದಲ್ಲಿಯೇ ಇವೆ. ಈ ಊರು ಪುರಾಣಗಳ ಪ್ರಕಾರ ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸರಿಗೆ ಸಂಬಂಧಿಸಿದ ಎರಡು ಬೆಟ್ಟಗಳ ನಡುವೆ ಹಾಗೂ 'ಅಗಸ್ತ್ಯ ಸರೋವರ'ವೆಂದು ಕರೆಯಲಾಗುವ ಸುಂದರವಾದ ಕೊಳದ ಪಶ್ಚಿಮ ದಿಕ್ಕಿನಲ್ಲಿ ಇದೆ.

ಬಾದಾಮಿಗೆ ಕ್ರಿಸ್ತಶಕದ ಪ್ರಾರಂಭದವರೆಗೆ ಹರಡಿಕೊಂಡಿರುವ ಸುದೀರ್ಘವಾದ ಇತಿಹಾಸವಿದೆ. ಪ್ರಸಿದ್ಧ ಗ್ರೀಕ್ ಭೂಗೋಳ ಶಾಸ್ತ್ರಜ್ಞನಾದ ಟಾಲೆಮಿ, ಕ್ರಿ.ಶ. 150 ರಲ್ಲಿಯೇ ಈ ಪಟ್ಟಣವನ್ನು 'ಬಾದಿಯಾ ಮೊಯಿ' ಎಂದು ಹೆಸರಿಸಿದ್ದಾನೆ. 'ಅಗಸ್ತ್ಯ ಸರೋವರದ' ಉತ್ತರ ದಿಕ್ಕಿನಲ್ಲಿ ಉತ್ಖನನ ನಡೆಸಿದಾಗ ದೊರೆತಿರುವ ಕೆಲವು ಮಡಕೆಯ ಚೂರುಗಳು ಹಾಗೂ ಪ್ರಾಚೀನ ಕಟ್ಟಡಗಳ ಅಡಿಪಾಯಗಳ ಅವಶೇಷಗಳು, ಕ್ರಿಸ್ತಶಕದ ಅರಂಭಕ್ಕಿಂತಲೂ ಬಹುಹಿಂದಿನ ಇತಿಹಾಸಪೂರ್ವ ನಾಗರಿಕತೆಗಳ ಅಸ್ತಿತ್ವಕ್ಕೆ ಪುರಾವೆ ನೀಡುತ್ತವೆ. ಬೆಟ್ಟಗಳ ಉತ್ತರ ಭಾಗದ ವಿಶಾಲವಾದ ಬಯಲಿನಲ್ಲಿರುವ ನಾಲ್ಕು ಗುಹೆಗಳ ಗೋಡೆಗಳ ಮೇಲಿನ ಸಿಕ್ಕಿರುವ ಬಣ್ಣದ ಚಿತ್ರಗಳು ಕ್ರಿಸ್ತಪೂರ್ವ ಯುಗಕ್ಕೆ ಸೇರಿದವೆಂದು ಊಹಿಸಲಾಗಿದೆ. ಇನ್ನೊಂದು ಗುಹೆಯೊಳಗೆ ಕಪ್ಪು-ಬಿಳುಪಿನ ಹಾಗೂ ಅಚ್ಚ ಕಪ್ಪು ಬಣ್ಣದ ಚಿತ್ರಗಳು ದೊರೆತಿದ್ದು ಅವು ಶಿಲಾಯುಗದಷ್ಟು ಹಳೆಯವೆಂದು ಹೇಳಬಹುದು. ಸಮೀಪದಲ್ಲಿರುವ ಮಲಪ್ರಭಾ ನದಿಯ ದಂಡೆಯಲ್ಲಿರುವ ಚೋಳಗುಡ್ಡ ಮತ್ತು ನಂದಿಕೇಶ್ವರ ಎಂಬ ಪ್ರದೇಶಗಳಲ್ಲಿ ಉತ್ಖನನ ನಡೆಸಿ ತೆಗೆದಿರುವ ಮಣ್ಣಿನ ಪಾತ್ರೆಗಳು ಮತ್ತು ಕಲ್ಲಿನ ುಪಕರಣಗಳು ಹಾಗೂ ಆಯುಧಗಳು ಹಳೆಯ ಶಿಲಾಯುಗ ಮತ್ತು ಹೊಸ ಯುಗಗಳಿಗೆ ಸೇರಿದವು. ಈ ಎಲ್ಲ ಸಾಕ್ಷಿಗಳು ಬಾದಾಮಿ ಚಾಳುಕ್ಯರ ಾಳ್ವಿಕೆಯ ಸ್ವರ್ಣಯುಗವಾಗಿದ್ದ ಆರರಿಂದ ಎಂಟನೆಯ ಶತಮಾನದವರೆಗೆ ಬಾದಾಮಿಯು ನಿರಂತರವಾದ ಚಟುವಟಿಕೆಗಳನ್ನು ಹೊಂದಿತ್ತೆನ್ನುವುದಕ್ಕೆ ಸಾಕ್ಷಿಯಾಗಿದೆ.

ಆದರೆ, ಇಂದು ಬಾದಾಮಿಯ ಕೀರ್ತಿಯು ಕೊಳದ ಪಶ್ಚಿಮ ಭಾಗದಲ್ಲಿರುವ ನಾಲ್ಕು ಗುಹೆಗಳನ್ನು ಅವಲಂಬಿಸಿದೆ. ಅವು ಬೇರೆ ಬೇರೆ ಎತ್ತರಗಳಲ್ಲಿ ನಿರ್ಮಿತವಾಗಿದ್ದು ಒಂದರಿಂದ ಇನ್ನೊಂದಕ್ಕೆ ಹೋಗಲು ಮೆಟ್ಟಿಲುಗಳಿವೆ. ಪ್ರತಿಯೊಂದು ಗುಹೆಯಲ್ಲಿಯೂ ಆಯತಾಕಾರದ ಮೊಗಸಾಲೆ(ವೆರಾಂಡಾ), ವಿಶಾಲವಾದ ಸಭಾಗೃಹ ಮತ್ತು ಗರ್ಭಗುಡಿಗಳಿವೆ. ಇವು ಅನುಕ್ರಮವಾಗಿ ಶಿವ, ವಿಷ್ಣು, ವಿಷ್ಣು ಮತ್ತು ಜೈನಧರ್ಮದ ದೇವತೆಗಳಿಗೆ ಮೀಸಲಾಗಿದೆ. ಶಿವನಿಗೆಂದು ಮೀಸಲಾಗಿರುವ ಮೊದಲನೆಯ ಗವಿಯಲ್ಲಿ ಒಂದು ಹೆಚ್ಚುವರಿ ಕೋಣೆಯಿದೆ. ಎರಡು ಮತ್ತು ಮೂರನೆಯ ಗುಹೆಗಳ ನಡುವೆ ಒಂದು ನೈಸರ್ಗಿಕವಾದ ಗವಿಯಿದ್ದು ಅದರಲ್ಲಿ ಪದ್ಮಪಾಣಿಯಾದ ಬುದ್ಧನ ಉಬ್ಬುಚಿತ್ರ(ಬಾಸ್ ರಿಲೀಫ್)ನ ಇದೆ. ಇದರ ಸುತ್ತಲೂ ಆಶೀರ್ವಾದ ಭಂಗಿಯಲ್ಲಿರುವ ಚಿತ್ರಗಳಿವೆ.

ನೆಲಮಟ್ಟದಿಂದ ಸುಮಾರು ನಲವತ್ತು ಮೆಟ್ಟಿಲುಗಳನ್ನು ಹತ್ತಿ ಮೊದಲನೆಯ ಗುಹೆಗೆ ಹೋಗಬೇಕು.ಅದರಲ್ಲಿ ಒಂದು ಶಿವಲಿಂಗವಿದೆ. ಇಲ್ಲಿರುವ, ತಾಂಡವನೃತ್ಯದಲ್ಲಿ ಮಗ್ನವಾಗಿರುವ ಹದಿನೆಂಟು ತೋಳುಗಳ ನಟರಾಜನ ಶಿಲ್ಪವು ಪ್ರಸಿದ್ಧವಾಗಿದೆ. ನಟರಾಜನನ್ನು ಎಂಬತ್ತೊಂದು ಭಂಗಿಗಳಲ್ಲಿ ತೋರಿಸಲಾಗಿದೆ. ಈ ಗುಹೆಯಲ್ಲಿಯೇ ಅರ್ಧನಾರೀಶ್ವರ ಮತ್ತು ಹರಿಹರೇಶ್ವರರ ಪ್ರತಿಮೆಗಳೂ ಇವೆ. ಇವು ಶಿವ ಮತ್ತು ವಿಷ್ಣುಗಳ ಏಕಭಾವವನ್ನೂ ಅಂತೆಯೇ ಪರುಷತತ್ವ ಹಾಗೂ ಸ್ತ್ರೀತತ್ವಗಳ ಸಮನ್ವಯವನ್ನೂ ಸಾಂಕೇತಿಕವಾಗಿ ನಿರೂಪಿಸುತ್ತವೆ. ಈ ಗುಹೆಯ ಗೋಡೆಗಳ ಮೇಲೆ ಮಹಿಷಾಸುರಮರ್ದಿನಿ, ಗಣಪತಿ ಮತ್ತು ನವಿಲಿನ ಮೇಲೆ ಆಸೀನನಾದ ಷಣ್ಮುಖನ ಉಬ್ಬುಚಿತ್ರಗಳನ್ನು ಕೆತ್ತಲಾಗಿದೆ. ಮೇಲ್ಭಾಗದ ತೊಲೆಗಳ ಮೇಲಿರುವ ಶಿವಪಾರ್ವತಿಯರ ವಿವಾಹದ ಶಿಲ್ಪ ಮತ್ತು ಚಾವಣಿಯ ಮೇಲಿರುವ ಗಜಲಕ್ಷ್ಮಿಯ ಶಿಲ್ಪಗಳು ಬಹಳ ಆಕರ್ಷಕವಾಗಿವೆ. ಗುಹೆಯಲ್ಲಿರುವ ಕಂಬಗಳು ಒಂದು ಮಿಥುನ ಶಿಲ್ಪ ಹಾಗೂ ನರಸಿಂಹ, ಗರುಡ, ಸನ್ಯಾಸಿ ಮತ್ತು ಪ್ರಹ್ಲಾದರ ಚಿಕ್ಕ ಶಿಲ್ಪಗಳಿಂದ ಅಲಂಕೃತವಾಗಿವೆ.

ವಿಷ್ಣುವಿಗೆ ಮೀಸಲಾಗಿರುವ ಎರಡನೆಯ ಗುಹೆಯ ಗರ್ಭಗುಡಿಯೊಳಗೆ ಯಾವ ವಿಗ್ರಹವೂ ಇಲ್ಲ. ಪ್ರವೇಶದಲ್ಲಿಯೇ ಇರುವ ಇಬ್ಬರು ದ್ವಾರಪಾಲಕರ ಶಿಲ್ಪಗಳನ್ನು ನೋಡಿದ ನಂತರ ವಿಷ್ಣುವಿನ ಅವತಾರಗಳಾದ ಭೂವರಾಹ ಮತ್ತು ವಾಮನರ ಬೃಹತ ಗಾತ್ರದ ವಿಗ್ರಹಗಳು ಕಾಣಿಸುತ್ತವೆ. ಗುಹೆಯ ಜಂತಿಯ ಮೇಲೆ ವಿಷ್ಣುವಿನ ಬೇರೆ ಬೇರೆ ಅವತಾರಗಳಿಂದ ಆರಿಸಲಾದ ಘಟನೆಗಳನ್ನು ನಿರೂಪಿಸುವ ಚಿಕಣಿ ಶಿಲ್ಪಗಳು ರೂಪಿತವಾಗಿವೆ. ಹಾಗೆಯೇ ಕಂಬಗಳ ಮೇಲೆ ಬ್ರಹ್ಮ, ವಿಷ್ಣು, ಶಿವ ಮತ್ತು ಗಜಲಕ್ಷ್ಮಿಯರ ಶಿಲ್ಪಗಳನ್ನೂ ನೋಡಬಹುದು.

ಇನ್ನಷ್ಟು ಮೇಲೆ ಹೋದ ನಂತರ ಸುಮಾರು ಕ್ರಿ.ಶ. 578 ರಲ್ಲಿ ನಿರ್ಮಿತವಾಗಿರುವ ಮೂರನೆಯ ಗುಹೆಯನ್ನು ತಲುಪುತ್ತೇವೆ. ಎಲ್ಲಕ್ಕಿಂತ ವಿಶಾಲವಾದ ಈ ಗುಹೆಯು ವಿಷ್ಣುವಿನ ವಿವಿಧ ಅವತಾರಗಳಿಗೆ ಮೀಸಲಾಗಿದೆ. ಪೌರಾಣಿಕವಾದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳ ಸಂಗಡವೇ ದೈನಂದಿನ ಜೀವನದಿಂದ ತೆಗದುಕೊಂಡ ದೃಶ್ಯಗಳೂ ಇರುವುದು ಈ ಗುಹೆಯ ವಿಶೇಷ. ಹುಹೆಯ ಪ್ರವೇಶವು ಸುಮಾರು ಎಪ್ಪತ್ತು ಅಡಿಗಳಷ್ಟು ವಿಶಾಲವಾಗಿದೆ. ಅದರ ಮೇಲ್ಭಾಗದಲ್ಲಿ ಗಣಗಳ ಕೆತ್ತನೆಯನ್ನು ನೋಡಬಹುದು. ತನ್ನ ಅನುಪಮವಾದ ಕಲೆಗಾರಿಕೆ ಮತ್ತು ಶಿಲ್ಪಕಲಾಪ್ರತಿಭೆಗಳಿಂದ ಈ ಗುಹೆಯು ದಖನೀ ಕಲೆಯ ಶಿಖರ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಆರನೆಯ ಶತಮಾಣದ ಜೀವನಶೈಲಿ ಮತ್ತು ಸಂಸ್ಕೃತಿಗಳನ್ನು ಅನಾವರಣ ಮಾಡುವ ಉಡುಪುಗಳು, ಒಡವೆಗಳು, ಕೇಶಶೈಲಿ ಮುಂತಾದ ಸಂಗತಿಗಳನ್ನು ಈ ಗುಹೆಯಲ್ಲಿ ಹೇರಳವಾಗಿ ಕಾಣಬಹುದು. ಇಲ್ಲಿರುವ ಅನಂತಸರ್ಪನ ಮೇಲೆ ಕುಳಿತ ವಿಷ್ಣು, ನರಸಿಂಹಾವತಾರ, ವರಾಹಾವತಾರ, ತ್ರಿವಿಕ್ರಮಾವತಾರ ಮತ್ತು ಹರಿಹರ ರೂಪಗಳ ಚೆಲುವಿಕೆಯನ್ನು ಸಾವಧಾನವಾಗಿ ವೀಕ್ಷಿಸಬೇಕು. ಈ ಗುಹೆಯಲ್ಲಿ, ನಿಸರ್ಗದತ್ತವಾದ ಬಣ್ಣಗಳನ್ನು ಉಪಯೋಗಿಸಿರುವ ಕೆಲವು ವರ್ಣಚಿತ್ರಗಳಿವೆ. ಇವುಗಳಲ್ಲಿ ಅನೇಕ ಚಿತ್ರಗಳು ಬಹಳ ಸುಂದರವಾಗಿದ್ದರೂ ಹಳತಾಗಿವೆ. ಈ ಗುಹೆಯ ಒಳಭಾಗದಲ್ಲಿ ಒಂದು ಸಂಸ್ಕೃತ ಶಾಸನ ಮತ್ತು ಒಳಭಾಗದಲ್ಲಿ ಒಂದು ಕನ್ನಡ ಶಾಸನಗಳನ್ನು ಶೋಧಿಸಲಾಗಿದೆ. ಇವೆರಡೂ ಚಾಳುಕ್ಯ ಚಕ್ರವರ್ತಿ ಕೀರ್ತಿವರ್ಮನ ಸೋದರನಾದ ಮಂಗಳೇಶನು ನೀಡಿದ ದಾನ, ದತ್ತಿಗಳಿಗೆ ಸಂಬಂಧಿಸಿದವು.

ನಾಲ್ಕನೆಯ ಗುಹೆಯು ಜೈನಧರ್ಮಕ್ಕೆ ಸಂಬಂಧಪಟ್ಟ ಶಿಲ್ಪಗಳಿಗೆ ಮೀಸಲಾಗಿದೆ. ಇದರ ಮೊಗಸಾಲೆಯ ಮುಂಭಾಗದಲ್ಲಿ ಒಬ್ಬ ಕುಬ್ಜನ(ಕುಬೇರ?) ಉಬ್ಬುಶಿಲ್ಪವಿದೆ. ಅದರ ಛತ್ತಿನ ಮೇಲೆ ಒಂದು ಗಂಧರ್ವರ ಜೋಡಿಯೂ(ಯಕ್ಷ-ಯಕ್ಷಿ) ಅದರ ಬಲಭಾಗದಲ್ಲಿ ಶಿಷ್ಯಸಮೇತರಾದ ತೀರ್ಥಂಕರರ ಶಿಲ್ಪವೂ ಇವೆ. ಇವೆಲ್ಲವನ್ನೂ ಮೊಗಸಾಲೆಯ ಪ್ರವೇಶದಲ್ಲಿಯೇ ಕಾಣಬಹುದು. ಮುಖ್ಯ ಮಂಟಪದ ಎದುರು ಬದುರು ಗೋಡೆಗಳ ಮೇಲೆ ಬಾಹುಬಲಿ ಮತ್ತು ಸುಪಾರ್ಶ್ವನಾಥ ತೀರ್ಥಂಕರರ ಶಿಲ್ಪಗಳಿವೆ. ಈ ಗುಹೆಯ ಬೇರೆ ಬೇರೆ ಭಾಗಗಳಲ್ಲಿ ಮಹಾವೀರ ತೀರ್ಥಂಕರ, ಮಾತಂಗ ಯಕ್ಷ, ಸಿದ್ಧಾಯನಿ ಯಕ್ಷಿ ಮತ್ತು ಪದ್ಮಾವತಿ ಯಕ್ಷಿಯರ ಶಿಲ್ಪಗಳನ್ನು ನೋಡಬಹುದು. ಗರ್ಭಗುಡಿಯ ಹಿಂಭಾಗದ ಗೋಡೆಯನ್ನು ಮೇಲೆ ಮಹಾವೀರ ತೀರ್ಥಂಕರನ ಬೃಹತ್ ಮೂರ್ತಿಯು ಅಲಂಕರಿಸಿದೆ.

ಈ ಎಲ್ಲ ಗುಹೆಗಳಿಗೂ ಸಮಾನವಾದ ಕೆಲವು ಸಂಗತಿಗಳಿವೆ. "ಚಾಳುಕ್ಯ ಶಿಲ್ಪದ ಪ್ರಾಥಮಿಕ ಹಂತವು, ತನ್ನ ವಾಸ್ತವತಾವಾದ, ವಿಗ್ರಹಗಳ ತುಂಬುತನ ಮತ್ತು ಅಲಂಕರಣದಲ್ಲಿ ತೋರಿಸುವ ಸಂಯಮಗಳ ಫಲವಾಗಿ 'ಅಭಿಜಾತತೆ'ಯ ಕಡೆಗೆ ಒಲಿಯುತ್ತದೆ.(ಕ್ಲಾಸಿಕಲ್) ಈ ಸಂಗತಿಗಳಲ್ಲಿ ಅದು ತನ್ನ ಸಮಕಾಲೀನರಾದ ಪಲ್ಲವರು ಮತ್ತು ಅವರ ನಂತರ ಬಂದವರಿಗಿಂತ ಹೆಚ್ಚಾಗಿ ತನಗಿಂತ ಮೊದಲೇ ಇದ್ದ ಗುಪ್ತರನ್ನು ಹೋಲುತ್ತದೆ. ವಾಸ್ತುಶಿಲ್ಪದ ನೆಲೆಯಿಂದ ನೋಡಿದಾಗ ಉತ್ತರಾದಿ ಮತ್ತು ದಾಕ್ಷಿಣಾತ್ಯ ಲಕ್ಷಣಗಳೆರಡನ್ನೂ ಗುರುತಿಸಬಹುದು. ಎಷ್ಟೋ ಬಾರಿ ಇವೆರಡೂ ಒಂದೇ ದೇವಾಲಯದೊಳಗೆ ಕಂಡುಬರುತ್ತವೆ. ಹಂಟಿಂಗ್ ಟನ್, ಕೆಲವು ಸಮಾನ ಲಕ್ಷಣಗಳನ್ನು ಪಟ್ಟಿ ಮಾಡುತ್ತಾನೆ: ಗಾರೆಯನ್ನು ಬಳಸದ ಜೋಡಣೆಯ ಕ್ರಮ, ಕಡಿಮೆ ಎತ್ತರದ, ಉದ್ದವಾದ ಹಾಗೂ ಅಗಲ ಕಿರಿದಾದ(ನ್ಯಾರೋ) ದೇವಾಲಯ ರಚನೆಗಳು, ಅನೇಕ ಕಂಬಗಳಿರುವ ಸಭಾಂಗಣದ ಮೇಲೆ ಸಮತಲಾಕೃತಿಯ ಚಾವಣಿಗಳು, ಶ್ರೀಮಂತವಾಸ ಕೆತ್ತನೆಯ ಕೆಲಸವನ್ನು ಹೊಂದಿರುವ ಚಾವಣಿಗಳು ಮತ್ತು ಅನೇಕ ಚಿಕ್ಕ ಚಿಕ್ಕ ಶಿಲ್ಪಗಳ ಬದಲಾಗಿ ಕೆಲವೇ ಕೆಲವು ಬೃಹತ ಪ್ರತಿಮೆಗಳನ್ನು ಬಳಸುವ ಸಂಯೋಜನೆಗಳು."

ಈ ಗುಹೆಗಳಲ್ಲದೆ ಬಾದಾಮಿಯು ತನ್ನ ಇತಿಹಾಸದ ವಿಭಿನ್ನ ಹಂತಗಳಲ್ಲಿ ಕಟ್ಟಲಾದ ದೇವಾಲಯಗಳಿಗಾಗಿಯೂ ಪ್ರಸಿದ್ಧವಾಗಿದೆ. ಊರಿನ ಉತ್ತರ ಭಾಗದಲ್ಲಿರುವ ಗುಡ್ಡದ ಮೇಲೆ ಮೂರು ಶಿವ ದೇವಾಲಯಗಳಿವೆ. ಅವುಗಳನ್ನು ಮಾಲೆಗಿತ್ತಿ ಶಿವದೇವಾಲಯ, ಕೆಳಗಿನ ಶಿವಾಲಯ ಮತ್ತು ಮೇಲಿನ ಶಿವಾಲಯಗಳೆಂದು ಕರೆಯಲಾಗಿದೆ.ಮಾಲೆಗಿತ್ತಿ ಶಿವಾಲಯವನ್ನು ಏಳನೆಯ ಶತಮಾನದ ಕೊನೆಯ ಭಾಗದಲ್ಲಿಯೂ ಉಳಿದೆರಡು ದೇವಾಲಯಗಳನ್ನು ಅದಕ್ಕಿಂತ ಮೊದಲು ಎಂದರೆ ಸುಮಾರು ಆರನೆಯ ಶತಮಾನದ ಮೊದಲ ಭಾಗದಲ್ಲಿಯೂ ನಿರ್ಮಿಸಲಾಗಿದೆ. ಈ ದೇವಾಲಯಗಳು ಸಂಕುಚಿತವಾದ ದೇವಪಕ್ಷಪಾತದಿಂದ ಮುಕ್ತವಾಗಿವೆ. ಇಲ್ಲಿ ಶೈವ ಮತ್ತು ವೈಷ್ಣವ ಆಶಯಗಳೆರಡಕ್ಕೂ ಸಮಾನ ಮಹತ್ವ ಸಿಕ್ಕಿದೆ. ನಟರಾಜ ಮತ್ತು ಶಿವರ ಪ್ರತಿಮೆಗಳ ನೆರೆಯಲ್ಲಿಯೇ ಭಾಗವತ ಮತ್ತು ರಾಮಾಯಣಗಳಿಂದ ಆಯ್ದು ತೆಗೆದ ಸನ್ನಿವೇಶಗಳ ಶಿಲ್ಪಗಳನ್ನು ಕಾಣಬಹುದು.

ಬಾದಾಮಿ ಊರಿನೊಳಗೆ ಇರುವ ಜಂಬುಲಿಂಗ ದೇವಾಲಯವು ಮೊದಲು ಬ್ರಹ್ಮ-ವಿಷ್ಣು-ಶಿವ ದೇವಾಲಯವಾಗಿತ್ತು. ಇದು ಕರ್ನಾಟಕದಲ್ಲಿ ದೊರೆತ ಮೊಟ್ಟಮೊದಲ ತ್ರಿಕೂಟಾಚಲ ಮಾದರಿಯ ಗುಡಿ. ಇದನ್ನು ಏಳನೆಯ ಶತಮಾನದಲ್ಲಿ ನಿರ್ಮಿಸಲಾಯಿತು.ಇದರಲ್ಲಿ ಮೂರು ಶಾಸನಗಳು ದೊರೆತಿವೆ. 'ಅಗಸ್ತ್ಯತೀರ್ಥ' ಸರೋವರದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಗುಡಿಗಳಿವೆ. ಇವುಗಳನ್ನು ಏಳನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗಿನ ಸುದೀರ್ಘ ಅವಧಿಯಲ್ಲಿ ವಿಭಿನ್ನ ರಾಜವಂಶಗಳ ಆಳ್ವಿಕೆಯಲ್ಲಿ ಕಟ್ಟಲಾಯಿತು.

ಬಾದಾಮಿಯಲ್ಲಿ ಮತ್ತು ಅದರ ಆಸುಪಾಸಿನಲ್ಲಿ ಅನೇಕ ಶಾಸನಗಳು ದೊರೆತಿವೆ. ಇವುಗಳಲ್ಲಿ 'ಕಪ್ಪೆ ಅರಭಟ್ಟನ ಶಾಸನ'ವು ಮುಖ್ಯವಾದುದು. ಇದರಲ್ಲಿ ಕನ್ನಡದ ಪ್ರಸಿದ್ಧ ಛಂದೋಬಂಧವಾದ ತ್ರಿಪದಿಯು ಮೊಟ್ಟಮೊದಲ ಬಾರಿಗೆ ಬಳಕೆಯಾಗಿದೆ. (ಏಳನೆಯ ಶತಮಾನ) ಪಲ್ಲವ ನರಸಿಂಹವರ್ಮ-1 ಎಂಬ ರಾಜನು ಕ್ರಿ.ಶ.642 ರಲ್ಲಿ ಸ್ಥಾಪಿಸಿದ ಸಂಸ್ಕೃತ ಶಾಸನವು ಕೋಟೆಗೆ ಹೋಗುವ ಹಾದಿಯಲ್ಲಿ ಒಂದು ಬಂಡೆಯ ಮೇಲೆ ಲಿಖಿತವಾಗಿದೆ.

ಬಾದಾಮಿಯಲ್ಲಿ ಭಾರತ ಸರ್ಕಾರದ ಪುರಾತತ್ವ ಇಲಾಖೆಯು ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವಿದೆ. ಇಲ್ಲಿ ನೈಸರ್ಗಿಕವಾದ ಗುಹೆಯ ಮಾದರಿಯೊಂದನ್ನು ಪ್ರದರ್ಶಿಸಲಾಗಿದೆ. ಅದರೊಳಗೆ ಇತಿಹಾಸಪೂರ್ವಯುಗದ ಕೆಲವು ವಸ್ತುಗಳನ್ನು ಅಂತೆಯೇ ಮೂರನೆಯ ಗುಹೆಯಿಂದ ಪ್ರತಿಮಾಡಿದ ವರ್ಣಚಿತ್ರದ ಪ್ರತಿಯೊಂದನ್ನು ಪ್ರದರ್ಶಿಸಲಾಗಿದೆ. ಪಟ್ಟದಕಲ್ಲಿನಲ್ಲಿ ದೊರೆತ ಕೆಲವು ಪ್ರತಿಮೆಗಳನ್ನೂ ಇಲ್ಲಿ ಸಂರಕ್ಷಿಸಲಾಗಿದೆ.

ನಮ್ಮ ದೇಶದ ಅತ್ಯಂತ ಮುಖ್ಯವಾದ ಪ್ರವಾಸಿ ತಾಣಗಳಲ್ಲಿ ಒಂದಾದ ಬಾದಾಮಿಯನ್ನು ಕುರಿತ ಸಮೃದ್ಧವಾದ ಮಾಹಿತಿಯು ಮುದ್ರಣ ಮಾಧ್ಯಮದಲ್ಲಿ ಹಾಗೂ 'ಇಂಟರ್ ನೆಟ್'ನಲ್ಲಿ ಲಭ್ಯವಿದೆ. ಈ ಕಿರು ಟಿಪ್ಪಣಿಯು ಆ ಆಕರಲೋಕಕ್ಕೆ ಒಂದು ಪ್ರವೇಶ ಮಾತ್ರ.

 

ಮುಂದಿನ ಓದು:

ಮುಖಪುಟ / ಪ್ರಮುಖ ಸ್ಥಳಗಳು