ಪ್ರಮುಖ ಸ್ಥಳಗಳು
ಐಹೊಳೆ

ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲುಗಳು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ತಾಣಗಳು. ಐಹೊಳೆ ಎಂಬ ಹಳ್ಳಿಯು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕಿನಲ್ಲಿದೆ. ಹುನಗುಂದದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಐಹೊಳೆಯು ಮಲಪ್ರಭಾ ನದಿಯ ಬಲದಂಡೆಯಲ್ಲಿದೆ. ಈ ಸ್ಥಳವನ್ನು ಅದರ ಇತಿಹಾಸದ ಬೇರೆ ಬೇರೆ ಘಟ್ಟಗಳಲ್ಲಿ, ಅಯ್ಯಾವೊಳೆ, ಐವಳ್ಳಿ, ಐಹೊಳ್ಳಿ, ಮತ್ತು ಆರ್ಯಪುರ ಎಂಬ ಹೆಸರುಗಳಿಂದ ಕರೆಯಲಾಗಿದೆ. ಕೊನೆಯದು ಸಂಸ್ಕೃತೀಕರಣದ ಪರಿಣಾಮವಾಗಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ ಅನೇಕ ಪೌರಾಣಿಕವಾದ ಕಥೆಗಳಿವೆ.

ಸಾಮಾನ್ಯವಾಗಿ ಐಹೊಳೆಯನ್ನು ಬಾದಾಮಿ ಚಾಳುಕ್ಯರ ಆಳ್ವಿಕೆಯೊಂದಿಗೆ ಹೊಂದಿಸುವುದು ವಾಡಿಕೆಯಾಗಿದೆ. ಆದರೆ, ಇಲ್ಲಿ ಕ್ರಿಸ್ತಪೂರ್ವ ಆರು-ಏಳನೆಯ ಶತಮಾನಗಳಷ್ಟು ಹಿಂದೆಯೇ ಮನುಷ್ಯನ ವಾಸ್ತವ್ಯವಿತ್ತೆಂಬುದನ್ನು ವಾಸ್ತುತಜ್ಞರ ಉತ್ಖನನಗಳು ತೋರಿಸಿಕೊಟ್ಟಿವೆ. ಆಗ ಕಬ್ಬಿಣದ ಯುಗವು ಪ್ರಚಲಿತವಾಗಿತ್ತು. ಐಹೊಳೆಗೆ ಸಮೀಪದಲ್ಲಿರುವ ಮೇಗುತಿ ಗುಡ್ಡದಲ್ಲಿ ದೊರೆತಿರುವ ಪೆಟ್ಟಿಗೆಯ ಆಕಾರದ ಸಮಾಧಿಗಳು ಮತ್ತು ದೇವಾಲಯಗಳ ಬಳಿಯಲ್ಲಿ ಈಚೆಗೆ ನಡೆದಿರುವ ಉತ್ಖನನಗಳಲ್ಲಿ ಲಭ್ಯವಾಗಿರುವ ಇಟ್ಟಿಗೆ ತಳಪಾಯಗಳು ಮತ್ತು ಮಡಕೆಯ ಚೂರುಗಳು ಈ ಸಂಗತಿಯನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ತೋರಿಸಿಕೊಟ್ಟಿವೆ. ಆದರೂ ಐಹೊಳೆಯು ದೊಡ್ಡ ಪಟ್ಟಣವಾಗಿ ರೂಪುಗೊಂಡಿದ್ದು, ಆರನೆಯ ಶತಮಾನದಿಂದ ಮೊದಲಾದ ಬಾದಾಮಿ ಚಾಳುಕ್ಯರ ಆಳ್ವಿಕೆಯಲ್ಲಿಯೇ. ಇಲ್ಲಿ ಸಿಕ್ಕಿರುವ ಅನೇಕ ಶಾಸನಗಳು ಆ ಕಾಲಕ್ಕೆ ಸೇರಿದವು. ಇಲ್ಲಿರುವ ಅನೇಕ ಪ್ರಸಿದ್ಧ ದೇವಾಲಯಗಳು ಆ ರಾಜವಂಶದ ಅರಸರಿಂದಲೇ ನಿರ್ಮಿತವಾಗಿವೆ. ಸುಮಾರು ಇನ್ನೂರ ಐವತ್ತು ವರ್ಷಗಳ ಕಾಲ ವೈಭವದಿಂದ ಮೆರೆದ ಐಹೊಳೆ ಕ್ರಮೇಣ ಆ ರಾಜವಂಶದ ಅವಸಾನದ ಜೊತೆಜೊತೆಗೇ ಮಸುಕಾಯಿತು. ಕಲ್ಯಾಣಿ ಚಾಳುಕ್ಯರು ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿರುವ ಕೆಲವು ದೇವಾಲಯಗಳು ಗುಣಮಟ್ಟದಲ್ಲಿ ಸಾಮನ್ಯವಾದುವು. ಕ್ರಮೇಣ ಅನಾಮಿಕ ಹಳ್ಳಿಯಾಗಿ ಮರವೆಗೆ ಸಂದ ಐಹೊಳೆಯು, ಇಪ್ಪತ್ತನೆಯ ಶತಮಾನದಲ್ಲಿ ಅದರ ವಾಸ್ತು ಮತ್ತು ಶಿಲ್ಪಗಳ ವೈಭವವು ಅನಾವರಣವಾಗುವ ತನಕ ಹಾಗೆಯೇ ಉಳಿಯಿತು.

ತನ್ನ ಏಳಿಗೆಯ ದಿನಗಳಲ್ಲಿ ಐಹೊಳೆಯು ವಿದ್ವತ್ತು ಮತ್ತು ವಾಣಿಜ್ಯಗಳಿಗಾಗಿಯೂ ಹೆಸರುವಾಸಿಯಾಗಿತ್ತು. ಇದು ಪ್ರಾಯಶಃ ಅಯ್ಯಾವೊಳೆ ಅಯ್ನೂರ್ವರು ಎಂದೇ ಕರೆಸಿಕೊಳ್ಳುತ್ತಿದ್ದ ವರ್ತಕಮಂಡಳಿಯ ಕೇಂದ್ರವಾಗಿತ್ತು.

ದೊಡ್ಡದು, ಚಿಕ್ಕದು ಎಲ್ಲವೂ ಸೇರಿದಂತೆ, ಐಹೊಳೆಯಲ್ಲಿ ಸುಮಾರು ೧೨೫ ದೇವಾಲಯಗಳಿದ್ದು, ಪುರಾತತ್ವ ಇಲಾಖೆಯು ಅವುಗಳನ್ನು ಇಪ್ಪತ್ತೆರಡು ಗುಂಪುಗಳಾಗಿ ವಿಂಗಡಿಸಿದೆ. ಅವುಗಳಲ್ಲಿ ಕೆಲವು ಕೋಟೆಯ ಒಳಗೆ ಇದ್ದರೆ, ಉಳಿದವು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಈ ಟಿಪ್ಪಣಿಯಲ್ಲಿ ಅವೆಲ್ಲದರ ಕಿರು ಪರಿಚಯವನ್ನು ಕೊಡುವುದೂ ಸಾಧ್ಯವಿಲ್ಲ. ಐಹೊಳೆಯ ಕೋಟೆಯು ಕರ್ನಾಟಕದಲ್ಲಿ ಉಳಿದುಕೊಂಡಿರುವ ಅತ್ಯಂತ ಪ್ರಾಚೀನ ಕೋಟೆಗಳಲ್ಲಿ ಒಂದೆಂಬ ವಿಷಯವು ಅದರ ಗೋಡೆಯ ಮೇಲೆ ಇರುವ ಏಳನೆಯ ಶತಮಾನದ ಶಾಸನದಿಂದ ಸ್ಪಷ್ಟವಾಗುತ್ತದೆ.

ಕೋಟೆಯ ಒಳಗೆ ಇರುವ ದುರ್ಗ ದೇವಾಲಯವು ಐಹೊಳೆಯಲ್ಲಿ ಅತ್ಯಂತ ಪ್ರಸಿದ್ಧವಾದುದು. ಇದಕ್ಕೂ ದುರ್ಗಾ ದೇವತೆಗೂ ಯಾವ ಸಂಬಂಧವೂ ಇಲ್ಲ. ದುರ್ಗ ಎಂದರೆ, ಕೋಟೆಯೊಳಗೆ ಇರುವುದರಿಂದ ಈ ಹೆಸರು ಬಂದಿದೆ. ಈ ದೇವಾಲಯವನ್ನು ಬೌದ್ಧರ ಚೈತ್ಯದ ಮಾದರಿಯಲ್ಲಿ ಯೋಜಿಸಲಾಗಿದೆ. ಇಲ್ಲಿ ಎತ್ತರದ, ಎರಕ ಹೊಯ್ದ ಅಧಿಷ್ಠಾನ ಮತ್ತು ಕಮಾನಾದ ಶಿಖರಗಳಿವೆ. ಗರ್ಭಗುಡಿ, ಮುಖಮಂಟಪ ಮತ್ತು ಸಭಾಮಂಟಪಗಳನ್ನು ಸುತ್ತುವರಿದಿರುವ, ಪ್ರದಕ್ಷಿಣ ಪಥದಲ್ಲಿ ಅನೇಕ ಕಂಬಗಳನ್ನು ನಿಲ್ಲಿಸಲಾಗಿದೆ. ಇದು ವಿಷ್ಣು ದೇವಾಲಯವಾದರೂ ಬೌದ್ಧ ಚೈತ್ಯದ ಮಾದರಿಯನ್ನು ಅನುಸರಿಸಿರುವುದು ವಿಶೇಷ. ರೇಖಾ-ನಾಗರ ಶೈಲಿಯಲ್ಲಿರುವ ಶಿಖರವನ್ನು ಹೊಂದಿರುವ ದುರ್ಗ ದೇವಾಲಯವು ಇಡೀ ಐಹೊಳೆಯಲ್ಲಿಯೇ ಅತ್ಯಂತ ಅಲಂಕರಿತವಾದ ದೇವಾಲಯದ ಪ್ರವೇಶದ್ವಾರದಲ್ಲಿ ಮತ್ತು ಹೊರ ಅಂಗಳದಲ್ಲಿ ಇರುವ ಸ್ತಂಭಗಳ ಮೇಲೆ ಮನುಷ್ಯಾಕೃತಿಗಳ ಮತ್ತು ಅಲಂಕೃತಿಗಳ ಕೆತ್ತನೆಯಿದೆ. ಇಲ್ಲಿ ದೊರೆತಿರುವ ಒಂದೆರಡು ಶಾಸನಗಳು ದೇವಾಲಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಇದರ ಸಮೀಪದಲ್ಲಿಯೇ ಅದೇ ಕಾಲಕ್ಕೆ ಸೇರಿದ ಇನ್ನೊಂದು ಚಿಕ್ಕ ದೇವಾಲಯ ಮತ್ತು ಕೊಳಗಳಿವೆ.

ಲಾಡ್ ಖಾನ್ ಎಂಬ ಹೆಸರಿನ ವ್ಯಕ್ತಿಯೊಬ್ಬನು ಅಲ್ಲಿ ಕೆಲ ಕಾಲ ತಂಗಿದುದರಿಂದ, ಆ ದೇವಾಲಯಕ್ಕೆ ಅವನದೇ ಹೆಸರು ಬಂದಿದೆ. ಈ ಶಿವ ದೇವಾಲಯವು ಐಹೊಳೆಯಲ್ಲಿ ಅತ್ಯಂತ ಹಳೆಯದು. ಇಲ್ಲಿನ ಶಿಲ್ಪಗಳ ಕುಸುರಿಗೆಲಸದ ವಿವರಗಳು ಬಹಳ ಸೂಕ್ಷ್ಮವಾಗಿದ್ದು, ಒಳ್ಳೆಯ ಸ್ಥಿತಿಯಲ್ಲಿ ಉಳಿದುಕೊಂಡಿವೆ. ಈ ದೇವಾಲಯದಲ್ಲಿರುವ ಗರುಡ, ಬಸವ, ಲಿಂಗ, ಸೂರ್ಯ ಮತ್ತು ಕೆಲವು ಮಿಥುನಶಿಲ್ಪಗಳು ಬಹಳ ಸುಂದರವಾಘಿದ್ದು ಗಮನೀಯವಾಗಿವೆ. ಅನಂತರದ ಕಾಲದಲ್ಲಿ ಸ್ಥಾಪಿತವಾಗಿರುವ ಕೆಲವು ಶಾಸನಗಳು ಕುತೂಹಲಕರವಾದ ಮಾಹಿತಿಯನ್ನು ನೀಡುತ್ತವೆ.

ಐಹೊಳೆಯಲ್ಲಿರುವ ಬೇರೆ ಕೆಲವು ಮುಖ್ಯ ದೇವಾಲಯಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

೧.ಗೌಡರ ಗುಡಿ

೨. ಸೂರ್ಯನಾರಾಯಣ ಗುಡಿ

೩. ಚಕ್ರ ಗುಡಿ

೪. ಬಡಿಗೇರ ಗುಡಿ

೫. ರಾಚಿ ಗುಡಿ

೬. ಹುಚ್ಚಪ್ಪಯ್ಯನ ಗುಡಿ

೭. ಹಾಲಬಸಪ್ಪನ ಗುಡಿ

೮. ಕುಂತಿ ಗುಡಿ ಸಮುಚ್ಚಯ

೯. ಜೈನ ದೇವಾಲಯಗಳ ಸಮುಚ್ಚಯ

೧೦. ಅಂಬಿಗೇರ ಗುಡಿ ಸಮುಚ್ಚಯ

೧೧. ಚಿಕ್ಕಿ ಗುಡಿ ಸಮುಚ್ಚಯ

೧೨. ಹುಚ್ಚಿ ಮಲ್ಲಿ ಸಮುಚ್ಚಯ

೧೩. ರಾವಳಪಡಿ ಸಮುಚ್ಚಯ

೧೪. ಜ್ಯೋರ್ತಿಲಿಂಗ ಗುಡಿ ಸಮುಚ್ಚಯ

೧೫. ಗಳಗನಾಥ ಗುಡಿ ಸಮುಚ್ಚಯ

೧೬. ರಾಮಲಿಂಗ ಗುಡಿ ಸಮುಚ್ಚಯ

೧೭. ಮಲ್ಲಿಕಾರ್ಜುನ ಗುಡಿ ಸಮುಚ್ಚಯ

೧೮. ಜೈನ ಗುಹೆ.

ಐಹೊಳೆಯ ನೈರುತ್ಯ ದಿಕ್ಕಿನಲ್ಲಿರುವ ಗುಡ್ಡವೊಂದರ ಮೇಲೆ ಮತ್ತು ಅಲ್ಲಿಗೆ ಹೋಗುವ ಹಾದಿಯಲ್ಲಿರುವ ಅನೇಕ ದೇವಾಲಯಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಸಾಮಾಣ್ಯವಾಗಿ ಇವೆಲ್ಲವೂ ಬೌದ್ಧ ಮತ್ತು ಜೈನ ಲಕ್ಷಣಗಳನ್ನು ಹೊಂದಿವೆ. ಇಲ್ಲಿರುವ ಪದ್ಮಾಸನಸ್ಥ ಬುದ್ಧ ಮತ್ತು ಜೈನ ಯಕ್ಷಿಣಿಯರ ವಿಗ್ರಹಗಳೂ ಈ ತೀರ್ಮಾನಕ್ಕೆ ಬರಲು ಕಾರಣವಾಗಿವೆ.

ಐಹೊಳೆಯನ್ನು ಬಾದಾಮಿ ಚಾಳುಕ್ಯರ ವಾಸ್ತುಶೈಲಿಯ ಪ್ರಯೋಗಶಾಲೆಯೆಂದು ಕರೆಯಲಾಗಿದೆ. ಇಲ್ಲಿ ಪ್ರಾರಂಭವಾದ ಅನೇಕ ಪ್ರಯೋಗಗಳು ಕರ್ನಾಟಕದ ಇತರೆಡೆಗಳಲ್ಲಿ ಮತ್ತು ಅದರಾಚೆಗೂ ಫಲ ನೀಡಿವೆ. ಆದ್ದರಿಂದ ಚಾಳುಕ್ಯ ವಾಸ್ತುಶಿಲ್ಪ ಮತ್ತು ಶಿಲ್ಪಗಳ ವಿಕಸನಕ್ರಮದಲ್ಲಿ ಐಹೊಳೆಗೆ ಪ್ರಮುಖ ಪಾತ್ರವಿದೆ. ಅದಲ್ಲದೆ ರಾಷ್ಟ್ರೀಯ ಸ್ಮಾರಕಗಳೆಂದು ಪರಿಗಣಿತವಾಗಿರುವ ಐಹೊಳೆಗೆ ತನ್ನದೇ ಆದ ಚೆಲುವು ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

 

ಪರಾಮರ್ಶನ ಗ್ರಂಥಗಳು:

  1. In Praise of Aihole, Badami, Mahakuta, Pattadakal,1980, Marg Publications, Bombay.
  2. The Durga Temple at Aihole: Ahistoriographical study, Gary Michael Tartakov, 1997, Oxford University Press, Delhi-New York.
  3. The Trading World of the Tamil Merchant: Evolution of Merchant Capitalism in Coromandal, Kanakalatha Mukund, 1999, Orient Blackswan
  4. The Chalukyan Architecture of the Kanarese Districts, Cousens Henry.
  5. Monuments of India, Part II, Early Chalukya, Aihole
  6. Pictures, Photos of Aihole, India
  7. Archaeological Museum, Aihole - Archaeological Survey of India
  8. Deccan sculpture as the unification of north and south.

ಮುಖಪುಟ / ಪ್ರಮುಖ ಸ್ಥಳಗಳು