ಸಾಹಿತ್ಯ
ಕುಸುಮಾವಳಿ ಕಾವ್ಯ
  1. ಕಾವ್ಯದ ಹೆಸರು: ‘ಕುಸುಮಾವಳಿ
  2. ಕವಿಯ ಹೆಸರು: ದೇವಕವಿ
  3. ಕಾಲ: ಕ್ರಿ.ಶ. 1200 (ಸುಮಾರು)
  4. ಸ್ಥಳ/ಸ್ಥಳಗಳು: ತಿಳಿದಿಲ್ಲ
  5. ಮತ-ಧರ್ಮ: ಬ್ರಾಹ್ಮಣ
  6. ಆಶ್ರಯದಾತರು: ಚಿಕ್ಕರಾಜ ಚಮೂಪ(?)
  7. ಬಿರುದುಗಳು: ಕವೀಂದ್ರೋತ್ತಂಸ, ಕೃತಿರತಿರಮಣ, ಭಾರತೀಭೂಷಣ.
  8. ಸಾಹಿತ್ಯಪ್ರಕಾರ: ಚಂಪೂ ಕಾವ್ಯ
  9. ಛಂದೋರೂಪ: ವೃತ್ತಗಳು, ಕಂದ ಪದ್ಯಗಳು ಮತ್ತು ಗದ್ಯ
  10. ಹಸ್ತಪ್ರತಿಗಳು:
  11. ಪ್ರಕಟವಾದ ವರ್ಷ: 1972
  12. ಸಂಪಾದಕರು: ಕಡಬದ ನಂಜುಂಡಶಾಸ್ತ್ರೀ
  13. ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು
  14. ನಂತರದ ಆವೃತ್ತಿಗಳು: ಇಲ್ಲ
  15. ಕಿರು ಪರಿಚಯ: ಕುಸುಮಾವಳಿ ಕಾವ್ಯವು ಸಂಪೂರ್ಣವಾಗಿ ಕಾಲ್ಪನಿಕ ಕೃತಿ. ಅದು ಇತಿಹಾಸವನ್ನಾಗಲೀ ಪುರಾಣವನ್ನಾಗಲೀ ಅವಲಂಬಿಸಿಲ್ಲ. ಆದರೆ, ಜಾನಪದ ಸಾಹಿತ್ಯದ ಅನೇಕ ಅಂಶಗಳು ಇದರಲ್ಲಿ ಹಾಸುಹೊಕ್ಕಾಗಿವೆ. ಮನರಂಜನೆಯನ್ನು ನೀಡುವುದೇ ಕವಿಯ ಉದ್ದೇಶವಾಗಿರಬೇಕು. ನೇಮಚಂದ್ರನ ಲೀಲಾವತೀ ಮಹಾಪ್ರಬಂಧದ ಕಥೆಗೂ ಇದಕ್ಕೂ ಕಲವು ಸಾಮ್ಯಗಳಿವೆ. ಮದನವತಿಪುರದ ರಾಜನಾದ ಮಣಿಕುಂಡಲದೇವನಿಗೆ, ಕಪಿಲನೆಂಬ ಋಷಿಯು ಈ ಕಥೆಯನ್ನು ಹೇಳುತ್ತಾನೆ. ಇದು ಕುಸುಮಾವಳಿ ಮತ್ತು ಕಂದರ್ಪದೇವರ ಕಥೆ. ತನಗೆ ಬಿದ್ದ ಕನಸಿನ ಬಗ್ಗೆ ವಿವರಣೆ ಕೇಳಲು, ರಾಜನು ಕಪಿಲನ ಬಳಿಗೆ ಬಂದಿದ್ದಾನೆ. ರಾಜನ ಕನಸಿನಲ್ಲಿ ಸುಂದರಿಯಾದ ಹೆಣ್ಣೊಬ್ಬಳ ಅಮೃತಶಿಲೆಯ ಪ್ರತಿಮೆಯು ಕಾಣಿಸಿದೆ. ಅದರ ಪೂರ್ವಾಪರಗಳನ್ನು ತಿಳಿಯಲು, ರಾಜನು ಇಲ್ಲಿಗೆ ಬಂದಿದ್ದಾನೆ. ಕಪಿಲನು, ಹಲವಾರು ಸಾಹಸಗಳು, ಪಲಾಯನಗಳು, ವಿರಹಗಳು ಮತ್ತು ಅಂತಿಮ ಸಮಾಗಮಗಳಿಂದ ಕೂಡಿದ ನಿಡಿದಾದ ಕಥೆಯನ್ನು ನಿರೂಪಿಸುತ್ತಾನೆ. ಕುಸುಮಾವಳಿಯನ್ನು ಪ್ರತಿಮೆಯಾಗಿ ಪರಿವರ್ತಿಸಿದವನು ಸ್ವತಃ ಕಪಿಲನೇ. ಅವಳಿಗೆ, ದುರುದ್ದೇಶ ಇರುವ ವ್ಯಕ್ತಿಗಳಿಂದ, ಯಾವುದೇ ತೊಂದರೆಯಾಗದೆ ಇರಲಿ ಎನ್ನುವುದು ಅವನ ಉದ್ದೇಶ. ಈ ಚಂಪೂ ಕಾವ್ಯದಲ್ಲಿ, ಪ್ರಪಂಚದ ಎಲ್ಲ ಜಾನಪದ ಕಾವ್ಯಗಳಲ್ಲಿಯೂ ಕಾಣಸಿಗುವ ಕೆಲವು ಆಶಯಗಳು ಪುನರಾವರ್ತನೆಯಾಗುತ್ತವೆ. ಪ್ರಾಯಶಃ ಅವು ಕರ್ನಾಟಕದ ಮಧ್ಯಕಾಲೀನ ಜೀವನಶೈಲಿಯನ್ನು ಸಾಂಕೇತಿಕವಾಗಿ ಹೇಳುತ್ತಿರಬಹುದು. ಈ ಕಾವ್ಯದಲ್ಲಿ, ಹದಿನೈದು ಅಧ್ಯಾಯಗಳೂ 2068 ಪದ್ಯಗಳೂ ಇವೆ. ಇನ್ನೂ ಮೂರು ಅಧ್ಯಾಯಗಳು ಸಿಕ್ಕಿಲ್ಲವೆಂದು ವಿದ್ವಾಂಸರ ಅಭಿಪ್ರಾಯ. ಇಲ್ಲಿ ಬಳಸಿರುವ ಭಾಷೆಯು ಕನ್ನಡ ಮತ್ತು ಸಂಸ್ಕೃತಗಳ ಹದವಾದ ಮಿಶ್ರಣವಾಗಿದೆ. ಈ ಕಾವ್ಯದಲ್ಲಿ ಬರುವ ಅನೇಕ ಪ್ರಕೃತಿ ವರ್ಣನೆಗಳು ಬಹಳ ಚೆನ್ನಾಗಿವೆ. ಬೆಳಗಿನ ಜಾವದ ಗಾಳಿ, ಮೃದುವಾದ ಹುಲ್ಲು, ಕಬ್ಬಿನ ಜಲ್ಲೆಗಳು, ಕತ್ತಲು ಮತ್ತು ಎಮ್ಮೆಗಳು ಈ ಕವಿಯು ಬಹಳ ಅಕ್ಕರೆಯಿಂದ ವರ್ಣಿಸಿರುವ ಕೆಲವು ಅಪರೂಪದ ಸಂಗತಿಗಳು.ಇಂತಹ ಅನೇಕ ಪುಸ್ತಕಗಳು ಯಾವುದೇ ಬಗೆಯ ಗಮನವನ್ನೂ ಪಡೆಯದೆ ಅಂಚಿಗೆ ಸರಿಯುವುದು ವಿಷಾದದ ಸಂಗತಿ. ಈ ಪುಸ್ತಕವನ್ನು ಕಡಬದ ನಂಜುಂಡಶಾಸ್ತ್ರಿಗಳು ಸಂಪಾದನೆ ಮಾಡಿದ ನಂತರ,(1932) ಅದು ಮುದ್ರಣವಾಗಲು ನಲವತ್ತು ವರ್ಷಗಳು ಬೇಕಾಗಿರುವುದು ನಿಜವಾಗಿಯೂ ಅನ್ಯಾಯ.
  16. ಮುಂದಿನ ಓದು:
  17. ವಿದ್ಯುನ್ಮಾನ ಲಿಂಕುಗಳು:
  18. ಅನುವಾದಗಳು:

ಮುಖಪುಟ / ಸಾಹಿತ್ಯ