ಸಾಹಿತ್ಯ
ಕುಮಾರವ್ಯಾಸ ಭಾರತ

 1. ಕಾವ್ಯದ ಹೆಸರು: ಕರ್ಣಾಟ ಭಾರತ ಕಥಾಮಂಜರಿ, ಕುಮಾರವ್ಯಾಸ ಭಾರತ, ಗದುಗಿನ ಭಾರತ.
 2. ಕವಿಯ ಹೆಸರು: ಕುಮಾರವ್ಯಾಸ, ಗದುಗಿನ ನಾರಣಪ್ಪ.
 3. ಕಾಲ: 1430, ವಿದ್ವಾಂಸರು ಅವನ ಕಾಲವನ್ನು ಹದಿಮೂರನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ಊಹಿಸಿದ್ದಾರೆ.
 4. ಸ್ಥಳ/ಸ್ಥಳಗಳು: ಗದುಗು. ಈಗ ಅದು ಸ್ವತಂತ್ರವಾದ ಜಿಲ್ಲಾ ಕೇಂದ್ರ.
 5. ಮತ-ಧರ್ಮ: ಸ್ಮಾರ್ತ ಬ್ರಾಹ್ಮಣ, ಭಾಗವತ ಪರಂಪರೆ, ಗದುಗಿನ ವೀರನಾರಾಯಣನು ಇವನ ಇಷ್ಟದೇವತೆ.
 6. ಆಶ್ರಯದಾತರು: ಯಾವ ರಾಜರೂ ಇಲ್ಲ.
 7. ಬಿರುದುಗಳು: ರೂಪಕ ಸಾಮ್ರಾಜ್ಯ ಚಕ್ರವರ್ತಿ
 8. ಸಾಹಿತ್ಯಪ್ರಕಾರ: ಕಾವ್ಯ
 9. ಛಂದೋರೂಪ: ಭಾಮಿನೀ ಷಟ್ಪದಿ
 10. ಹಸ್ತಪ್ರತಿಗಳು: ತಾಳೆ ಗರಿಗಳು ಮತ್ತು ಕಾಗದ: ಕುಮಾರವ್ಯಾಸ ಭಾರತದ ಪ್ರಕಟಣೆಯ ಇತಿಹಾಸವು ಸುದೀರ್ಘವೂ ಸಂಕೀರ್ಣವೂ ಆಗಿದೆ. ಅದು ಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದಲ್ಲಿಯೇ ಪ್ರಕಟವಾಯಿತು. ಅನಂತರ ಇಪ್ಪತ್ತನೆಯ ಶತಮಾನದಲ್ಲಿ ಅನೇಕ ಆವೃತ್ತಿಗಳು ಹೊರಬಂದಿವೆ. ಈ ಕೃತಿಯ ಬಿಡಿಬಿಡಿಯಾಗಿಯೂ ಹೊರಬಂದಿವೆ. ಅಂತೆಯೇ ಸಮಗ್ರ ಕಾವ್ಯವೂ ಅನೇಕ ಆವೃತ್ತಿಗಳನ್ನು ಕಂಡಿದೆ. ಇವುಗಳಲ್ಲಿ ಕೆಲವು ಗ್ರಂಥಸಂಪಾದನೆಯ ಗೊಡವೆಗೆ ಹೋಗದ ಜನಪ್ರಿಯ ಆವೃತ್ತಿಗಳು. ಬೇರೆ ಕೆಲವಂತೂ ಸಂಪಾದಕರ ಹೆಸರನ್ನೂ ಹೇಳದ ಮಾರ್ಕೆಟ್ ಆವೃತ್ತಿಗಳು. ಆಗೀಗ ತೆಲುಗು ಲಿಪಿಯಲ್ಲಿ ಬರೆದ ಪ್ರತಿಗಳೂ ಸಿಕ್ಕಿವೆ.
 11. ಪ್ರಕಟವಾದ ವರ್ಷ: 1865, (ಇದಕ್ಕೂ ಮುಂಚೆ, ಮಂಗಳೂರಿನ ಜರ್ಮನ್ ಮಿಷನ್ ಪ್ರೆಸ್ ನವರು, ಕುಮಾರವ್ಯಾಸ ಭಾರತದ ನಾಲ್ಕು ಪರ್ವಗಳ ಕಲ್ಲಚ್ಚಿನ ಪ್ರತಿಯೊಂದನ್ನು ಪ್ರಕಟಿಸಿದ್ದರು.)
 12. ಸಂಪಾದಕರು: ಸಂಪಾದಕರ ಹೆಸರು ತಿಳಿದಿಲ್ಲ.
 13. ಪ್ರಕಾಶಕರು: ವಿಚಾರದರ್ಪಣ ಮುದ್ರಾಕ್ಷರ ಶಾಲೆ, ಬೆಂಗಳೂರು. (ಈ ಆವೃತ್ತಿಯು ತೆಲುಗು ಲಿಪಿಯಲ್ಲಿದೆ)
 14. ನಂತರದ ಆವೃತ್ತಿಗಳು:

ಅ. 1877, ಸಿದ್ಧಾಂತಿ ಸುಬ್ರಹ್ಮಣ್ಯಶಾಸ್ತ್ರೀ ಮತ್ತು ಸಾ. ತಿರುವೆಂಕಟಾಚಾರ್ಯ, ಸರಸ್ವತೀ ನಿಲಯ ಮುದ್ರಾಕ್ಷರಶಾಲೆ, ಮದ್ರಾಸು.

ಆ. 1888, ವಾಗೀಶ್ವರ ಮುದ್ರಾಕ್ಷರಶಾಲೆ, ಬೆಂಗಳೂರು

ಇ. 1909, ಕನ್ನಡ ಮಹಾಭಾರತ ದಶಪರ್ವ, ನಂಜನಗೂಡು ಶ್ರೀಕಂಠಶಾಸ್ತ್ರೀ, ವಾಣೀವಿಲಾಸ ಬುಕ್ ಡಿಪೋ, ಮೈಸೂರು.

ಈ. 1916, ಕನ್ನಡ ಮಹಾಭಾರತ ದಶಪರ್ವ, ವಾಜಪೇಯಂ ಗೋವಿಂದಯ್ಯ

ಉ. ದಶಪರ್ವ, ಸಂ. ಭಾರತೀ ಸಂಪಂಗೀರಾಮಯ್ಯ, ಸರಸ್ವತೀ ರತ್ನಾಕರ ಬುಕ್ ಡಿಪೋ, ಬೆಂಗಳೂರು

ಊ. 1936, ಶ್ರೀಮನ್ಮಹಾಭಾರತ ದಶಪರ್ವವು, ಚಿಕ್ಕಪೇಟೆ ಬುಕ್ ಡಿಪೋ, ಬೆಂಗಳೂರು

ಋ. 1958, ಕರ್ಣಾಟ ಭಾರತ ಕಥಾಮಂಜರಿ, ಸಂ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಕುವೆಂಪು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು. (ಈ ಆವೃತ್ತಿಯು ಕ್ರಿ.ಶ. 1554 ರಷ್ಟು ಹಿಂದೆಯೇ ಬರೆದ ಓಲೆಗರಿ ಪ್ರತಿಯನ್ನು ಬಳಸಿಕೊಂಡಿದೆ.)

ಎ. 1972, ಕುಮಾರವ್ಯಾಸ ಭಾರತ ಸಂಗ್ರಹ, ತ.ಸು. ಶಾಮರಾಯ, ಸಾಹಿತ್ಯ ಅಕಾಡೆಮಿ, ನವ ದೆಹಲಿ

ಏ. 1990, ಕುಮಾರವ್ಯಾಸ ಭಾರತ ಸಂಗ್ರಹ, ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು.

ಐ. 2007, ಕನ್ನಡ ಭಾರತಗಳು, ಸಂ. ಎ.ವಿ. ಪ್ರಸನ್ನ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಒ. 2008, ಕುಮರವ್ಯಾಸ ಭಾರತ, ಸಂ. ಎ.ಆರ್. ಸೇತೂರಾಮರಾವ್, ಕಾಮಧೇನು ಪ್ರಕಾಶನ, ಬೆಂಗಳೂರು.

(ಈ ಕಾವ್ಯದ ಪರ್ವಗಳನ್ನು ಬಿಡಿ ಬಿಡಿಯಾಗಿ, ಗ್ರಂಥಸಂಪಾದನೆಯ ಶಿಸ್ತಿಗೆ ಒಳಪಡಿಸಿ ಪ್ರಕಟಿಸಲಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಮಾಡಿರುವ ಕೆಲಸವು ಬಹಳ ದೊಡ್ಡದು. ವಿ. ಶ್ಯಾಮಾಚಾರ್, ಎಸ್.ಎನ್, ಕೃಷ್ಣಜೋಯಿಸ, ಡಿ.ಎಲ್. ನರಸಿಂಹಾಚಾರ್, ಡಿ.ಶ್ರೀನಿವಾಸಾಚಾರ್, ಎಂ.ಎಸ್. ಬಸವಲಿಂಗಯ್ಯ, ಎನ್. ಅನಂತರಂಗಾಚಾರ್ ಮುಂತಾದ ಹಿರಿಯರು ಈ ಕೆಲಸವನ್ನು ಬಹಳ ಶ್ರದ್ಧೆಯಿಂದ ನೆರವೇರಿಸಿದ್ದಾರೆ. ಅನೇಕ ಸಂಗ್ರಹಗಳೂ ಹೊರಬಂದಿವೆ.)

 

 1. ಕಿರು ಪರಿಚಯ: ಕರ್ಣಾಟ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತವು ಕನ್ನಡ ಭಾಷೆಯ ಎಲ್ಲ ಕಾಲದ ಅತ್ಯುತ್ತಮ ಕಾವ್ಯಗಳ ಸಾಲಿಗೆ ಸೇರುತ್ತದೆ. ಪಂಪ, ವಚನಕಾರರು ಮತ್ತು ಕುಮಾರವ್ಯಾಸರು ಒಟ್ಟು ಅಖಿಲ ಭಾರತೀಯ ಸಂದರ್ಭದಲ್ಲಿಯೂ ಬಹಳ ಮಹತ್ವದ ಕವಿಗಳು. ಈ ಕಾವ್ಯವು ಸಂಸ್ಕೃತದ ಮೂಲಕೃತಿಯನ್ನು ಮಧ್ಯಕಾಲೀನ ಕರ್ನಾಟಕದ ಸಂವೇದನೆಗಳಿಗೆ ಅನುಗುಣವಾಗಿ ರೂಪಾಂತರಗೊಳಿಸುವ ಪ್ರಯತ್ನ. ಕಾಲದ ದೃಷ್ಟಿಯಿಂದ ಹದಿನೈದನೆಯ ಶತಮಾನದ ಕರ್ನಾಟಕ ಮತ್ತು ಆಶಯಗಳ ದೃಷ್ಟಿಯಿಂದ ಇಡೀ ಭಾರತವನ್ನೇ ವ್ಯಾಪಿಸಿದ್ದ ಭಕ್ತಿ ಚಳುವಳಿಗಳು ಈ ಕಾವ್ಯವನ್ನು ರೂಪಿಸಿರುವ ಸಂಗತಿಗಳು. ಭೀಮ, ಅರ್ಜುನ, ಕರ್ಣ, ದುರ್ಯೋಧನ ಮುಂತಾದವರ ಪರಾಕ್ರಮವನ್ನು ಮನದುಂಬಿ ಹೊಗಳಿದರೂ ಈ ಕಾವ್ಯದ ಹಿಂದಿರುವ ಪ್ರೇರಕಶಕ್ತಿಯೆಂದರೆ ಕೃಷ್ಣಭಕ್ತಿಯೇ. ಕುಮಾರವ್ಯಾಸನು, ಸಾವಿರಾರು ವರ್ಷಗಳ ಹಿಂದೆ, ಉತ್ತರ ಭಾರತದಲ್ಲಿ ಮೂಡಿಬಂದಿದ್ದ ಕಾವ್ಯವನ್ನು ತೆಗೆದುಕೊಂಡು, ಒಟ್ಟು ಸನ್ನಿವೇಶವನ್ನೇ ತನ್ನ ಕಾಲದ ಕರ್ನಾಟಕಕ್ಕೆ ಹಾಗೂ ತನ್ನ ಕನ್ನಡಕ್ಕೆ ಸ್ಥಾನಪಲ್ಲಟ ಮಾಡುತ್ತಾನೆ. ಈ ಪರಿವರ್ತನೆಯ ಹಿಂದೆ ವಿಭಿನ್ನ ಮನೋಧರ್ಮ ಮತ್ತು ನಿರೂಪಣಾವಿಧಾನಗಳು ಕೆಲಸ ಮಾಡಿವೆ. ದಿನ ನಿತ್ಯದ ಆಡುಮಾತನ್ನು ಆರಿಸಿಕೊಳ್ಳುವ ಕವಿಯು, ಅದಕ್ಕೆ ಕಾವ್ಯದ ಸ್ಪರ್ಶವನ್ನು ನೀಡುತ್ತಾನೆ. ಆದರೆ, ಆ ಭಾಷೆಗಿರುವ ಒರಟುತನವನ್ನು ಬಿಟ್ಟುಕೊಡುವುದಿಲ್ಲ. ಕನ್ನಡ ಭಾಷೆಯ ಹೃದಯವನ್ನೇ ಹಿಡಿಯುವುದರಲ್ಲಿ ಕವಿಯು ಯಶಸ್ವಿಯಾಗಿದ್ದಾನೆ.

ಕುಮಾರ ವ್ಯಾಸ ಭಾರತವು ಮೂಲ ಸಂಸ್ಕೃತ ಕಾವ್ಯದ ಮೊದಲ ಹತ್ತು ಪರ್ವಗಳನ್ನು ಮಾತ್ರ ಆರಿಸಿಕೊಂಡಿದೆ. ಅದು ಆದಿಪರ್ವದಿಂದ ಮೊದಲಾಗಿ ಗದಾಪರ್ವದೊಂದಿಗೆ ಮುಗಿಯುತ್ತದೆ. ಅದರಲ್ಲಿ 152 ಸಂಧಿಗಳೂ ಸುಮಾರು 8200 ಪದ್ಯಗಳೂ ಇವೆ. ಅವೆಲ್ಲವೂ ಭಾಮಿನೀ ಷಟ್ಪದಿಯನ್ನೇ ಬಳಸಿಕೊಂಡಿವೆ. ಈ ಛಂದೋರೂಪವು, ಕವಿಯ ಆಶಯಗಳಿಗೆ ತಕ್ಕ ಹಾಗೆ ಬಾಗುವ ಬಳುಕುವ ಸಾಮರ್ಥ್ಯವನ್ನು ಹೊಂದಿದೆ. ಅವನು ಅನೇಕ ಮರಾಠೀ ಪದಗಳನ್ನು ಸಹಜವಾಗಿಯೇ ಬಳಸುತ್ತಾನೆ. ತನ್ನ ಪ್ರದೇಶದ ಉಪಭಾಷೆಯನ್ನು ಆಗೀಗ ಬಳಸಲು ಅವನಿಗೆ ಯಾವ ಸಂಕೋಚವೂ ಇಲ್ಲ.

ಈ ಕಾವ್ಯವು ಬಹುಮಟ್ಟಿಗೆ ವ್ಯಕ್ತಿನಿಷ್ಠವಾದುದು. ತನ್ನ ಕಾವ್ಯದ ಆಗುಹೋಗುಗಳಲ್ಲಿ ಕವಿಯು ಸಂಪೂರ್ಣವಾಗಿ ಮಗ್ನನಾಗಿರುತ್ತಾನೆ. ಅವನು ಪೌರಾಣಿಕ ಪಾತ್ರಗಳನ್ನು,ನಮ್ಮ ದಿನಬಳಕೆಯ ಮನುಷ್ಯರಾಗಿ ಬದಲಾಯಿಸುತ್ತಾನೆ. ಇದರ ಪರಿಣಾಮವಾಗಿ ಅವರು ನಮಗೆ ಸುಪರಿಚಿತರಾಗುತ್ತಾರೆ. ಆದ್ದರಿಂದಲೇ ಭೀಮ, ದ್ರೌಪದಿ, ಕರ್ಣ, ದುರ್ಯೋಧನ, ಅರ್ಜುನ, ಕೃಷ್ಣ ಮುಂತಾದ ಪಾತ್ರಗಳು ಕನ್ನಡ ಕೇಳುಗ/ಓದುಗ ಸಮುದಾಯದ ನೆನಪಿನಲ್ಲಿ ಅಚ್ಚೊತ್ತಿದ್ದಾರೆ. ಅಷ್ಟೇ ಯಾಕೆ, ಗೌಣಪಾತ್ರಗಳಾದ ಉತ್ತರಕುಮಾರ, ಅಭಿಮನ್ಯು ಮತ್ತು ಬಕಾಸುರರು ಕೂಡ ಕನ್ನಡ ಮನಸ್ಸಿನ ಭಾಗವೇ ಆಗಿಬಿಟ್ಟಿದ್ದಾರೆ. ಇಲ್ಲಿನ ಪಾತ್ರಗಳು ನಮ್ಮ ನಿಮ್ಮಂತಹ ಮನುಷ್ಯರಿಗಿಂತ ಮೇಲೆಯೂ ಹೋಗುವುದಿಲ್ಲ, ಕೆಳಗೂ ಹೋಗುವುದಿಲ್ಲ. ಅವರು ನಮ್ಮಂತಹವರೇ ಆಗಿಬಿಡುತ್ತಾರೆ. ಹೀಗೆ ಕಥೆ, ಪಾತ್ರಗಳು ಮತ್ತು ಶೈಲಿ ಮೂರನ್ನೂ ಬದಲಿಸಿಕೊಂಡಿರುವುದು ಕುಮಾರವ್ಯಾಸ ಭಾರತದ ಹೊಸತನ ಮತ್ತು ಯಶಸ್ಸಿಗೆ ಕಾರಣವಾಗಿದೆ. ಇಲ್ಲಿನ ಪಾತ್ರಗಳು ಜಡವಲ್ಲ. ಜೀವನದೊಂದಿಗೆ ಬೆಳೆಯುತ್ತಾ ಮಾಗುತ್ತಾ ಹೋಗುವ ಇಂತಹ ಪಾತ್ರಗಳು ಕಾವ್ಯವನ್ನೂ ಬೆಳೆಸುತ್ತವೆ.

ಈ ಕವಿಯು ಮನುಷ್ಯ ಭಾವನೆಗಳನ್ನು ನಿರ್ವಹಿಸುವುದರಲ್ಲಿ ಬಹಳ ಪ್ರತಿಭಾಶಾಲಿ. ಒಂದು ಭಾವನೆಯಿಂದ ಮತ್ತೊಂದಕ್ಕೆ ಚಲಿಸುವ ಕ್ರಿಯೆಯು ಬಹಳ ಸಹಜವಾಗಿ ನಡೆಯುತ್ತದೆ. ಇತರ ಅನೇಕ ಮಹಾಕಾವ್ಯಗಳಂತೆ ಇದು ಕೂಡ ಘಟನಾತ್ಮಕವಾದುದು. ಎಲ್ಲ ಘಟನೆಗಳನ್ನೂ ಒಟ್ಟುಗೂಡಿಸುವ ದಾರವೆಂದರೆ, ಪಾಂಡವರ ಕಥೆ. ಈ ಕಾವ್ಯದ ಲೋಕದರ್ಶನವು ಪಾರಂಪರಿಕವಾದ ಹಿಂದೂಧರ್ಮದ ಆಶಯಗಳನ್ನು ಮೀರುವುದು ಬಹಳ ಕಡಿಮೆ. ಆದರೆ, ಕವಿಯು ತನಗಿರುವ ಮಾನವೀಯ ಕಾಳಜಿಗಳ ಫಲವಾಗಿ ಈ ಪರಿಮಿತಿಗಳನ್ನು ಮೀರಿ, ಯಶಸ್ವಿಯಾಗುತ್ತಾನೆ.

 

 1. ಮುಂದಿನ ಓದು:

ಅ. ಕುಮಾರವ್ಯಾಸ ಪ್ರಶಸ್ತಿ, 1940, ಮೈಸೂರು ವಿಶ್ವವಿದ್ಯಾಲಯ ಸಂಘ, ಮೈಸೂರು.

ಆ. ಕರ್ಣನ ಮೂರು ಚಿತ್ರಗಳು, 1947, ಶಂ.ಬಾ. ಜೋಶಿ,

ಇ. ಕುಮಾರವ್ಯಾಸ, ಎಸ್.ವಿ. ರಂಗಣ್ಣ, 1949, (ಮೂರನೆಯ ಮುದ್ರಣ). ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಈ. ಕುಮಾರವ್ಯಾಸ ವಾಣಿ, ಎಸ್.ವಿ. ರಂಗಣ್ಣ, 1949, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಉ. ಕುಮಾರವ್ಯಾಸ, ಕೀರ್ತಿನಾಥ ಕುರ್ತಕೋಟಿ, 1975, ಸಾಹಿತ್ಯ ಅಕಾಡೆಮಿ, ನವ ದೆಹಲಿ.

ಊ. ಕುಮಾರವ್ಯಾಸ- ಸಾಂಸ್ಕೃತಿಕ ಮುಖಾಮುಖಿ, ಸಂ. ರಹಮತ್ ತರೀಕೆರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಋ. ಕುಮಾರವ್ಯಾಸ, ಕವಿ-ಕಾವ್ಯ ಪರಂಪರೆ, ಸಂ. ವಿ. ಸೀತಾರಾಮಯ್ಯ, 1973, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

ಎ. ಕುಮಾರವ್ಯಾಸ, ಸಂ. ಶ್ಯಾಮಸುಂದರ ಬಿದರಕುಂದಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಏ. ಕುಮಾರವ್ಯಾಸ ಮತ್ತು ಕೃಷ್ಣ ಕಥೆ, ಎನ್ಕೆ, 1968, ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ಬೆಂಗಳೂರು.

ಐ. ಗದುಗಿನ ಭಾರತ-ಒಂದು ಸಾಂಸ್ಕೃತಿಕ ಅಧ್ಯಯನ, ದೇ. ಜವರೇಗೌಡ, 1978, ಧಾರವಾಡ.

ಒ. ಮಹಾಭಾರತ ಸಮೀಕ್ಷೆ’, ಎನ್ .ಸುಬ್ರಹ್ಮಣ್ಯಂ, 1973, ಮೈಸೂರು.

ಓ. ಕರ್ಣಾಟ ಭಾರತ ಕಥಾಮಂಜರಿ, ಸಂ. ಮಾಸ್ತಿ ಮತ್ತು ಕುವೆಂಪು, ಅದರ ತೋರಣ ನಾಂದಿ

ಔ. ‘Lingustic Analysis of Kumaravyasa Bharatha’, S. Onkarappa, 1994, Mysore University, Mysore.

ಅಂ. ‘Mahabharatha and Variations, Perundevanar and Pampa’, K.V. Acharya, 1981, Vyasaraja Publications.

 1. ವಿದ್ಯುನ್ಮಾನ ಲಿಂಕುಗಳು:
 2. ಅನುವಾದಗಳು:

ಮುಖಪುಟ / ಸಾಹಿತ್ಯ