ಸಾಹಿತ್ಯ
ಕರ್ನಾಟಕ ಕಾದಂಬರಿ
 1. ಕಾವ್ಯದ ಹೆಸರು: ಕರ್ನಾಟಕ ಕಾದಂಬರಿ
 2. ಕವಿಯ ಹೆಸರು: ಮೊದಲನೆಯ ನಾಗವರ್ಮ
 3. ಕಾಲ: ಹತ್ತನೆಯ ಶತಮಾನ, ಕ್ರಿ.ಶ. 990
 4. ಸ್ಥಳ/ಸ್ಥಳಗಳು: ವೆಂಗಿ ಪಳು ಎಂಬ ಹಳ್ಳಿ, ಸಯ್ಯಡಿ ಅಗ್ರಹಾರ
 5. ಮತ-ಧರ್ಮ: ವೈದಿಕ ಬ್ರಾಹ್ಮಣ
 6. ಆಶ್ರಯದಾತರು: ಚಂದ್ರ ಮತ್ತು ಭೋಜರಾಜರು ಅವನ ಆಶ್ರಯದಾತರಾಗಿದ್ದರು, ವಿವರಗಳು ತಿಳಿದಿಲ್ಲ.
 7. ಬಿರುದುಗಳು: ಕವಿರಾಜಹಂಸ, ಕಂದ ಕಂದರ್ಪ
 8. ಸಾಹಿತ್ಯಪ್ರಕಾರ: ಕಾವ್ಯ: ಚಂಪೂ ಕಾವ್ಯ
 9. ಛಂದೋರೂಪ: ಕಂದ ಪದ್ಯಗಳು, ವೃತ್ತಗಳು ಮತ್ತು ವಚನ ಗದ್ಯ
 10. ಹಸ್ತಪ್ರತಿಗಳು: ಬಿ. ಮಲ್ಲಪ್ಪನವರಿಗೆ ಒಂದೇ ಒಂದು ಹಸ್ತಪ್ರತಿ ಸಿಕ್ಕಿದೆ.
 11. ಪ್ರಕಟವಾದ ವರ್ಷ: 1892
 12. ಸಂಪಾದಕರು: ಬಿ. ಮಲ್ಲಪ್ಪ
 13. ಪ್ರಕಾಶಕರು: ಗೌರ್ನಮೆಂಟ್ ಬ್ರಾಂಚ್ ಪ್ರೆಸ್, ಮೈಸೂರು.
 14. ನಂತರದ ಆವೃತ್ತಿಗಳು:

ಅ. 1933, ಕರ್ನಾಟಕ ಕಾದಂಬರಿ ಸಂಗ್ರಹ, ಸಂ. ಟಿ.ಎಸ್. ವೆಂಕಣ್ಣಯ್ಯ, ಕನ್ನಡ ಪ್ರಕಟಣ ಮಾಲೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಆ. 1973, ಕರ್ನಾಟಕ ಕಾದಂಬರಿ, ಎನ್. ಅನಂತರಂಗಾಚಾರ್, ಉಷಾ ಸಾಹಿತ್ಯಮಾಲೆ, ಮೈಸೂರು.

ಇ. 1977, ಕರ್ನಾಟಕ ಕಾದಂಬರಿ, (ಗದ್ಯಾನುವಾದದೊಂದಿಗೆ) ಎಚ್. ನಾರಾಯಣಶಾಸ್ತ್ರೀ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಈ. ಕರ್ನಾಟಕ ಕಾದಂಬರಿ, ಸಂ. ಸಿ.ಪಿ. ಕೃಷ್ಣಕುಮಾರ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಮೈಸೂರು.

 1. ಕಿರು ಪರಿಚಯ: ಕರ್ನಾಟಕ ಕಾದಂಬರಿಯು, ಬಾಣಭಟ್ಟನು ಸಂಸ್ಕೃತದಲ್ಲಿ ಬರೆದಿರುವ ಪ್ರಸಿದ್ಧ ಗದ್ಯಕೃತಿಯಾದ ಕಾದಂಬರಿಯ ಕನ್ನಡ ರೂಪ. ಆದರೆ, ಕನ್ನಡ ಕವಿಯು ತನ್ನ ಕಾಲದ ಯುಗಧರ್ಮಕ್ಕೆ ಹೆಚ್ಚು ಸೂಕ್ತವೆನಿಸಿದ್ದ ಚಂಪೂ ರೂಪವನ್ನು ಬಳಸಿಕೊಂಡಿದ್ದಾನೆ. ಸುದೀರ್ಘವಾದ ಸಮಾಸ ಪದಗಳಿಂದ ಕೂಡಿದ, ಅಲಂಕರಿತವಾದ ಮೂಲಕೃತಿಯನ್ನು ಹೇಳಲು ಕನ್ನಡ ಗದ್ಯಕ್ಕೆ ಕಷ್ಟವಾಗಬಹುದೆಂಬ ತಿಳಿವಳಿಕೆಯೂ ಈ ತೀರ್ಮಾನಕ್ಕೆ ಕಾರಣವಾಗಿರಬಹುದು. ನಾಗವರ್ಮನು ತೀರ ನೇರವಾದ ಮಕ್ಕಿ ಕಾಮಕ್ಕಿ ಅನುವಾದವನ್ನು ಮಾಡಲು ಪ್ರಯತ್ನಿಸಿಲ್ಲ. ಬದಲಾಗಿ ಅವನು ತನ್ನ ಹಿರಿಯರಾದ ಪಂಪ, ರನ್ನರು ಹಾಕಿಕೊಟ್ಟ ಗದ್ಯ-ಪದ್ಯಗಳ ಸಂಯೋಜನೆಯ ಆಕರ್ಷಕ ಹಾದಿಯನ್ನು ಹಿಡಿದನು. ಮೂಲ ಕೃತಿಯ ಭಾಗಗಳನ್ನು ಹಿಗ್ಗಿಸಲು, ಕುಗ್ಗಿಸಲು ಅಥವಾ ಮೂಲದ ಆಶಯಗಳನ್ನು ತನ್ನ ಪ್ರತಿಭೆಯು ತೋರಿಸಿದ ಜಾಡಿನಲ್ಲಿ ಬೆಳೆಸಲು ಅವನು ಹಿಂಜರಿಯಲಿಲ್ಲ. ಅವನು ತೆಗೆದುಕೊಂಡಿರುವ ತೀರ್ಮಾನಗಳು ಬಹು ಮಟ್ಟಿಗೆ ಸರಿಯಾಗಿವೆ. ಅವನು ಸಂಸ್ಕೃತದಲ್ಲಿ ದೊಡ್ಡ ವಿದ್ವಾಂಸನಾಗಿದ್ದನು. ಆ ಕಾಲದ ಆಸ್ಥಾನ ಕಾವ್ಯಕ್ಕೆ ಸಹಜವಾಗಿ ಅವನು ಕೂಡ ಸಂಸ್ಕೃತ ಶಬ್ದಕೋಶವನ್ನು ಹೇರಳವಾಗಿ ಬಳಸಿಕೊಂಡಿದ್ದಾನೆ.

ಕಾದಂಬರಿಯು ಆ ಕಾಲದ ಜೀವನಕ್ರಮ ಮತ್ತು ಸಾಂಸ್ಕೃತಿಕ ಸನ್ನಿವೇಶಗಳ ಕೆಲವು ನೆಲೆಗಳಿಗೆ ಹಿಡಿದ ಕನ್ನಡಿ. ಅದು ಸಾವುಗಳನ್ನು ಮೀರಿ ಬೆಳೆಯುವ, ಉಳಿಯುವ ಆದರ್ಶಪ್ರೇಮದ ಕಥೆ. ಈ ಕಾವ್ಯದ ಪ್ರಮುಖ ಪಾತ್ರಗಳು, ಕೆಲವು ಜನ್ಮಗಳಲ್ಲಿ ಹರಡಿಕೊಂಡ ವಿರಹ ಮಿಲನಗಳ ಪಯಣದ ನಂತರವೇ ತಮ್ಮ ಒಲವಿನ ನೆಲೆಯನ್ನು ತಲುಪುತ್ತಾರೆ. ಮಹಾಶ್ವೇತಾ, ಕಾದಂಬರಿ, ಚಂದ್ರಾಪೀಡ ಮುಂತಾದ ಪಾತ್ರಗಳು ಕನ್ನಡದ ಸಾಹಿತ್ಯಪ್ರೇಮಿಗಳ ಮನಸ್ಸಿನಲ್ಲಿ ಬಹು ಕಾಲದಿಂದ ನೆಲೆಸಿವೆ. ಇದು ಕಾದಂಬರಿ-ಚಂದ್ರಾಪೀಡ ಮತ್ತು ಮಹಾಶ್ವೇತಾ-ಪುಂಡರೀಕ ಎಂಬ ಎರಡು ಜೋಡಿಗಳ ಪ್ರಣಯ ಕಥಾನಕ. ಕಥೆಯ ಹಂದರವು ಹಿಮಾಲಯದ ಮಂಜುಮುಸುಕಿದ ಶಿಖರಗಳಿಂದ ಹಿಡಿದು, ರಾಜಾಸ್ಥಾನ-ಅಂತಃಪುರಗಳ ವೈಭವದವರೆಗೆ ಹರಡಿಕೊಂಡಿದೆ. ನಾಗವರ್ಮನು ಇವೆರಡಕ್ಕೂ ನ್ಯಾಯವನ್ನು ಒದಗಿಸುವ ಕವಿತಾ ಶಕ್ತಿಯನ್ನು ಹೊಂದಿದ್ದಾನೆ. ಅವನು ಮಾಡಿರುವ ಹಿಮಾಲಯದ ವರ್ಣನೆಯು ಉಸಿರು ಹಿಡಿಯುವಷ್ಟು ಚೆಲುವಾಗಿವೆ. ಈ ಕಾವ್ಯದಲ್ಲಿ ಸ್ತ್ರೀ ಪಾತ್ರಗಳಿಗೇ ಮೊದಲ ಮಣೆಯೆಂದರೂ ತಪ್ಪಲ್ಲ. ಅದರಲ್ಲಿಯೂ ಕಾದಂಬರಿ ಮತ್ತು ಮಹಾಶ್ವೇತೆಯರ ಪಾತ್ರಗಳು ಬಹಳ ಪರಿಣಾಮಕಾರಿಯಾಗಿವೆ. ವೈಶಂಪಾಯನ ಗಿಳಿಯ ಕಥೆಯು ಇನ್ನೊಂದು ಹೃದಯಂಗಮವಾದ ಪ್ರಸಂಗ.

ಇವೆಲ್ಲದರ ಪರಿಣಾಮವಾಗಿ ಕಾದಂಬರಿಯು ಹಳಗನ್ನಡದ ಸರ್ವಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ಉಳಿದುಕೊಂಡಿದೆ.

 1. ಮುಂದಿನ ಓದು:

ಅ. ಒಂದನೆಯ ನಾಗವರ್ಮ, ಕನ್ನಡ ಕವಿ-ಕಾವ್ಯ ಪರಂಪರೆ, ಸಂ. ವಿ.ಸೀತಾರಾಮಯ್ಯ, 1976, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

ಆ. ನಾಗವರ್ಮನ ಕರ್ನಾಟಕ ಕಾದಂಬರಿ (ಒಂದು ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ), ಸಿ.ಪಿ. ಕೃಷ್ಣಕುಮಾರ್, 1976, ಮೈಸೂರು.

ಇ. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಮಡಿವಾಳೇಶ್ವರ ಗಂಗಾಧರ ತೂರಮುರಿಯವರು ಮಾಡಿದ ಗದ್ಯಾನುವಾದವು ಬಹಳ ಪ್ರಸಿದ್ಧವಾಗಿದೆ.

 1. ವಿದ್ಯುನ್ಮಾನ ಲಿಂಕುಗಳು:

ಮುಖಪುಟ / ಸಾಹಿತ್ಯ