ಸಾಹಿತ್ಯ
ಕನಕದಾಸರು
  1. ಲೇಖಕನ ಹೆಸರು: ಕನಕದಾಸರು
  2. ಕಾಲ: ಕ್ರಿ.ಶ. 1508-1606 (ಸುಮಾರು)
  3. ಸ್ಥಳ: ಧಾರವಾಡ ಜಿಲ್ಲೆಯ ಕಾಗಿನೆಲೆ ಎಂಬ ಹಳ್ಳಿ
  4. ಮತ-ಧರ್ಮ: ಕುರುಬರು (ಬೇಡರು)
  5. ರಾಜಾಶ್ರಯ: ಸ್ವತಃ ಕನಕದಾಸರೇ ಹಾವೇರಿ ಜಿಲ್ಲೆಯಲ್ಲಿರುವ ಬಾಡ ಎಂಬ ಊರಿನ ರಾಜರಾಗಿದ್ದರು.
  6. ಬಿರುದುಗಳು: ಭಕ್ತ ಕನಕದಾಸ
  7. ಕಿರು ಪರಿಚಯ:

  ಕನಕದಾಸರು ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರು. ಅವರು ಮೇಲು ಜಾತಿ ಮತ್ತು ವರ್ಗಗಳವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಪಾಡುಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ತೋರಿಸಬೇಕಾಯಿತು. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಮೂಡಿಬಂದಿವೆ. ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು.

  ಆ ಕಾಲದ ಸಾಹಿತ್ಯಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು. ಅವರು ಹಿಂದುಳಿದ ಜಾತಿಯಲ್ಲಿ ಹುಟ್ಟಿದವರು, ಆದರೆ, ಅವರು ಸಾಮಂತ ರಾಜರೋ ಪಾಳೆಯಗಾರರೋ ಆಗಿದ್ದುದರಿಂದ ಅವರಿಗೆ ಯುದ್ಧ ಮತ್ತು ಆಡಳಿತಗಳ ನೇರವಾದ ಅನುಭವವಿತ್ತು. ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವತೆಯಾದ ಕೇಶವನು ಅವರ ಆರಾಧ್ಯದೈವವಾಗಿದ್ದು ಅವೆರ ಅಂಕಿತವಾದ ಕಾಗಿನೆಲೆಯಾದಿಕೇಶವರಾಯಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಮತಾಂಧರಾದ ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳೀಂದ ಕೂಡಿವೆ. ಅವರ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಆದರೆ, ಮತಾಂಧರಾದ ಮೇಲುಜಾತಿಗಳವರು ಅವರ ಯೋಗ್ಯತೆಯನ್ನು ಪ್ರಶ್ನಿಸಿದರು. ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟಿದ್ದರೆಂಬ ಊಹಾಪೋಹಗಳಿವೆ. ಅದೇನೇ ಇರಲಿ, ದ್ವೈತ ತಾತ್ವಿಕತೆಯ ಮೂಲ ನೆಲೆಗಳಿಗೆ ಕೊಂಚವಾದರೂ ನಿಷ್ಠೆಯನ್ನು ತೋರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ, ಅವರ ಅನೇಕ ಕೀರ್ತನೆಗಳು ಆ ಧರ್ಮದ ಚೌಕಟ್ಟನಲ್ಲಿ ರಚಿತವಾಗಿವೆ. ಆದರೆ, ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿಕೊಂಡಿದ್ದಾರೆ. ಕನಕದಾಸರ ಕೀರ್ತನೆಗಳು ಈ ವ್ಯಥೆಯಿಂದ ಆರ್ದ್ರವಾಗಿದ್ದು, ಜಾತಿಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ. ಅನೇಕ ಕೀರ್ತನೆಗಳು ದ್ವೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ

  ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ನಳಚರಿತೆಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಒಂದು ನೆಲೆಯಲ್ಲಿ ಇದು ನಿಜವಾದ ಪ್ರೇಮಿಗಳು ಎದುರಿಸುವ ಪಡಿಪಾಟಲುಗಳನ್ನು ನಿರೂಪಿಸುವುದರಿಂದಲೇ ಆತ್ಮೀಯವಾಗುತ್ತದೆ. ಮಹಾಭಾರತದಿಂದ ತೆಗೆದುಕೊಳ್ಳಲಾಗಿರುವ ಈ ಉಪಾಖ್ಯಾನವು ನಳ-ದಮಯಂತಿಯರ ಜೀವನವನ್ನು ಸರಳವಾದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ನಿರೂಪಿಸುತ್ತದೆ. ಇ ದಂಪತಿಗಳು ಎದುರಿಸಿದ ಕಾಡು ಮತ್ತು ಕಾಳ್ಗಿಚ್ಚುಗಳ ವರ್ಣನೆಯು ಬಹಳ ಸಹಜವಾಗಿದೆ. ಈ ಕಾವ್ಯವು ತನ್ನ ಅನೇಕ ಆಶಯಗಳನ್ನು ಜಾನಪದದಿಂದ ತೆಗೆದುಕೊಂಡಿದೆ. ನಳಚರಿತೆ' ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.

  ಮೋಹನತರಂಗಿಣಿಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯ. ಈ ಕಾವ್ಯವು ಕೃಷ್ಣನ ಮೊಮ್ಮಗನಾದ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾರ ಪ್ರಣಯಕಥೆಯನ್ನು ವಸ್ತುವಾಗಿ ಹೊಂದಿದೆ. ಈ ಕಾವ್ಯವು ಕೂಡ ಯಾವುದೇ ಕೃಷ್ಣಕಥೆಯ ಮೂಲ ಆಕರಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಮಹಾಭಾರತಗಳಿಂದ ತನಗೆ ಅಗತ್ಯವಾದ ವಿವರಗಳನ್ನು ತೆಗೆದುಕೊಂಡಿದೆ. ಮನ್ಮಥನ ಹುಟ್ಟು, ಶಂಬರಾಸುರನ ವಧೆ, ಉಷಾ ಮತ್ತು ಅನಿರುದ್ಧರ ಪ್ರಣಯ, ಬಾಣಾಸುರವಧೆ ಮುಂತಾದವು ಈ ಕಾವ್ಯದ ಮುಖ್ಯ ಘಟನೆಗಳು. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ನಿಧಾನಗತಿಯ ಹಾಗೂ ಗೇಯತೆಯ ಕಡೆಗೆ ಒಲಿಯುವ ಸಾಂಗತ್ಯದ ಛಂದಸ್ಸು, ಈ ಕಾವ್ಯದ ವಸ್ತುವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

  ರಾಮಧಾನ್ಯಚರಿತ್ರೆಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಅನನ್ಯವಾದ ಕಾವ್ಯ. ಜಾತಿಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆ. ಅದು ಅಹಂಕಾರಿಯಾದ ಬತ್ತ ಮತ್ತು ವಿನಯದಿಂದ ತಲೆಬಾಗಿದ, ಜನಸಾಮಾನ್ಯರ ಆಹಾರವಾದ ನರೆದಲೆಗಳ ನಡುವೆ ನಡೆಯುವ ಕಾಲ್ಪನಿಕವಾದ ಮುಖಾಮುಖಿಯ ಕಥನ. ಅವರಿಬ್ಬರ ನಡುವೆ ಯಾರು ಶ್ರೇಷ್ಠರೆನ್ನುವ ವಿಷಯದಲ್ಲಿ ಜಗಳ ನಡೆಯುತ್ತದೆ. ಕೊನೆಯ ತೀರ್ಮಾನವನ್ನು ಕೊಡುವ ಕೆಲಸವನ್ನು ರಾಮನು ನಿರ್ವಹಿಸಬೇಕಾಗುತ್ತದೆ. ಅವನು ಒಂದು ಪರೀಕ್ಷಯನ್ನು ಮಾಡಿ ನರೆದಲೆಗದ ಪರವಾದ ತೀರ್ಮಾನವನ್ನು ಕೊಡುತ್ತಾನೆ. ಅದನ್ನು ರಾಗಿ ಎಂದು ಕರೆಯುತ್ತಾನೆ. (ರಾಘವ ಧಾನ್ಯ) ಈ ಕಾವ್ಯಕ್ಕೆ ಇರುವ ಸಾಂಕೇತಿಕ ಹಾಗೂ ಸಾಮಾಜಿಕವಾದ ಮಹತ್ವವನ್ನು ಕನ್ನಡ ಸಾಹಿತ್ಯದ ಪ್ರಧಾನಧಾರೆಯು ಗುರುತಿಸಿದ್ದು ಈಚೆಗೆ. ಹಿಂದುಳಿದ ವರ್ಗಗಳು ಮುಂದೆ ಬಂದಿದ್ದಕ್ಕೂ ಈ ಕಾವ್ಯದ ಮರುಹುಟ್ಟಿಗೂ ಇರುವ ಸಂಬಂಧವು ಕಾಕತಾಳೀಯವಲ್ಲ. ಈ ಕಾವ್ಯವನ್ನು ಅಂಚಿಗೆ ತಳ್ಳಿ, ಕಡಿಮೆ ಆಸ್ಫೋಟಕವಾದ ಕಾವ್ಯಗಳನ್ನು ಹೊಗಳಿರುವುದು, ಕನ್ನಡ ಸಾಹಿತ್ಯವಿಮರ್ಶೆಯ ಮಾನದಂಡಗಳ ಬಗ್ಗೆ, ಮುಖ್ಯವಾದ ಸತ್ಯಗಳನ್ನು ಹೇಳುತ್ತದೆ.

  ಕನಕನ ಮುಂಡಿಗೆಗಳು’, ಒಗಟಿನ ಹೊರ ಆವರಣದೊಳಗೆ, ಮಹತ್ವದ ತಾತ್ವಿಕ ಸಂಗತಿಗಳನ್ನು ಹೊಂದಿರುವ, ಚಿಕ್ಕ ಗೇಯ ಕವಿತೆಗಳನ್ನು ಒಳಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳು ತಾಂತ್ರಿಕವಾದ ಪರಿಭಾಷೆಯ ನಿಕಟ ಪರಿಚಯ ಇರಬೇಕು. ಹರಿಭಕ್ತಸಾರದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ 110 ಪದ್ಯಗಳಿವೆ. ಅವು ಕನಕದಾಸರ ಜೀವನದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಬಹಳ ಭಾವನಾತ್ಮಕವೂ ಸರಳವೂ ಆದ ಶೈಲಿಯಲ್ಲಿ ಹೇಳುತ್ತದೆ.

  ಒಟ್ಟಂದದಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ. ಏಕೆಂದರೆ, ಇಂದು ಹಿಂದುಳಿದ ವರ್ಗಗಳ ಕಲಾಪ್ರತಿಭೆ ಮತ್ತು ಸಾರ್ವಜನಿಕ ಸಮ್ಮತಿಯನ್ನು ಪಡೆಯುವ ಅವರ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ.

  1. ಕೃತಿಗಳು:

  , ಮೋಹನತರಂಗಿಣಿ:

  ಮೊದಲ ಆವೃತ್ತಿ: 1913. ಎಂ.ಎ. ರಾಮಾನುಜ ಅಯ್ಯಂಗಾರ್, ಕರ್ನಾಟಕ ಕಾವ್ಯಕಲಾನಿಧಿ ಮಾಲೆ, ಮೈಸೂರು.

  ನಂತರದ ಆವೃತ್ತಿಗಳು: ಆರ್.ಸಿ. ಹಿರೇಮಠ, (1973), ಎಸ್.ಎಸ್. ಕೋತಿನ(1984) (ಗದ್ಯಾನುವಾದ ಸಹಿತ), ಜಿ.ಜಿ. ಮಂಜುನಾಥನ್, (1999) ಮತ್ತು ಬಿ.ಎಸ್.ಸಣ್ಣಯ್ಯ, 1963 (ಸಂಗ್ರಹ ಆವೃತ್ತಿ)

   

  ಆ. ನಳಚರಿತ್ರೆ:

  ಮೊದಲ ಆವೃತ್ತಿ: 1888, ಸಂ. ??, ವಿಚಾರದರ್ಪಣ ಮುದ್ರಾಕ್ಷರಶಾಲೆ, ಬೆಂಗಳೂರು

  ನಂತರದ ಆವೃತ್ತಿಗಳು: ಎಸ್.ಜಿ. ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್(1903) ಕರ್ನಾಟಕ ಕಾವ್ಯಕಲಾನಿಧಿ, ಪಿ.ಆರ್.ಕರಿಬಸವಶಾಸ್ತ್ರೀ, 1925, ಎಚ್.ಎಂ. ಶಂಕರನಾರಾಯಣರಾವ್, 1953, ದೇ.ಜವರೇಗೌಡ, 1985, ಹತ್ತೂರು ಶಂಕರನಾರಾಯಣರಾವ್, 1976, ಬಿ.ವಿ. ಶಿರೂರ, 1981.

   

  ಇ. ಹರಿಭಕ್ತಿಸಾರ:

  ಮೊದಲ ಆವೃತ್ತಿ: 1868, ಸರಸ್ವತೀ ನಿಲಯ ಮುದ್ರಾಕ್ಷರ ಶಾಲಾ, ಮದ್ರಾಸು

  ನಂತರದ ಆವೃತ್ತಿಗಳು: ತಿರುಮಲೆ ಶ್ರೀನಿವಾಸಾಚಾರ್ಯ, ಬಿ. ಕೋದಂಡರಾಮಶೆಟ್ಟಿ (1923), ಶ್ರೀನಿವಾಸ ತಂತ್ರಿ,(1940), ಬಿ.ಶಿವಮೂರ್ತಿಶಾಸ್ತ್ರೀ ಮತ್ತು ಕೆ.ಎಂ.ಕೃಷ್ಣರಾವ್ ಮತ್ತು ಎನ. ರಂಗನಾಥಶರ್ಮ, 1972.

   

  ಈ. ರಾಮಧಾನ್ಯಚರಿತ್ರೆ:

  ಮೊದಲ ಆವೃತ್ತಿ: 1963, ಸಂ, ಕೆ.ಸಿ.ಪಂಚಲಿಂಗೇ ಗೌಡ, ಮೈಸೂರು.

  ನಂತರದ ಆವೃತ್ತಿ: 1965, ಸಂ. ದೇ. ಜವರೇಗೌಡ, ಮೈಸೂರು.

   

  ಉ. ಕೀರ್ತನೆಗಳು:

  ಮೊದಲ ಆವೃತ್ತಿ: 1850, ಇತರ ಕೀರ್ತನಕಾರರೊಂದಿಗೆ

  ನಂತರದ ಆವೃತ್ತಿಗಳು: 1965, ಬಿ.ಶಿವಮೂರ್ತಿಶಾಸ್ತ್ರೀ ಮತ್ತು ಕೆ.ಎಂ. ಕೃಷ್ಣರಾವ್, 1972, ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹುಚ್ಚೂರಾವ್, 1999 ಸುಧಾಕರ (ಕೀರ್ತನೆಗಳು ಮತ್ತು ಮುಂಡಿಗೆಗಳು)

   

  ಊ: ಕನಕನ ಮುಂಡಿಗೆಗಳು

   

  ಋ: ನೃಸಿಂಹಸ್ತವ (ಇನ್ನೂ ಸಿಕ್ಕಿಲ್ಲ)

  1. ಮುಂದಿನ ಓದು ಮತ್ತು ಲಿಂಕುಗಳು:

  ಅ. ಕನಕದಾಸರ ಜೀವನಚರಿತ್ರೆ ಮತ್ತು ಪದಗಳು, ಕಲಮದಾನಿ ಗುರುರಾಯ, 1965.

  ಆ. ಮಹಾತ್ಮಾ ಕನಕದಾಸ ಪ್ರಶಸ್ತಿ, 1965

  ಇ. ಕನಕ ಮಹಿಮಾದರ್ಶ, ಭೀಮಾಚಾರ್ಯ ವಡವಿ, 1926

  ಈ. ಕವಿ ಕನಕದಾಸರು, ಕಟ್ಟಿ ಶೇಷಾಚಾರ್ಯ, 1938

  ಉ. Kanakadasa: he Golden Servant of Lord Hari by Basavaraja Naikar, National Book Trust, New Delhi.

  ಊ: Kanakadasa: Philosopher-Poet-Haridasa: A Transcreation of his Bhakti Poems, Haribhsktisara, B.S. Rao, 2001, East West Books, Madras.

  ಋ. Compositions of Sri Kanaka Dasa

  1. ಅನುವಾದಗಳು:

ಮುಖಪುಟ / ಸಾಹಿತ್ಯ