ಸಾಹಿತ್ಯ
ಜಗನ್ನಾಥವಿಜಯಂ
    1. ಕಾವ್ಯದ ಹೆಸರು: ಜಗನ್ನಾಥವಿಜಯಂ
    2. ಕವಿಯ ಹೆಸರು: ರುದ್ರಭಟ್ಟ
    3. ಕಾಲ: ಕ್ರಿ.ಶ. 1185 (ಹನ್ನೆರಡನೆಯ ಶತಮಾನ)
    4. ಸ್ಥಳ/ಸ್ಥಳಗಳು: ಹಾಸನ ಜಿಲ್ಲೆಯ ಬೇಲೂರು ಹಳೇಬೀಡುಗಳ ಆಸುಪಾಸಿನಲ್ಲಿ
    5. ಮತ-ಧರ್ಮ: ಸ್ಮಾರ್ತ ಬ್ರಾಹ್ಮಣ
    6. ಆಶ್ರಯದಾತರು: ಹೊಯ್ಸಳ ರಾಜವಂಶದ ವೀರಬಲ್ಲಾಳ
    7. ಬಿರುದುಗಳು: ಕವಿರಾಜ
    8. ಸಾಹಿತ್ಯಪ್ರಕಾರ: ಕಾವ್ಯ-ಚಂಪೂ ಕಾವ್ಯ
    9. ಛಂದೋರೂಪ: ಕಂದಪದ್ಯಗಳು, ವೃತ್ತಗಳು ಮತ್ತು ಗದ್ಯ

    10. ಹಸ್ತಪ್ರತಿಗಳು:

    ಮೊದಲನೆಯ ಮುದ್ರಣ: ಎರಡು ಓಲೆಗರಿ ಪ್ರತಿಗಳು, ಮದ್ರಾಸಿನ ಓರಿಯೆಂಟಲ್ ಲೈಬ್ರರಿ ಮತ್ತು ಚನ್ನರಾಯಪಟ್ಟಣದಿಂದ.

    ಎರಡನೆಯ ಮುದ್ರಣ: ಮೈಸೂರಿನ ಓರಿಯೆಂಟಲ್ ಲೈಬ್ರರಿಯಿಂದ ಇನ್ನೂ ನಾಲ್ಕು ಓಲೆಗರಿ ಪ್ರತಿಗಳು.

    ಮೂರನೆಯ ಮುದ್ರಣ: ಹೊಸ ಹಸ್ತಪ್ರತಿಗಳನ್ನು ಪರಿಗಣಿಸಿಲ್ಲ.

    ನಾಲ್ಕನೆಯ ಮುದ್ರಣ: ಹೊಸ ಹಸ್ತಪ್ರತಿಗಳನ್ನು ಪರಿಗಣಿಸಿಲ್ಲ

    ಐದನೆಯ ಮುದ್ರಣ: ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದೊರೆತ ಇನ್ನೂ ಎರಡು ಓಲೆಗರಿ ಪ್ರತಿಗಳನ್ನು ಬಳಸಿಕೊಂಡಿದೆ.

    1. ಪ್ರಕಟವಾದ ವರ್ಷ: ಕ್ರಿ.ಶ. 1884
    2. ಸಂಪಾದಕರು: ಸಿದ್ಧಾಂತಿ ಸುಬ್ರಹ್ಮಣ್ಯಶಾಸ್ತ್ರೀ
    3. ಪ್ರಕಾಶಕರು: ಜಗನ್ಮೋಹಿನೀ ಮುದ್ರಣಾಲಯ, ಮೈಸೂರು

    4. ನಂತರದ ಆವೃತ್ತಿಗಳು:

    ಅ. ಚಾವಲಿ ರಾಮಸ್ವಾಮಿಶಾಸ್ತ್ರೀ, 1896, ವಸುಮತೀ ಮುದ್ರಾಕ್ಷರಶಾಲೆ, ಮದ್ರಾಸು

    ಆ. ಎಸ್.ಜಿ. ನರಸಿಂಹಾಚಾರ್, 1904, ಮೈಸೂರು ಓರಿಯೆಂಟಲ್ ಲೈಬ್ರರಿ, ಮೈಸೂರು.

    ಇ. ಆರ್. ಶಾಮಾಶಾಸ್ತ್ರೀ, 1923, ಮೈಸೂರು ಓರಿಯೆಂಟಲ್ ಲೈಬ್ರರಿ, ಮೈಸೂರು

    ಈ. ಎಂ.ಆರ್.ವರದಾಚಾರ್ ಅವರ ಗದ್ಯಾನುವಾದ, 1976, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

    ಉ. ಜಿ.ಜಿ. ಮಂಜುನಾಥನ್, 1996, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

    ಊ. ಎನ್. ಅನಂತರಂಗಾಚಾರ್, ಸಂಗ್ರಹಿತ ಆವೃತ್ತಿ, 1960

     

    1. ಕಿರು ಪರಿಚಯ: ಕೃಷ್ಣನ ಜೀವನವನ್ನು ಆಧರಿಸಿದ ಕನ್ನಡದ ಕೆಲವೇ ಕೆಲವು ಮಹಾಕಾವ್ಯಗಳಲ್ಲಿ ರುದ್ರಭಟ್ಟನ ಜಗನ್ನಾಥವಿಜಯಂ ಮುಖ್ಯವಾದುದು. ಇದರಲ್ಲಿ ರಾಮಾಯಣ ಮತ್ತು ಮಹಾಭಾರತಗಳು ಹಿಂದೆ ಸರಿದು ಕೃಷ್ಣನ ಪಾತ್ರವು ಕೇಂದ್ರಕ್ಕೆ ಬರುತ್ತದೆ. ಆದರೂ ಈ ಕಾವ್ಯವು ಭಕ್ತಿ ಚಳುವಳಿಯಿಂದ ಅಷ್ಟೇನೂ ಪ್ರೇರಿತವಾಗದೆ, ಮಹಾಕಾವ್ಯಗಳ ಸಾಂಪ್ರದಾಯಿಕ ಚೌಕಟ್ಟಿನಲ್ಲಿಯೇ ರಚಿತವಾಗಿದೆ. ಜಗನ್ನಾಥವಿಜಯಂಕಾವ್ಯವು ವಿಷ್ಣುಪುರಾಣ, ಭಾಗವತ ಮತ್ತು ಕೃಷ್ಣನ ಬದುಕನ್ನು ಕುರಿತ ಬೇರೆ ಕೆಲವು ಸಂಸ್ಕೃತ ಕೃತಿಗಳನ್ನು ಅವಲಂಬಿಸಿದೆ. ವೈದಿಕ ಧರ್ಮದ ಪ್ರತಿಪಾದನೆಯಲ್ಲಿ ತೊಡಗುವುದರಿಂದ ಮತ್ತು ಹಾಗೆ ಮಾಡಲು ಕನ್ನಡವನ್ನು ಆರಿಸಿಕೊಳ್ಳುವುದರಿಂದ ರುದ್ರಭಟ್ಟನು ಹೊಸದೊಂದು ಪರಂಪರೆಗೆ ನಾಂದಿ ಹಾಡುತ್ತಿದ್ದಾನೆ. ಮುಂದೆ ಇದೊಂದು ಚಳುವಳಿಯಾಗಿ ಪರಿಣಮಿಸಿ ಅನೇಕ ಮುಖ್ಯ ಕೃತಿಗಳ ಹುಟ್ಟಿಗೆ ಕಾರಣವಾಯಿತು. ಭಾಗವತಪಂಥಕ್ಕೆ ಸೇರಿದ ರುದ್ರಭಟ್ಟನು ಹರಿ ಮತ್ತು ಹರರ ನಡುವೆ ಅಂಥ ಭೇದಭಾವವನ್ನು ತೋರಿಸುವುದಿಲ್ಲ. ತನಗೆ ಆಶ್ರಯದಾತನಾಗಿದ್ದ ವೀರಬಲ್ಲಾಳ ಮತ್ತು ಕೃಷ್ಣರ ನಡುವೆ ಏಕೀಭಾವವನ್ನು ತರುವ ಪ್ರಯತ್ನವನ್ನು ಈ ಕವಿ ಮಾಡಿರಬಹುದೆಂದು ಹೇಳಲು ಅಲ್ಲಿಲ್ಲಿ ಸೂಚನೆಗಳು ಸಿಕ್ಕುತ್ತವೆ. ಜಗನ್ನಾಥವಿಜಯದಲ್ಲಿ ಹದಿನೆಂಟು ಅಧ್ಯಾಗಳಿವೆ. ಅವುಗಳಲ್ಲಿ ನಿರೂಪಿತವಾಗಿರುವ ಮುಖ್ಯ ಘಟನೆಗಳೆಂದರೆ ಕೃಷ್ಣನ ಹುಟ್ಟು, ಅವನು ಪೂತನಿ, ಶಕಟ, ಧೇನುಕ ಮುಂತಾದ ರಾಕ್ಷಸರನ್ನು ಬಾಲ್ಯದಲ್ಲಿಯೇ ಎದುರಿಸಿದ್ದು, ಕಾಳೀಯಮರ್ದನ, ರಾಸಕ್ರೀಡೆ, ಗೋವರ್ಧನಗಿರಿ ಪ್ರಸಂಗ ಮತ್ತು ಪರಶುರಾಮನ ಭೇಟಿ. ಅನಂತರ ರುದ್ರಭಟ್ಟನು ಕೃಷ್ಣನು ರುಕ್ಮಿಣಿ ಮತ್ತು ಸತ್ಯಭಾಮೆಯರನ್ನು ಮದುವೆಯಾದ ಪ್ರಸಂಗಗಳನ್ನು ನಿರೂಪಿಸುತ್ತಾಣೆ. ನರಕಾಸುರ, ಶಿಶುಪಾಲ ಮತ್ತು ಬಾಣಾಸುರರ ವಧೆಯೊಂದಿಗೆ ಕಾವ್ಯವು ಮುಕ್ತಾಯವಾಗುತ್ತದೆ.

    ಈ ಗದ್ಯೀಯವಾದ ಸಂಗ್ರಹವು ರುದ್ರಭಟ್ಟನ ನಿರೂಪಣ ಪ್ರತಿಭೆ ಮತ್ತು ಪಾಂಡಿತ್ಯಗಳಿಗೆ ನ್ಯಾಯ ದೊರಕಿಸುವುದಿಲ್ಲ. ಇಂತಹ ಕೃತಿಗಳು ತಮಗೆ ಸಮಕಾಲೀನವಾದ ಜೀವನಶೈಲಿಗಳು ಮತ್ತು ಜೀವನದರ್ಶನಗಳಿಗೆ ಕನ್ನಡಿ ಹಿಡಿಯುತ್ತವೆ. ಕೃಷ್ಣನು ಇಂದ್ರನ ವಿರುದ್ಧ ಮಾಡಿದ ಬಂಡಾಯವು ಹಿಂದೂಧರ್ಮದ ಬೆಳವಣಿಗೆಯಲ್ಲಿ ಒಂದು ಘಟ್ಟಕ್ಕೆ ಒಡ್ಡಿದ ಪ್ರತಿಮೆಯಾದರೆ, ಕೃಷ್ಣನು ರಾಕ್ಷಸರೊಂದಿಗೆ ಮಾಡುವ ಯುದ್ಧಗಳು ಸಂಸ್ಕೃತಿಗಳ ನಡುವಿನ ಮಹತ್ವದ ಮುಖಾಮುಖಿಯನ್ನು ದಾಖಲೆ ಮಾಡುತ್ತವೆ.

    ರುದ್ರಭಟ್ಟನ ಶೈಲಿಯು ಬಹಳವಾಗಿ ಸಂಸ್ಕೃತೀಕರಣವನ್ನು ಹೊಂದಿದೆ. ಅದರಲ್ಲಿ ಲೆಕ್ಕವಿಲಲ್ದಷ್ಟು ಸಮಾಸ ಪದಗಳಿವೆ. ಅನೇಕ ಬಾರಿ ಒಬ್ಬ ಕವಿಯು ಆರಿಸಿಕೊಳ್ಳುವ ಛಂದೋರೂಪಗಳಿಗೂ ಅವನು ುಪಯೋಗಿಸಬೇಕಾಗುವ ಶಬ್ದಕೋಶದ ಸ್ವರೂಪಕ್ಕೂ ನಿಕಟವಾದ ಸಂಬಂಧವಿರುತ್ತದೆ. ರುದ್ರಭಟ್ಟನು ಶಿವಶರಣರ ಸಮಕಾಲೀನನಾದರೂ ಇಂತಹುದೊಂದು ಶೈಲಿಯನ್ನು ಬಳಸಿರುವುದು, ಆಗಿನ ಕಾಲದಲ್ಲಿ ವಿಭಿನ್ನ ಧರ್ಮಗಳಿಗೆ ಸೇರಿದ ಕವಿಗಳ ನಡುವೆ ಇರಬಹುದಾದ ಪ್ರತ್ಯೇಕೀಕರಣಕ್ಕೆ ಸಾಕ್ಷಿಯಾಗಿದೆ. ಅವರೆಲ್ಲರೂ ಬೇರೆ ಬೇರೆ ಕೂಡುಕೋಣೆಗಳಲ್ಲಿಯೇ ಇರುತ್ತಿದ್ದರೇನೋ. ಏನೇ ಆದರೂ ಅಂತಹ ಅನೇಕ ಕೃತಿಗಳಂತೆ ಜಗನ್ನಾಥವಿಜಯವನ್ನು ಕೂಡ ಶುದ್ಧವಾದ ಸಾಹಿತ್ಯದೃಷ್ಟಿಯ ಬದಲಾಗಿ, ಸಾಂಸ್ಕೃತಿಕ ಆಧ್ಯಯನದ ನೆಲೆಯಲ್ಲಿ ನೋಡುವುದು ಹೆಚ್ಚು ಉಪಯುಕ್ತವಾದುದು.

    ರುದ್ರಭಟ್ಟನು ರಸಕಳಿಕಾಎಂಬ ಇನ್ನೊಂದು ಕೃತಿಯನ್ನು ಬರೆದಿರುವನೆಂದು ಹೇಳಲಾಗಿದೆ. ಅದು ಸಂಸ್ಕೃತ ಭಾಷೆಯಲ್ಲಿರುವ, ಅಲಂಕಾರಶಾಸ್ತ್ರವನ್ನು ಕುರಿತ ಕೃತಿ. ಈ ಕೃತಿಯು ಲಬ್ಧವಿದ್ದರೂ ಅದರ ಕರ್ತೃತ್ವದ ಬಗ್ಗೆ ವಿವಾದಗಳಿವೆ

     

    1. ಮುಂದಿನ ಓದು:

    ಅ. ರುದ್ರಭಟ್ಟ, ಗುಂಡ್ಮಿ ಚಂದ್ರಶೇಖರ ಐತಾಳ, 1970, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ

    ಆ. ಶ್ರೀ ಕೃಷ್ಣಕಥೆಯ ಉಗಮ ಮತ್ತು ವಿಕಾಸ, ಪ್ರಧಾನ ಗುರುದತ್ತ, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

    ಇ. ಶ್ರೀ ಕೃಷ್ಣಚರಿತೆ, ಕೆ.ವೆಂಕಟರಾಮಪ್ಪ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

     

    1. ವಿದ್ಯುನ್ಮಾನ ಲಿಂಕುಗಳು:
    2. ಅನುವಾದಗಳು:

ಮುಖಪುಟ / ಸಾಹಿತ್ಯ