ಸಾಹಿತ್ಯ
ಬಸವಣ್ಣನವರ ವಚನಗಳು
 1. ಕಾವ್ಯದ ಹೆಸರು: ಬಸವಣ್ಣನವರ ವಚನಗಳು
 2. ಕವಿಯ ಹೆಸರು: ಬಸವಣ್ಣ
 3. ಕಾಲ: ಹನ್ನೆರಡನೆಯ ಶತಮಾನ, ಸುಮಾರು ಕ್ರಿ.ಶ. 1131
 4. ಸ್ಥಳ/ಸ್ಥಳಗಳು: ಬಸವನ ಬಾಗೇವಾಡಿ, ಕೂಡಲಸಂಗಮ, ಮಂಗಳವಾಡ, ಕಲ್ಯಾಣ.
 5. ಮತ-ಧರ್ಮ: ಶೈವ. ವೀರಶೈವ, ಜಾತಿಪದ್ಧತಿಯನ್ನೇ ನಿರಾಕರಿಸಿದವನು.
 6. ಆಶ್ರಯದಾತರು: ಕಳಚೂರ್ಯ ಬಿಜ್ಜಳನ ಆಸ್ಥಾನದಲ್ಲಿ ಗಣ್ಯಸ್ಥಾನ.
 7. ಬಿರುದುಗಳು: ಭಕ್ತಿಭಂಡಾರಿ
 8. ಸಾಹಿತ್ಯಪ್ರಕಾರ: ಕಾವ್ಯ
 9. ಛಂದೋರೂಪ: ವಚನಗಳು, ಮುಕ್ತಛಂದ, ಅನಿಯತ ಲಯಬದ್ಧ
 10. ಹಸ್ತಪ್ರತಿಗಳು: ಓಲೆಗರಿ ಮತ್ತು ಕಾಗದದ ಪ್ರತಿಗಳು
 11. ಪ್ರಕಟವಾದ ವರ್ಷ: 1889
 12. ಸಂಪಾದಕರು: ಮರಿಶಂಕರ ದ್ಯಾವರು.
 13. ಪ್ರಕಾಶಕರು: ಗ್ರಂಥ ರತ್ನಾಕರ ಮುದ್ರಾಕ್ಷರಶಾಲೆ, ಬಳ್ಳಾರಿ.
 14. ನಂತರದ ಆವೃತ್ತಿಗಳು:
 15. ಅ. ಶ್ರೀ ಬಸವೇಶ್ವರನ ವಚನಗಳು, ಸಂ. ಪಿ.ಜಿ.ಹಳಕಟ್ಟಿ, 1926, ಶಿವಾನುಭವ ಗ್ರಂಥಮಾಲೆ, ವಿಜಾಪುರ.

  ಆ. ಹೊಸ ಪದ್ಧತಿಯ ಬಸವೇಶ್ವರನ ವಚನಗಳು

  ಇ. ಬಸವಣ್ಣನವರ ವಚನಗಳು, ಸಂ. ಆರ್ ಸಿ, ಹಿರೇಮಠ, 1971, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

  ಈ. ಬಸವಣ್ಣನವರ ಷಟ್ಸ್ಥಳದ ವಚನಗಳು, ಸಂ. ಎಸ್.ಎಸ್. ಬಸವನಾಳ, 1962, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ.

  ಉ. ಬಸವೇಶ್ವರ ವಚನಸಂಗ್ರಹ, ಸಂ. ಎಲ್. ಬಸವರಾಜು, 1952, ಪುಸ್ತಕಭಂಡಾರಮಾಲೆ, ಮೈಸೂರು.

  ಊ. ಬಸವಣ್ಣನ ಲೋಕಪ್ರಿಯ ವಚನಗಳು, ಸಂ. ಎಸ್.ಎಸ್. ಭೂಸನೂರುಮಠ, ಮತ್ತು ಡಿ.ಎಸ್. ಕರ್ಕಿ, 1952, ವಚನಮಂಟಪ, ಬೆಳಗಾವಿ.

  ಋ. ಬಸವಣ್ಣನವರ ವಚನಸಂಪುಟ, ಸಂ. ಎಂ.ಎಂ. ಕಲಬುರ್ಗಿ, ಕರ್ನಾಟಕ ಸರ್ಕಾರ, ಬೆಂಗಳೂರು.

  ಎ. ಬಸವಣ್ಣನವರ ವಚನಗಳು, ಸಂ. ಎಲ್. ಬಸವರಾಜು, 1996, ಗೀತಾ ಬುಕ್ ಹೌಸ್, ಮೈಸೂರು.

  ಏ. ಬಸವೇಶ್ವರ ವಚನದೀಪಿಕೆ, ಸಂ. ಎಚ್.ತಿಪ್ಪೇರುದ್ರಸ್ವಾಮಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.

  (ಇನ್ನಷ್ಟು ವಿವರಗಳಿಗಾಗಿ, ಡಾ. ಅಮರೇಶ ನುಗಡೋಣಿಯವರು ಸಂಪಾದಿಸಿರುವ ಬಸವಣ್ಣನವರ ವಚನಗಳು- ಸಾಂಸ್ಕೃತಿಕ ಮುಖಾಮುಖಿ ಪುಸ್ತಕದಲ್ಲಿ ಸತೀಶ ಪಾಟೀಲ ಅವರು ನೀಡಿರುವ ಸೂಚಿಯನ್ನು ಗಮನಿಸಿ. ಪುಟ 224-239. ಪ್ರಕಾಶಕರು ಕನ್ನಡ ವಿಶ್ವವಿದ್ಯಾಲಯ, ಹಂಪಿ.)

   

 16. ಕಿರು ಪರಿಚಯ: ಈ ಲೇಖನವು ಬಸವಣ್ಣನವರ ವಚನಗಳನ್ನು ಕುರಿತಿದ್ದು. ಅವರ ಜೀವನ, ಸಾಧನೆ ಮತ್ತು ಸಾಮಾಜಿಕ ಮಹತ್ವಗಳಲ್ಲಿ ಆಸಕ್ತರಾದವರು, ಬಸವಣ್ಣ ಎಂಬ ನಮೂದನ್ನು ಗಮನಿಸಬಹುದು. ಆದರೂ, ಬಸವಣ್ಣನವರ ಜೀವನ ಮತ್ತು ಬರವಣಿಗೆಗಳು, ಎಷ್ಟೊಂದು ನಿಕಟವಾಗಿ ಬೆರೆತುಹೋಗಿವೆಯೆಂದರೆ, ಅವುಗಳ ಪ್ರತ್ಯೇಕ ಪರಿಶೀಲನೆಯು ಅಸಾಧ್ಯವೆಂದೇ ಹೇಳಬೇಕು. ಅವರ ವಚನಗಳನ್ನು ಬಿಡಿಯಾಗಿ ಇಟ್ಟುಕೊಂಡು ಪರಿಶೀಲನೆ ಮಾಡಬಹುದು. ಆದರೆ, ಹಾಗೆ ಮಾಡುವಾಗ, ಅವು ಭಾರತ ದೇಶದ ಚರಿತ್ರೆಯಲ್ಲೇ ಅನನ್ಯವಾದ ಸಾಮಾಜಿಕ-ಸಾಂಸ್ಕೃತಿಕ ಚಳುವಳಿಯೊಂದರ ಒಡಲಿನಿಂದಲೇ ಮೂಡಿಬಂದಿವೆಯೆನ್ನುವುದನ್ನು ಮರೆಯಬಾರದು.

ಬಸವಣ್ಣನವರು, ಸುಮಾರು ಒಂದು ಸಾವಿರ ವಚನಗಳನ್ನು ರಚಿಸಿರುವರೆಂದು ಹೇಳಲಾಗಿದೆ. ಕೂಡಲಸಂಗಮದೇವ ಎನ್ನುವುದು ಆ ವಚನಗಳ ಅಂಕಿತ. ಅವುಗಳನ್ನು ವಸ್ತುಗಳ ಆಧಾರದ ಮೇಲೆ ವಿಂಗಡಣೆ ಮಾಡಲು ಸಾಧ್ಯ. ಆದರೆ, ಹಲವು ವಿದ್ವಾಂಸರು, ಅವುಗಳನ್ನು ವೀರಶೈವ ಧರ್ಮದ ತಾತ್ವಿಕ ನೆಲೆಗಳಿಗೆ ಅನುಗುಣವಾಗಿ ಷಟ್ಸ್ಥಳ(ಲ)ಗಳಲ್ಲಿ ವರ್ಗೀಕರಿಸಿದ್ದಾರೆ. ಈ ಸ್ಥಳಗಳನ್ನು ಸಾಧಕನ ಮನಸ್ಸಿನ ವಿಭಿನ್ನ ಸ್ಥಿತಿಗಳು ಅಥವಾ ಧೋರಣೆಗಳೆಂದು ವಿವರಿಸಬಹುದು. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ ಮುಂತಾದ ಈ ನೆಲೆಗಳಿಗೆ ನಿರ್ದಿಷ್ಟವಾದ ಲಕ್ಷಣಗಳಿವೆ. ಆಯಾ ಸ್ಥಳಕ್ಕೆ ಸೇರುವ ವಚನಗಳನ್ನು ಅದಕ್ಕೆ ಸೂಕ್ತವಾದ ಹಿನ್ನಲೆಯಲ್ಲಿ ನೋಡಬಹುದೆನ್ನುವುದು ಒಂದು ನಿಲುವು.

ಬಸವಣ್ಣನವರ ವಚನಗಳ ವಸ್ತು, ಆಕೃತಿಗಳು ಮತ್ತು ನಿರೂಪಣೆಯ ಬಗೆಗಳು ಅವರು ನಿರೀಕ್ಷಿಸುವ ಓದುಗ/ಕೇಳುಗರ ಸ್ವರೂಪದಿಂದ ನಿಯಂತ್ರಿತವಾಗಿವೆ. ಆ ವಚನಗಳು ಸಾಮಾನ್ಯನನ್ನು ಉದ್ದೇಶಿಸಿದವು. ಅವನಿಗೆ ಅರ್ಥವಾಗಬೇಕೆನ್ನುವುದು ವಚನಕಾರರ ಉದ್ದೇಶ. ಬಸವಣ್ಣ ಮತ್ತು ಅವನ ಸಮಕಾಲೀನ ವಚನಕಾರರು, ಕನ್ನಡ ಸಾಹಿತ್ಯ ಪರಂಪರೆಯ ಮುಂದುವರಿಕೆಯಾಗುವ ಕೃತಿಗಳನ್ನು ರಚಿಸಬೇಕೆಂಬ ಉದ್ದೇಶದಿಂದ ಹೊರಟವರೇ ಅಲ್ಲ. ಅವರು ಮನುಷ್ಯರ ಅನುಭವಗಳ ಲೋಕವನ್ನು ತಮ್ಮ ಮೂಲನೆಲೆಯಾಗಿ ತೆಗೆದುಕೊಂಡರು. ಅನೇಕ ಸಾಹಿತ್ಯಕ ಉಪಕರಣಗಳನ್ನು ಬಹಳ ಸಹಜವಾಗಿ ಬಳಸಿದರು. ಈ ಕಾರಣಗಳಿಂದ ಅವರ ಬರವಣಿಗೆಗೆ ಸಾಹಿತ್ಯದ ಘನತೆಯು ತಾನಾಗಿಯೇ ಬಂದಿತು. ಅವರಿಗೆ ತಮ್ಮದೇ ಆದ ಲೋಕದರ್ಶನ. ತಾತ್ವಿಕತೆ ಮತ್ತು ಸಾಹಿತ್ಯ ತತ್ವಗಳು ಖಂಡಿತವಾಗಿಯೂ ಇದ್ದವು.

ಬಸವಣ್ಣನವರ ವಚನಗಳಲ್ಲಿ, ಅವರ ಸಮಕಾಲೀನರಲ್ಲಿ ಅಷ್ಟಾಗಿ ಕಾಣದ ಕೆಲವು ಅನನ್ಯ ಲಕ್ಷಣಗಳಿವೆ. ಮೊದಲನೆಯದಾಗಿ, ಸಮಾಜಸುಧಾರಣೆಯ ಬಗ್ಗೆ ಅವರಿಗೆ ಇದ್ದ ತೀವ್ರವಾದ ಕಳಕಳಿಯು, ಅವರನ್ನು ಸಮಕಾಲೀನ ಸಾಮಾಜಿಕ ಸನ್ನಿವೇಶದ ಕಟು ವಿಮರ್ಶಕನಾಗಿ ಮಾರ್ಪಡಿಸಿತು. ಇದು ಕೇವಲ ಸಹಜ. ಏಕೆಂದರೆ, ವಸ್ತುಸ್ಥಿತಿಯ ಬಗ್ಗೆ ತೀವ್ರವಾದ ಅಸಮಾಧಾನವಿಲ್ಲದೆ, ಬದಲಾವಣೆಯ ಬಯಕೆ ಮೂಡುವುದಿಲ್ಲ. ಎರಡನೆಯದಾಗಿ, ಅವರ ವಚನಗಳಲ್ಲಿ ಆತ್ಮವಿಶ್ಲೇಷಣೆ ಮತ್ತು ಆತ್ಮವಿಮರ್ಶೆಗಳು ಬಹಳ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅವರ ಸಂಗಡಿಗರಲ್ಲಿ, ಈ ಗುಣಗಳು ಈ ಪ್ರಮಾಣದಲ್ಲಿ ಇಲ್ಲ. ಬಸವಣ್ಣನವರ ವಚನಗಳಲ್ಲಿ ಅಸ್ಪಷ್ಟತೆ ಹಾಗೂ ಅಮೂರ್ತತೆಗಳ ಪ್ರಮಾಣ ಬಹಳ ಕಡಿಮೆ. ಅವರ ವಚನಗಳಲ್ಲಿ ಅನುಭಾವದ ನಿರೂಪಣೆಯು ಗೌಣ ಸ್ಥಾನವನ್ನು ಪಡೆಯುತ್ತದೆ. ತಾತ್ವಿಕತೆ ಕೂಡ ಪರಿಣಾಮಕಾರಿಯಾದ ರೂಪಕಗಳು ಮತ್ತು ಪ್ರತಿಮೆಗಳ ಬಳಕೆಯಿಂದ ದೀಪ್ತವಾಗಿರುತ್ತದೆ. ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಬಸವಣ್ಣವರು ಬಳಸುವ ಆಲಂಕಾರಿಕ ಪರಿಕರಗಳು ಹೊರಗಿನ ಜಗತ್ತನ್ನು ತಮ್ಮ ಆಕರವಾಗಿ ಹೊಂದಿವೆ. ಪ್ರಾಚೀನ ಕಾವ್ಯಗಳಲ್ಲಿ ಬಳಸಿ ಬಳಸಿ ಕ್ಲೀಷೆಯಾಗಿರುವ ಕವಿಸಮಯಗಳ ಕಡೆಗೆ ಅವರು ತಿರುಗಿಯೂ ನೋಡುವುದಿಲ್ಲ. ಒಂದು ವೇಳೆ ಅವುಗಳನ್ನು ಬಳಸಿದರೆ, ಅವಕ್ಕೆ ಹೊಸ ಅರ್ಥಛಾಯೆಗಳಿರುತ್ತವೆ. ಅವರು ವಿಭಿನ್ನ ಮನಃಸ್ಥಿತಿಗಳಲ್ಲಿ ವಚನರಚನೆ ಮಾಡಿದ್ದಾರೆ. ಈ ಸ್ಥಿತಿಗಳು ಅವರ ಜೀವನದ ವಿಭಿನ್ನ ಘಟ್ಟಗಳ ಪ್ರತಿಫಲನಗಳೇನೂ ಅಲ್ಲ. ಅವೆಲ್ಲವೂ ಅವರ ಮನಸ್ಸಿನಲ್ಲಿ ಒಟ್ಟಾಗಿಯೇ ಇರಬಹುದು. ವೀರಶೈವ ಥಿಯಾಲಜಿಯು(ಧರ್ಮಶಾಸ್ತ್ರ) ಅವುಗಳನ್ನು ಸ್ಥಳಗಳೆಂದು ಕರೆದಿದೆ. ಇವು, ಒಂದೇ ವ್ಯಕ್ತಿತ್ವವು ಬೇರೆ ಬೇರೆ ಸನ್ನಿವೇಶಗಳಲ್ಲಿ ಪಡಿಮಿಡಿಯುವ ಬಗೆಗಳು. ಬಸವಣ್ಣನವರ ವಚನಗಳ ಕೇಂದ್ರದಲ್ಲಿರುವುದು ಕೇವಲ ಮನುಷ್ಯನಲ್ಲ. ಬದಲಾಗಿ, ಅವರ ಮನಸ್ಸು ಸದಾ ಸಕಲ ಜೀವಾತ್ಮರ ಹಿತವನ್ನು ಬಯಸುತ್ತದೆ. ಅವರದು ಜೀವಕೇಂದ್ರಿತವಾದ ವ್ಯಕ್ತಿತ್ವ. ಹಬ್ಬಕ್ಕೆ ತಂದ ಹರಕೆಯ ಕುರಿಗಾಗಿಯೂ ಅವರು ಪಡಿಮಿಡಿಯುತ್ತಾರೆ.

16. ಮುಂದಿನ ಓದು

ಅ.ಬಸವಣ್ಣನವರ ಉಪಮೆಗಳು, ಹರ್ಡೇಕರ್ ಮಂಜಪ್ಪ, 1944, ಕಲ್ಮಠೇಶ್ವರ ಗ್ರಂಥಮಾಲೆ.

ಆ. ಬಸವಣ್ಣನ ವಚನಗಳು - ಸಾಂಸ್ಕೃತಿಕ ಮುಖಾಮುಖಿ’, 2004, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಇ. ಅನುಭಾವಿಗಳ ಕ್ರಾಂತಿ, (ಸೌತೆನ್ ಅವರ ರೆವಲ್ಯೂಷನ್ ಆಫ್ ದ ಮಿಸ್ಟಿಕ್ಸ್ ಎಂಬ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ) ಟಿ.ಆರ್. ಚಂದ್ರಶೇಖರ, ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಮಠ, ಗದಗ್.

(ಇನ್ನಷ್ಟು ವಿವರವಾದ ಗ್ರಂಥ-ಲೇಖನಸೂಚಿಗಾಗಿ, ಮೇಲೆ ಹೆಸರಿಸಿರುವ, ಅಮರೇಶ ನುಗಡೋಣಿಯವರು ಸಂಪಾದಿಸಿರುವ ಕೃತಿಯನ್ನು ನೋಡಿ.)

 

17. ವಿದ್ಯುನ್ಮಾನ ಲಿಂಕುಗಳು: Download Vachana Software - Win95/98

 

 

18. ಅನುವಾದಗಳು:

ಅ. ಸ್ಪೀಕಿಂಗ್ ಆಫ್ ಶಿವ, ಎ.ಕೆ. ರಾಮಾನುಜನ್, ಥಾಮಸ್ ವ್ಯಾಟ್ ಮತ್ತು ಅನಾಮಿಕ, 1973, ಪೆಂಗ್ವಿನ್ ಬುಕ್ಸ್, ಹ್ಯಾಮಂಡ್ಸ್ ವರ್ತ್, ಯು.ಕೆ.

ಆ. ಫಾರೆವೆರ್ ಸೇಂಟ್ಸ್, ಸೆಲೆಕ್ಟೆಡ್ ವಚನಾಸ್ ಆಫ್ ಬಸವಣ್ಣ, ಅಲ್ಲಮಪ್ರಭು ಅಂಡ್ ಅಕ್ಕಮಹಾದೇವಿ, ಅನುವಾದ, ಪರಿಚಯ ಮತ್ತು ಟಿಪ್ಪಣಿಗಳು ಡಿ.ಎ. ಶಂಕರ್, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.

ಮುಖಪುಟ / ಸಾಹಿತ್ಯ